ಟೀಂ ಇಂಡಿಯಾ ಕೋಚ್ ಆದ್ರು ಅನಿಲ್ ಕುಂಬ್ಳೆ, ಸ್ವಾಮಿ ಸಮರ ಸದ್ಯಕ್ಕೆ ನಿಲುಗಡೆ, ಉದ್ಯೋಗ ಖಾತ್ರಿಗೆ ಕೇಂದ್ರ ಹಣ ಬಿಡುಗಡೆ ಮಾಡಿಲ್ಲವೆಂದು ಎಚ್.ಕೆ ಪಾಟೀಲ್ ಆರೋಪ

ಡಿಜಿಟಲ್ ಕನ್ನಡ ಟೀಮ್:

ಹಲವು ತಿಂಗಳಿಂದ ಕುತೂಹಲ ಕೆರಳಿಸಿದ್ದ ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆ ಅಂತೂ ಮುಕ್ತಾಯ ಕಂಡಿದ್ದು, ಈ ಜವಾಬ್ದಾರಿ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಪಾಲಾಗಿದೆ.

ಟಿ20 ವಿಶ್ವಕಪ್ ವರೆಗೂ ಟೀಂ ಇಂಡಿಯಾ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಬಿಸಿಸಿಐ ಮನವೊಲಿಸಿ ಕೋಚ್ ಹುದ್ದೆ ಅಲಕಂರಿಸುವರು ಎಂದು ಹಲವರು ಭಾವಿಸಿದ್ದರು. ಬಿಸಿಸಿಐ ಈ ಹುದ್ದೆಗೆ ಅರ್ಜಿ ಆಹ್ವಾನ ನೀಡಿದಾಗಲೂ ಸಂದೀಪ್ ಪಾಟೀಲ್ ಬಿಟ್ಟರೆ ರವಿಶಾಸ್ತ್ರಿಗೆ ಬೇರೆ ಯಾರು ಫೈಟ್ ಕೊಡೋರು ಇಲ್ಲವೆಂಬ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ, ಯಾವಾಗ ಅನಿಲ್ ಕುಂಬ್ಳೆ ಈ ರೇಸ್ ಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾಹಿತಿ ಬಹಿರಂಗವಾಯಿತೋ ತಕ್ಷಣವೇ ರವಿಶಾಸ್ತ್ರಿ ಅವರ ಹಾದಿ ಕಠಿಣ ಎನಿಸಲಾರಂಭಿಸಿತು. ಅಂತಿಮವಾಗಿ ಬಿಸಿಸಿಐ ಹಾಗೂ ಸಲಹಾ ಸಮಿತಿಯ ತ್ರಿಮೂರ್ತಿಗಳಾದ ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ತಮ್ಮ ಮಾಜಿ ಸಹ ಆಟಗಾರ ಕುಂಬ್ಳೆ ಸಾಮರ್ಥ್ಯದ ಮೇಲೆ ವಿಶ್ವಾಸ ಇಟ್ಟು ಈ ಜವಾಬ್ದಾರಿ ವಹಿಸಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಕೋಚ್ ಆಗುವ ರವಿಶಾಸ್ತ್ರಿ ಆಸೆ ಭಗ್ನವಾಗಿದೆ.

ಅಂದಹಾಗೇ ಈ ಕೋಚ್ ಆಯ್ಕೆ ಕೇವಲ ಒಂದು ವರ್ಷದ ಅವಧಿ ಮಾತ್ರ. ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದಿಂದ ಭಾರತ ಸರಿ ಸುಮಾರು 15 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿಗಳಲ್ಲಿ ತಂಡದ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದ್ದು, ಭವಿಷ್ಯದಲ್ಲಿ ಕುಂಬ್ಳೆ ಅವರನ್ನು ಕೋಚ್ ಸ್ಥಾನದಲ್ಲಿ ಮುಂದುವರಿಸಲು ಇದೇ ಮಾನದಂಡವಾಗಲಿದೆ.

