ಆರ್ಥಿಕ ಸಲಹೆಗಾರರ ವಿರುದ್ಧ ಸ್ವಾಮಿ ಮಾತಿಗೆ ಸರ್ಕಾರದ ಅಸಮಾಧಾನ, ಹುಬ್ಬಳ್ಳಿ- ಹೊಸಪೇಟೆ ಚತುಷ್ಪಥಕ್ಕೆ ₹2272 ಕೋಟಿ, ಹೊಸಬರ ಹೆಗಲಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ, ಎನ್ಎಸ್ಜಿ ಸದಸ್ಯತ್ವಕ್ಕಾಗಿ ಸಿಯೋಲ್ ನಲ್ಲಿ ಅಂತಿಮ ಕಸರತ್ತು

ಸುಬ್ರಮಣಿಯನ್ ಸ್ವಾಮಿ ವರ್ಸಸ್ ಅರವಿಂದ ಸುಬ್ರಮಣಿಯನ್

ಡಿಜಿಟಲ್ ಕನ್ನಡ ಟೀಮ್:

ಸ್ವಾಮಿ ಮುಂದಿನ ಶಿಕಾರಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್

ಆರ್ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಸಮರ ಸಾರಿದ್ದ ಬಿಜೆಪಿಯ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ಮಾಮಿ ಅವರ ಮುಂದಿನ ಟಾರ್ಗೆಟ್ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್. ಬುಧವಾರ ಟ್ವಿಟರ್ ಸರಮಾಲೆಯಲ್ಲಿ ಅರವಿಂದ್ ವಿರುದ್ಧ ಸ್ವಾಮಿ ಕಿಡಿಕಾರಿದ್ರು.

‘ಜಿಎಸ್ಟಿ ಮಸೂದೆ ಕಗ್ಗಂಟಾಗಿಸಲು ಅರವಿಂದ್ ಕಾಂಗ್ರೆಸ್ ಜತೆ ಕೈ ಜೋಡಿಸಿದ್ರು, ಜತೆಗೆ ಅಮೆರಿಕ ಕಂಪನಿಗಳ ಪರವಾಗಿ ಲಾಬಿ ನಡೆಸಿದ್ದಾರೆ. ಹೀಗಾಗಿ ಅವರನ್ನು ಆ ಹುದ್ದೆಯಿಂದ ಕಿತ್ತುಹಾಕಬೇಕು’ ಎಂಬುದು ಸ್ವಾಮಿ ಆಗ್ರಹ.

ಈ ಎಲ್ಲ ಬೆಳವಣಿಗೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಪರ ವಕಾಲತ್ತು ವಹಿಸಿ, ಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ:

‘ಅರವಿಂದ್ ಅವರ ಮೇಲೆ ಸರ್ಕಾರಕ್ಕೆ ಸಂಪೂರ್ಣ ನಂಬಿಕೆ ಇದೆ. ಕಾಲಕಾಲಕ್ಕೆ ಅವರು ಸರ್ಕಾರಕ್ಕೆ ಅಮೂಲ್ಯ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಅವರ ಅಭಿಪ್ರಾಯವನ್ನು ಬಿಜೆಪಿ ಒಪ್ಪುವುದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ರಾಜಕಾರಣಿಗಳಿಗೆ ಕೆಲವು ನಿರ್ದಿಷ್ಟ ಶಿಸ್ತುಗಳಿರಬೇಕು. ಆದರೆ ಶಿಸ್ತು ಉಲ್ಲಂಘನೆಯಾಗುತ್ತಿರುವುದು ಎರಡನೇ ಬಾರಿ.’ ಹಾಗಾದರೆ ಸ್ವಾಮಿಯವರನ್ನು ಹತೋಟಿಯಲ್ಲಿಡಲು ಪಕ್ಷ ಯೋಚಿಸುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ‘ನಿಮ್ಮ ಸಲಹೆಗೆ ಧನ್ಯವಾದಗಳು’ ಎಂಬ ಮಾರ್ಮಿಕವಾಗಿ ಉತ್ತರಿಸಿದರು ಜೇಟ್ಲಿ.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ರವಿಶಂಕರ್ ಪ್ರಸಾದ್ ಸಹ ಜೇಟ್ಲಿ ಅವರ ಬೆಂಬಲಕ್ಕೆ ನಿಂತರು. ಅವರು ಹೇಳಿದಿಷ್ಟು: ‘ಅವರನ್ನು ವಿದ್ಯಾರ್ಥಿ ಸಂಘಟನೆಯ ಕಾಲದಿಂದಲು ನೋಡಿಕೊಂಡು ಬಂದಿದ್ದೇವೆ. ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ.’

