‘ಕಿತ್ ಹಾಕ್ರಿ ಅವ್ನ..’ ಶುರುವಾಯ್ತು ಸುಬ್ರಮಣಿಯನ್ ಸ್ವಾಮಿ ಪರ್ವ, ಸ್ವಾಮಿಭಕ್ತರೀಗ ತಿಳಿದುಕೊಳ್ಳಬೇಕಿದೆ ಗತದ ವಿವರ

ಪ್ರವೀಣ್ ಕುಮಾರ್

ಅವಧಿ ವಿಸ್ತರಣೆ ಕೇಳದೇ ರಘುರಾಮ ರಾಜನ್ ಆರ್ಬಿಐ ಹುದ್ದೆಯಿಂದ ನಿರ್ಗಮಿಸುತ್ತಿರುವುದಕ್ಕೆ ಅವರ ವಿರುದ್ಧ ಪತ್ರ ಸಮರದಲ್ಲಿ ತೊಡಗಿದ್ದ ಸುಬ್ರಮಣಿಯನ್ ಸ್ವಾಮಿಯವರಿಗೆ ಹೆಚ್ಚಿನ ಶ್ರೇಯಸ್ಸು ಸಂದಿತ್ತು. ಬುಧವಾರ ಬೆಳಗ್ಗೆ ಅವರು ಮಾಡಿರುವ ಟ್ವೀಟು ಇನ್ನೊಂದು ಬಿಸಿ ಚರ್ಚೆಗೆ ಕಾರಣವಾಯಿತು. ‘ಜಿಎಸ್ಟಿ ನಿಯಮಗಳ ಬಗ್ಗೆ ಕಾಂಗ್ರೆಸ್ ಜಿಗುಟಾಗುವಂತೆ ಪ್ರೇರೇಪಿಸಿದವರ್ಯಾರು ಗೊತ್ತೇ? ಜೇಟ್ಲಿಯ ಆರ್ಥಿಕ ಸಲಹೆಗಾರ ವಾಷಿಂಗ್ಟನ್ ಡಿಸಿಯ ಅರವಿಂದ ಸುಬ್ರಮಣಿಯನ್’ ಹೀಗಂತ ಟ್ವೀಟಿಸುವ ಮೂಲಕ ಚರ್ಚೆ ಶುರುವಾಯಿತು.

ನಂತರ ಎ ಎನ್ ಐ ಸುದ್ದಿಸಂಸ್ಥೆ ಜತೆ ಮಾತನಾಡುತ್ತ ಸುಬ್ರಮಣಿಯನ್ ಸ್ವಾಮಿ ತಮ್ಮ ನಿಲುವು ಬಲಪಡಿಸಿ ಹೇಳಿದರು- ‘ಅರವಿಂದ ಸುಬ್ರಮಣಿಯನ್ ಅಮೆರಿಕ ಗ್ರೀನ್ ಕಾರ್ಡ್ ವ್ಯಕ್ತಿಗಳ ಸಾಲಿಗೆ ಸೇರಿದವರು. ಈ ಹಿಂದೆ ಅಮೆರಿಕನ್ ಫಾರ್ಮಾಸೂಟಿಕಲ್ ಕಂಪನಿಗಳ ಪರ ವಹಿಸಿಕೊಂಡು ಭಾರತಕ್ಕೆ ಬುದ್ಧಿ ಕಲಿಸಬೇಕು ಎಂಬರ್ಥದಲ್ಲಿ ಮಾತಾಡಿದ್ದರು. ಜಿಎಸ್ಟಿ ವಿಷಯದಲ್ಲಿ ಕಾಂಗ್ರೆಸ್ ನಿಲುವನ್ನು ಪ್ರಶಂಸಿಸಿದ್ದರು. ಇಲ್ಲೇನು ನಾವು ಸರ್ಕಾರ ನಡೆಸುತ್ತಿದ್ದೇವೆಯೋ ಅಥವಾ ಸೆಮಿನಾರನ್ನೋ? ನಮಗೆ ನಿಷ್ಠೆ ಇರುವವರನ್ನೇ ಹುದ್ದೆಗಳಿಗೆ ನೇಮಿಸಬೇಕು. ಹೀಗಾಗಿ ಅರವಿಂದ ಸುಬ್ರಮಣಿಯನ್ ತೊಲಗಬೇಕು. ಇಂಥದೇ ಇನ್ನೂ 27 ವ್ಯಕ್ತಿಗಳ ಪಟ್ಟಿ ನನ್ನ ಬಳಿ ಇದೆ. ಎಲ್ಲರಿಗೂ ಚಿಕಿತ್ಸೆ ಕೊಡುತ್ತೇನೆ.’