 

ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಹಣ ನೀಡಿಲ್ಲ: ಎಚ್.ಕೆ ಪಾಟೀಲ್

ಯುಪಿಎ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷಿ ಉದ್ಯೋಗ ಖಾತರಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಸರಿಯಾದ ಪ್ರಮಾಣದಲ್ಲಿ ಹಣ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೇಂದ್ರ ಸರ್ಕಾರ ಹಣ ಕೊಡದ ಕಾರಣ ರಾಜ್ಯ ಸರ್ಕಾರ ₹600 ಕೋಟಿ ಬಿಡುಗಡೆ ಮಾಡಿತು. ಇದರಿಂದ ಕೂಲಿಕಾರರಿಗೆ ಹಣ ಕೊಡಲು ಸಾಧ್ಯವಾಯಿತು. ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್.

ಕೆಟ್ಟದಕ್ಕೆ ನಾನು ಕಾರಣನಲ್ಲ, ಒಳ್ಳೆಯದು ಮಾತ್ರ ನನ್ನಿಂದಲೇ ಆಗಿದ್ದು ಅಂತಿದ್ದಾರೆ ಖರ್ಗೆ

ಸಂಪುಟದಿಂದ ಹಿರಿಯ ಸಚಿವರನ್ನು ಕೈಬಿಟ್ಟಿರುವಲ್ಲಿ ನನ್ನ ಪಾತ್ರವಿಲ್ಲ. ಆದ್ರೆ ಅಲ್ಪಸಂಖ್ಯಾತರ ಪರವಾಗಿ ಕೆ.ಸಿ ಕೊಂಡಯ್ಯ ಅವರಿಗೆ ಮೇಲ್ಮನೆಗೆ ಟಿಕೆಟ್ ಕೊಡಿಸಿದ್ದು ನಾನೇ ಎಂದು ಹೇಳಿಕೊಂಡಿದ್ದಾರೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ.

‘ವರಿಷ್ಠರ ಮಾರ್ಗದರ್ಶನದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟ ಪುನಾರಚನೆ ಮಾಡಿದ್ದಾರೆ. ಮಂತ್ರಿ ಮಂಡಲದಿಂದ ಯಾರನ್ನು ಕೈಬಿಡುವಂತೆ ನಾನು ಹೇಳಿಲ್ಲ. ಖಮರುಲ್ಲಾ ಇಸ್ಲಾಂ,  ಶ್ರೀನಿವಾಸ್ ಪ್ರಸಾದ್ ಹಾಗೂ ಬಾಬುರಾವ್ ಚಿಂಚನಸೂರ್ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದೆ. ಕೆ.ಸಿ.ಕೊಂಡಯ್ಯ ಅವರಿಗೆ ಮೇಲ್ಮನೆಗೆ ಟಿಕೆಟ್ ನೀಡಲು ಸಾಕಷ್ಟು ವಿರೋಧವಿತ್ತು. ಆದರೂ ಹಿಂದುಳಿದವರಿಗೆ ಅನ್ಯಾಯವಾಗಬಾರದೆಂದು ಅವರಿಗೆ ಮೇಲ್ಮನೆಗೆ ಟಿಕೆಟ್ ಕೊಡಿಸಿದೆ. ಮೇಲ್ಮನೆಯಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಡವಿತ್ತು. ಹಾಗಾಗಿ ವೀಣಾ ಅಚ್ಚಯ್ಯ ಅವರಿಗೆ ಅವಕಾಶ ನೀಡಲು ನೆರವಾದೆ ಅಂತಂದ್ರು’ ಮಲ್ಲಿಕಾರ್ಜುನ ಖರ್ಗೆ.