ಇಷ್ಟಕ್ಕೂ ರವಿಶಂಕರ್ ಪ್ರಸಾದ್ ಮತ್ತು ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು ಹೊಸ ಯೋಜನೆ ಘೋಷಣೆಗಾಗಿ. ಕೇಂದ್ರ ಸರ್ಕಾರ ಹೊಸ ಸ್ಟಾರ್ಟ್ ಅಪ್ ಗಳಿಗಾಗಿ ₹ 10 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ಇದರೊಂದಿಗೆ 18 ಲಕ್ಷ ಉದ್ಯೋಗ ಸೃಷ್ಠಿಯಾಗುವ ನಿರೀಕ್ಷೆಯನ್ನು ಹೊಂದಿದೆ ಕೇಂದ್ರ ಸರ್ಕಾರ.

ಈ ಪ್ರಕರಣ ಪ್ರತಿಪಕ್ಷಗಳಿಗೆ ಹೊಸ ಅಸ್ತ್ರವನ್ನು ನೀಡಿದ್ದು, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೀಗೆ ಪ್ರತಿಕ್ರಿಯಿಸಿದರು. ‘ನೆಹರು ಕುಟುಂಬದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಮೋದಿಯವರಿಂದ ಸಿಗುತ್ತಿರುವ ಬೆಂಬಲದ ಬಿಂಬ ಇದು. ಸ್ವಾಮಿ ಟೀಕಿಸುತ್ತಿರುವುದು ಅರವಿಂದರನ್ನಾದರೂ ಅವರ ಗುರಿ ಇರೋದು ಜೇಟ್ಲಿ’

ಕರ್ನಾಟಕಕ್ಕೆ ಕೇಂದ್ರದ ಹೆದ್ದಾರಿ ಭಾಗ್ಯ

ಹುಬ್ಬಳ್ಳಿ- ಹೊಸಪೇಟೆ ವಿಭಾಗದ ರಾಷ್ಟ್ರೀಯ ಹೆದ್ದಾರಿ 63ರ ಚತುಷ್ಪಥ ಅಭಿವೃದ್ಧಿಗೆ ಕೇಂದ್ರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ. 144 ಕಿ. ಮೀ. ಮಾರ್ಗಕ್ಕೆ ₹2272 ಕೋಟಿ ಮಂಜೂರಾಗಿದೆ.

 

ಹೊಸಬರ ಹೆಗಲಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ

ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಬುಧವಾರ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಜಿಲ್ಲಾ ಉಸ್ತುವಾರಿ ಪಟ್ಟಿಯಲ್ಲೂ ಕೆಲವು ಬದಲಾವಣೆಗಳಾಗಿದ್ದು ಅವು ಹೀಗಿವೆ:

