ಪಟ್ಟು ಬಿಡದೇ ಹೋರಾಡಿದ್ರೂ ಸೋಲನುಭವಿಸ್ತು ಜಿಂಬಾಬ್ವೆ, ಭಾರತ ಮಡಿಲಿಗೆ ಬಿತ್ತು ಟಿ20 ಸರಣಿ

Zimbabwe's Elton Chigumbura, left, plays a shot as Indian wicketkeeper MS Dhoni fields, during the T20 International cricket match between Zimbabwe and India at Harare Sports Club, Saturday, June, 18, 2016. (AP Photo/Tsvangirayi Mukwazhi)

ಡಿಜಿಟಲ್ ಕನ್ನಡ ಟೀಮ್:

ಪಂದ್ಯದ ಅಂತಿಮ ಎಸೆತದವರೆಗೂ ಪಟ್ಟು ಬಿಡದೇ ಹೋರಾಟದ ಹೊರತಾಗಿಯೂ ಆತಿಥೇಯ ಜಿಂಬಾಬ್ವೆ, ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವಿರೋಚಿತ ಸೋಲನುಭವಿಸಿತು. ಈ ಪಂದ್ಯದಲ್ಲಿ ಗೆದ್ದ ಭಾರತ ಟಿ20 ಸರಣಿಯನ್ನು 2-1 ಅಂತರದಲ್ಲಿ ತನ್ನ ಮಡಿಲಿಗೆ ಹಾಕಿಕೊಂಡಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬುಧವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆದ್ದಿದ್ದು 3 ರನ್ ಗಳಿಂದ. ಆದ್ರೆ, ಪಂದ್ಯದ ಅಂತಿಮ ಓವರ್ ಮಾತ್ರ ಪ್ರತಿಯೊಬ್ಬರನ್ನು ತುದಿಗಾಲಲ್ಲಿ ನಿಲ್ಲಿಸಿತು.

ಪಂದ್ಯದ ಕಡೇಯ ಓವರ್ ನಲ್ಲಿ ಆತಿಥೇಯ ತಂಡಕ್ಕೆ ಅಗತ್ಯವಿದ್ದದ್ದು ಬರೋಬ್ಬರಿ 21 ರನ್ ಗಳು. ಮೊದಲನೇ ಎಸೆತದಲ್ಲೇ ಚೆಂಡನ್ನು ಸಿಕ್ಸರ್ ಕಳುಹಿಸಿದ ಟಿಮಿಸೆನ್ ಮರುಮಾ ಅದ್ಭುತ ಆರಂಭ ಪಡೆದರು. ಮೊದಲ ಎಸೆತ ಸಿಕ್ಸರ್ ಹೋಗುತ್ತಿದ್ದಂತೆ ಭಾರತದ ಬೌಲರ್ ಸ್ರನ್ ಒತ್ತಡಕ್ಕೆ ಸಿಲುಕಿದ್ರು. ಪರಿಣಾಮ ಸತತವಾಗಿ ವೈಡ್ ಹಾಗೂ ನೋಬಾಲ್ ಬೌಂಡರಿ ನೀಡಿದರು. ಆಗ ಜಿಂಬಾಬ್ವೆ ಪಾಳಯದಲ್ಲಿ ಜಯದ ಆಸೆ ಮುಗಿಲೆತ್ತರಕ್ಕೇರಿತು. 5 ಎಸೆತಗಳಲ್ಲಿ ಕೇವಲ 9 ರನ್ ಬೇಕು ಎನ್ನುವಂತ ಪರಿಸ್ಥಿತಿಗೆ ಪಂದ್ಯ ಜಾರಿತು.

ಈ ಹಂತದಲ್ಲಿ ಬೌಲರ್ ಜತೆ ಚರ್ಚೆಗಿಳಿದ ನಾಯಕ ಧೋನಿ, ರಣತಂತ್ರ ರೂಪಿಸಿದರು. ನಂತರ ಎರಡು ಎಸೆತಗಳಲ್ಲಿ ರನ್ ನೀಡದೇ ನಿಯಂತ್ರಿಸಿದ್ದು ಭಾರತದ ಮೇಲಿನ ಒತ್ತಡ ಕಡಿಮೆ ಮಾಡಿತು. ಅಂತಿಮ ಎರಡು ಎಸೆತದಲ್ಲಿ 8 ರನ್ ಬೇಕಿದ್ದಾಗ ಸ್ಟ್ರೈಕ್ ನಲ್ಲಿದ್ದ ಎಲ್ಟಾನ್ ಚಿಗುಂಬುರಾ ಬೌಂಡರಿ ಗಳಿಸಿ ಪಂದ್ಯವನ್ನು ರೋಚಕ ಘಟ್ಟ ತಲುಪಿಸಿದರು. ಆದರೆ, ಅಂತಿಮ ಎಸೆತದಲ್ಲಿ ಮತ್ತೆ ಬೌಂಡರಿ ಬಾರಿಸುವ ಪ್ರಯತ್ನ ನಡೆಸಿದರಾದರೂ ಚೆಂಡು ಬ್ಯಾಟ್ ನ ಕೆಳ ಅಂಚಿಗೆ ತಾಗಿ ನೇರವಾಗಿ ಫೀಲ್ಡರ್ ಚಹಲ್ ಕೈ ಸೇರಿತು. ಇದರೊಂದಿಗೆ ಜಿಂಬಾಬ್ವೆ ತಂಡದ ಸರಣಿ ಜಯದ ಆಸೆ ಭಗ್ನವಾಯಿತು.

