ತನ್ನನ್ನು ಅತ್ಯಾಚಾರಗೊಂಡ ಮಹಿಳೆಗೆ ಹೋಲಿಕೆ ಮಾಡಿಕೊಂಡು ವಿವಾದ ಮೈಮೇಲೆಳೆದುಕೊಂಡ ಸಲ್ಲು

ಡಿಜಿಟಲ್ ಕನ್ನಡ ಟೀಮ್:

‘ಸುಲ್ತಾನ್ ಸಿನಿಮಾ ಶೂಟಿಂಗ್ ಗಾಗಿ ತರಬೇತಿ ನಡೆಸಿದ ನಂತರ ನನ್ನ ಪರಿಸ್ಥಿತಿ ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗಿತ್ತು..’ ಇದು ವಿವಾದ ಪ್ರಿಯ ಬಾಲಿವುಡ್ ನಟ ಸಲ್ಮಾನ್ ಖಾನ್ ಹುಟ್ಟುಹಾಕಿರೋ ಹೊಸ ವಿವಾದ.

ಕುಸ್ತಿಪಟುವಾಗಿ ನಟಿಸುತ್ತಿರುವ ಸುಲ್ತಾನ್ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಚಿತ್ರದ ಬಗ್ಗೆ ‘ಸ್ಪಾಟ್ ಬಾಯ್’ ಗೆ ನೀಡಿದ ಸಂದರ್ಶನದ ವೇಳೆ ಖಾನ್ ಹೇಳಿದ್ದು ಹೀಗೆ:

‘ಶೂಟಿಂಗ್ ವೇಳೆಯ ಆರು ಗಂಟೆಗಳ ಅವಧಿಯಲ್ಲಿ ಸಾಕಷ್ಟು ತರಬೇತಿ ಪಡೆಯುತ್ತಿದ್ದೆ. ಲಿಫ್ಟಿಂಗ್ ಜತೆಗೆ ಕುಸ್ತಿ ಅಂಗಳದಲ್ಲಿನ ಕಸರತ್ತು ಹೆಚ್ಚಾಗಿತ್ತು. ಪ್ರತಿ ಬಾರಿ 120 ಕೆ.ಜಿ ತೂಕವನ್ನು 10 ಬಾರಿ 10 ವಿಭಿನ್ನ ಆಯಾಮದಲ್ಲಿ ಎತ್ತುತ್ತಿದ್ದೆ. ಚಿತ್ರೀಕರಣದ ವೇಳೆ ಹಲವು ಬಾರಿ ಕುಸಿದಿದ್ದೇನೆ. ನಿಜವಾದ ಕುಸ್ತಿ ಅಂಗಣದಲ್ಲೂ ಈ ರೀತಿಯಾದ ಅನುಭವ ಆಗುವುದು ವಿರಳ. ಶೂಟಿಂಗ್ ಮುಗಿಸಿ ಕುಸ್ತಿ ರಿಂಗ್ ನಿಂದ ಆಚೆಗೆ ಹೋದಾಗ ನನಗೆ ನೇರವಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಪರಿಸ್ಥಿತಿ ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗಿತ್ತು.’

50 ವರ್ಷದ ಸಲ್ಮಾನ್ ಸಿನಿಮಾ ಚಿತ್ರೀಕರಣದ ವೇಳೆ ತಾವು ಅನುಭವಿಸಿದ ದೈಹಿಕ ಬಳಲಿಕೆಯನ್ನು ವ್ಯಕ್ತಪಡಿಸುವ ಆತುರದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಹೋಲಿಕೆ ಮಾಡಿಕೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಟ್ವಿಟರ್ ನಲ್ಲಿ ತಮ್ಮ ಹೇಳಿಕೆ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಲ್ಮಾನ್, ‘ತನ್ನ ಹೇಳಿಕೆಯಲ್ಲಿ ಈ ರೀತಿಯಾದ ಹೋಲಿಕೆ ಮಾಡಬಾರದಿತ್ತು’ ಎಂದಿದ್ದಾರಾದರೂ ಬೇಷರತ್ ಕ್ಷಮೆಯನ್ನೇನೂ ಕೇಳಿಲ್ಲ.

ರಾಷ್ಟ್ರೀಯ ಮಹಿಳಾ ಆಯೋಗವು ಈ ಹೇಳಿಕೆಗೆ ಕ್ಷಮೆ ಕೇಳಲು ಸಲ್ಮಾನ್ ಗೆ ಏಳು ದಿನಗಳ ಗಡವು ನೀಡಿದೆ.

Leave a Reply