ರಾಜ್ಯದ ಸಚಿವರು- ಖಾತೆಗಳ ವಿವರ ಇಲ್ಲಿದೆ, ಕೆಪಿಎಸ್ಸಿ ಪೂರ್ತಿ ಪಟ್ಟಿ ರದ್ದುಗೊಳಿಸುವಂತಿಲ್ಲ ಅಂತು ಹೈಕೋರ್ಟ್, ಗಂಗೂಲಿ ಪುಸ್ತಕ ಬರೀತಿದಾರೆ…

ಯಲಹಂಕದಲ್ಲಿ ಸ್ಥಾಪನೆಗೊಳ್ಳಲಿರುವ 370 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ ಆಧರಿತ ವಿದ್ಯುತ್ ಸ್ಥಾವರದ ಪ್ರಾರಂಭಿಕ ಕಾಮಗಾರಿಗಳ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ. ಕೆ. ಶಿವಕುಮಾರ್.

ಡಿಜಿಟಲ್ ಕನ್ನಡ ಟೀಮ್:

ಖಾತೆ ಹಂಚಿಕೆಯಾಯ್ತು

ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಸಚಿವರುಗಳಿಗೆ ಖಾತೆ ಹಂಚಿದ್ದಾರೆ.

ಹಣಕಾಸು, ವಾರ್ತೆ, ವಸತಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಹಾಗೂ ಗುಪ್ತಚಾರ ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿಯವರು ಕಂದಾಯ ಇಲಾಖೆ ಹೊಣೆಗಾರಿಕೆಯನ್ನು ಕಾಗೋಡು ತಿಮ್ಮಪ್ಪರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಣೆಗಾರಿಕೆಯನ್ನು ರಮೇಶ್‍ಕುಮಾರ್ ಅವರ ಹೆಗಲಿಗೆ ನೀಡಿದ್ದಾರೆ. ಈವರೆಗೆ ಆರೋಗ್ಯ ಖಾತೆ ನಿರ್ವಹಿಸುತ್ತಿದ್ದ ಯು. ಟಿ. ಖಾದರ್ ಅವರು ದಿನೇಶ್ ಗುಂಡೂರಾವ್ ಅವರಿಂದ ತೆರವಾಗಿದ್ದ ಆಹಾರ ಖಾತೆ ನಿಭಾಯಿಸಲಿದ್ದಾರೆ.

ಶಾಮನೂರು ಶಿವಶಂಕರಪ್ಪ ಬಳಿ ಇದ್ದ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆಯನ್ನು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ವಹಿಸಿಕೊಟ್ಟಿದ್ದರೆ, ಸತೀಶ್ ಜಾರಕಿ ಹೊಳಿ ನಿಭಾಯಿಸುತ್ತಿದ್ದ ಸಣ್ಣ ಕೈಗಾರಿಕೆಯನ್ನು ಅವರ ಸಹೋದರ ರಮೇಶ್ ಜಾರಕಿಹೊಳಿ ಅವರಿಗೆ ನೀಡಿದ್ದಾರೆ.

ಸಭಾಧ್ಯಕ್ಷರಾಗಿದ್ದಾಗ ಅಧಿವೇಶನದ ಒಳಗೆ ಮತ್ತು ಹೊರಗೆ ಕಂದಾಯ ಇಲಾಖೆ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದ ಕಾಗೋಡು ತಿಮ್ಮಪ್ಪ ಅವರಿಗೆ ಅದೇ ಇಲಾಖೆ ಹೊಣೆಗಾರಿಕೆ ವಹಿಸಿದ್ದಾರೆ.

ಸಿದ್ದರಾಮಯ್ಯನವರ ಸಂಪುಟ ಈಗ ಹೀಗಿದೆ.

