ಮಂತ್ರಿಯಾಗಿ ಅಸಮರ್ಥ ಅಂದಮೇಲೆ ಶಾಸಕನಾಗಿಯೂ ಅಸಮರ್ಥನೇ, ಹಿಂಗಾಗಿ ರಾಜೀನಾಮೆ ವಾಪಸ್ಸು ಪಡೆಯಲ್ಲ ಅಂದ್ರು ಅಂಬರೀಶ್

ಡಿಜಿಟಲ್ ಕನ್ನಡ ಟೀಮ್:

ನಾನು ಮಂತ್ರಿಯಾಗಿ ಅಸಮರ್ಥ ಅಂದ ಮೇಲೆ ಶಾಸಕನಾಗಿಯೂ ಸಮರ್ಥ ಕೆಲಸ ಮಾಡಲು ಸಾಧ್ಯವಿಲ್ಲ ಎಂದೇ ಅರ್ಥ. ಹೀಗಾಗಿ ಶಾಸಕ ಸ್ಥಾನಕ್ಕೆ ಕೊಟ್ಟಿರೋ ರಾಜೀನಾಮೆ ವಾಪಸ್ಸು ಪಡೆಯುವ ಪ್ರಶ್ನೆಯೇ ಇಲ್ಲ. ಬೇಕು ಅಂದಾಗ ಹಾಕ್ಕೊಂಡು, ಬೇಡ ಅಂದಾಗ ಬಿಡೋಕೆ ನಾವೇನು ಚಪ್ಪಲಿ ಅಲ್ಲ. ನಮಗೂ ಮಾನ-ಮರ್ಯಾದೆ, ಘನತೆ-ಗೌರವ, ಹೆಸರು-ಪ್ರತಿಷ್ಠೆ ಎಲ್ಲ ಇದೆ ಎಂದು ನಟ ಅಂಬರೀಶ್ ಖಡಾಖಂಡಿತವಾಗಿ ಹೇಳಿದ್ದಾರೆ.

ತಮ್ಮನ್ನು ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕಳುಹಿಸಿದ ದಿನದ ನಂತರ ಜಯನಗರ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಬರೀಶ್ ಅವರು ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಿರಿಯ ಮಂತ್ರಿಗಳನ್ನು ಕೈಬಿಡುವ ಮೊದಲು ಅವರೊಂದಿಗೆ ಸೌಜನ್ಯಕ್ಕೂ ಮಾತನಾಡದ ಸಿದ್ದರಾಮಯ್ಯ ವರ್ತನೆಯನ್ನು ಖಂಡಿಸಿದರು.