ಕಾಂಗ್ರೆಸ್ ಅತೃಪ್ತರಿಗೆ ಆಹ್ವಾನ ನೀಡಿಲ್ಲ: ಯಡಿಯೂರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡಾಯ ಬಂಡಾಯ ಬಾವುಟ ಹಾರಿಸಿರುವ ಕಾಂಗ್ರೆಸ್ ಶಾಸಕರಿಗೆ ನಮ್ಮ ಪಕ್ಷ ಸೇರುವಂತೆ ಆಹ್ವಾನ ನೀಡಿಲ್ಲ ಎಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ.

ಕೆಲವರ ಬಳಿ ವೈಯಕ್ತಿಕ ಸ್ನೇಹದ ಹಿನ್ನೆಲೆಯಲ್ಲಿ ಮಾತನಾಡಿದ್ದೇನೆ. ಆದರೆ ಅವರನ್ನು ಪಕ್ಷಕ್ಕೆ ಸೇರ್ಪಡೆಯಾಗಲು ಆಹ್ವಾನ ನೀಡಿಲ್ಲ. ಕಾಂಗ್ರೆಸ್ ಆಂತರಿಕ ವಿಷಯದಲ್ಲಿ ನಾವು ರಾಜಕೀಯ ಲಾಭ ಮಾಡಿಕೊಳ್ಳಲ್ಲ. ರಾಜ್ಯದಲ್ಲಿ ನಮ್ಮ ಪಕ್ಷ ಸಾಕಷ್ಟು ಬಲಿಷ್ಠವಾಗಿದೆ. ಕಾಂಗ್ರೆಸ್ ಆಡಳಿತ ವೈಫಲ್ಯ ಭಿನ್ನಮತ ಚಟುವಟಿಕೆ ಮುಂದಿನ ಚುನಾವಣೆಯಲ್ಲಿ ನಮಗೆ ಲಾಭ ತಂದುಕೊಡಲಿದೆ. ಕಾಂಗ್ರೆಸ್ ಭಿನ್ನಮತದಿಂದ ರಾಜ್ಯದ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂಬ ಆರೋಪ ನಮ್ಮದು ಎಂದರು.

ಅರವಿಂದ್ ವಿರುದ್ಧದ ಅಭಿಯಾನ ಸದ್ಯಕ್ಕೆ ಮೊಟಕುಗೊಳಿಸಿದ ಸ್ವಾಮಿ

‘ಕೇಂದ್ರ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ದರೂ, ಅವರೇ ಆಸ್ತಿ ಎಂದು ಭಾವಿಸುವುದಾದರೆ ಅವರ ವಿರುದ್ಧದ ಅಭಿಯಾನ ನಿಲ್ಲಿಸುತ್ತೇನೆ. ಅವರ ನೈಜ ಸಂಗತಿ ಹೊರಬರುವವರೆಗೂ ಕಾಯುತ್ತೇನೆ’ ಅಂತಾ ಹೇಳಿದ್ದಾರೆ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ.

ಇದಕ್ಕೂ ಮುನ್ನ ಬುಧವಾರ ನಡೆಸಿದ ಟೀಕೆ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಪಕ್ಷದ ಇತರೆ ನಾಯಕರು ಅರವಿಂದ್ ಅವರಿಗೆ ಬೆಂಬಲ ಸೂಚಿಸಿದ್ದರು ಸಹ ಸ್ವಾಮಿ ಗುರುವಾರವೂ ತಮ್ಮ ದಾಳಿ ಮುಂದುವರಿಸಿದ್ದರು. ಅರವಿಂದ್ ವಿರುದ್ಧ ಗುರುವಾರ ಸ್ವಾಮಿ ನಡೆಸಿದ ದಾಳಿ ಹೀಗಿತ್ತು:

– ‘ಗುಜರಾತ್ ಕಥೆ ಏನು? ಮೋದಿ ಅವರನ್ನು ಸಾಧಾರಣ ಸಾಧಕ (ತೆರಿಗೆ ಸಂಗ್ರಹ ಮತ್ತು ಸಾಮಾಜಿಕ ಪರಿಣಾಮ ಆಧರಿಸಿ) ಎಂದು ಅರವಿಂದ್ ಸುಬ್ರಮಣಿಯನ್ 23-1-13ರಲ್ಲಿ ಹೇಳಿದ್ದರು.’