ಇದಕ್ಕೂ ಮೊದಲು ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದೊಡ್ಡ ಮೊತ್ತ ಪೇರಿಸುವ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತದ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿತ್ತು. ಅತಿಥೇಯರ ಶಿಸ್ತುಬದ್ಧ ಬೌಲಿಂಗ್ ದಾಳಿಯ ಪರಿಣಾಮ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ಗೆ ಗಳಿಸಿದ್ದು 138 ರನ್ ಮಾತ್ರ. ಆರಂಭಿಕರ ಪರದಾಟದ ನಡುವೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೇದಾರ್ ಜಾಧವ್ (58 ರನ್, 42 ಎಸೆತ, 7 ಬೌಂಡರಿ, 1 ಸಿಕ್ಸರ್) ಅವರ ಸಮಯೋಚಿತ ಬ್ಯಾಟಿಂಗ್ ಟೀಂ ಇಂಡಿಯಾ ಮಾನ ಕಾಪಾಡಿತ್ತು.

ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆಗೆ ಭಾರತದ ಬೌಲರ್ ಗಳು ಆರಂಭದಲ್ಲಿ ಸವಾಲೆಸೆದರು. ಇದಕ್ಕೆ ಪ್ರತಿಯಾಗಿ ಜಿಂಬಾಬ್ವೆ ಬ್ಯಾಟ್ಸ್ ಮನ್ ಗಳು ಸಹ ಪ್ರತಿರೋಧ ಒಡ್ಡುತ್ತಾ ಪಂದ್ಯವನ್ನು ಅಂತಿಮ ಎಸೆತದವರೆಗೂ ಕೊಂಡೊಯ್ದರಾದರು ಜಯದ ದಡ ಸೇರುವಲ್ಲಿ ಮುಗ್ಗರಿಸಿದರು.

ಏಕದಿನ ಸರಣಿಯಲ್ಲಿ ಪ್ರತಿರೋಧ ನೀಡದೇ ಸುಲಭ ತುತ್ತಾಗಿ ಟೀಕೆಗೆ ಗುರಿಯಾಗಿದ್ದ ಜಿಂಬಾಬ್ವೆ, ಟಿ20 ಸರಣಿಯಲ್ಲಿ ನೀಡಿದ ಫೈಟ್ ನಿಜಕ್ಕೂ ಗಮನಾರ್ಹ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಕೊಟ್ಟ ಆಘಾತ ಹಾಗೂ ಅಂತಿಮ ಪಂದ್ಯದಲ್ಲಿ ನೀಡಿದ ಫೈಟ್ ನಿಜಕ್ಕೂ ಪ್ರಶಂಸನೀಯ. ಸರಣಿ ಸೋಲಿನ ಹೋರತಾಗಿಯೂ ತಂಡದ ಆತ್ಮ ವಿಶ್ವಾಸ ಹೆಚ್ಚಲಿದೆ. ಇನ್ನು ಭಾರತ ತಂಡದಲ್ಲಿರುವ ಯುವ ಆಟಗಾರರಿಗೆ ಇಂತಹ ಒತ್ತಡ ಸಂದರ್ಭದ ಪಂದ್ಯಗಳು ಕಲಿಕೆಗೆ ಉತ್ತಮ ವೇದಿಕೆಯಾಯಿತು.

ಭಾರತದ ಆಟಗಾರರಾದ ಕೇದಾರ್ ಜಾಧವ್ ಪಂದ್ಯಶ್ರೇಷ್ಠ ಹಾಗೂ ಬಿರೀಂದರ್ ಸ್ರನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಭಾರತ 20 ಓವರ್ ಗಳಲ್ಲಿ 138ಕ್ಕೆ 6 (ಜಾಧವ್ 58, ರಾಹುಲ್ 22, ಪಟೇಲ್ ಅಜೇಯ 20, ತಿರಿಪಾನೊ 20ಕ್ಕೆ 3)

ಜಿಂಬಾಬ್ವೆ 20 ಓವರ್ ಗಳಲ್ಲಿ 135ಕ್ಕೆ 6 (ಸಿಬಾಂದ 28, ಮೂರ್ 26, ಮರುಮಾ ಅಜೇಯ 23, ಕುಲಕರ್ಣಿ 23ಕ್ಕೆ 2)

Leave a Reply