ಒಟ್ಟಾರೆ ಅವರು ಹೇಳಿದ್ದಿಷ್ಟು: ‘ಈ ರೀತಿ ಮಂತ್ರಿ ಮಂಡಲದಿಂದ ಕೈಬಿಡುವ ಬದಲು ಕರೆದು ಕೇಳಿದ್ದರೆ ನಾನೇ ರಾಜೀನಾಮೆ ಕೊಡುತ್ತಿದ್ದೆ. ನಾವೇನು ಬೀದೀಲಿ ನಿಂತಿದ್ವಾ? ಕರೆದು ಮಾತಾಡೋಕೆ ಏನಾಗಿತ್ತು? ನೀನು ಮೂರು ವರ್ಷ ಕೆಲಸ ಮಾಡಿದ್ದಿ. ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಅಂತಿದ್ದೀನಿ. ಹಿಂಗಾಗಿ ಚೇಂಜ್ ಮಾಡ್ಬೇಕು ಅಂತಿದ್ದೀನಿ ಅಂತ ಹೇಳಬಹುದಿತ್ತು. ಅದೆಲ್ಲ ಬಿಟ್ಟು ಹಿಂಗೆ ತೆಗೆದುಹಾಕಿದ್ದು ಸರೀನಾ? ಇಷ್ಟಕ್ಕೂ ಸಂಪುಟದಿಂದ ತೆಗೆದು ಹಾಕುವಂತ ತಪ್ಪು ನಾನೇನು ಮಾಡಿದ್ದೆ? ಎಲ್ಲಾದ್ರೂ ಒಂದು ಕಪ್ಪುಚುಕ್ಕೆ ತೋರಿಸಿ. ಇಲಾಖೇಲಿ ಎಷ್ಟು ಕೆಲಸ ಮಾಡಿದ್ದೀನಿ, ಕೇಂದ್ರ ಸರಕಾರದಿಂದ ಎಷ್ಟು ಹಣ ತಂದಿದ್ದೀನಿ, ಎಷ್ಟು ಜನಕ್ಕೆ ಮನೆ ಕೊಟ್ಟಿದ್ದೀನಿ ಅನ್ನೋದೆಲ್ಲ ಪೇಪರ್ ಮೇಲಿದೆ. ಆರ್ ಟಿಐ ಆರ್ಜಿ ಹಾಕ್ಕೊಂಡು ನೀವೇ ನೋಡಿ. ನಾನು ಯಾರಿಗೂ ತೊಂದರೆ ಕೊಟ್ಟವನಲ್ಲಾ, ಶತ್ರುಗಳ ವಿರುದ್ಧವೂ ರಿವೆಂಜ್ ತೀರಿಸಿಕೊಂಡವನಲ್ಲಾ. 46 ವರ್ಷ ಫೀಲ್ಡಲ್ಲಿ ಕೆಲಸ ಮಾಡಿದ್ದೀನಿ. ನನಗೂ ಪಾಪುಲಾರಿಟಿ, ಹೆಸರು ಎಲ್ಲ ಇದೆ.’

‘ಹಿಂದೆ ಸೋನಿಯಾ ಮೇಡಂ ನನ್ನನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ರು. ಮೇಡಂ ನನ್ನನ್ನು ನೀವು ಮಂತ್ರಿ ಮಾಡಿದ್ದೀರಾ. ಅದಕ್ಕೆ ನಿಮಗೆ ನಾನೊಂದು ಗಿಫ್ಟ್ ಕೊಡ್ತೀನಿ ಅಂತ ಸಿದ್ದರಾಮಯ್ಯ ಅವರನ್ನು ತೋರಿಸಿದೆ. ಆದರೆ ಇಲ್ಲಿ (ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಮರುಚುನಾವಣೆ) ಬಂದು ನೋಡ್ತೀನಿ ಪೂರ್ತಿ ಚಿತ್ರಣವೇ ಚೇಂಜ್. ಏನೋ ಒಂದ್ ಹತ್ತು ಸಾವಿರ ವೋಟಲ್ಲಿ ಗೆಲ್ಲಬಹುದು ಅಂದುಕೊಂಡಿದ್ರೆ ಏನೂ ಇಲ್ಲ. ಮೈಸೂರಾಚೆ ಬೋಗಾದಿ ಅಂತ ಊರಿದೆ. ಅಲ್ಲಿ ಸಿದ್ರಾಮಯ್ಯ ಇರಲಿ, ಕಾಂಗ್ರೆಸ್ ಬಾವುಟಾನೂ ಸೇರಿಸಿರಲಿಲ್ಲ. ನಾನು ಹೋಗಿ ಜಾತಿ ಹೆಸರೇಳಿಕೊಂಡು, ನಾನು ಕಣ್ರಯ್ಯಾ ಅಂಬರೀಶ್, ನನ್ನ ಮಗ ಅಭಿಷೇಕ್ ಗೌಡ, ನಾನೂ ಗೌಡ ಕಣ್ರಯ್ಯಾ ಅಂತ ಹೇಳಿ ಇವರಿಗೆ (ಸಿದ್ದರಾಮಯ್ಯ) ಎಂಟ್ರಿ ಕೊಡಿಸಿದೆ. ಇವರನ್ನು ಊರಿಗೆ ಸೇರಿಸೇ ಇರಲಿಲ್ಲ.  ಮನೆಮನೆಗೆ ಹೋಗಿ ವೋಟ್ ಕೇಳಿದೆ. ಅಲ್ಲಿ ಮಂಡ್ಯ ಮೂಲದವರು, ಅವರ ನೆಂಟರಿಷ್ಟರು ಎಲ್ಲ ಅವ್ರೆ. ಅವರಿಗೆಲ್ಲ ಹೇಳ್ಕೊಂಡು ಕೊನೆಗೆ ಇವರು ಗೆದ್ದದ್ದು ಇನ್ನೂರು ಚಿಲ್ಲರೆ ವೋಟಲ್ಲಿ. ಪಾಪ ಅದೆಲ್ಲ ಮರೆತು ಹೋಗವ್ರೆ. ಈಗವರು ಮುಖ್ಯಮಂತ್ರಿ ಅಲ್ಲವೇ..?