– ‘ಕೇಂದ್ರ ಬಿಜೆಪಿ ಸರ್ಕಾರ ಅರವಿಂದ್ ಸುಬ್ರಮಣಿಯನ್ ಬಗ್ಗೆ ಎಲ್ಲವೂ ಗೊತ್ತಿದೆ, ಆದರೂ ಅವರೇ ನಮ್ಮ ಪ್ರಮುಖ ಅಸ್ತ್ರ ಎಂದರೆ ನಾನು ನನ್ನ ಆಗ್ರಹವನ್ನು ಹಿಂಪಡೆಯುತ್ತೇನೆ. ಇದರ ಫಲಿತಾಂಶಕ್ಕಾಗಿ ಕಾಯುತ್ತೇನೆ.’

– ‘ಭಾರತದ ರಫ್ತುದಾರರು ಮತ್ತು ಕಂಪನಿಗಳ ವಿರುದ್ಧ ಪಕ್ಷಪಾತ ನಿಲುವು ತಾಳಿ ಒತ್ತಡ ಹೇರುವ ಸಲಹೆಯನ್ನು  ಅರವಿಂದ್ 13-3-13ರಲ್ಲಿ ನೀಡಿದ್ದರು.’

– ‘ಭಾರತೀಯನಾಗಿ, ದೇಶಭಕ್ತ ಎಂದು ಹೇಳಿಕೊಂಡು ಭಾರತಕ್ಕೆ ಕೇಡು ಬಯಸಲು ವಿದೇಶಗಳಿಗೆ ಕುಮ್ಮಕ್ಕು ನೀಡಲು ಹೇಗೆ ಸಾಧ್ಯ. ಅವರ ತಪ್ಪು ಕ್ಷಮೆಗೆ ಅರ್ಹವೆಂದಾದರೆ, ಅವರನ್ನು ಕಿತ್ತು ಹಾಕಿ ಎಂಬ ನನ್ನ ಆಗ್ರಹವನ್ನು ಕೈಬಿಡುತ್ತೇನೆ.’

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿಸಾಲುಗಳು..

  • ವೈಲ್ಡ್ ಕಾರ್ಡ್ ಮೂಲಕ ಒಲಿಂಪಿಕ್ಸ್ ಪ್ರವೇಶದ ನಿರೀಕ್ಷೆಯಲ್ಲಿದ್ದ ಖ್ಯಾತ ಬಾಕ್ಸರ್ ಮೇರಿ ಕೋಮ್ ಗೆ ನಿರಾಸೆಯಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಯು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಯ ಮೇರಿ ಕೋಮ್ ಅವರಿಗೆ ವೈಲ್ಡ್ ಕಾರ್ಡ್ ಪ್ರವೇಶದ ನೀಡುವ ಮನವಿಯನ್ನು ನಿರಾಕರಿಸಿದೆ. ಮೇರಿ ಕೋಮ್ ಎರಡು ಅರ್ಹತಾ ಸುತ್ತಿನ ಅವಕಾಶದಲ್ಲಿ ವಿಫಲ ಹೊಂದಿದ ನಂತರ ಐಒಎ ಅಂತಿಮ ಪ್ರಯತ್ನ ನಡೆಸಿತ್ತು.
  • ಭಾರತದ ಪುರುಷ ಬಾಕ್ಸರ್ ಮನೋಜ್ ಕುಮಾರ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಸಂಪಾದಿಸಿದ್ದಾರೆ. ಅಜರ್ಬಜೈನ್ ನಲ್ಲಿ ನಡೆಯುತ್ತಿರುವ ಎಐಬಿಎ ವಿಶ್ವ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಮನೋಜ್ ಕುಮಾರ್ (64 ಕೆ.ಜಿ ವಿಭಾಗ) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಆಗಸ್ಟ್ ನಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

Leave a Reply