ಟೀಂ ಇಂಡಿಯಾ ಕೋಚ್ ಹುದ್ದೆಗೆ ಎದುರಾಗಿರುವ ಪ್ರಶ್ನೆ- ಯಾರು ಉತ್ತಮರು ಈ ಮೂವರೊಳಗೆ?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಕೋಚ್ ಸ್ಥಾನದ ಆಯ್ಕೆ ಹಿಂದೆಂದಿಗಿಂತ ಕುತೂಹಲ ಹೆಚ್ಚಿಸಿದೆ. ಕಾರಣ, ಈ ಬಾರಿ ಘಟಾನುಘಟಿಗಳ ನಡುವಣ ಪೈಪೋಟಿ ಒಂದೆಡೆಯಾದರೆ, ಮತ್ತೊಂದೆಡೆ ಕೋಚ್ ಆಯ್ಕೆಯಲ್ಲಿ ಬಿಸಿಸಿಐ ಸಲಹಾ ಸಮಿತಿ ತ್ರಿಮೂರ್ತಿಗಳಾದ ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ಅವರ ಪ್ರಮುಖ ಪಾತ್ರ.

ಕ್ರಿಕೆಟ್ ಅಭಿಮಾನಿಗಳಂತೂ ರಾಹುಲ್ ದ್ರಾವಿಡ್ ಅಥವಾ ಸೌರವ್ ಗಂಗೂಲಿಯನ್ನು ಕೋಚ್ ಸ್ಥಾನದಲ್ಲಿ ನೋಡಲು ಕಾತರರಾಗಿದ್ದಾರೆ. ಆದರೆ ಈ ಇಬ್ಬರೂ ಮಾತ್ರ ಈಗಲೇ ಆ ಜವಾಬ್ದಾರಿ ವಹಿಸಿಕೊಳ್ಳಲು ಮನಸ್ಸು ಮಾಡಿಲ್ಲ. ಕಿರಿಯ ಹಾಗೂ ಎ ತಂಡದ ಕೋಚಿಂಗ್ ನಲ್ಲೇ ಇನ್ನಷ್ಟು ಕಾಲ ಕಳೆಯೋದು ರಾಹುಲ್ ದ್ರಾವಿಡ್ ನಿರ್ಧಾರ. ಇನ್ನು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನ, ಸಲಹಾ ಸಮಿತಿ ಜವಾಬ್ದಾರಿಯಿಂದ ಫುಲ್ ಬ್ಯೂಸಿಯಾಗಿದ್ದಾರೆ ಗಂಗೂಲಿ. ಹೀಗಾಗಿ ಸದ್ಯಕ್ಕಂತೂ ಅಭಿಮಾನಿಗಳ ಆಸೆ ಈಡೇರುವುದು ಕಷ್ಟ.

ಬಿಸಿಸಿಐ ಈ ಸ್ಥಾನದ ಆಯ್ಕೆಗೆ ಕರೆ ನೀಡಿದಾಗ ಬಂದ ಅರ್ಜಿಯ ಸಂಖ್ಯೆ ಬರೋಬ್ಬರಿ 57. ಈ ದೊಡ್ಡ ಪಟ್ಟಿಯನ್ನು ಸೋಸಿದ ಬಿಸಿಸಿಐ 21 ಮಂದಿಯ ಪರಿಷ್ಕೃತ ಪಟ್ಟಿಯನ್ನು ಬಿಸಿಸಿಐ ಸಲಹಾ ಸಮಿತಿಗೆ ನೀಡಿದೆ. ಈ ಸಮಿತಿ 21 ಮಂದಿಯ ಬಗ್ಗೆ ಚರ್ಚಿಸಿ, ಅವರ ಸಂದರ್ಶನ ಮಾಡಿ, ಇವರಲ್ಲಿ ಟೀಂ ಇಂಡಿಯಾಗೆ ಗುರುವಾಗಬಲ್ಲ ಪ್ರಮುಖ ಐವರ ಹೆಸರನ್ನು ಅಖೈರಾಗಿಸಲಿದೆ.