ಸಾಕಷ್ಟು ಕಾನೂನು ಹೋರಾಟಗಳಲ್ಲಿ ಸುಬ್ರಮಣಿಯನ್ ಸ್ವಾಮಿ ಪ್ರಶಂಸಾರ್ಹರು. ಆದರೆ ಅವರ ಇಂಥ ವರ್ತನೆಗಳಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ. ಅವರು ವಾಜಪೇಯಿ ಅವರನ್ನೂ ವಿರೋಧಿಸಿದ್ದರು, ಆರೆಸ್ಸೆಸ್  ಅನ್ನೂ ವಿರೋಧಿಸಿದ್ದರು ಎಂಬುದನ್ನು ಮೇಲ್ಮೇಲಿನ ಅಂಶವಾಗಿ ತಿಳಿದುಕೊಂಡಿದ್ದವರಿಗೆ, ಆಗ ಸ್ವಾಮಿ ಬಾಯಿಂದ ಎಂಥ ಮಾತುಗಳು ಬಂದಿದ್ದವು ಎಂಬುದನ್ನು ಓದಿಕೊಂಡರೆ, ಈಗ ಅರವಿಂದ ಸುಬ್ರಮಣಿಯನ್ ಮತ್ತು ರಾಜನ್ ಮೇಲೆ ಮಾಡುತ್ತಿರುವ ಮಾತಿನ ದಾಳಿ ಏನೇನೂ ಅಲ್ಲ ಎನಿಸಿಬಿಡುತ್ತದೆ!

ಇವತ್ತು ಯಾವ ಸುಬ್ರಮಣಿಯನ್ ಸ್ವಾಮಿ ಅವರನ್ನು ಹಿಂದು ವಕ್ತಾರ, ಕಟ್ಟರ್ ಆರೆಸ್ಸೆಸ್ ಅಂತೆಲ್ಲ ಕಾಣಲಾಗುತ್ತಿದೆಯೋ… ಇವರು ಆರೆಸ್ಸೆಸ್ ಬಗ್ಗೆ ಬರೆದ ಸಾಲುಗಳನ್ನು ಓದಿಕೊಳ್ಳುವುದಂತೂ ಭಾರಿ ರೋಚಕತೆ ಹುಟ್ಟಿಸುತ್ತದೆ.

ಅದಕ್ಕೂ ಮುಂಚೆ ಈಗ ಎತ್ತಿರುವ ‘ದೇಶಭಕ್ತ’ ಧ್ವನಿಯ ಕೊರತೆಗಳನ್ನು ಮೊದಲಿಗೆ ಗುರುತಿಸಬೇಕು. ರಘುರಾಮ ರಾಜನ್ ಮೇಲೆ ಮತ್ಸರ ಪಡುವುದಕ್ಕೆ ಅವರು ಯುಪಿಎ ಅವಧಿಯ ನೇಮಕ ಎಂಬ ಕಾರಣವಿತ್ತು. ವಿತ್ತ ಸಚಿವಾಲಯದ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಇದೇ ಸರ್ಕಾರದ ನೇಮಕ. ಆಗೇನು ಅವರು ಅಮೆರಿಕದಿಂದ ಆಗಮಿಸಿದ್ದು ಗೊತ್ತಿರಲಿಲ್ಲವೇ? ಪ್ರಧಾನಿ ನರೇಂದ್ರ ಮೋದಿಯವರೇ ಜಗತ್ತಿನೆದುರು ಅಮೆರಿಕವನ್ನು ಅಪ್ಪಿಕೊಂಡು, ನಮ್ಮ ಮಿಲಿಟರಿ ಸಹಭಾಗಿತ್ವ ಹೆಚ್ಚಲಿ ಎನ್ನುತ್ತಿರುವಾಗ… ವಿದೇಶಿ ಬಂಡವಾಳದ ನೀತಿಗಳನ್ನೆಲ್ಲ ಸಡಿಲಿಸಿ ಅಮೆರಿಕ ಸೇರಿದಂತೆ ಎಲ್ಲ ಬಲಾಢ್ಯರಿಂದಲೂ ಹೂಡಿಕೆ ಸ್ವಾಗತಿಸುತ್ತಿರುವಾಗ, ಇನ್ಯಾವ ಅಮೆರಿಕ ಹಿತಾಸಕ್ತಿ ಬಗ್ಗೆ ಮಾತಾಡುತ್ತಿದ್ದಾರೆ ಸ್ವಾಮಿ? ಅಮೆರಿಕವು ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳುವುದಕ್ಕೆ ಇಲ್ಲಿಗೆ ಯಾವ ಗ್ರೀನ್ ಕಾರ್ಡ್ ವ್ಯಕ್ತಿಯನ್ನೂ ಕಳುಹಿಸಬೇಕಿಲ್ಲ. ಸರ್ಕಾರಗಳೇ ಅದನ್ನು ತುಂಬ ಚೆನ್ನಾಗಿ ಮಾಡುತ್ತವೆ.

