ಎರಡು ದಿನದ ಮದುವೆ ಕಾರ್ಯಕ್ರಮಕ್ಕಿರುವ ಪ್ಲಾನ್ ಪೂರ್ತಿ ದಾಂಪತ್ಯಕ್ಕೇಕಿಲ್ಲ?

author-geetha‘ಮೆಹಂದಿ ಹಾಕುವವರಿಗೆ ಹೇಳಿಯಾಯ್ತಾ?’

‘ಹೂಂ.. ಎರಡು ದಿವಸ ಮುಂಚೆ ಬರಲು ಹೇಳಿದ್ದೇನೆ. ಕಲರ್ ಚೆನ್ನಾಗಿ ಬರುತ್ತೆ..’

‘ಹಾಕೋರು ಮುಸ್ಲಿಂ ಲೇಡೀಸ್ ಆದ್ರೆ ಬೆಸ್ಟು! ತುಂಬಾ ಚೆನ್ನಾಗಿ ಹಾಕ್ತಾರೆ..’

‘ಗೊತ್ತು.. ಅವರಿಗೇ ಹೇಳಿದ್ದೇನೆ..’

‘ಫೋಟೋಗೆ, ವಿಡಿಯೋಗೆ ಎಲ್ಲಾ ಹೇಳಿ ಆಗಿದ್ಯಾ? ಈಗ ಪ್ರೀವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ವಿಡಿಯೋ ಕೂಡ ಮಾಡಿಸಬೇಕು.. ಫೋಟೋಗಳು ಅಷ್ಟೇ.. ಟ್ರೆಡೀಷನಲ್ ಜತೆಗೆ ಕ್ಯಾಂಡಿಡ್ ಕೂಡ ತೆಗೆಸಬೇಕು.’

‘ಹೂಂ.. ಹೇಳಿದ್ದೇನೆ. ನಾಡಿದ್ದು ಪ್ರೀವೆಡ್ಡಿಂಗ್ ಶೂಟ್ ಇದೆ.’

‘ಬ್ಯೂಟೀಷಿಯನ್ ಗೆ ಹೇಳಿದ್ಯ? ಕೂದಲಿಗೆ ಬೇರೆ.. ಮೇಕಪ್ಗೆ ಬೇರೆ.. ಸೀರಿಯಲ್ಗಳಲ್ಲಿ ಹೀರೋಯಿನ್ ಗಳಿಗೆ ಮೇಕಪ್ ಮಾಡೋರು ಗೊತ್ತು.. ಬೇಕಾದರೆ ಹೇಳ್ತೀನಿ..’

‘ಓ.. ಪ್ಲೀಸ್ ಹೇಳು.. ನಾಡಿದ್ದು ಬಂದ್ರೆ ಪ್ರೀವೆಡ್ಡಿಂಗ್ ಶೂಟ್ ಗೂ ಮೇಕ್ ಅಪ್ ಮಾಡಿಸಿಕೊಳ್ತೀನಿ..’

‘ಅಡಿಗೇನು ಅಷ್ಟೇ, ಧಾರೆಗೆ ಟ್ರೆಡಿಷನಲ್ಲು.. ರಿಸೆಪ್ಷನ್ಗೆ ಮಿಕ್ಸೆಡ್ ಇರಬೇಕು. ಬರೀ ಚಾಟ್ಸ್ ಅಲ್ಲ..ಪಿಜ್ಜಾ, ಪಾಸ್ತಾ, ನೂಡಲ್ಸ್ ಎಲ್ಲಾ ಇರಬೇಕು.. ಡೆಕೊರೇಟರ್ಸ್ ಯಾರು? ಕಲರ್ ಥೀಮ್ ಇರಬೇಕು..’

‘ಹೂಂ.. ಪಿಂಕ್ ಅಂಡ್ ವೈಟ್ ಇರಬೇಕು ಅಂತ ಹೇಳಿದ್ದೇನೆ. ಊಟದ್ದು ಪೇರೆಂಟ್ಸ್ ನೋಡಿಕೊಳ್ತಾರೆ..’

‘ರಿಸೆಪ್ಷೆನ್ನಿಗೆ ನೀನು ಉಡೋ ಸೀರೆ, ಅವನು ಹಾಕೋ ಸೂಟ್ ಮ್ಯಾಚ್ ಆಗಬೇಕು.. ಬರುವವರಿಗೆ ಪುಟ್ಟ ಸಸಿ ಕೊಡುವುದು ಫ್ಯಾಷನ್ ಈಗ.. ತೆಂಗಿನಕಾಯಿ ಕೊಡೋದು outdated!’