ಅಂತಿಮ ಐವರಲ್ಲಿ ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ಲಾಲ್ ತಂದ್ರ ರಜಪೂತ್, ಪ್ರವೀಣ್ ಆಂಬ್ರೆ, ಟಾಮ್ ಮೂಡಿ ಹಾಗೂ ಸಂದೀಪ್ ಪಾಟೀಲ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಜೂನ್ 23ರ ಮಧ್ಯರಾತ್ರಿ ವೇಳೆಗೆ ಈ ಐವರ ಪಟ್ಟಿ ಅಂತಿಮವಾಗಿ, 24 ಮತ್ತು 25ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಗೆ ಕಳುಹಿಸಬೇಕು. ಆ ಸಭೆಯಲ್ಲಿ ಚರ್ಚಿಸಿದ ನಂತರವೇ ಕೋಚ್ ಯಾರೆಂಬ ಅಂತಿಮ ತೀರ್ಮಾನ ಹೊರಬೀಳೋದು.

ನಿನ್ನೆ ಕೋಲ್ಕತಾದಲ್ಲಿ ನಡೆದ ಮೊದಲ ಸುತ್ತಿನ ಸಂದರ್ಶನದಲ್ಲಿ ಮಾಜಿ ನಾಯಕರಾದ ಅನಿಲ್ ಕುಂಬ್ಳೆ ಸೇರಿದಂತೆ ಕೆಲವು ಪ್ರಮುಖ ಅಭ್ಯರ್ಥಿಗಳ ಸಂದರ್ಶವನ್ನು ಸಲಹಾ ಸಮಿತಿ ನಡೆಸಿದೆ. ಫೇವರಿಟ್ ಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬಂದಿದ್ದ ಸಂದೀಪ್ ಪಾಟೀಲ್ ಗೆ ಸಂದರ್ಶನಕ್ಕೆ ಆಹ್ವಾನ ನೀಡದಿರುವುದು ಅಚ್ಚರಿ ಮೂಡಿಸಿತ್ತು. ಅಲ್ಲಿಗೆ ಇದು ಕುಂಬ್ಳೆ ವರ್ಸಸ್ ರವಿಶಾಸ್ತ್ರಿ ಎಂಬುದರ ಸೂಚನೆ.

ಕೋಚ್ ಸ್ಥಾನದ ಫ್ರಂಟ್ ರನ್ನರ್ ಆಗಿರುವ ಈ ಅಭ್ಯರ್ಥಿಗಳಲ್ಲಿ ಒಬ್ಬೊಬ್ಬರಿಗೂ ಒಂದೊಂದು ಅಂಶ ಬೆನ್ನಿಗೆ ನಿಂತಿದೆ. ರವಿಶಾಸ್ತ್ರಿ ಈಗಾಗಲೇ ಟೀಂ ಇಂಡಿಯಾ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರಿಗೆ ಕೋಚ್ ಸ್ಥಾನ ಅಲಂಕರಿಸುವುದು ದೊಡ್ಡ ಸವಾಲೇನಲ್ಲ. ಅಲ್ಲದೆ ತಂಡದ ಆಟಗಾರರು ಶಾಸ್ತ್ರಿ ಜತೆಗಿನ ಅನುಭವವನ್ನು ಹೊಗಳಿದ್ದಾರೆ. ಇನ್ನು ಸಂದೀಪ್ ಪಾಟೀಲ್ 1996 ರಲ್ಲೇ ಭಾರತದ ಕೋಚ್ ಆಗಿದ್ದರು. ತಂಡದ ಕೆಟ್ಟ ಪ್ರದರ್ಶನದಿಂದ ತಲೆದಂಡಕ್ಕೆ ಬಲಿಯಾಗಿದ್ದರು. ನಂತರ 2003ರಲ್ಲಿ ಕೀನ್ಯಾ ಕೋಚ್ ಆಗಿ ತಂಡವನ್ನು ಸೆಮೀಸ್ ವರೆಗೂ ಕರೆತಂದ ಸಾಧನೆ ಇವರದು. ಈಗ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಈಗ ಮತ್ತೆ ಕೋಚ್ ಆಗಲು ಸಿದ್ಧರಾಗಿದ್ದಾರೆ.

