ಪಾಕ್ ಕೈತಪ್ಪಿದ ಎಫ್ 16 ಯುದ್ಧ ವಿಮಾನ ಭವಿಷ್ಯದಲ್ಲಿ ಭಾರತದಲ್ಲೇ ತಯಾರು? ಎಫ್ ಡಿ ಐ ಸಡಿಲಿಕೆ ನಂತರದ ಸಾಧ್ಯತೆ

ಡಿಜಿಟಲ್ ಕನ್ನಡ ಟೀಮ್:

ಎಫ್ 16 ಯುದ್ಧ ವಿಮಾನವನ್ನು ಪಾಕಿಸ್ತಾನಕ್ಕೆ ಕಡಿಮೆ ದರದಲ್ಲಿ ನೀಡಲು ಅಮೆರಿಕ ಮುಂದಾಗಿದ್ದು, ನಂತರ ಪಾಕಿಸ್ತಾನ ಅದನ್ನು ಉಗ್ರರ ನಿಗ್ರಹಕ್ಕೆ ಬದಲಾಗಿ ಭಾರತದ ವಿರುದ್ಧ ಪ್ರಯೋಗಿಸುವ ಆತಂಕದಿಂದ ನಿರ್ಧಾರ ಕೈಬಿಟ್ಟಿದ್ದು ಹಳೇ ವಿಚಾರ. ಈಗ ಹೊಸ ಬೆಳವಣಿಗೆ ಏನಂದ್ರೆ, ಮುಂದಿನ ದಿನಗಳಲ್ಲಿ ಈ ಎಫ್ 16 ಯುದ್ಧ ವಿಮಾನ ಭಾರತದಲ್ಲೇ ನಿರ್ಮಾಣದ ಪ್ರಸ್ತಾವ ಬಂದಿರುವುದು.

ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ನೀತಿಯನ್ನು ಸಡಿಲಗೊಳಿಸಿ ಶೇ.100 ರಷ್ಟು ಅನುಮತಿ ನೀಡಿದೆ ಭಾರತ ಸರ್ಕಾರ. ಕಳೆದ ಸೋಮವಾರ ಸರ್ಕಾರದ ಈ ನಿರ್ಧಾರ ಹೊರಬೀಳುತ್ತಿದ್ದಂತೆ ಅಮೆರಿಕದ ಮಿಲಿಟರಿ ಉತ್ಪಾದಕರಾದ ಲಾಕ್ಹೀಡ್ ಮಾರ್ಟೀನ್ ಸಂಸ್ಥೆ ಭಾರತದಲ್ಲಿ ಎಫ್ 16 ಯುದ್ಧ ವಿಮಾನ ಜೋಡನಾ ಘಟಕಕ್ಕೆ ಉತ್ಸುಕತೆ ತೋರಿತ್ತು. ಆದರೆ ಭಾರತ ಮಾತ್ರ, ಕೇವಲ ಜೋಡನಾ ಘಟಕ ಸಾಲದು ತಯಾರಿಕಾ ಘಟಕವನ್ನೇ ಆರಂಭಿಸುವಂತೆ ಪ್ರಸ್ತಾವ ನೀಡಿರುವುದಾಗಿ ಮಾಹಿತಿ ನೀಡಿದೆ ‘ದ ಹಿಂದೂ’ ವರದಿ.

ಅಮೆರಿಕದ ಐತಿಹಾಸಿಕ ಯುದ್ಧ ವಿಮಾನ ನಮ್ಮ ನೆಲದಲ್ಲೇ ತಯಾರಾಗಿ ಭಾರತೀಯ ವಾಯು ಸೇನೆ ಸೇರಿಕೊಂಡರೆ, ದೇಶದ ಮಿಲಿಟರಿ ಸ್ವರೂಪವೇ ಬದಲಾಗುತ್ತದೆ. ಇದರಿಂದ ನೆರೆಯ ಪಾಕಿಸ್ತಾನ, ಚೀನಾ ಸೇರಿದಂತೆ ಇತರೆ ರಾಷ್ಟ್ರಗಳ ಕಣ್ಣು ಕೆಂಪಾದರೂ ಅಚ್ಚರಿ ಇಲ್ಲ.