ಡಾ.ಎಸ್.ಸಿ.ಮಹದೇವಪ್ಪ- ಮೈಸೂರು, ಡಿ.ಕೆ.ಶಿವಕುಮಾರ್- ರಾಮನಗರ ಮತ್ತು ಮಂಡ್ಯ, ಎಂ.ಆರ್.ಸೀತಾರಾಂ- ಕೊಡಗು, ಕಾಗೋಡು ತಿಮ್ಮಪ್ಪ- ಶಿವಮೊಗ್ಗ, ರಮೇಶ್ ಕುಮಾರ್- ಕೋಲಾರ, ರಾಮಲಿಂಗಾರೆಡ್ಡಿ- ಚಿಕ್ಕಬಳ್ಳಾಪುರ, ಎಸ್.ಎಸ್.ಮಲ್ಲಿಕಾರ್ಜುನ- ದಾವಣೆಗೆರೆ, ಶರಣ್ ಪ್ರಕಾಶ್ ಪಾಟೀಲ್- ಗುಲ್ಬರ್ಗ, ತನ್ವೀರ್ ಸೇಠ್- ರಾಯಚೂರು, ರಮೇಶ್ ಜಾರಕಿಹೊಳಿ- ಬೆಳಗಾವಿ, ರುದ್ರಪ್ಪ ಲಮಾಣಿ- ಹಾವೇರಿ,  ಈಶ್ವರ್ ಖಂಡ್ರೆ- ಬೀದರ್, ಸಂತೋಷ್ ಲಾಡ್- ಬಳ್ಳಾರಿ, ಪ್ರಮೋದ್ ಮದ್ವರಾಜ್- ಉಡುಪಿ, ಪ್ರಿಯಾಂಕ್ ಖರ್ಗೆ- ಯಾದಗಿರಿ, ಬಸವರಾಜ ರಾಯರೆಡ್ಡಿ- ಕೊಪ್ಪಳ, ಎಚ್.ವೈ. ಮೇಟಿ- ಬಾಗಲಕೋಟೆ ಉಸ್ತುವಾರಿ ವಹಿಸಲಾಗಿದೆ. ಉಳಿದಂತೆ ಹಿಂದೆ ಇದ್ದಂತೆ ಟಿ.ಬಿ.ಜಯಚಂದ್ರ- ತುಮಕೂರು, ಡಾ.ಜಿ.ಪರಮೇಶ್ವರ್- ಚಿಕ್ಕಮಗಳೂರು, ಎಚ್.ಕೆ.ಪಾಟೀಲ್- ಗದಗ, ಎಚ್.ಎಸ್.ಮಹದೇವಪ್ರಸಾದ್- ಚಾಮರಾಜನಗರ, ಕೆ.ಜೆ.ಜಾರ್ಜ್- ಬೆಂಗಳೂರು ನಗರ, ಕೃಷ್ಣ ಬೈರೇಗೌಡ- ಬೆಂಗಳೂರು ಗ್ರಾಮಾಂತರ, ಎಂ.ಬಿ.ಪಾಟೀಲ್- ವಿಜಯಪುರ, ಎಚ್.ಆಂಜನೇಯ-ಚಿತ್ರದುರ್ಗ, ರಮಾನಾಥ ರೈ- ದಕ್ಷಿಣ ಕನ್ನಡ, ವಿನಯ ಕುಲಕರ್ಣಿ-ಧಾರವಾಡ, ಎ.ಮಂಜು-ಹಾಸನ, ಆರ್.ವಿ.ದೇಶಪಾಂಡೆ- ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಮುಂದುವರಿದಿದೆ.

 