ಇನ್ನು ವಿದೇಶಿಗರ ಪೈಕಿ ಪ್ರಮುಖವಾಗಿ ಕೇಳಿಬಂದಿರೋ ಹೆಸರು ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶ್ರೀಲಂಕಾ ತಂಡವನ್ನು 2007ರ ವಿಶ್ವಕಪ್ ನಲ್ಲಿ ಫೈನಲ್ ಗೆ ಕರೆದೊಯ್ದದ್ದು, ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಚಾಂಪಿಯನ್ ಆಗಿದ್ದು ಇವರ ಮಾರ್ಗದರ್ಶನದಲ್ಲೆ. ಹೀಗಾಗಿ ಮೂಡಿ ಅತ್ಯಂತ ಅನುಭವಿ ಕ್ಯಾಂಡಿಡೇಟ್. ಇನ್ನು ಲಾಲ್ ಚಂದ್ರ ರಜಪೂತ್ ಮಾಜಿ ಆಟಗಾರನಾಗಿದ್ದು, ಕೆಲ ಕಾಲ ತಂಡದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಇನ್ನು ಪ್ರವೀಣ್ ಆಮ್ರೆ ಮಾಜಿ ಆಟಗಾರ. ಅಂತಾರಾಷ್ಟ್ರೀಯ ಮಟ್ಟದ ಕೋಚಿಂಗ್ ಅನುಭವವಿಲ್ಲದಿದ್ದರೂ ದೇಶೀಯ ತಂಡಗಳ ಕೋಚಿಂಗ್ ನಲ್ಲಿ ಇವರ ಸಾಧನೆ ಅತ್ಯುತ್ತಮವಾಗಿದೆ. ಇವಿಷ್ಟು ಪ್ರಮುಖ ಅಭ್ಯರ್ಥಿಗಳ ಕೋಚ್ ಅನುಭವದ ಕಿರು ಪರಿಚಯ. ಇವರ ನಡುವೆ ಕೋಚಿಂಗ್ ಅನುಭವವೇ ಇಲ್ಲದ ಅನಿಲ್ ಕುಂಬ್ಳೆ ಪೈಪೋಟಿ ಈ ರೇಸ್ ಗೆ ರೋಚಕ ತಿರುವು ನೀಡಿದೆ.

ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ಅಭ್ಯರ್ಥಿಯಾಗ್ತಾರೆ ಅಂತಾ ಬಹುತೇಕರು ಊಹಿಸಿರಲೇ ಇಲ್ಲ. ಕಾರಣ, ಬಿಸಿಸಿಐ ಈ ಸ್ಥಾನಕ್ಕೆ ಕೇಳಲಾದ ಅರ್ಹತೆಗಳ ಪಟ್ಟಿಯಲ್ಲಿನ ಬಹುತೇಕ ಅಂಶಗಳು ಅನಿಲ್ ಕುಂಬ್ಳೆ ಅವರಿಗಿಲ್ಲ. ಕೋಚ್ ಸ್ಥಾನಕ್ಕೆ ಆಯ್ಕೆಯಾಗಬಯಸುವರು ಐಸಿಸಿಯ ಯಾವುದೇ ಅಂತಾರಾಷ್ಟ್ರೀಯ ಸದಸ್ಯ ರಾಷ್ಟ್ರಗಳಲ್ಲಿ ರಾಷ್ಟ್ರೀಯ ತಂಡದಿಂದ ಹಿಡಿದು ಕನಿಷ್ಠ ಪ್ರಥಮ ದರ್ಜೆ ಕ್ರಿಕೆಟ್  ತಂಡಕ್ಕಾದರೂ ಕೋಚ್ ಆಗಿ ಕಾರ್ಯ ನಿರ್ವಹಿಸಿರಬೇಕು. ಕುಂಬ್ಳೆ ಕೇವಲ ಐಪಿಎಲ್ ನಲ್ಲಿ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ ಅಷ್ಟೇ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ 956 ವಿಕೆಟ್ (619 ಟೆಸ್ಟ್, 337 ಏಕದಿನ) ಪಡೆದ ಸಾಧನೆ ಇವರ ಪ್ರಮುಖ ಅಸ್ತ್ರ.

