20 ಉಪಗ್ರಹಗಳನ್ನು ಕಕ್ಷೆಗೇರಿಸಿ ದಾಖಲೆ ಬರೆದ ಇಸ್ರೊ, ಇದು ಬರೀ ನಂಬರ್ ಅಲ್ಲ ಜಗತ್ತಿನ ಬಾಹ್ಯಾಕಾಶ ಬಲವಾಗಿ ಬೆಳೆದಿರುವುದರ ಸಾಕ್ಷ್ಯ!

ಡಿಜಿಟಲ್ ಕನ್ನಡ ವಿಶೇಷ:

ಫಲಿತಾಂಶದ ಬಗ್ಗೆ ಅನುಮಾನವೇ ಇರಲಿಲ್ಲ. ಏಕೆಂದರೆ ಇದು ನಮ್ಮ ಹೆಮ್ಮೆಯ ಇಸ್ರೊ.

ಒಂದೇ ರಾಕೆಟ್ ನಲ್ಲಿ 20 ಉಪಗ್ರಹಗಳನ್ನು ಕಕ್ಷೆಗೆ ಏರಿಸಿ ಇಸ್ರೊ ದಾಖಲೆ ಬರೆದಿದೆ ಅರ್ಥಾತ್ ತನ್ನ ದಾಖಲೆ ಉತ್ತಮಪಡಿಸಿಕೊಂಡಿದೆ. ಅಂದರೆ ಈ ಹಿಂದೆ 2008ರಲ್ಲಿ 10 ಉಪಗ್ರಹಗಳನ್ನು ಒಂದೇ ಚಿಮ್ಮು ವಾಹನದಲ್ಲಿ ನಭಕ್ಕೇರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಸರಿಯಾಗಿ ಬೆಳಗ್ಗೆ 9. 27ಕ್ಕೆ ರಾಕೆಟ್ ಉಡ್ಡಯನವಾಗಿ ಮುಂದಿನ 26 ನಿಮಿಷಗಳಲ್ಲಿ ಎಲ್ಲವೂ ಅಂದುಕೊಂಡಂತೆ ಕಕ್ಷೆ ಸೇರಿದವು.

ಈ ನಂಬರುಗಳ ಸಾಧನೆ ಬೆರಗಿನದ್ದೇ ಆದರೂ ನಾವು ಕೇವಲ ಈ ಬೆರಗಿನಲ್ಲಿ ಮೈಮರೆಯದೇ ಇವತ್ತಿನ ಇಸ್ರೊ ಉಡ್ಡಯನ ಇನ್ನೊಂದು ಬಹುಮುಖ್ಯ ಕಾರಣದಿಂದ ಐತಿಹಾಸಿಕ ಯಾತ್ರೆ ಎನಿಸುತ್ತಿದೆ. ಅದೆಂದರೆ ಉಪಗ್ರಹ ಯಾತ್ರೆಗೆ, ಆ ನಿಟ್ಟಿನ ಬಾಹ್ಯಾಕಾಶ ಮಾರುಕಟ್ಟೆಯ ಅತಿ ಪ್ರಬಲ ಆಟಗಾರನಾಗಿ ಭಾರತ ರೂಪುಗೊಳ್ಳುತ್ತಿದೆ. ಕೇವಲ ನಂಬರುಗಳದ್ದೇ ಮಾತಾಡುತ್ತ ಕುಳಿತರೆ 2014ರಲ್ಲಿ ರಷ್ಯಾ ಒಂದೇ ಬಾರಿಗೆ 37 ಉಪಗ್ರಹಗಳನ್ನು ಹಾಗೂ ಅಮೆರಿಕ 30 ಉಪಗ್ರಹಗಳನ್ನು ನಭಕ್ಕೆ ಏರಿಸಿತ್ತು.

ಆದರೆ ಇವತ್ತು ಶ್ರೀಹರಿಕೋಟದ ಸತೀಶ್ ಧವನ್ ಕೇಂದ್ರದಿಂದ, ಪಿ ಎಸ್ ಎಲ್ ವಿ ಸಿ-34 ರಾಕೆಟ್ ನಲ್ಲಿ ಕುಳಿತು ಪ್ರಯಾಣಿಸಿದ ಉಪಗ್ರಹಗಳ ವೈವಿಧ್ಯವನ್ನು ಗಮನಿಸಿದರೆ ಭಾರತ ಸಾಗುತ್ತಿರುವ ಉದಾತ್ತ ಹಾದಿಯ ಅರಿವಾಗುತ್ತದೆ. ಒಂದು ಮಾತಿನಲ್ಲಿ ಇದನ್ನು ಸೆರೆ ಹಿಡಿದಿಡಬೇಕೆಂದರೆ- ಈ ಯಾತ್ರೆಯಲ್ಲಿ ನಮ್ಮದೇ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ರೂಪಿಸಿರುವ ಪುಟಾಣಿ ಉಪಗ್ರಹಗಳೂ ಇವೆ ಹಾಗೂ ಅವುಗಳ ಜತೆಯಲ್ಲೇ ಭಾರತದ ‘ಕಾರ್ಟೊಸ್ಯಾಟ್-2’ ಹಾಗೂ ಅಮೆರಿಕ, ಜರ್ಮನಿ, ಇಂಡೋನೇಷ್ಯ, ಕೆನಡಾಗಳ ಉಪಗ್ರಹಗಳಿವೆ! ಇವೆಲ್ಲವುಗಳ ಒಟ್ಟೂ ತೂಕ 1288 ಕೆ.ಜಿ.