‘ಓ.. ಅಮ್ಮನಿಗೆ ಹೇಳ್ತೀನಿ..’

‘ಬಾಲಿವುಡ್ ಡ್ಯಾನ್ಸ್ ಪ್ರೋಗ್ರಾಂ ಇದ್ರೆ ಚೆನ್ನಾಗಿರುತ್ತೆ. ಇದೆಲ್ಲಾ ಮ್ಯಾನೇಜ್ ಮಾಡೋದು ಕಷ್ಟ ಎನ್ನಿಸಿದರೆ ಅದನೆಲ್ಲಾ ಮಾಡಲು ವೆಡ್ಡಿಂಗ್ ಪ್ಲಾನರ್ ಇದ್ದಾರೆ.’

ಇನ್ನೆರೆಡು ವಾರದಲ್ಲಿ ಮದುವೆಯಾಗಲಿದ್ದ ಹುಡುಗಿ ಹಾಗೂ ಅವಳ ಸ್ನೇಹಿತೆ ಮಾತನಾಡುತ್ತಿದ್ದರು. ಕೇಳುವಷ್ಟು ಕೇಳಿದೆ.. ಕೊನೆಗೆ ತಡೆಯಲಾರದೆ ಮಧ್ಯೆ ಪ್ರವೇಶಿಸಿ ಪ್ರಶ್ನಿಸಿದೆ.

‘ಮದುವೆಯಾದ ಮೇಲೆ ನೆಮ್ಮದಿ, ಸಂತೋಷದಿಂದ ಜೀವನ ನಡೆಸಲು ಯಾವುದಾದರು ಪ್ಲಾನ್ ಇದೆಯೇ?’

ಇಬ್ಬರೂ ನನ್ನತ್ತ ಕಣ್ಣರಳಿಸಿ, ಹುಬ್ಬೇರಿಸಿ ನೋಡಿ ಎದ್ದು ಹೋದರು.

ನನ್ನ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ ಅಥವಾ ಉತ್ತರಿಸುವ ಅವಶ್ಯಕತೆ ಅವರಿಗೆ ಕಾಣಲಿಲ್ಲ. ಈಗ ಸಮಾಜ ಬದಲಾಗಿದೆ. ಸಂಬಂಧಗಳು ಸೂಕ್ಷ್ಮವಾಗುತ್ತಾ ಸಾಗಿದೆ.

ರಕ್ತ ಸಂಬಂಧಗಳೇ ಮುರಿದುಬೀಳುತ್ತವೆ ಕಠಿಣ ಮಾತಿಗೆ. ಅಮ್ಮ ಮಕ್ಕಳ ಸಂಬಂಧ ಕೂಡ ನಿಭಾಯಿಸಬೇಕಾದ ಕಾಲ ಇದು. ಹೀಗಿರುವಾಗ ಗಂಡ-ಹೆಂಡತಿ ಸಂಬಂಧ ಮುರಿದುಬೀಳದಿರಲು ಅಥವಾ ಚೆನ್ನಾಗಿರಲು ಇಬ್ಬರಿಂದ ಪ್ರಯತ್ನ ಅಗತ್ಯ.

ಈ ಮೇಲಿನ ಸಂಭಾಷಣೆ ನನ್ನ ಕಾಡಿದ್ದು ಏಕೆಂದರೆ ಮದುವೆಯೆಂಬ ಎರಡು ದಿನದ ಸಮಾರಂಭಕ್ಕೆ ಅಷ್ಟೊಂದು ಪ್ಲಾನ್ ಮಾಡುವ ಹುಡುಗ, ಹುಡುಗಿ ಮದುವೆಯಾದ ನಂತರ ಜೀವನದ ಬಗ್ಗೆ ಮದುವೆಗೆ ಮುಂಚೆ ಹೆಚ್ಚು ವಿಚಾರ ಮಾಡುವುದೇ ಇಲ್ಲ.

ಹಿಂದಿನ ಕಾಲದಲ್ಲಿ ಈ ವಿಚಾರವಾಗಿ ಆಲೋಚನೆ ಮಾಡುವುದು ಅಷ್ಟೊಂದು ಮುಖ್ಯವಾಗಿರಲಿಲ್ಲ. ಹಿರಿಯರು ಗೊತ್ತು ಮಾಡಿದ ಮದುವೆಯಾಗಲೀ, ಪ್ರೇಮ ವಿವಾಹವಾಗಲೀ ಹೆಣ್ಣು ಹೊಂದಿಕೊಂಡು ಹೋಗಬೇಕು ಎನ್ನುವುದು ಅಲಿಖಿತ ಒಪ್ಪಂದವಾಗಿತ್ತು. ಸಣ್ಣಪುಟ್ಟ ವಿಷಯಗಳನ್ನು ಗಮನಿಸುತ್ತಲೇ ಇರಲಿಲ್ಲ. ಹೆಣ್ಣು ಗೃಹಿಣಿಯಾಗಿ, ತಾಯಿಯಾಗಿ ಅದರಲ್ಲಿಯೇ ನೆಮ್ಮದಿ ಕಂಡುಕೊಳ್ಳುತ್ತಿದ್ದಳು.