ಅಂದಹಾಗೆ, ಅರವಿಂದ ಸುಬ್ರಮಣಿಯನ್ ಔಷಧ ಕಂಪನಿಗಳ ಪರ ಅಮೆರಿಕ ಸಂಸತ್ತಿನ ವಿಶೇಷ ಸಭೆಯಲ್ಲಿ ಹೇಳಿಕೆ ದಾಖಲಿಸಿದ್ದರು ಎಂಬುದನ್ನು ಸುಬ್ರಮಣಿಯನ್ ಸ್ವಾಮಿ ಅವರಿಗಿಂತ ಭಿನ್ನವಾಗಿ ಅರ್ಥೈಸುತ್ತಿರುವವರೂ ಇದ್ದಾರೆ. ಅರವಿಂದ್ ಅವರು ಅಮೆರಿಕದ ವಹಿವಾಟು ಭಾರತದೊಂದಿಗೆ ಬೆಳೆಯುತ್ತಿರುವುದರ ಆಯಾಮಗಳನ್ನು ಗುರುತಿಸುತ್ತ, ಜಾಗತಿಕ ಆರ್ಥಿಕ ಮುಗ್ಗರಿಕೆ ನಂತರ ಇನ್ಯಾವ ದೇಶವೂ ತೆರೆದುಕೊಳ್ಳದೇ ಇರುವಷ್ಟರ ಮಟ್ಟಿಗೆ ಭಾರತವು ತೆರೆದುಕೊಂಡಿದೆ. ವಿದೇಶಿ ಬಂಡವಾಳ ನೀತಿಗಳು ಸಡಿಲವಾಗುತ್ತಿವೆ ಹಾಗೂ ಆರ್ಥಿಕ ಬೆಳವಣಿಗೆ ಸಹ ಬಹಳ ಚುರುಕಾಗಿದೆ ಎನ್ನುತ್ತ ಅಮೆರಿಕದ ವ್ಯಾಪಾರಕ್ಕೆ ಸೂಕ್ತ ದೇಶ ಭಾರತ ಅಂತ ಹೇಳಿದ್ದರು.

ಇಂಥ ಸಲಹೆ ಕೊಡುವುದೇನೂ ಅಪರಾಧವಲ್ಲ. ಹೌದೆಂದಾದರೆ ನಾವೇ ಈ ಪರಿ ಅಮೆರಿಕದೆದುರು ಬನ್ನಿ, ಬನ್ನಿ ಅಂತ ಮಾರ್ಕೆಟ್ ಮಾಡಿಕೊಳ್ಳುತ್ತಿದ್ದೇವಲ್ಲ… ಇವೆಲ್ಲ ಅರವಿಂದ ಸುಬ್ರಮಣಿಯನ್ ನೀಡಿದ ಪ್ರಚೋದನೆಯೇ? ಔಷಧ ಪೇಟೆಂಟ್ ನಿಯಮಗಳ ವಿಷಯದಲ್ಲೂ ಅರವಿಂದ್ ತಮ್ಮ ಹೇಳಿಕೆಯಲ್ಲಿ ಅಮೆರಿಕವು ಕೇವಲ ಪ್ರತಿಬಂಧಗಳನ್ನಷ್ಟೇ ಮುಂದುಮಾಡದೇ ಭಾರತಕ್ಕೆ ಕೆಲ ಉತ್ತೇಜನಗಳನ್ನು ಸಹ ಕೊಡಬೇಕಾಗುತ್ತದೆ ಎಂದೂ ಪ್ರತಿಪಾದಿಸಿದ್ದರು. ಈ ಕುರಿತು ಸ್ಕ್ರಾಲ್ ಪ್ರಕಟಿಸಿರುವ ಸುದೀರ್ಘ ಆಂಗ್ಲ ಲೇಖನ ಓದಿಕೊಳ್ಳಬಹುದು.

