ತಾಶ್ಕೆಂಟ್ ನಲ್ಲಿ ಪ್ರಧಾನಿ ಮೋದಿ, ಸಿಯೋಲ್ ನಲ್ಲಿ ಭಾರತದ ರಾಯಬಾರಿ- ಎನ್ಎಸ್ಜಿ ಸದಸ್ಯತ್ವಕ್ಕಾಗಿ ಭರ್ಜರಿ ಕಸರತ್ತು

ಡಿಜಿಟಲ್ ಕನ್ನಡ ಟೀಮ್:

ಪರಮಾಣು ಪೂರೈಕೆ ಸಮೂಹ (ಎನ್ಎಸ್ಜಿ) ಸದಸ್ಯತ್ವ ಪಡೆಯಲು ಚೀನಾದ ಪ್ರಬಲ ವಿರೋಧದ ನಡುವೆಯೂ ಭಾರತ ಮಾತ್ರ ತನ್ನ ಪ್ರಯತ್ನ ನಿಲ್ಲಿಸಿಲ್ಲ. ಒಂದೆಡೆ ಗುರುವಾರ ರಾತ್ರಿ ಸಿಯೋಲ್ ನಲ್ಲಿ ಮತ್ತೆ ಎನ್ಎಸ್ಜಿ 48 ರಾಷ್ಟ್ರಗಳ ಪ್ರತಿನಿಧಿಗಳ ಸಭೆ. ಮತ್ತೊಂದೆಡೆ ತಾಶ್ಕೆಂಟ್ ನಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರ ಭೇಟಿ. ಈ ಎರಡು ಅವಕಾಶಗಳು ಭಾರತ ತನ್ನ ಕಾರ್ಯಸಾಧಿಸಿಕೊಳ್ಳಲು ಇರುವ ಅಂತಿಮ ವೇದಿಕೆಯಾಗಿವೆ. ಹೀಗಾಗಿ ಈ ಎರಡು ಅವಕಾಶಗಳನ್ನು ಬಳಸಿಕೊಂಡು ಚೀನಾದ ಬೆಂಬಲ ಗಿಟ್ಟಿಸಿಕೊಳ್ಳುವುದು ಭಾರತದ ಮುಂದಿರುವ ಗುರಿ.

ಇದೇ ಮೊದಲ ಬಾರಿಗೆ, ಭಾರತದ ಎನ್ ಎನ್ ಎ ಸ್ಜಿ ಸದಸ್ಯತ್ವ ಚರ್ಚೆಗೆ ರಾಯಭಾರಿಗಳು ಮರುಸಭೆ ನಡೆಸಲಿದ್ದು ಇದು ಮಧ್ಯರಾತ್ರಿವರೆಗೆ ನಡೆಯುವ ಸೂಚನೆ ಇದೆ.

ಎನ್ಎಸ್ಜಿ ಒಮ್ಮತ ನಿರ್ಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ಗುಂಪಿನಲ್ಲಿ ಒಂದು ರಾಷ್ಟ್ರ ಭಾರತದ ವಿರುದ್ಧ ಮತ ಚಲಾಯಿಸಿದರೂ ಸದಸ್ಯತ್ವ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಸದಸ್ಯತ್ವಕ್ಕೆ ದೊಡ್ಡ ತೊಡಕಾಗಿರುವುದು ಚೀನಾ ವಿರೋಧ. ಹೀಗಾಗಿ ಶಾಂಘೈ ಸಹಕಾರ ಸಂಸ್ಥೆ (ಎಸ್ ಸಿ ಒ) ಸಭೆಯ ನಂತರ ಮೋದಿ ಅವರು ಜಿಂಗ್ ಪಿನ್ ಅವರನ್ನು ಭೇಟಿಯಾಗಲಿದ್ದು, ಭಾರತ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ.

ಚೀನಾದ ಸಾರಥ್ಯದಲ್ಲಿ ಟರ್ಕಿ, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ಸಹ ಭಾರತದ ಸದಸ್ಯತ್ವಕ್ಕೆ ಮೂಗುಮುರಿದಿವೆ. ‘ಅಣ್ವಸ್ತ್ರ ಪ್ರಸರಣ ವಿರೋಧಿ ಒಪ್ಪಂದ ಕಾನೂನುಬದ್ಧ ಮತ್ತು ರಾಜಕೀಯ ಆಧಾರಿತ ಅಂತಾರಾಷ್ಟ್ರೀಯ ಪ್ರಸರಣ ವಿರೋಧಿ ವ್ಯವಸ್ಥೆಯಾಗಿದೆ. ಹೀಗಾಗಿ ಭಾರತಕ್ಕೆ ಸದಸ್ಯತ್ವ ನೀಡಿದರೆ ಈ ವ್ಯವಸ್ಥೆಗೆ ಧಕ್ಕೆಯಾಗಲಿದೆ’ ಎಂಬುದು ಈ ರಾಷ್ಟ್ರಗಳ ವಾದ.