 • ಸಿದ್ದರಾಮಯ್ಯ-ಮುಖ್ಯಮಂತ್ರಿ, ಹಣಕಾಸು, ವಸತಿ, ವಾರ್ತಾ ಇಲಾಖೆ,  ಡಿಪಿಆರ್,  ಗುಪ್ತದಳ
 • ಡಾ.ಜಿ.ಪರಮೇಶ್ವರ್-ಗೃಹ ಮತ್ತು ಒಳಾಡಳಿತ
 • ಟಿ.ಬಿ.ಜಯಚಂದ್ರ-ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
 • ಆರ್.ವಿ.ದೇಶಪಾಂಡೆ-ಬೃಹತ್ ಕೈಗಾರಿಕೆ, ಮೂಲಸೌಕರ್ಯ
 • ಡಾ.ಹೆಚ್.ಸಿ.ಮಹದೇವಪ್ಪ-ಲೋಕೋಪಯೋಗಿ
 • ಕಾಗೋಡು ತಿಮ್ಮಪ್ಪ-ಕಂದಾಯ
 • ರಮೇಶ್ ಕುಮಾರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
 • ಬಸವರಾಜ ರಾಯರೆಡ್ಡಿ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
 • ಮಹದೇವ ಪ್ರಸಾದ್- ಸಹಕಾರ
 • ಬಿ.ರಮಾನಾಥ್ ರೈ.- ಅರಣ್ಯ
 • ಎಚ್.ಕೆ. ಪಾಟೀಲ್ – ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್
 • ಕೆ.ಜೆ.ಜಾರ್ಜ್ – ಬೆಂಗಳೂರು ನಗರಾಭಿವೃದ್ದಿ, ನಗರ ಯೋಜನೆ
 • ಎಂ.ಬಿ.ಪಾಟೀಲ್ – ಭಾರೀ ಮಧ್ಯಮ ನೀರಾವರಿ
 • ಹೆಚ್.ಆಂಜನೇಯ – ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ
 • ಡಿ.ಕೆ.ಶಿವಕುಮಾರ್ – ಇಂಧನ
 • ವಿನಯ್ ಕುಲ್ಕರ್ಣಿ – ಗಣಿ ಮತ್ತು ಭೂ ವಿಜ್ಞಾನ
 • ರಾಮಲಿಂಗಾರೆಡ್ಡಿ – ಸಾರಿಗೆ
 • ಡಾ. ಶರಣಪ್ರಕಾಶ್ ಪಾಟೀಲ್-ವೈದ್ಯಕೀಯ ಶಿಕ್ಷಣ
 • ಕೃಷ್ಣಬೈರೇಗೌಡ- ಕೃಷಿ
 • ಉಮಾಶ್ರೀ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
 • ರೋಷನ್ ಬೇಗ್- ನಗರಾಭಿವೃದ್ಧಿ ಮತ್ತು ಹಜ್
 • ಯು.ಟಿ.ಖಾದರ್- ಆಹಾರ ಮತ್ತು ನಾಗರಿಕ ಸರಬರಾಜು
 • ಸಂತೋಷ್ ಲಾಡ್- ಕಾರ್ಮಿಕ
 • ರಮೇಶ್ ಜಾರಕಿಹೊಳಿ- ಸಣ್ಣ ಕೈಗಾರಿಕೆ
 • ತನ್ವೀರ್ ಸೇಠ್- ಉನ್ನತ ಶಿಕ್ಷಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್
 • ಎಸ್.ಎಸ್.ಮಲ್ಲಿಕಾರ್ಜುನ್- ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ
 • ಪ್ರಮೋದ್ ಮದ್ವರಾಜ್ – ಬಂದರು, ಮೀನುಗಾರಿಕೆ
 • ಹೆಚ್.ವೈ.ಮೇಟಿ – ಅಬಕಾರಿ
 • ಪ್ರಿಯಾಂಕ್ ಖರ್ಗೆ- ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ
 • ರುದ್ರಪ್ಪ ಲಮಾಣಿ – ಜವಳಿ ಹಾಗೂ ಮುಜರಾಯಿ
 • ಎಂ.ಆರ್.ಸೀತಾರಾಮ್ – ಯೋಜನೆ ಸಾಂಖ್ಯಿಕ ಮತ್ತು ವಿಜ್ಞಾನ ತಂತ್ರಜ್ಞಾನ
 • ಈಶ್ವರಖಂಡ್ರೆ – ಪೌರಾಡಳಿತ
 • ಎ.ಮಂಜು – ರೇಷ್ಮೆ, ಪಶುಸಂಗೋಪನೆ

ಕೆಪಿಎಸ್ಸಿ ಆಯ್ಕೆ ಪಟ್ಟಿ ರದ್ದು ಸಾಧ್ಯವಿಲ್ಲ ಅಂತು ಹೈಕೋರ್ಟ್

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಆಗಿರುವ ಲೋಪದಿಂದ ಪೂರ್ಣ ಪ್ರಮಾಣದ ಆಯ್ಕೆ ಪಟ್ಟಿಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ತರ ತೀರ್ಪು ನೀಡಿದೆ. 1998, 1999 ಮಕ್ಕು 2004ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ಕೊಟ್ಟಿದೆ. ಈ ಅಕ್ರಮಗಳಿಗೆ ಕೆಪಿಎಸ್ಸಿಯ ಅಧಿಕಾರಿಗಳು ಹೊಣೆಯಾಗುತ್ತಾರೆಯೇ ಹೊರತು ಅಭ್ಯರ್ಥಿಗಳಲ್ಲ. ಹೀಗಾಗಿ ಕೆಲವರು ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದಿದೆ ಹೈಕೋರ್ಟ್.

