ಅಂಬರೀಶ್, ಶ್ರೀನಿವಾಸ ಪ್ರಸಾದ್ ಪಾರ್ಟಿ ಫಂಡ್ ಕೊಡದೇ ಹೋದದ್ದು ಮಂತ್ರಿ ಪದವಿಗೆ ಮುಳುವಾಯಿತೇ..?!

ಡಿಜಿಟಲ್ ಕನ್ನಡ ವಿಶೇಷ:

ಕರ್ನಾಟಕದಲ್ಲಿ ನಡೆದ ನಾನಾ ಚುನಾವಣೆಗಳು ಹಾಗೂ ಪಂಚರಾಜ್ಯ ಚುನಾವಣೆಗೆ ಪಾರ್ಟಿ ಫಂಡ್ ಕೊಡದೇ ಹೋದದ್ದು ಅಂಬರೀಶ್ ಮತ್ತು ಶ್ರೀನಿವಾಸ ಪ್ರಸಾದ್ ಅವರ ಮಂತ್ರಿ ಪದವಿಯನ್ನು ಆಪೋಶನ ತೆಗೆದುಕೊಂಡಿತೇ..?

ಹೌದು ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ರಾಜ್ಯ ಹಾಗೂ ದಿಲ್ಲಿ ನಾಯಕರು ಚುನಾವಣೆ ಖರ್ಚುವೆಚ್ಚಗಳಿಗೆ ಇಟ್ಟ ನೇರ ಹಾಗೂ ಪರೋಕ್ಷ ಬೇಡಿಕೆಗಳನ್ನು ಈಡೇರಿಸದೇ ಹೋದದ್ದು ಪ್ರಮುಖ ಕಾರಣ. ಜತೆಗೆ ಮೈಸೂರು ಭಾಗದ ಕೆಲವು ನಾಯಕರು ಹಾಗೂ ಅವರ ಕುಟುಂಬ ಸದಸ್ಯರ ವರ್ತನೆಯನ್ನು ಸಹಿಸದೇ ಹೋದದ್ದು, ನಾಯಕರು ನಿರೀಕ್ಷಿಸಿದ ಅತಿಗೌರವ ಕೊಡದೇ ಹೋದದ್ದು ಅವರುಗಳ ಸಚಿವ ಸ್ಥಾನಕ್ಕೆ ಮುಳುವಾಯಿತು ಎನ್ನುತ್ತವೆ ಈ ಮೂಲಗಳು.

ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಿಂದ ಹಿಡಿದು ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ವಿಧಾನಸಭೆ ಮರುಚುನಾವಣೆವರೆಗೂ ಕರ್ನಾಟಕದಲ್ಲಿ ನಡೆದ ನಾನಾ ಚುನಾವಣೆಗಳಿಗೆ ಈ ಇಬ್ಬರೂ ಮುಖಂಡರು ಸಂಪನ್ಮೂಲ ಪೂರೈಸಲಿಲ್ಲ. ನಾಯಕರು ಬಾಯಿಬಿಟ್ಟು ಕೇಳಿದರೂ ಸ್ಪಂದಿಸಲಿಲ್ಲ. ಪ್ರಮುಖ ಖಾತೆ ಹೊತ್ತಿರುವ ನೀವೇ ಹೀಗೆ ಮಾಡಿದರೆ ಹೇಗೆ? ಮೇಲಿಂದ ಮೇಲೆ ಬರುತ್ತಿರುವ ಚುನಾವಣೆ ಖರ್ಚುಗಳನ್ನು ನಿಭಾಯಿಸುವುದಾದರೂ ಹೇಗೆ? ಎಂಬ ಪ್ರಶ್ನೆಗೂ ಸಿಕ್ಕ ಉತ್ತರ ಇಲ್ಲ ಎಂದೇ.

‘ನಾವು ಭ್ರಷ್ಟಾಚಾರ ಮಾಡ್ತಿಲ್ಲ. ಮಾಡೋದಕ್ಕೂ ಹೋಗೋದಿಲ್ಲ. ಈಗೇನೋ ಮಾಡಿ ನಾಳೆ ಸಿಕ್ಕಾಕಿಕೊಂಡು ಜೈಲಿಗೆ ಹೋಗೋದಿಕ್ಕೆ ಇಷ್ಟ ಇಲ್ಲ. ಬೇಕಿದ್ರೆ ನಮ್ಮ ಇಲಾಖೇಲೆ ಹಣ ಬರುತ್ತೆ ಅನ್ನಿಸೋ ಫೈಲ್ ಗಳನ್ನು ನೀವೇ ಕ್ಲಿಯರ್ ಮಾಡಿಕೊಳ್ಳಿ. ಫೈಲ್ ಗಳನ್ನು ನಿಮಗೇ ಕಳುಹಿಸುತ್ತೇವೆ. ಅದರಿಂದ ಬಂದದ್ದು ನೀವೇ ತಗೊಳ್ಳಿ, ಪಾರ್ಟಿ ಫಂಡನ್ನೂ ನೀವೇ ಮೇಂಟೇನ್ ಮಾಡಿಕೊಳ್ಳಿ’ ಎಂಬ ಉತ್ತರ ಕೊಟ್ಟು ಕೇಳಿದವರನ್ನು ಮಂಕು ಮಾಡಿ ಕಳುಹಿಸಿದ್ದಾರೆ.