ಎನ್ಎಸ್ಜಿ ಸದಸ್ಯತ್ವ: ಅಂತಿಮ ಕಸರತ್ತು ನಡೆಸಲು ಸಿಯೋಲ್ ಗೆ ತೆರಳಿದ್ರು ಜೈಶಂಕರ್

ಎನ್ಎಸ್ಜಿ ಸದಸ್ಯತ್ವ ಪಡೆಯಲು ಭಾರತ ಎಲ್ಲ ರೀತಿಯ ಕಸರತ್ತು ಮುಂದುವರಿಸಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಬುಧವಾರ ಸಿಯೋಲ್ ಗೆ ಪ್ರಯಾಣ ಬೆಳೆಸಿದ್ದು, ಗುರುವಾರ ನಡೆಯಲಿರುವ ಎನ್ಎಸ್ಜಿ ಸದಸ್ಯರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎನ್ಎಸ್ಜಿ ರಾಷ್ಟ್ರಗಳ ಪ್ರತಿನಿಧಿಗಳ ಈ ಸಭೆಯಲ್ಲಿ ಭಾರತ ತನ್ನ ಅಂತಿಮ ಪ್ರಯತ್ನ ನಡೆಸಲಿದ್ದು, ಸದಸ್ಯತ್ವ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ. ಈಗಾಗಲೇ ವಿದೇಶಾಂಗ ಸಚಿವಾಲಯದ ಅಧಿಕಾರಿ ಅಮನ್ ದೀಪ್ ಸಿಂಗ್ ಗಿಲ್ ಸಿಯೋಲ್ ಗೆ ತೆರಳಿದ್ದು, ಭಾರತದ ಪರಿಸ್ಥಿತಿಯನ್ನು ಇತರ ರಾಷ್ಟ್ರಗಳಿಗೆ ವಿವರಿಸಿ ಬೆಂಬಲ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ. ಇಲ್ಲಿ ಯಾವುದೇ ಒಂದು ರಾಷ್ಟ್ರ ಭಾರತ ವಿರುದ್ಧ ಮತ ಚಲಾಯಿಸಿದರೂ ಸದಸ್ಯತ್ವ ಕೈತಪ್ಪಲಿದ್ದು, ಚೀನಾ ವಿರೋಧ ಭಾರತದ ಪ್ರಯತ್ನಕ್ಕೆ ದೊಡ್ಡ ತೊಡಕಾಗಿದೆ.

ಸಚಿವ ಸ್ಥಾನ ಕೈತಪ್ಪಿದರೂ ಸರ್ಕಾರದ ಪರ ಕೋಳಿವಾಡ್ ಬ್ಯಾಟಿಂಗ್

ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ವಂಚಿತರಾಗಿ ಸ್ಪೀಕರ್ ಸ್ಥಾನಕ್ಕೆ ತೃಪ್ತರಾಗಿರುವ ಕೆ.ಬಿ.ಕೋಳಿವಾಡ್, ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ.

‘ಸಚಿವ ಸ್ಥಾನ ವಂಚಿತರ ಬೆಂಬಲಿಗರು ನಡೆಸುತ್ತಿರುವ ಹೋರಾಟ ನಿಲ್ಲಬೇಕು. ನಿರಾಸೆಯಾದಾಗ ಅಸಮಾಧಾನ, ಆಕ್ರೋಶ ಸಹಜ. ಎಲ್ಲಕ್ಕಿಂತ ಪಕ್ಷದ ಹಿತ ಮುಖ್ಯ. ಹಿರಿಯ ಶಾಸಕರು ಮಂತ್ರಿ ಸ್ಥಾನ ಆಕಾಂಕ್ಷಿಗಳಾಗಿದ್ದರು. ಅಷ್ಟೇ ಅಲ್ಲ ಹಲವಾರು ಸಮರ್ಥ ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದೆ. ಹೀಗಾಗಿ ಪಕ್ಷದಲ್ಲಿ ಅಸಮಧಾನ, ಆಕ್ರೋಶ ಹೆಚ್ಚಿದೆ. ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿಯ ಪ್ರತಿಭಟನೆ, ಹೋರಾಟ ನಿಲ್ಲಬೇಕು’ ಎಂಬುದು ಕೋಳಿವಾಡ್ ವಾದ.