ಇನ್ನು, ಜಿಎಸ್ಟಿ ವಿಷಯದಲ್ಲಿ ಕಾಂಗ್ರೆಸ್ ಬೇಡಿಕೆ ಇಟ್ಟಿದ್ದ ಶೇ. 18ರ ತೆರಿಗೆ ಮಿತಿ ಒಪ್ಪಿಕೊಳ್ಳುವ, ಆ ಮೂಲಕ ಮಸೂದೆಗೆ ಕವಿದಿದ್ದ ಮಂಕನ್ನು ಬಿಡಿಸುವ ಕೆಲವು ಸಲಹೆಗಳನ್ನು ಅರವಿಂದ ಸುಬ್ರಮಣಿಯನ್ ನೇತೃತ್ವದ ತಂಡ ಕೊಟ್ಟಿತ್ತು ಖರೆ. ಆದರೆ ಇದನ್ನು ಸಂವಿಧಾನಿಕ ತಿದ್ದುಪಡಿ ಭಾಗವಾಗಿ ಸೇರಿಸುವುದಕ್ಕೆ ಖಂಡತುಂಡ ವಿರೋಧವನ್ನೂ ವ್ಯಕ್ತಪಡಿಸಿತ್ತು. ಹೀಗಿರುವಾಗ ಕಾಂಗ್ರೆಸ್ಸಿಗೆ ಸಹಕರಿಸುವ ಮಾತೆಲ್ಲಿಯದು? ಇದೊಂದು ಅಂಶವನ್ನು ಇಟ್ಟುಕೊಂಡು ಅರವಿಂದ ಸುಬ್ರಮಣಿಯನ್ ‘ಸರ್ಕಾರ ವಿರೋಧಿ- ದೇಶವಿರೋಧಿ ವಿಲನ್’ ಆಗುವುದಾದರೆ, ಇದೇ ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ಜಿಎಸ್ಟಿಗೆ ಆ ಪರಿ ಪ್ರತಿರೋಧ ಒಡ್ಡಿರಲಿಲ್ಲವೇ? ತಮ್ಮ ವಿರೋಧ ಮಾತ್ರ ತಾತ್ತ್ವಿಕ ಹಾಗೂ ಪ್ರಜಾಪ್ರಭುತ್ವ ನೆಲೆಯದ್ದು ಉಳಿದವರ ಭಿನ್ನ ಧ್ವನಿಗಳನ್ನು ಮಾತ್ರ ಮುಲಾಜಿಲ್ಲದೇ ಹತ್ತಿಕ್ಕಬೇಕು ಎಂಬ ನಿಲುವೇಕೆ?

ಅರವಿಂದ ಸುಬ್ರಮಣಿಯನ್ ಅಥವಾ ರಾಜನ್ ಅವರ ಕೆಲಸಗಳ ಬಗ್ಗೆ ಕೆಲವರಿಗೆ ಭಾರಿ ಗೌರವ, ಇನ್ನು ಕೆಲವರಿಗೆ ಅದೇನು ಮಹಾ ಹೀಗೆ ಇಬ್ಬಗೆ ಅಭಿಪ್ರಾಯಗಳಿದ್ದಿರಬಹುದು. ಅದೇನೇ ಇದ್ದರೂ ಇವರನ್ನು ವಜಾಗೊಳಿಸಬೇಕೆಂಬ ಕೂಗಿನ ಹಿಂದಿರುವುದು ಕೇವಲ ದೇಶಕಾಳಜಿ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ‘ಜೇಟ್ಲಿಯವರ ಸಲಹೆಗಾರ’ ಎಂದು ಒತ್ತಿ ಹೇಳಿರುವುದರಲ್ಲೇ ಸುಬ್ರಮಣಿಯನ್ ಸ್ವಾಮಿ ಅವರ ಉದ್ದೇಶ ಸ್ಪಷ್ಟ. ‘ಬಲಪಂಥೀಯ ವಲಯದಲ್ಲಿ ಇಷ್ಟೆಲ್ಲ ಪ್ರಸಿದ್ಧಿ ಹೊಂದಿರುವ ನನಗೆ ರಾಜ್ಯಸಭೆ ಸದಸ್ಯತ್ವ ನೀಡಿ ಸುಮ್ಮನಾದರಾಯಿತೇ? ಆರ್ಬಿಐ ಗವರ್ನರೊ, ವಿತ್ತ ಸಚಿವನೋ ಆಗಬೇಕು’ ಎಂಬ ಪರೋಕ್ಷ ಹಕ್ಕೊತ್ತಾಯ ಮಂಡಿಸಿದಂತಿದೆ ಸುಬ್ರಮಣಿಯನ್ ಸ್ವಾಮಿ.