ಬಿಸಿಸಿಐ ಸಲಹಾ ಸಮಿತಿಯ ಮೂವರೂ ಸದಸ್ಯರೂ ಅನಿಲ್ ಕುಂಬ್ಳೆ ಸಾಮರ್ಥ್ಯವನ್ನು ಚೆನ್ನಾಗಿಯೇ ಅರಿತಿದ್ದಾರೆ. ದಶಕಗಳ ಕಾಲ ಒಟ್ಟಿಗೆ ಆಡಿದ್ದಾರೆ. ಹೀಗಾಗಿ ಕುಂಬ್ಳೆಯು ರವಿಶಾಸ್ತ್ರಿ ಮತ್ತು ಸಂದೀಪ್ ಪಾಟೀಲ್ ರನ್ನು ಹಿಂದಿಕ್ಕಿ ಕೋಚ್ ಸ್ಥಾನ ಅಲಂಕರಿಸಿದರೆ ಯಾವುದೇ ಅಚ್ಚರಿ ಇಲ್ಲ.

ಕೋಚ್ ಆಗುವವರಿಗೆ ಭಾರತದ ಆಟಗಾರರೊಡನೆ ಉತ್ತಮ ಸಂವಹನ ಮಾಡುವ ಸಾಮರ್ಥ್ಯವಿರಬೇಕು ಎಂಬುದು ಈ ಬಾರಿ ಪ್ರಮುಖವಾಗಿ ಚರ್ಚೆಯಾಗಿರೋ ವಿಚಾರ. ಹೀಗಾಗಿ ಕುಂಬ್ಳೆ, ರವಿಶಾಸ್ತ್ರಿ, ಸಂದೀಪ್ ಪಾಟೀಲ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವುದು ಬಹುತೇಕ ನಿಶ್ಚಿತ. ಆರಂಭದಲ್ಲಿ ರವಿಶಾಸ್ತ್ರಿ ಕೋಚ್ ಆಗುವ ಸಾಧ್ಯತೆ ಹೆಚ್ಚಾಗಿಯೇ ಇತ್ತು. ಆದರೆ ರೇಸ್ ಗೆ ಅನಿಲ್ ಕುಂಬ್ಳೆ ಪ್ರವೇಶವಾದ ನಂತರ ರವಿಶಾಸ್ತ್ರಿ ಹಾದಿ ಸ್ವಲ್ಪ ಕಠಿಣವಾಗಿದೆ. ಈ ಎಲ್ಲಾ ಕೌತುಕಕ್ಕೆ ಶುಕ್ರವಾರ ಅಥವಾ ಶನಿವಾರ ತೆರೆ ಬೀಳಲಿದೆ. ಅಲ್ಲಿಯವರೆಗೂ ಕೋಚ್ ಸ್ಥಾನಕ್ಕೆ ಯಾರು ಆಯ್ಕೆಯಾಗಬಹುದು, ಯಾರು ಆಯ್ಕೆಯಾದರೆ ಸೂಕ್ತ ಎಂಬ ಲೆಕ್ಕಾಚಾರ ಅಭಿಮಾನಿಗಳ ತಲೆಯಲ್ಲಿ ಗಿರಕಿ ಹೊಡೆಯುತ್ತಲೇ ಇರುತ್ತದೆ.

Leave a Reply