ಯೋಗದಲ್ಲಿ ಮಿಂದೆದ್ದ ಭಾರತ, ಪ್ರಧಾನಿ ಮೋದಿ ಮತ್ತವರ ಸಚಿವರ ಉತ್ಸುಕ ಸಾರಥ್ಯ

ಡಿಜಿಟಲ್ ಕನ್ನಡ ಟೀಮ್:

ಚಂಡಿಗಢದ ಕ್ಯಾಪಿಟಾಲ್ ಕಾಂಪ್ಲೆಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಬರೋಬ್ಬರಿ 30 ಸಾವಿರ ಮಂದಿ ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರು.

ಸಿಡಿಲಿನಿಂದ ಕೂಡಿದ ಸಣ್ಣಪ್ರಮಾಣದ ಮಳೆ ಬೆಳಗಿನ ಜಾವದಲ್ಲಿ ಬಂದಿದ್ದರೂ ಲೆಕ್ಕಿಸದ ಜನ ಪ್ರಾತಃಕಾಲದ ನಾಲ್ಕು ಗಂಟೆಗೆಲ್ಲ ಮೈದಾನಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ಹಾಗೆ ನೋಡಿದರೆ, ಈ ಮೈದಾನದಲ್ಲಿ ಪ್ರಧಾನಿ ಜತೆ ಯೋಗದಲ್ಲಿ ಪಾಲ್ಗೊಳ್ಳುವುದಕ್ಕೆ 90 ಸಾವಿರ ಮಂದಿ ಹೆಸರು ದಾಖಲಿಸಿದ್ದರು. ಆ ಪೈಕಿ 30 ಸಾವಿರ ಜನರಿಗಷ್ಟೇ ಅವಕಾಶ ಕಲ್ಪಿಸುವುದಕ್ಕೆ ಸಾಧ್ಯವಾಯಿತು. ಈ ಪೈಕಿ ‘ದಿವ್ಯಾಂಗರು’ ಸಹ ವಿವಿಧ ಕಸರತ್ತುಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಇಲ್ಲಿಂದ ಶುರುವಾದ ಉತ್ಸಾಹ ದೇಶದ ನಾನಾ ಭಾಗಗಳಲ್ಲೂ ಪ್ರತಿಬಿಂಬಿಸಿತು. ವಿಶೇಷವಾಗಿ ಮೋದಿ ಸರ್ಕಾರದ ಸಚಿವರು ಬೇರೆ ಬೇರೆ ಪ್ರದೇಶಗಳಲ್ಲಿ ಯೋಗಾಭ್ಯಾಸ ಕಾರ್ಯದಲ್ಲಿ ಪಾಲ್ಗೊಂಡರು.  ಅಮಿತ್ ಶಾ ಫರಿದಾಬಾದ್ ನಲ್ಲಿ, ರಾಜನಾಥ ಸಿಂಗ್ ಲಕ್ನೋದಲ್ಲಿ, ಕಿರಣ್ ರಿಜಿಜು ಇಟಾನಗರದಲ್ಲಿ, ಸ್ಮೃತಿ ಇರಾನಿ ಭೋಪಾಲ್ ನಲ್ಲಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

yoga-navy

ಸಾಗರದಲ್ಲೂ ಯೋಗ… ಐಎನ್ ಎಸ್ ಅರಿಹಂತ ನೌಕೆಯಲ್ಲಿ ಯೋಗ ನಿರತ ಯೋಧರು

ಪ್ರಧಾನಿ ಮೋದಿ ಉಪಸ್ಥಿತಿ ಅಂದಮೇಲೆ ಅಲ್ಲಿ ಮಾತಿರದಿದ್ದರೆ ಹೇಗೆ? ಯೋಗದ ಮಹತ್ವವನ್ನು ತಮ್ಮ ಎಂದಿನ ಆಕರ್ಷಕ ಮಾತುಗಾರಿಕೆಯಲ್ಲಿ ತಿಳಿಸಿಕೊಟ್ಟರು ಪ್ರಧಾನಿ ಮೋದಿ. ಅವರು ಹೇಳಿದ್ದು-

– ಹಳೆಕಾಲದಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆಯೇ ಇರಲಿಲ್ಲ. ಯೋಗವು ಶೂನ್ಯ ಖರ್ಚಿನಲ್ಲಿ ಆರೋಗ್ಯದ ಖಾತ್ರಿಯನ್ನು ನೀಡಿತ್ತು.