ತಮ್ಮ ಜೀವನದ ಬಗ್ಗೆ ಪುಸ್ತಕ ಬರೆಯಲಿದ್ದಾರೆ ದಾದಾ

ತಮ್ಮ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮೈದಾನದ ಒಳಗೆ ಮತ್ತು ಹೊರಗಿನ ಅಂಶಗಳ ಮೇಲೆ ಪುಸ್ತಕ ಬರೆಯುತ್ತಾರಂತೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ. ಪುಸ್ತಕದ ಹೆಸರು ‘ಎ ಸೆಂಚುರಿ ಈಸ್ ನಾಟ್ ಎನಫ್’. ಗಂಗೂಲಿ ತಮ್ಮ ಜೀವನದ ಬಗ್ಗೆ ಹೇಳುವುದನ್ನು ಗೌತಮ್ ಭಟ್ಟಾಚಾರ್ಯ ಬರವಣಿಗೆಗೆ ಇಳಿಸಲಿದ್ದಾರೆ. ಜಗರ್ನಟ್ ಬುಕ್ಸ್ ಸಂಸ್ಥೆ ಮುದ್ರಣ ಮಾಡಲಿದೆ. ಮುಂದಿನ ವರ್ಷ ಆರಂಭದ ವೇಳೆಗೆ ಈ ಪುಸ್ತಕ ಮಳಿಗೆಗಳನ್ನು ತಲುಪುವ ನಿರೀಕ್ಷೆ ಇದೆ.  ಈ ಪುಸ್ತಕ ಮುಕ್ತ, ವರ್ಣರಂಜಿತ ಮತ್ತು ಸ್ಫೂರ್ತಿದಾಯಕವಾಗಲಿದೆ ಎಂದು ಭರವಸೆ ನೀಡಿದ್ದಾರೆ ಮುದ್ರಕರು.

ಕುಂದಾಪುರ ಅಪಘಾತದಲ್ಲಿ 8 ಕಂದಮ್ಮಗಳ ಸಾವು

ಮಂಗಳವಾರದ ಹೃದಯ ಹಿಂಡಿದ ಘಟನೆ ಇದು. ಕುಂದಾಪುರ ತಾಲೂಕಿನ ತ್ರಾಸಿ ಬಳಿ ಮಂಗಳವಾರ ಬೆಳಗ್ಗೆ 9.45 ರ ವೇಳೆಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 8 ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರ ಮೊವಾಡಿ ಕ್ರಾಸ್ ಬಳಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಒಮ್ನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಉಂಟಾಗಿದೆ. ಹೆಮ್ಮಾಡಿಯ ಸುಳ್ಸೆಯಿಂದ ಈ ಶಾಲಾ ಮಕ್ಕಳನ್ನು ತ್ರಾಸಿಯ ಡಾನ್ ಬಾಸ್ಕೋ ಶಾಲೆಗೆ ಕರೆದೋಯ್ಯಲಾಗುತ್ತಿತ್ತು. ಈ ಕಾರಿನಲ್ಲಿದ್ದದ್ದು ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳು ಎಂದು ಹೇಳಲಾಗಿದೆ.

ಅಪಘಾತದ ನಡೆದಾಗ ಸ್ಥಳದಲ್ಲೇ ಮೂವರು ಮಕ್ಕಳು ಸಾವನ್ನಪ್ಪಿದ್ದು, ನಂತರ ಆಸ್ಪತ್ರೆಯಲ್ಲಿ ಐವರು ಮಕ್ಕಳು ಮೃತಪಟ್ಟಿವೆ. ಚಾಲಕ, ಆತನ ಪತ್ನಿ ಮತ್ತು ಒರ್ವ ಶಾಲಾ ಶಿಕ್ಷಕಿಗೂ ಅಪಘಾತದಲ್ಲಿ ಗಂಭೀರ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಲ್ಮಾನ್ ರೇಪ್ ಹೇಳಿಕೆ

ತಮ್ಮ ಸುಲ್ತಾನ್ ಚಿತ್ರದ ಶೂಟಿಂಗ್ ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ವಿವರಿಸುವುದಕ್ಕೆ ಸಲ್ಮಾನ್ ಖಾನ್ ಬಳಸಿದ ಹೋಲಿಕೆ ಈಗ ಆಕ್ರೋಶಕ್ಕೆ ಕಾರಣವಾಗಿದೆ. ‘ಬಾಕ್ಸಿಂಗ್ ರಿಂಗ್ ನಿಂದ ನಟನೆ ಮುಗಿಸಿ ಹೊರಬರುವಾಗ ಅತ್ಯಾಚಾರಕ್ಕೆ ಒಳಗಾದ ಹೆಂಗಸಿನಂತಾಗಿರುತ್ತಿದ್ದೆ. ಹೆಜ್ಜೆ ಎತ್ತಿಡುವುದಕ್ಕೇ ಕಷ್ಟವಾಗುತ್ತಿತ್ತು. ಅದು ಬಹಳ ಕಷ್ಟದ ಸ್ಥಿತಿ.’

ರಾಷ್ಟ್ರೀಯ ಮಹಿಳಾ ಆಯೋಗ ಈ ಬಗ್ಗೆ ಸಲ್ಮಾನ್ ಕ್ಷಮೆ ಕೇಳುವಂತೆ ನೋಟೀಸ್ ಜಾರಿ ಮಾಡಿ ಏಳು ದಿನಗಳ ಕಾಲಾವಕಾಶ ನೀಡಿದೆ.

Leave a Reply