‘ಪಾಪ, ಆ ಶ್ರೀನಿವಾಸ ಪ್ರಸಾದ್ ಅವರೇನು ಮಾಡಿದ್ರು. ದಲಿತ ಮುಖಂಡರು. ದಲಿತ ಮುಖಂಡರು ಅನ್ನೋದಕ್ಕಿಂಥ ಎಂತಾ  ಸಜ್ಜನ, ಎಂಥ ವಿಚಾರವಾದಿ, ತುಂಬಾ ಒದ್ಕೊಂಡಿರೋರು. ಅವರನ್ನು ರಾಜಕೀಯಕ್ಕೆ ಬಂದಮೇಲೆ ಅಲ್ಲ ಕಾಲೇಜು ದಿನಗಳಿಂದಲೂ ಬಲ್ಲೆ. ಅಂಥವರೇ ಇವರಿಗೆ ಲೆಕ್ಕಕ್ಕೆ ಇಲ್ಲ ಅಂದ್ಮೆಲೆ ಇನ್ನು ನಾನ್ಯಾವ ಲೆಕ್ಕ. ಆಫ್ಟರ್ ಆಲ್ ಸಿನಿಮಾದವನು. ನಾನೇನ್ ಮಾಡಕಾಗ್ತದೆ. ಅವರು ಮುಖ್ಯಮಂತ್ರಿಗಳಿದ್ದಾರೆ, ಪವರ್ ಇದೆ. ಹಿಂಗಾಗಿ ಕೈಬಿಟ್ಟವ್ರೆ. ನೋಡೋಣ..’

‘ನನ್ನನ್ನ ಸಂಪುಟದಿಂದ ಕೈಬಿಡೋದಿಕ್ಕೆ ರಮ್ಯಾ ಕಾರಣ ಅನ್ನೋದನ್ನ ಒಪ್ಪೋದಿಲ್ಲ. ಅವಳೇನು ಮಾಡ್ತಾಳೆ ಪಾಪ. ನನ್ನಂಗೆ ಅವಳೂ ಸಿನಿಮಾದವಳು. ಎಂಪಿ ಎಲೆಕ್ಷನ್ ನಲ್ಲಿ ಒಮ್ಮೆ ಗೆದ್ದಿದ್ದಾಳೆ, ಇನ್ನೊಮ್ಮೆ ಸೋತಿದ್ದಾಳೆ. ನಾನೂ ಸೋತಿರಲಿಲ್ಲವಾ ರಾಮನಗರದಲ್ಲಿ. ಇದಕ್ಕೆ ಅವಳು ಕಾರಣ ಅಲ್ಲಾ, ಎಲ್ಲ ಸಿಎಂದೇ. ಸಿದ್ದರಾಮಯ್ಯನವರೇ ಕೈಬಿಟ್ಟಿರೋದು.’

‘ನನ್ನ ಆರೋಗ್ಯ ಸರಿ ಇಲ್ಲ, ಅದಕ್ಕೆ ಕೈಬಿಟ್ಟಿರೋದು ಅನ್ನೋದೆಲ್ಲ ಬೋಗಸ್. ನಿನ್ನೆ ಯಾರೋ ಹೆಣ್ಣುಮಗಳು ಹೇಳ್ತಾ ಇದ್ದಳು. ಬೇಡ ಬುಡಿ ಅದೆಲ್ಲ, ಸುಮ್ನೆ ಯಾಕೆ?’

Leave a Reply