ಜನ ಹೇಳಿದಂಗೆ ಕೇಳ್ತೀನಿ: ಬಾಬೂರಾವ್ ಚಿಂಚನಸೂರ್

‘ಸಚಿವ ಸ್ಥಾನದಿಂದ ನನ್ನನ್ನು ಕೈಬಿಟ್ಟಿರುವುದು ಬೇಸರ ತಂದಿದೆ. ನನ್ನ ಸಮುದಾಯಕ್ಕೂ ನೋವಾಗಿದೆ. ಹೀಗಾಗಿ ಗುರುಮಿಠಕಲ್ ವಿಧಾನ ಸಭೆ ಕ್ಷೇತ್ರದ ಜನ ಹೇಳಿದಂತೆ ಕೇಳ್ತೀನಿ’ ಎಂದಿದ್ದಾರೆ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್. ಇದರ ಜತೆಗೆ ಅವರು ಹೇಳಿದಿಷ್ಟು:

‘ಕ್ಷೇತ್ರದ ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡು ಅಂದ್ರು ಕೊಡ್ತೇನೆ. ಪಕ್ಷ ಬಿಡು ಅಂದ್ರು ಬಿಡ್ತೇನೆ. ಕೋಲಿ, ಕಬ್ಬಲಿಗ ಹಾಗೂ ಗಂಗಾಮತಸ್ಥ ಸಮುದಾಯ ಜನರ ಅಭಿಪ್ರಾಯ ಪಡೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮತ್ತು ಮುಂದಿನ ರಾಜಕೀಯಕ್ಕೆ ಸಂಬಂಧಿಸಿದ ತೀರ್ಮಾನಕ್ಕೆ ಬರುತ್ತೇನೆ.’

ಕೇರಳ ಕ್ರೀಡಾ ಮಂಡಳಿ ಮುಖ್ಯಸ್ಥೆ ಸ್ಥಾನ ತೊರೆದ ಅಂಜು

ಭಾರತದ ಮಾಜಿ ಒಲಿಂಪಿಯನ್ ಅಂಜು ಬಾಬಿ ಜಾರ್ಜ್ ಕೇರಳ ಕ್ರೀಡಾ ಮಂಡಳಿ ಮುಖ್ಯಸ್ಥೆ ಸ್ಥಾನ ತ್ಯಜಿಸಿದ್ದಾರೆ. ಕೇರಳ ಕ್ರೀಡಾ ಸಚಿವ ಇ.ಪಿ ಜಯರಾಜನ್ ಅವರಿಂದ ಅವಮಾನವಾಗಿದೆ ಎಂದು ಆರೋಪ ಮಾಡಿ, ಈ ನಿರ್ಧಾರ ತೆಗೆದುಕೊಂಡಿದ್ದಾರೆ ಮಾಜಿ ಅಥ್ಲೀಟ್. ಬುಧವಾರ ಮಂಡಳಿಯ 13 ಸದಸ್ಯರೊಂದಿಗೆ ತಮ್ಮ ಸ್ಥಾನಕ್ಕೂ ರಾಜಿಮನಾಮೆ ನೀಡಿದ್ದಾರೆ. ಅಂಜು ಕ್ರೀಡಾ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ:

‘ಕ್ರೀಡೆ ರಾಜಕೀಯ ಹಾಗೂ ಪಕ್ಷಕ್ಕಿಂತ ಮಿಗಿಲಾದದ್ದು. ಕ್ರೀಡಾ ಮಂಡಳಿಯ ಮುಖ್ಯಸ್ಥೆ ಸ್ಥಾನ ನೀಡಿದಾಗ ನನಗೆ ಬಹಳ ಸಂತೋಷವಾಗಿತ್ತು. ಆದರೆ ಪರಿಸ್ಥಿತಿ ನಾನಂದುಕೊಂಡಂತೆ ಇರಲಿಲ್ಲ. ಹಾಗಾಗಿ ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಅವರು ನಮ್ಮನ್ನು ಕೊಲ್ಲಬಹುದು. ಆದರೆ ಸೋಲಿಸಲು ಸಾಧ್ಯವಿಲ್ಲ.’

Leave a Reply