ಇಸ್ರೊದ ಮುಖ್ಯ ಕಾರ್ಯಸೂಚಿ ಎರಡನೇ ಹಂತದ ಕಾರ್ಟೊಸ್ಯಾಟ್ ಉಪಗ್ರಹವನ್ನು ಕಕ್ಷೆಗೆ ಕೂರಿಸುವುದು. ನಕ್ಷೆಗೆ ಸಂಬಂಧಿಸಿದ ಉಪಗ್ರಹವಿದು. ಈ ಉಪಗ್ರಹವು ಕಳುಹಿಸುವ ಚಿತ್ರಗಳ ಆಧಾರದಲ್ಲಿ ಭೂನಕ್ಷೆಗೆ ಸಂಬಂಧಿಸಿದ ಹಲವು ಕಾರ್ಯಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ ರಸ್ತೆಜಾಲಗಳ ನಿರ್ವಹಣೆ, ಸಾಗರ ತೀರಗಳಲ್ಲಿ ಭೂ ಲಭ್ಯತೆಯ ದಾಖಲೆ ನಿರ್ವಹಣೆ, ನೀರಿನ ಜಾಲಗಳು ಇತ್ಯಾದಿಗಳ ನಿರ್ವಹಣೆಗೆ ತಂತ್ರಜ್ಞಾನ ಸಹಾಯವನ್ನು ಒದಗಿಸುತ್ತದೆ. ಅದಾಗಲೇ ಈ ನಕ್ಷಾ ಉಪಗ್ರಹ ಸರಣಿಯ 2ಎ ಮತ್ತು 2ಬಿ ಕಾರ್ಯನಿರ್ವಹಿಸುತ್ತಿವೆ. ಇವತ್ತಿನದ್ದು ಈ ವಿಭಾಗವನ್ನು ಇನ್ನಷ್ಟು ಬಲಪಡಿಸಲಿದೆ. ಇಂದಿನ ಐತಿಹಾಸಿಕ ಯಾತ್ರೆಯಲ್ಲಿ ಪ್ರಾಥಮಿಕ ಉಪಗ್ರಹ ಸ್ಥಾನದಲ್ಲಿದ್ದ ಇದರ ತೂಕ 727.5 ಕೆ.ಜಿ.

ನಂತರದ ಸ್ಥಾನದಲ್ಲಿ ಕುಳಿತಿದ್ದದ್ದು ‘ಲಪಾನ್-ಎ3’ ಎಂಬ 120 ಕೆ.ಜಿ ತೂಕದ ಇಂಡೋನೇಷ್ಯದ ಉಪಗ್ರಹ. ಅಲ್ಲಿನ ಭೂಮಿ, ನೈಸರ್ಗಿಕ ಸಂಪತ್ತು ಹಾಗೂ ಪರಿಸರವನ್ನು ನಿಗಾ ವಹಿಸುವುದಕ್ಕೆ ಆ ದೇಶದವರು ಸಿದ್ಧಪಡಿಸಿರುವ ಉಪಗ್ರಹ.

130 ಕೆ.ಜಿ.ಯ ‘ಬಿರೋಸ್’ (ಬರ್ಲಿನ್ ಇನ್ಫ್ರಾರೆಡ್ ಆಪ್ಟಿಕಲ್ ಸಿಸ್ಟಂ) ಎಂಬ ಜರ್ಮನಿ ಉಪಗ್ರಹವು ಉಷ್ಣ ಏರಿಕೆಯ ವಿದ್ಯಮಾನಗಳನ್ನು ಗಮನಿಸುವ ಕಾರ್ಯಕ್ಕೆ ಬಳಕೆಯಾಗಲಿದೆ.