ಈಗ ಕಾಲ ಬದಲಾಗಿದೆ. ಹೆಣ್ಣು ಸಮಾನ ಸ್ಥರದಲ್ಲಿ ನಿಂತಿದ್ದಾಳೆ. ವ್ಯಕ್ತಿಯಾಗಿ ಗಂಡಿಗಿಂಥ ಯಾವುದೇ ರೀತಿಯಲ್ಲಿ ಕಮ್ಮಿಯಿಲ್ಲ ಎಂಬ ಅರಿವು ಅವಳಿಗಿದೆ. ಸಮಾಜಕ್ಕೂ ಇದೆ.

ಹೀಗಿರುವಾಗ ಮದುವೆಯ ನಂತರದ ಜೀವನದ ಬಗ್ಗೆ, ಹೊಂದಾಣಿಕೆಯ ಬಗ್ಗೆ ಚರ್ಚಿಸುವುದು, ನಿರ್ಧಾರಗಳನ್ನು ಮುಂಚಿತವಾಗಿಯೇ ತೆಗೆದುಕೊಳ್ಳುವುದು ಮುಖ್ಯ.

ಮದುವೆ ಯಾವ ಛತ್ರದಲ್ಲಿ ಮಾಡಿಕೊಳ್ಳಬೇಕು, ಯಾವ ಬಣ್ಣದ ಥೀಮ್ ಇರಬೇಕು.. ಬಂದವರಿಗೆ ಸಸಿ ಕೊಡಬೇಕು ಎನ್ನುವಷ್ಟು ಡೀಟೇಲ್ ಆಗಿ ಮದುವೆ ಕಾರ್ಯಕ್ರಮದ ಬಗ್ಗೆ ಯೋಚಿಸುವ ಮಧುಮಕ್ಕಳು ಮದುವೆಯಾದ ಮೇಲಿನ ಅವರ ಬದುಕು ಹೇಗೆ ಎಂಬುದರ ಬಗ್ಗೆ ಚರ್ಚಿಸುವುದಿಲ್ಲ.

ಒಟ್ಟು ಕುಟುಂಬವೇ? ಅಥವಾ ಹೊಸ ಸಂಸಾರ ಹೂಡಬೇಕೇ? ಮಕ್ಕಳು ಬೇಕೇ? ಬೇಡವೇ? ಹೊರಗೆ ದುಡಿಯಲು ಹೋಗುವ ಇಚ್ಛೆ ಇದೆಯೇ? ಇಲ್ಲವೇ?.. ಹಣಕಾಸಿನ ವಿಷಯ ಹೇಗೆ? ಇಬ್ಬರೂ ಸಂಪಾದಿಸುತ್ತಿದ್ದರೆ.. ಖರ್ಚು ಹೇಗೆ? ವೈಯಕ್ತಿಕ ಸ್ವತ್ತು ಏನು? ಹೇಗೆ?.. ಇಂತಹ ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿ ಒಮ್ಮತವಿದೆಯೇ ಇಲ್ಲವೇ. ಮದುವೆಯಾದರೆ ಹಿತವಾಗಿ ಒಟ್ಟಿಗೆ ಬಾಳಲು ಸಾಧ್ಯವೇ ಎಂದು ವಿಚಾರ ಮಾಡುವುದು ಒಳಿತು.

ರೂಪ ನೋಡಿ ಸಂಬಂಧ ಬೆಳೆಸುವುದು, ಪ್ರೇಮವಿದೆಯೆಂದು ಮದುವೆಯಾಗುವುದು.. ನಂತರ ರೂಪ, ಪ್ರೇಮ ಎರಡೂ ಮದುವೆಗೆ ಕಂಟಕವಾಗಬಹುದು. ಪ್ರೀತಿಸುತ್ತಿಯಾದರೆ ಹೇಳಿದಂತೆ ಕೇಳು.. ಪ್ರೇಮವಿದೆಯೆಂದಾದರೆ ಹೇಳಿದಂತೆ ಕುಣಿ ಎಂದರೆ ಸಂಬಂಧ ಉಳಿಯುವುದಿಲ್ಲ. ರೂಪ ಅಭ್ಯಾಸವಾಗುತ್ತದೆ.. ಜೀವನ ನಡೆಸಲು ಪ್ರೇಮಕ್ಕಿಂಥ ಹೆಚ್ಚಿನದು ಬೇಕಾಗುತ್ತದೆ.