ಇಲ್ಲಿ ಆಗಬೇಕಿರುವುದು ಸ್ವಾಮಿ ಸರಿಯೋ, ಮತ್ತೊಬ್ಬರೋ ಎಂಬ ಜನಪ್ರಿಯತೆಯ ಕದನವಲ್ಲ. ಆದರೆ ಭಿನ್ನಾಭಿಪ್ರಾಯಗಳನ್ನೇ ದೇಶದ್ರೋಹ- ದೇಶಪ್ರೇಮಗಳ ವ್ಯಾಖ್ಯಾನದಲ್ಲಿ ಸೀಮಿತಗೊಳಿಸುವುದು ಮಾತ್ರ ವೃತ್ತಿಪರರು ಮೋದಿ ಸರ್ಕಾರದಲ್ಲಿ ಭಾಗವಹಿಸುವುದಕ್ಕೇ ಹಿಂದೇಟು ಹಾಕುವಂತೆ ಮಾಡಬಹುದಾದ ವಿದ್ಯಮಾನ. ಭಿನ್ನ ಅಭಿಪ್ರಾಯಕ್ಕೆ ಹೊರತಾಗಿ ಅರವಿಂದ ಸುಬ್ರಮಣಿಯನ್ ಭಯಾನಕ ‘ದೇಶದ್ರೋಹಿ’ಯೇ ಆಗಿದ್ದಾರೆ ಎನ್ನುವುದಾದರೆ ಈ ನೇಮಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ಬಾಧ್ಯಸ್ಥರನ್ನಾಗಿಸಬೇಕಾಗುತ್ತದೆ.

ಹೀಗೆಲ್ಲ ನಾಲ್ಕು ಹೇಳಿಕೆಗಳನ್ನಿಟ್ಟುಕೊಂಡು ವ್ಯಕ್ತಿಗಳನ್ನು ಅಳೆಯುವುದಾದಲ್ಲಿ, ಸುಬ್ರಮಣಿಯನ್ ಸ್ವಾಮಿ ಮೇಲೆ ಅಭಿಮಾನವಿರಿಸಿಕೊಂಡೇ ಅವರ ಮಾರ್ಗವನ್ನೂ ಗಮನಿಸಬೇಕಾಗುತ್ತದೆ.

ಸುಬ್ರಮಣಿಯನ್ ಸ್ವಾಮಿ ಅವರ ಚರಿತ್ರೆಯುದ್ದಕ್ಕೂ ಬಿಜೆಪಿಯೊಂದಿಗೆ ಅವರದ್ದು ಇದೇ ತಕರಾರು ನಡೆದುಕೊಂಡು ಬಂದಿರುವುದನ್ನು ಗಮನಿಸಬಹುದು. ತಮ್ಮ ರಾಜಕೀಯ ಜೀವನ ಹಾಳು ಮಾಡಿದವರು ಎಂದು ಸುಬ್ರಮಣಿಯನ್ ಸ್ವಾಮಿ ನೆನಪಿಸಿಕೊಳ್ಳುವುದೇ ಅಟಲ್ ಬಿಹಾರಿ ವಾಜಪೇಯಿ ಅವರನ್ನು!

‘ತುರ್ತು ಪರಿಸ್ಥಿತಿ ನಂತರ ಆಯ್ಕೆಯಾದ ಮೊರಾರ್ಜಿ ಸರ್ಕಾರದಲ್ಲಿ ನಾನು ಕ್ಯಾಬಿನೆಟ್ ಮಂತ್ರಿ ಆಗಬೇಕಿತ್ತು. ಆದರೆ ವಾಜಪೇಯಿಗೆ ನನಗೊಲಿದಿದ್ದ ‘ತುರ್ತು ಪರಿಸ್ಥಿತಿ’ಯ ಹೀರೋ ಎಂಬ ವರ್ಚಸ್ಸನ್ನು ಸಹಿಸಲಿಕ್ಕೇ ಆಗಲಿಲ್ಲ. ಜನಸಂಘದ ಸಂಸದರೆಲ್ಲ ಅವರ ಮಾತು ಕೇಳುತ್ತಿದ್ದರು. ಹೀಗಾಗಿ ಮೊರಾರ್ಜಿಯವರಿಗೆ ನನ್ನ ಮೇಲೆ ವಿಶ್ವಾಸವಿದ್ದರೂ ಸಹಾಯಕ ದರ್ಜೆ ಮಂತ್ರಿ ಪದವಿಗೆ ಮೊಟಕುಗೊಳ್ಳಬೇಕಾಯಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿಯವರಿಗೆ ಕ್ಷಮಾಪಣೆ ಪತ್ರ ಕೊಟ್ಟು ಆಕೆಯ ವಿಶ್ವಾಸ ಗಳಿಸಿಕೊಂಡಿದ್ದರು ವಾಜಪೇಯಿ’ ಎಂಬುದು ಸುಬ್ರಮಣಿಯನ್ ಸ್ವಾಮಿ ತಮಿಳು ಪತ್ರಿಕೆಯೊಂದರಲ್ಲಿ ಹೇಳಿಕೊಂಡಿದ್ದ ಆತ್ಮಕತೆ.

ವಾಜಪೇಯಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಆಕ್ರೋಶ ಮೊಗೆದಷ್ಟೂ ಚಿಮ್ಮುವಂಥದ್ದು. ‘ಮೊರಾರ್ಜಿ ಸರ್ಕಾರವನ್ನು ಉರುಳಿಸಿದ ಕೆಟ್ಟ ಹೆಸರು ಬಂದಿದ್ದು ಚರಣ್ ಸಿಂಗ್ ರಿಗೆ. ಆದರೆ ನಿಜಕ್ಕೂ ಹಿನ್ನೆಲೆಯಲ್ಲಿದ್ದು ಜಗಳ ಸೃಷ್ಟಿಸಿದ್ದು ವಾಜಪೇಯಿ ಮತ್ತು ರಾಮಕೃಷ್ಣ ಹೆಗಡೆ’ ಅಂತಲೂ ಸ್ವಾಮಿ ದೂರಿದ್ದಿದೆ. ‘ವಾಜಪೇಯಿಯವರು ವಿದೇಶ ವ್ಯವಹಾರಗಳ ಸಚಿವರಾಗಿದ್ದಾಗ ಜಪಾನ್ ನಿಯೋಗ ಪಾರ್ಟಿಯೊಂದನ್ನು ಹಮ್ಮಿಕೊಂಡಿತ್ತು. ಅಲ್ಲಿಗೆ ನನಗೂ ಆಹ್ವಾನವಿತ್ತು. ವಾಜಪೇಯಿ ಸಿಕ್ಕಾಪಟ್ಟೆ ಕುಡಿದಿದ್ದನ್ನು ನೋಡಿ ಆಘಾತವಾಯಿತು. ಈ ವಿಷಯದಲ್ಲಿ ನಂತರ ಮೊರಾರ್ಜಿಯವರು ವಾಜಪೇಯಿ ಅವರನ್ನು ಕರೆಸಿಕೊಂಡು ನನ್ನ ಎದುರೇ ಸರಿಯಾಗಿ ಬಯ್ದಿದ್ದರು’ ಅಂತೆಲ್ಲ ಮಕ್ಕಳು ತಮ್ಮ ಜಿದ್ದಿನ ದೂರು ಹೇಳಿಕೊಳ್ಳುವಂತೆ ಸ್ವಾಮಿ ವಾಜಪೇಯಿ ವಿರುದ್ಧ ಕಿಡಿ ಕಾರಿದ ದಾಖಲೆ ಇದೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರೆಸ್ಸೆಸ್ ನ ಕೆಲವರು ಹಾಗೂ ವಾಜಪೇಯಿ, ಇಂದಿರಾ ಜತೆ ಒಪ್ಪಂದ ಮಾಡಿಕೊಂಡು ಮೃದುವಾಗಿದ್ದರು ಎಂಬ ಕುರಿತೂ ಸುಬ್ರಮಣಿಯನ್ ಸ್ವಾಮಿ, ಇವತ್ತು ಅವರ ಭಕ್ತ ಜನರಲ್ಲೇ ಹೆಚ್ಚಿನವರು ದ್ವೇಷಿಸುವ ‘ದ ಹಿಂದು’ ಪತ್ರಿಕೆಗೆ ಲೇಖನ ಬರೆದಿದ್ದರು.