ತಂತ್ರಜ್ಞಾನ ದೈತ್ಯ ಗೂಗಲ್ ಗೆ ಸೇರಿದ ಟೆರಾ ಬೆಲ್ಲಾ ಸಹ ತನ್ನ 110 ಕೆ.ಜಿ.ಯ ಉಪಗ್ರಹವನ್ನು ಕಕ್ಷೆಗೇರಿಸುವಲ್ಲಿ ಇಸ್ರೊದ ಪಿ ಎಸ್ ಎಲ್ ವಿ ಸಿ-34 ರಾಕೆಟ್ ಮೇಲೆ ವಿಶ್ವಾಸವಿರಿಸಿತು ಎಂಬುದೂ ಗಮನಾರ್ಹ ಅಂಶವೇ. ಭೂಮಿಯ ಚಿತ್ರಗಳು ಹಾಗೂ ಎಚ್ ಡಿ ಗುಣಮಟ್ಟದ ವಿಡಿಯೋ ತೆಗೆಯುವುದಕ್ಕೆ ಈ ಉಪಗ್ರಹ ‘ಸ್ಕೈಸ್ಯಾಟ್ ಜೆನ್2-1’ ಕಕ್ಷೆ ಸೇರಿದೆ. ಇದರೊಂದಿಗೆ, ಇಂಥದೇ ಉದ್ದೇಶ ಹೊತ್ತ ಅಮೆರಿಕದ ಡವ್ ಉಪಗ್ರಹ ಗುಚ್ಛವೂ ಸ್ಥಾನ ಪಡೆಯಿತು. 12 ಪುಟಾಣಿ ಉಪಗ್ರಹಗಳು ಪ್ರತಿಯೊಂದೂ 4.7 ಕೆಜಿ ಭಾರದವು.

85 ಕೆ.ಜಿ ತೂಕದ ‘ಎಂ3ಎಂಸ್ಯಾಟ್’ ಎಂಬ ಕೆನಡಾದ ಉಪಗ್ರಹವು ಸಂದೇಶದ ಸಿಗ್ನಲ್ ಗಳನ್ನು ಸ್ವೀಕರಿಸುವ ವಿಭಾಗದಲ್ಲಿ ಸಹಕರಿಸಲಿದ್ದು, ಸಮೀಪದ ಭೂಕಕ್ಷೆಯಲ್ಲೇ ಸುತ್ತಲಿದೆ.

ಇನ್ನೊಂದು ಸಹ ಪ್ರಯಾಣಿಕನೆಂದರೆ ಕೆನಡಾದ ‘ಜಿ ಎಚ್ ಜಿ ಸ್ಯಾಟ್’. ಇಂಗಾಲದ ಡೈ ಆಕ್ಸೈಡ್ ಮತ್ತು ಮಿಥೇನ್ ಗಳು ಭೂಮಿಯ ಮೇಲೆ ಬೀರುತ್ತಿರುವ ಪರಿಣಾಮಗಳ ಅಧ್ಯನಕ್ಕೆ ನೆರವಾಗಲಿರುವ ಈ ಉಪಗ್ರಹದ ತೂಕ 25.5 ಕೆ.ಜಿ.

ಇವೆಲ್ಲ ಘಟಾನುಘಟಿಗಳ ಕತೆಯಾಯಿತು. ಮುಂದೆ ಯಾವುದೋ ಮಹತ್ ಕಾರ್ಯಕ್ಕೆ ಮುನ್ನುಡಿಯಾಗಬಲ್ಲ, ಸ್ಫೂರ್ತಿಯಾಗಬಲ್ಲ ವಿಶ್ವವಿದ್ಯಾಲಯಗಳ ಪುಟಾಣಿ ಉಪಗ್ರಹಗಳು ಈ ಯಾತ್ರೆಯಲ್ಲಿ ಜಾಗ ಪಡೆದಿರುವುದಿದೆಯಲ್ಲ… ಇದೂ ಪುಳಕವೇ. ಇದು ಇಸ್ರೊ ಮುಂದಿನ ಪೀಳಿಗೆಗೆ ಒದಗಿಸುತ್ತಿರುವ ಅಧ್ಯಯನ ವೇದಿಕೆ ಎಂದು ಅರ್ಥ ಮಾಡಿಕೊಳ್ಳಬೇಕು. ಇಸ್ರೊ, ಆ ಮೂಲಕ ಭಾರತದ ಮುಂದಿನ ಬಾಹ್ಯಾಕಾಶ ಯಾನಕ್ಕೆ ಹೊಸ ಪೀಳಿಗೆ ಸಜ್ಜುಗೊಳ್ಳುತ್ತಿರುವುದು ಹಾಗೂ ಈ ಬಗ್ಗೆ ಇಸ್ರೊ ಆಸಕ್ತಿ ವಹಿಸಿರುವುದು ಒಂದು ಆಪ್ತ ವಿದ್ಯಮಾನ. ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದ  ‘ಸತ್ಯಭಾಮಾಸ್ಯಾಟ್’ ಎಂಬ 1.5 ಕೆ. ಜಿ. ಪುಟಾಣಿ ಉಪಗ್ರಹವು ಹಸಿರುಮನೆ ಅನಿಲಗಳ ಅಧ್ಯಯನ ಮಾಡಲಿದೆ. ಪುಣೆಯ ಇಂಜಿನಿಯರಿಂಗ್ ಕಾಲೇಜು ಅಭಿವೃದ್ಧಿಪಡಿಸಿರುವ 1 ಕೆ.ಜಿ. ತೂಕದ ‘ಸ್ವಯಂ’ ಉಪಗ್ರಹ ಹವ್ಯಾಸಿ ರೆಡಿಯೋ ಸಮುದಾಯಕ್ಕೆ ಸಂದೇಶ ಸೇವೆ ಒದಗಿಸುವ ಉದ್ದೇಶ ಹೊಂದಿದೆ.