– ನೀವೆಲ್ಲ ಮೊಬೈಲ್ ಫೋನನ್ನು ಹೇಗೆ ಬದುಕಿನ ಭಾಗವಾಗಿಸಿಕೊಂಡುಬಿಟ್ಟಿದ್ದೀರೋ, ಹಾಗೆಯೇ ಯೋಗವನ್ನೂ ಜೀವನದ ಭಾಗವಾಗಿಸಿಕೊಳ್ಳಿ.

– ಯೋಗವೆಂದರೆ ಅನಾರೋಗ್ಯದಿಂದ ಮುಕ್ತಿ ಕೊಡುವುದಕ್ಕಷ್ಟೇ ಮಾಡುವಂಥದ್ದಲ್ಲ, ಅದು ಬದುಕನ್ನು ಸ್ವಾಸ್ಥ್ಯಮಯವಾಗಿರಿಸುತ್ತದೆ.

– ಯೋಗವು ಜಗತ್ತಿನಾದ್ಯಂತ ಮತ್ತಷ್ಟು ಜನಪ್ರಿಯವಾಗಲಿ. ಯೋಗ ಶಿಕ್ಷಕರನ್ನು ಭಾರತವೇ ತಯಾರಿಸಲಿ.

– ಇವತ್ತಿನ ದಿನಮಾನದಲ್ಲಿ ನಾವು ನಮ್ಮಿಂದಲೇ ದೂರವಾಗುತ್ತಿದ್ದೇವೆ. ನಮ್ಮೊಂದಿಗೆ ಮತ್ತೆ ಬೆಸೆದುಕೊಳ್ಳುವಂತೆ ಮಾಡುವುದು ಯೋಗ.

ಯೋಗ ಶಿಕ್ಷಣವು ಉದ್ಯೋಗ ನೀಡಿಕೆಯ ಅಂಶವಾಗಿ ಬೆಳೆಯಲಿ ಎಂದು ಆಶಿಸಿದ ಪ್ರಧಾನಿ, ಮುಂದಿನ ವರ್ಷದಿಂದ ಯೋಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಒಂದು ಹಾಗೂ ಅಂತಾರಾಷ್ಟ್ರೀಯ ಸಾಧಕರಿಗೊಂದು ಎಂದು ಎರಡು ಪ್ರಶಸ್ತಿಗಳನ್ನು ನೀಡುವುದಾಗಿ ಹೇಳಿದರು.

yoga-navy mumbai kohli stadium

ಮುಂಬೈನ ಕೊಹ್ಲಿ ಮೈದಾನ..

ಜಗತ್ತಿನಾದ್ಯಂತ ನಿನ್ನೆಯಿಂದಲೇ ಯೋಗದಿನದ ಸಂಭ್ರಮಗಳು ಶುರುವಾಗಿ ಉತ್ತಮ ಪಾಲ್ಗೊಳ್ಳುವಿಕೆ ನೋಡಿದಾಗ ಒಂದು ಸಂಗತಿ ಸಾಬೀತಾಗುತ್ತಿದೆ. ಮೋದಿ ಸರ್ಕಾರದ ಯೋಗ ಕಾರ್ಯಕ್ರಮಗಳು ಕೇಸರೀಕರಣದ ಕಾರ್ಯಸೂಚಿ ಹೊಂದಿವೆ ಎಂಬ ಆರೋಪಗಳಿಗೆ ಈಗ ಜಾಗವಿಲ್ಲದಂತಾಗಿದೆ. ಏಕೆಂದರೆ, 135 ರಾಷ್ಟ್ರಗಳು ಈ ಆಚರಣೆಯಲ್ಲಿ ತೊಡಗಿಸಿಕೊಂಡವಲ್ಲದೇ 40 ಮುಸ್ಲಿಂ ರಾಷ್ಟ್ರಗಳೂ ಇದನ್ನು ಬೆಂಬಲಿಸಿವೆ.

yoga

ಯೋಗದಿನಕ್ಕೆ ಮುಂಚಿತವಾಗಿಯೇ ವಿಶ್ವಸಂಸ್ಥೆ ಕಟ್ಟಡ ಪ್ರದರ್ಶಿಸಿದ್ದ ಯೋಗಭಂಗಿ

Leave a Reply