ವಿಚ್ಛೇದನ ಹೆಚ್ಚಾಗುತ್ತಿರುವುದನ್ನು ನಾವು ಗಮನಿಸುತ್ತಲೇ ಇದ್ದೇವೆ. ಕೆಲವೊಮ್ಮೆ ಕಾರಣಗಳು ವಿಚಿತ್ರ ಅನ್ನಿಸುತ್ತದೆ. ಮುಖ್ಯವಲ್ಲದ ವಿಷಯಗಳಿಗೆ ವಿಚ್ಛೇದನೆಯ ಮೊರೆ ಹೋಗುತ್ತಿದ್ದಾರೆ ಎಂಬ ಅಭಿಪ್ರಾಯ ಇದೆ. ಆದರೆ ಸಹಜೀವನ ನಡೆಸಲು, ಜೀವನ ಪರ್ಯಂತ ಒಟ್ಟಿಗೆ ಬದುಕಲು ಸಣ್ಣಪುಟ್ಟ ಎನಿಸುವ ಕಿರಿಕಿರಿಗಳು ನಿವಾರಣೆಯಾಗಬೇಕು.. ನೋಡುಗರಿಗೆ ಸಣ್ಣಪುಟ್ಟ ಅನ್ನಿಸುವುದು ಅನುಭವಿಸುವವರಿಗೆ ಅನ್ನಿಸುವುದಿಲ್ಲ.

‘ಗಂಡ ಹೆಂಡತಿಯ ಜಗಳ ಉಂಡು ಮಲಗುವವರೆಗೆ’ ಎನ್ನುವ ಗಾದೆ, ‘a good sex life solves everything’ ಎಂಬ ಹುಂಬು ಆಲೋಚನೆ ಅನ್ನಿಸುತ್ತದೆ. ‘ಒಂದು ಮಗುವಾದರೆ ಎಲ್ಲ ಸರಿಹೋಗುತ್ತದೆ’ ಎಂಬ ಪರಿಹಾರ ಈಗಿನ ಕಾಲಕ್ಕೆ ಹೊಂದುವುದೇ ಇಲ್ಲ. ನಾಳೆ ವಿಚ್ಛೇದಿತರಾಗಿ ಮಗುವಿಗಾಗಿ ಕಿತ್ತಾಡುವುದಕ್ಕಿಂಥ ಮಗು ಮಾಡಿಕೊಳ್ಳದಿರುವುದೇ ಮೇಲು.

ಕಾಲ ಕೆಟ್ಟಿಲ್ಲ. ಬದಲಾಗಿದೆ ಅಷ್ಟೇ. ಹೊಂದಾಣಿಕೆಯೊಂದೇ ಸೂತ್ರವಲ್ಲ. ಚರ್ಚೆ, ವಿಚಾರ ವಿನಿಮಯ, ವಾಸ್ತವದ ಅರಿವು ಮುಖ್ಯ.

ಮದುವೆ ಹೇಗೆ ಮಾಡಿಕೊಳ್ಳಬೇಕೆಂದು ವಿವರವಾಗಿ ಪ್ಲಾನ್ ಮಾಡುವ, ಆ ಎರಡು ದಿನ ಹೇಗೆ? ಏನು? ಎತ್ತ? ಎಂದು ಅಚ್ಚುಕಟ್ಟಾಗಿ ನಿರ್ಧರಿಸುವ ಬುದ್ಧಿಮತ್ತೆ, ಆಸೆ ಇರುವ ಇಂದಿನ ಯುವಜನಾಂಗ ಮದುವೆಗೆ ಮುಂಚೆಯೇ ನಂತರದ ಜೀವನದ ಬಗ್ಗೆ ವಿಚಾರ ಮಾಡಲಿ.. ಚರ್ಚೆ ಮಾಡಲಿ.. ಪ್ಲಾನ್ ಮಾಡಲಿ.. ಕೈಮೀರಿದ್ದು ಬಂದಾಗ ಒಪ್ಪಿಕೊಳ್ಳುವ ಸ್ವಭಾವ, ಮೆಚ್ಯುರಿಟಿ ಬೆಳೆಸಿಕೊಳ್ಳಲಿ.. ಸಂತಸ ನೆಮ್ಮದಿ ಅವರಿಗಿರಲಿ…

3 COMMENTS

  1. ಇಂದಿನ ಪೀಳಿಗೆಗೆ ಸೂಕ್ತ ಲೇಖನ
    ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ

Leave a Reply