ಇವೆಲ್ಲವೂ ನೀಡುತ್ತಿರುವ ಸಂದೇಶ ಪ್ರಖರವಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಇಸ್ರೊ ಒಂದು ಪ್ರಬಲ ಜಾಗತಿಕ ಶಕ್ತಿಯಾಗಿ ಬೆಳೆದಿದೆ. ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ನಂಥ ದೈತ್ಯ ಖಾಸಗಿ ಕಂಪನಿಗಳು ಭವಿಷ್ಯದಲ್ಲಿ ಬಾಹ್ಯಾಕಾಶ ವಿಭಾಗದಲ್ಲಿ ಭಾರಿ ಮಹತ್ವಾಕಾಂಕ್ಷೆಗಳನ್ನಿಟ್ಟುಕೊಂಡು ಬೆಳೆಯುತ್ತಿರುವ ಕಾಲಘಟ್ಟದಲ್ಲಿ, ಇಸ್ರೊ ತನ್ನದೇ ವ್ಯಾಪ್ತಿಯಲ್ಲಿ ಸಂಪನ್ಮೂಲದ ಸಮರ್ಥ ಬಳಕೆಗಳ ಮೂಲಕ ಕಡಿಮೆ ಖರ್ಚಿನ ಮಂತ್ರ ಪಠಿಸುತ್ತ ಬೆಳೆಯುತ್ತಿದೆ.

ಇಂಡೋನೇಷ್ಯದಂಥ ರಾಷ್ಟ್ರಕ್ಕೆ ಉಪಗ್ರಹಗಳನ್ನು ಕಕ್ಷೆಗೇರಿಸುವ ರಾಕೆಟ್ ಗಳು, ಅಂಥ ಕೇಂದ್ರಗಳು ಇಲ್ಲ. ಆದರೆ, ಅಮೆರಿಕ ಇಂಥ ಎಲ್ಲ ವಿಷಯಗಳಲ್ಲಲೂ ಸಶಕ್ತ. ಆದರೂ ಚಿಕ್ಕವ್ಯಾಪ್ತಿಯ ಉಪಗ್ರಹಗಳ ಉಡಾವಣೆಗೆ ಭಾರತವನ್ನು ಆತುಕೊಳ್ಳುತ್ತಿದೆ. ಕಾರಣ, ಕಡಿಮೆ ಖರ್ಚಿನಲ್ಲಿ ತಂತ್ರಜ್ಞಾನ ಒದಗಿಸುವ ತಾಕತ್ತು ನಮ್ಮದು. ಬಹುಶಃ ಇದೇ ನಮ್ಮ ಭವಿಷ್ಯದ ಬೆಳವಣಿಗೆಯನ್ನೂ ಸೂಚಿಸುತ್ತಿದೆ.

ಎಷ್ಟೆಂದರೂ ‘ಗ್ರಾವಿಟಿ’ ಹಾಲಿವುಡ್ ಚಿತ್ರಕ್ಕಿಂತ ಕಡಿಮೆ ಬಜೆಟ್ ನಲ್ಲಿ ಮಂಗಳಯಾನ ಮಾಡಿದವರು ನಾವಲ್ಲವೇ?

ಸೆಲ್ಯೂಟ್ ಇಸ್ರೊ!

ಈ ಕೊಂಡಿಯಲ್ಲಿ ಇಸ್ರೊ ಒದಗಿಸಿದೆ ಈ 20 ಉಪಗ್ರಹಗಳ ಉಡಾವಣಾ ತಯಾರಿ ಚಿತ್ರ.

Leave a Reply