ಸದ್ಯಕ್ಕೆ ಕರ್ನಾಟಕ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿರುವ ದೇಶದ ದೊಡ್ಡ ರಾಜ್ಯ. ಸಹಜವಾಗಿಯೇ ಪಾರ್ಟಿ ಫಂಡಿಗೆ ದಿಲ್ಲಿ ನಾಯಕರು ಇತ್ತಲೇ ಕಣ್ಣು ಬಿಡುತ್ತಾರೆ. ಪಕ್ಷ ಸಂಘಟನೆ ದೃಷ್ಟಿಯಿಂದಾಗಲಿ, ಯಾವುದೇ ರಾಜ್ಯದ ಚುನಾವಣೆ ಆಗಲಿ ಖರ್ಚುವೆಚ್ಚಗಳಿಗೆ ಕರ್ನಾಟಕವೇ ಕಾಮಧೇನು. ಅದೇ ರೀತಿ ಇತ್ತೀಚೆಗೆ ನಡೆದ ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಖರ್ಚುವೆಚ್ಚಗಳಿಗೆ ನಾಯಕರು ಕರ್ನಾಟಕದಿಂದ ಬಹುದೊಡ್ಡ ಸಂಪನ್ಮೂಲ ನಿರೀಕ್ಷೆ ಮಾಡಿದ್ದಾರೆ. ಆದರೆ ಪಾಪ ಇಲ್ಲಿನವರಾದರೂ ಏನು ಮಾಡುತ್ತಾರೆ? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಡೆದ ನಾನಾ ಚುನಾವಣೆಗಳ ಖರ್ಚುವೆಚ್ಚ ನಿಭಾಯಿಸುವಲ್ಲಿ ಹೈರಾಣಾಗಿ ಹೋಗಿದ್ದಾರೆ. ಜತೆಗೆ ರಾಷ್ಟ್ರಮಟ್ಟದಲ್ಲಿ ಪಕ್ಷ ನಿರ್ವಹಣೆಗೆ ಇಂಧನ ಇಲ್ಲಿಂದಲೇ ಹೋಗಬೇಕು.

ಈ ಮಧ್ಯೆ ಇತ್ತೀಚೆಗೆ ಬಂದ ಪಂಚರಾಜ್ಯ ಚುನಾವಣೆಗಳಿಗೆ ಹೈಕಮಾಂಡ್ ನಿರೀಕ್ಷೆ ಮಾಡಿದಷ್ಟು ಪ್ರಮಾಣದಲ್ಲಿ ಸಂಪನ್ಮೂಲ ಪೂರೈಕೆ ಆಗಲಿಲ್ಲ. ಕೇಳಿದರೆ ವಸತಿ, ಕಂದಾಯದಂಥ ಪ್ರಮುಖ ಖಾತೆ ನಿರ್ವಹಿಸುತ್ತಿರುವವರಿಂದಲೇ ಸಹಕಾರ ಸಿಗುತ್ತಿಲ್ಲ. ಕೇಳಿದರೆ ಉದ್ಧಟತನದ ಮಾತಾಡುತ್ತಾರೆ. ಹಾಗಂಥ ಅವರೇನು ಸುಬಗರಲ್ಲ, ಮಾಡೋದನ್ನು ಮಾಡುತ್ತಿದ್ದಾರೆ. ಆದರೆ ಪಾರ್ಟಿ ಫಂಡ್ ಅಂದರೆ ಮೂಗು ಮುರಿಯುತ್ತಾರೆ ಎಂದು ಇಲ್ಲಿನ ನಾಯಕರು ವರಿಷ್ಠರಿಗೆ ಡಬಲ್ ಫಿಟ್ಟಿಂಗ್ ಇಟ್ಟಿದ್ದಾರೆ. ಅಲ್ಲಿಗೆ ಹೈಕಮಾಂಡ್ ಮಟ್ಟದಲ್ಲಿ ಅವರ ಬಗ್ಗೆ ಒಂದು ಪೂರ್ವಾಗ್ರಹವನ್ನು ಮೊದಲೇ ಮೂಡಿಸಿಟ್ಟಿದ್ದರು. ಮುಂದೆ ಸಂಪುಟದಿಂದ ಕೈಬಿಟ್ಟಾಗ ಇದು ನೆರವಿಗೆ ಬರುತ್ತದೆ ಎಂದು.

ಇದರ ಜತೆಗೆ ಶ್ರೀನಿವಾಸ ಪ್ರಸಾದ್ ಈ ಸರಕಾರ ಬಂದಾಗಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮೈಸೂರು ಭಾಗದ ಸಂಪುಟ ಪ್ರತಿನಿಧಿಗಳಿಗೆ ಮಗ್ಗುಲ ಮುಳ್ಳಾಗಿದ್ದರು. ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಪುತ್ರರು ಮರಳು ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದರು. ಇದು ಕೂಡ ಅವರ ಸಂಬಂಧ ಹಳಸಲು ಕಾರಣವಾಗಿತ್ತು.