ಇವತ್ತಿಗೆ ರಾಮ ಮಂದಿರ, ಸೇತು ಸಮುದ್ರ ಎಂದು ಹಿಂದು ಸಮುದಾಯದ ಭಾವನಾತ್ಮಕ ಬೆಂಬಲ ಗಳಿಸಿ ಕಟ್ಟರ್ ಆರೆಸ್ಸೆಸ್ಸಿಗರಂತೆ ಕಾಣುವ ಸುಬ್ರಮಣಿಯನ್ ಸ್ವಾಮಿ, ಫೆಬ್ರವರಿ 2000ದಲ್ಲಿ ಬರೆದಿದ್ದ ಲೇಖನ ಈಗ ಓದಿಕೊಳ್ಳುವುದಕ್ಕೆ ಮೋಜಿನದ್ದಾಗಿ ಕಾಣುತ್ತದೆ. ಇದನ್ನೇ ಪ್ರತ್ಯೇಕವಾಗಿ ಹೆಸರು ರಹಿತವಾಗಿ ಕೊಟ್ಟರೆ ಅದ್ಯಾವ ಬುದ್ಧಿಜೀವಿ ಆರೆಸ್ಸೆಸ್ ಅನ್ನು ಇಷ್ಟು ಕೆಟ್ಟದಾಗಿ ಬಯ್ಯುತ್ತಿರೋದು ಅಂತ ಬಿಜೆಪಿ ಬೆಂಬಲಿಗರೆಲ್ಲ ಸಿಟ್ಟುಗೊಳ್ಳುತ್ತಾರೇನೋ. ಆದರೆ ‘ಆರೆಸ್ಸೆಸ್ ಗೇಮ್ ಪ್ಲಾನ್’ ಎಂಬ ಲೇಖನ ಬರೆದಿದ್ದು ಸುಬ್ರಮಣಿಯನ್ ಸ್ವಾಮಿಯವರೇ. ಈ ಕೊಂಡಿಯಲ್ಲಿ ಆ ಸುದೀರ್ಘ ಆಂಗ್ಲ ಲೇಖನ ಓದಬಹುದಾದರೂ, ಚಿಕ್ಕದೊಂದು ಭಾಗವನ್ನು ಇಲ್ಲಿ ಅನುವಾದಿಸಿಡಬಹುದು-

ಇವತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಫ್ಯಾಸಿಸಂ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಸಾಮ್ರಾಜ್ಯಶಾಹಿ ಆವರಿಸಿಕೊಂಡಂತೆ ಹಂತ ಹಂತವಾಗಿಯೂ ಅಲ್ಲ, ತುರ್ತು ಪರಿಸ್ಥಿತಿಯಂತೆ ಏಕಾಏಕಿಯೂ ಅಲ್ಲ. ಇದನ್ನು ತುಂಬ ಕುಶಲತೆಯಿಂದ ಆರೆಸ್ಸೆಸ್ಸಿನ ಹೈಕಮಾಂಡ್ ಎಂದು ಕರೆಸಿಕೊಳ್ಳುವ ಏಳು ಮಂದಿ ಮುಖರಹಿತರು ಹರಡುತ್ತಿದ್ದಾರೆ. ನಮಗೆ ಅದು ಅರಿವಿಗೆ ಬರುತ್ತಿಲ್ಲ. ಈ ಹಿಂದೆ ನಾಗರಿಕ ಹಕ್ಕು ಅಂತೆಲ್ಲ ಹೋರಾಡಿಕೊಂಡಿದ್ದ ಅರುಣ್ ಶೌರಿಯಂಥವರು ಈ ಕಾರ್ಯಕ್ಕೆ ಕೈಗೂಡಿಸಿದ್ದಾರೆ. ಉಳಿದವರನ್ನು ತಮ್ಮೆಡೆಗೆ ಎಳೆದುಕೊಳ್ಳುವುದಕ್ಕೆ ರಮಿಸಲಾಗುತ್ತಿದೆ ಇಲ್ಲವೇ ಬೆನ್ನು ಹತ್ತಲಾಗುತ್ತಿದೆ. ಆರೆಸ್ಸೆಸ್ ನಾಯಕರಲ್ಲಿ ಹೆಚ್ಚಿನವರೆಲ್ಲ ಈಗ ಎಪ್ಪತ್ತರ ಆಸುಪಾಸಲ್ಲಿದ್ದಾರೆ. ಹಲವರಿಗೆ ಆರೋಗ್ಯವೂ ಸರಿ ಇಲ್ಲ. ಹೀಗಾಗಿ ಹತಾಶೆ ಶುರುವಾಗಿದೆ. ದೆಹಲಿ ಗಾದಿ ಹಿಡಿಯುವ ಅವರ ಧೌಡನ್ನು ನಿಯಂತ್ರಿಸಲಾಗಿದೆ. ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುವ ಅವರ ಕನಸಿನ್ನೂ ಕೈಗೂಡಿಲ್ಲ. ಆಗಸ್ಟ್ 15ರಂದು ಸಹ ಯಾವುದೇ ಆರೆಸ್ಸೆಸ್ ಕಚೇರಿ ಮೇಲೆ ಹಾರಿಸದಷ್ಟರಮಟ್ಟಿಗೆ ಇವರು ದ್ವೇಷಿಸುವ ತ್ರಿವರ್ಣವೇ ಇನ್ನೂ ಹಾರುತ್ತಿದೆ. ಇಷ್ಟು ಹತ್ತಿರ ಬಂದೂ ದೂರವಾಗುತ್ತಿದ್ದೇವಲ್ಲ ಎಂಬ ಹತಾಶೆ ಅವರಲ್ಲಿ ತೀವ್ರವಾಗಿದೆ…

ಸರಿಬಿಡಿ. ಸ್ವಾಮಿ ಯಾವುದೋ ಕಾಲದಲ್ಲಿ ಹೀಗೆ ಬರೆದಿದ್ದಿರಬಹುದು. ನಂತರ ಅವರಿಗೆ ತಮ್ಮ ಅಭಿಪ್ರಾಯ ತಪ್ಪೆನಿಸಿ ತಿದ್ದಿಕೊಂಡಿರಬಹುದು ಎಂಬ ಸಹಾನುಭೂತಿಯ ದೃಷ್ಟಿಕೋನವನ್ನೇ ನಾವು ಇರಿಸಿಕೊಳ್ಳೋಣ.