ಭಾರತದಲ್ಲಿ ಎಫ್ 16 ತಯಾರಿಕಾ ಘಟಕ ಸ್ಥಾಪನೆ ಪ್ರಸ್ತಾವದ ಕುರಿತು ಇದೇ ತಿಂಗಳು ಅಮೆರಿಕ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಿದ್ದರು ಎಂಬುದನ್ನು ರಕ್ಷಣಾ ಸಚಿವಾಲಯದ ಪ್ರಮುಖ ಮೂಲಗಳು ಖಚಿತಪಡಿಸಿವೆ ಎಂದು ವರದಿ ಪ್ರತಿಪಾದಿಸುತ್ತಿದೆ. 36 ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಫ್ರಾನ್ಸ್ ಸರ್ಕಾರದ ಜತೆಗಿನ ಚೌಕಾಸಿ ಮುಂದುವರಿದಿದೆ.  ಈ ನಡುವೆಯೇ ಎಫ್ 16  ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನ ನಡೆದರೆ ಚೌಕಾಸಿ ತೀವ್ರವಾಗುತ್ತದೆ ಎಂಬ ಆಲೋಚನೆಯೂ ಇದೆ. ‘ಕೇವಲ ಯುದ್ಧ ವಿಮಾನವನ್ನು ಜೋಡಿಸುವ ಘಟಕ ಸ್ಥಾಪನೆ ನಮ್ಮ ಗುರಿಯಲ್ಲ. ಭಾರತದ ಕಂಪನಿಗಳ ಸಹಕಾರದೊಂದಿಗೆ ನಮ್ಮಲ್ಲೇ ಯುದ್ಧವಿಮಾನ ತಯಾರಿಕ ಘಟಕ ನಿರ್ಮಾಣವಾಗಬೇಕೆಂಬುದು ಮುಖ್ಯ ಗುರಿ. ತಂತ್ರಜ್ಞಾನ ವಿನಿಮಯದ ಮೂಲಕ ಈ ಕಾರ್ಯ ಸಾಗಬೇಕು. ಇಲ್ಲಿ ಶೇ.100 ರಷ್ಟು ತಂತ್ರಜ್ಞಾನ ವಿನಿಮಯ ಹಾಗೂ ಸ್ವದೇಶಿ ನಿರ್ಮಾಣ ಸಾಧ್ಯವಾಗದಿದ್ದರೂ ಆದಷ್ಟು ಪ್ರಮಾಣ ಭಾರತದಲ್ಲೇ ಉತ್ಪಾದನೆಯಾದರೆ ಉತ್ತಮ.’ ಎಂದು ಈ ಹಿಂದೆ ಸಂದರ್ಶನಗಳಲ್ಲಿ ರಕ್ಷಣಾ ಮಂತ್ರಿ ಮನೋಹರ ಪರಿಕರ್ ಹೇಳಿದ್ದರು ಎಂಬುದು ಈ ನಿಟ್ಟಿನಲ್ಲಿ ಮುಖ್ಯವಾಗುತ್ತದೆ.

ಆದರೆ ಇಂಥ ಪ್ರಸ್ತಾಪ ಗಟ್ಟಿಯಾಗಿದ್ದೇ ಆದಲ್ಲಿ ಅದಕ್ಕೆ ಪ್ರತಿರೋಧವೂ ವ್ಯಕ್ತವಾದೀತು. ಏಕೆಂದರೆ ಇನ್ನೂ ಮುಂದಿನ ತಂತ್ರಜ್ಞಾನಕ್ಕೆ ಅಮೆರಿಕ ಕಾಲಿಟ್ಟಿರುವುದರಿಂದ ಅಲ್ಲಿ ಎಫ್ 16 ಯುದ್ಧ ವಿಮಾನ ಘಟಕ ಮುಚ್ಚುವ ಆತಂಕದಲ್ಲಿದೆ. ಹೀಗಿರುವಾಗ ಹಳೆ ತಂತ್ರಜ್ಞಾನಕ್ಕೆ ಭಾರತ ಆಸಕ್ತಿ ವಹಿಸಬೇಕೇ ಎಂಬುದೂ ಮುಖ್ಯ ಜಿಜ್ಞಾಸೆ. ಭಾರತದಲ್ಲಿ ಎಫ್ 16 ಯುದ್ಧ ವಿಮಾನ ತಯಾರಾಗಿದ್ದೇ ಆದಲ್ಲಿ, ಮುಂದಿನ 30-40 ವರ್ಷಗಳ ಕಾಲ ಈ ಫೈಟರ್ ಜೆಟ್ ಭಾರತೀಯ ವಾಯು ಸೇನೆಯಲ್ಲೇ ಉಳಿಯಲಿದೆ.  ಇದು 40 ವರ್ಷಗಳ ಹಿಂದಿನ ವಿನ್ಯಾಸ ಹೊಂದಿದ್ದು, ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದೆ.

ಒಟ್ಟಾರೆ ಅಮೆರಿಕದ ಜತೆಗಿನ ಗಾಢ ಮಿಲಿಟರಿ ಬಂಧಕ್ಕೆ ಮಾಜಿ ರಕ್ಷಣಾ ಸಚಿವ ಎ.ಕೆ ಆಂಟೋನಿ ಎಚ್ಚರಿಕೆ ಹೀಗಿದೆ: ‘ರಕ್ಷಣಾ ಕ್ಷೇತ್ರದಲ್ಲಿ ಶೇ.100 ರಷ್ಟು ವಿದೇಶಿ ಬಂಡವಾಳ ಹೂಡಿಕೆ ನಿರ್ಧಾರದಿಂದ ಭಾರತದ ರಕ್ಷಣಾ ವಿಭಾಗವನ್ನು ನ್ಯಾಟೊ ಅಮೆರಿಕದ ರಕ್ಷಣಾ ತಯಾರಿಕ ಘಟಕಗಳ ಕೈಗೆ ಒಪ್ಪಿಸಿದಂತಾಗಲಿದೆ. ನ್ಯಾಟೊ ಅಮೆರಿಕ ರಕ್ಷಣಾ ತಯಾರಿಕಾ ಸಂಸ್ಥೆ ಭಾರತಕ್ಕೆ ಕಾಲಿಟ್ಟರೆ, ಭಾರತೀಯ ವಿದೇಶಾಂಗ ನೀತಿಯ ಮೇಲೂ ಪರಿಣಾಮ ಬೀರಲಿದೆ. ರಾಷ್ಟ್ರೀಯ ಭದ್ರತೆ, ಸದ್ಯ ಪ್ರಕ್ರಿಯೆಯಲ್ಲಿರುವ ರಾಷ್ಟ್ರೀಯ ರಕ್ಷಣಾ ಸಂಶೋಧನೆ ಕಾರ್ಯಗಳಿಗೂ ಇದು ಮಾರಕವಾಗಲಿದೆ. ಪ್ರಧಾನಿ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡ ನಂತರ ಇಷ್ಟೆಲ್ಲಾ ಬದಲಾವಣೆಗಳು ಆಗುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ.’

Leave a Reply