ಈ ಕಾರಣದಿಂದ ತಾಶ್ಕೆಂಟ್ ಸಭೆಯನ್ನು ಬಿಟ್ಟು ಸಿಯೋಲ್ ನಲ್ಲಿ ನಡೆಯಲಿರುವ ಎನ್ಎಸ್ಜಿ ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ತೆರಳಿದ್ದಾರೆ. ಈ ಸಭೆಯಲ್ಲಿ ಭಾರತದ ಪರವಾಗಿ ಅಂತಿಮ ಲಾಬಿ ನಡೆಸಿ ಎಲ್ಲ ರಾಷ್ಟ್ರಗಳ ಬೆಂಬಲ ಪಡೆಯುವುದು ಜೈಶಂಕರ್ ಮುಂದಿರುವ ದೊಡ್ಡ ಟಾಸ್ಕ್.

ಈ ಎಲ್ಲ ಬೆಳವಣಿಗೆಗಳ ನಡುವೆ ‘ಸಿಯೋಲ್ ನಲ್ಲಿ ನಡೆಯಲಿರುವ ಎನ್ಎಸ್ಜಿ ಸಭೆಯಲ್ಲಿ ಅಣ್ವಸ್ತ್ರ ಪ್ರಸರಣ ವಿರೋಧಿ ಒಪ್ಪಂದಕ್ಕೆ ಸಹಿ ಹಾಕುವವರಿಗೆ ಮಾತ್ರ ಈ ಸದಸ್ಯತ್ವ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದು ನಿನ್ನೆಯಷ್ಟೇ ಚೀನಾ ತಿಳಿಸಿತ್ತು. ಚೀನಾದಿಂದ ಈ ಹೇಳಿಕೆ ಬರುತ್ತಿದ್ದಂತೆಯೇ ಭಾರತ ಮತ್ತು ಚೀನಾ ನಡುವಣ ಆರ್ಥಿಕತೆಗೆ ಸಂಬಂಧಿಸಿದ ಮಾತುಕತೆಯನ್ನು ಜುಲೈಗೆ ಮುಂದೂಡಲಾಗಿದೆ. ಈ ಮಾತುಕತೆಗಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬೀಜಿಂಗ್ ಗೆ ಪ್ರಯಾಣ ಬೆಳೆಸಬೇಕಿತ್ತು. ಇದರೊಂದಿಗೆ ಎನ್ಎಸ್ಜಿ ಸದಸ್ಯತ್ವದ ಭಾರತದ ಆಸೆಗೆ ಚೀನಾ ತಣ್ಣೀರೆರೆಚಿದ್ದೇ ಆದಲ್ಲಿ, ಉಭಯ ದೇಶಗಳ ನಡುವಣ ಸಂಬಂಧ ಹಳಸುವ ಸಾಧ್ಯತೆಯೂ ಇದೆ.

‘ಭಾರತ ಮತ್ತು ಪಾಕಿಸ್ತಾನಕ್ಕೆ ಸದಸ್ಯತ್ವ ನೀಡುವ ಬಗ್ಗೆ ಎನ್ಎಸ್ಜಿ ಸದಸ್ಯ ರಾಷ್ಟ್ರಗಳು ಈಗಾಗಲೇ ಮೂರು ಸುತ್ತಿನ ಅನಧಿಕೃತ ಚರ್ಚೆ ನಡೆಸಿವೆ. ಈ ಬಗ್ಗೆ ಉಭಯ ರಾಷ್ಟ್ರಗಳ ಜತೆ ಮುಖಾಮುಖಿ ಚರ್ಚೆ ನಡೆಸಬೇಕಿದ್ದು, ಸಭೆಯಲ್ಲಿ ಚೀನಾ ಮಹತ್ವದ ಪಾತ್ರವಹಿಸಲಿದೆ.’ ಎಂದಿದ್ದಾರೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ ಯಿಂಗ್.

Leave a Reply