ಇನ್ನು ಅಂಬರೀಶ್ ಅವರದು ಮಾಮೂಲಿ ಡೋಂಟ್ ಕೇರ್ ನೇಚರ್. ವಸತಿ ಇಲಾಖೆಲಿ ಮಂತ್ರಿ ಕೋಟಾದ ಸೈಟುಗಳನ್ನೂ ಯಾರೊಬ್ಬರಿಗೂ ಹಂಚಿಕೆ ಮಾಡಿರಲಿಲ್ಲ. ಮೇಲಿನಿಂದ ಶಿಫಾರಸ್ಸು ಬಂದಾಗಲೂ ಅದಕ್ಕೆ ಕ್ಯಾರೇ ಅಂದಿರಲಿಲ್ಲ. ‘ಬೇಕಾದರೆ ಸಿಎಂ ಕಚೇರಿಗೆ ಫೈಲು ಕಳುಹಿಸಿಕೊಡುತ್ತೇನೆ. ನೀವೇ ಹಂಚಿಕೆ ಮಾಡಿಕೊಳ್ಳಿ, ನಾನು ಹಂಚಿ ಜೈಲಿಗೆ ಹೋಗೋಕೆ ರೆಡಿ ಇಲ್ಲ’ ಅಂತ ತಮ್ಮದೇ ಆದ ಧಿಮಾಕು ಸ್ಟೈಲಲ್ಲಿ ಉತ್ತರಿಸಿದ್ದರಂತೆ.

ಈ ಎಲ್ಲ ಕಾರಣಗಳಿಂದ ಶ್ರೀನಿವಾಸ ಪ್ರಸಾದ್ ಮತ್ತು ಅಂಬರೀಶ್ ಅವರನ್ನು ಯಾವುದೇ ಗುರುತರ ಆಪಾದನೆಗಳು ಇಲ್ಲದಿದ್ದರೂ, ಅವರ ಇಲಾಖೆಯಲ್ಲಿ ಅಕ್ರಮದ ವಾಸನೆ ಬಡಿಯದಿದ್ದರೂ ಸಂಪುಟದಿಂದ ಕೈಬಿಡಲಾಗಿದೆ ಎಂಬುದು ಆರೋಪ. ಹಾಗಾದರೆ ಇವರುಗಳ ಇಲಾಖೆಯಲ್ಲಿ ಯಾವುದೇ ಅಕ್ರಮ, ಭ್ರಷ್ಟಾಚಾರ ನಡೆದೇ ಇಲ್ಲವೇ ಎಂಬುದು ಉತ್ತರ ಸಿಗಬೇಕಾದ ಪ್ರಶ್ನೆ. ಆದರೆ ಸಂಪುಟದಿಂದ ಹೊರಬಿದ್ದ ಶ್ರೀನಿವಾಸ ಪ್ರಸಾದ್ ಅವರು ಮುಖ್ಯಮಂತ್ರಿ ವಿರುದ್ಧ ಬ್ಯಾಟಿಂಗ್ ಶುರುಮಾಡುತ್ತಿದ್ದಂತೆ, ಕಂದಾಯ ಇಲಾಖೆಯಲ್ಲಿ ಇತ್ತೀಚೆಗೆ ಅವರು ಮಾಡಿದ್ದ ಎಲ್ಲ ವರ್ಗಾವಣೆಗಳನ್ನು ರದ್ದುಮಾಡಿ ಸಿದ್ದರಾಮಯ್ಯನವರು ಆದೇಶ ಹೊರಡಿಸಿದ್ದರ ಹಿಂದಿನ ಮರ್ಮ ಮಾತ್ರ ಅನೇಕ ಪ್ರಶ್ನೋತ್ತರಗಳಿಗೆ ಆಸ್ಪದ ಕೊಟ್ಟಿದೆ.

ಶ್ರೀನಿವಾಸ ಪ್ರಸಾದ್ ಅವರು ಈ ವರ್ಗಾವಣೆಯಲ್ಲಿ ಏನಾದರೂ ಮಾಡಿಕೊಂಡಿದ್ದರೆ ವಾಪಸ್ಸು ಕಕ್ಕಲಿ ಎಂಬುದು ಇದರ ಅರ್ಥವೇ ಅಥವಾ ಪ್ರಯೋಜನಕ್ಕೆ ಬಾರದ ಈ ವರ್ಗಾವಣೆಯನ್ನು ರದ್ದು ಮಾಡಿ ಲಾಭವನ್ನಾಗಿ ಪರಿವರ್ತಿಸುವ ಹುನ್ನಾರವೇ ಎಂಬುದು ಈ ಪ್ರಶ್ನೋತ್ತರಗಳ ವ್ಯಾಪ್ತಿಯಲ್ಲೇ ಬರುತ್ತದೆ!

Leave a Reply