ಆದರೆ ಪ್ರಶ್ನೆಯಿಷ್ಟೆ…

ಇಂಥ ಸ್ವಾಮಿಯವರಿಗೆ ಆರ್ಥಿಕ ವಿಷಯಗಳಲ್ಲಿ ರಾಜನ್ ಹಾಗೂ ಅರವಿಂದರು ಇಟ್ಟುಕೊಂಡಿರಬಹುದಾದ ಭಿನ್ನ ಅಭಿಪ್ರಾಯಗಳು ಮಾತ್ರ ದೇಶಭಕ್ತಿ ವ್ಯಾಖ್ಯಾನದ ಆಚೆ ಇರುವಂತೆ ತೋರುತ್ತಿರುವುದೇಕೆ? ಸ್ವಾಮಿಯವರಿಗೆ ಹಲವು ವಿಷಯಗಳಲ್ಲಿ ಈ ಹಿಂದೆ ವ್ಯತಿರಿಕ್ತ ಅಭಿಪ್ರಾಯಗಳಿದ್ದು, ಈಗ ಸಂವಾದದ ಮೂಲಕವೋ ಇನ್ಯಾವುದೇ ಬೆರೆಯುವಿಕೆಯಿಂದಲೋ ಅವು ಬದಲಾಗಿವೆ ಅನ್ನುವುದಾದರೆ ಅಂಥ ಸ್ವಾತಂತ್ರ್ಯ ಬೇರೆಯವರಿಗೂ ಇರಬೇಕಲ್ಲವೇ?

ಅರವಿಂದ ಸುಬ್ರಮಣಿಯನ್ ವಿಚಾರದಲ್ಲಿ ಬಿಜೆಪಿ ಸ್ವಾಮಿ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿದೆಯಲ್ಲದೇ, ಅಸಮಾಧಾನವನ್ನೂ ಹೊರಹಾಕಿದೆ. ಆದರೆ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆಂದರೆ ಅದು ನಿಜವೇ ಆಗಿದ್ದಿರಬೇಕು; ಅವರೊಮ್ಮೆ ‘ದೇಶಪ್ರೇಮ’ದ ಸರ್ಟಿಫಿಕೇಟ್ ಕೊಟ್ಟರೆಂದರೆ ಮುಗಿದೇಹೋಯಿತು ಎಂಬಷ್ಟರಮಟ್ಟಿಗೆ ಮರುಳಾಗಿರುವ ಭಕ್ತ ಸಮೂಹ ಮಾತ್ರ ಮೇಲಿನ ಇತಿಹಾಸಗಳನ್ನೆಲ್ಲ ಇನ್ನೊಮ್ಮೆ- ಮತ್ತೊಮ್ಮೆ ಓದಿಕೊಳ್ಳಬೇಕಾಗುತ್ತದೆ.

1 COMMENT

  1. After reading the Kannada article on Dr. Subramania Swamy, it looks in politics no bofpdy is a permanent friend or permanent enemy, but only they will look at opportunities. This country has seen friends and adversaries. No two persons in politics express the same opinion. Irrespective of the personalities, it is the power that creates ego and completely camaflouges all the other qualities. No body seems to be honest, and cannot be. The more one is honest, faster he exists from power which is applicable to all countries irrespective of whether it is ruled by dictator or democratically elected candidate, whether he is young or old, whether the person is male or female.
    Even in many cases consensus seems to be farce because, they do not want the after effects to reflect. Only requirement is whether a person can discharge his duties in the interest of nation or not? The efforts of the head of the nation like PM or President, and council of Ministers should only delve the integrity and the knowledge and commitment for producing the best results of the nation, and people of the country. This is irrespective of the critisism of the scores of knowledgeable people on the character of a person so chosen. In this case it is irrelevant as to What Dr. Swamy or others say, but will the next person will be able to deliver which is important. There should be checks and balances during the term and reviews periodically. If this can be ensured then there is no fear for our economy to improve, with sound economics.

Leave a Reply