ಹಂಸಲೇಖ ಅಂದ್ರೇನೆ ಹೊಸತನ: ಬರಲಿದೆ ‘ತವರಿನಲ್ಲಿ ಚಂದನವನ’

sridharamurthyಎನ್.ಎಸ್.ಶ್ರೀಧರ ಮೂರ್ತಿ

ಹಂಸಲೇಖ ಸಂಗೀತ ನಿರ್ದೇಶನ ಮಾಡಿದ ಮೊದಲ ಚಿತ್ರ ಯಾವುದು? ಈ ಪ್ರಶ್ನೆಗೆ ಎಲ್ಲರೂ ‘ಪ್ರೇಮಲೋಕ’ ಅಂತ ಥಟ್ ಅಂತ ಹೇಳಿ ಬಿಡ್ತಾರೆ. ಆದರೆ ಅದು ವಾಸ್ತವವಲ್ಲ. ಹಂಸಲೇಖ ಸಂಗೀತ ನೀಡಿದ ಮೊದಲ ಚಿತ್ರ ‘ಹೆಣ್ಣೆ ನಿನಗೇನು ಬಂಧನ’. ರವೀಂದ್ರನಾಥ್  ಈ ಚಿತ್ರದ ನಿರ್ದೇಶಕರು.

ಮದರಾಸಿನ ಪ್ರಸಾದ್ 70 ಎಂ.ಎಂ ರೆಕಾರ್ಡಿಂಗ್ ಸ್ಟುಡಿಯೋ ಏಷ್ಯಾದಲ್ಲೇ ಅತಿ ದೊಡ್ಡದು ಎಂದು ಹೆಸರು ಮಾಡಿದ್ದ ಕಾಲ ಅದು. ಎಂಬತ್ತು ವಾದ್ಯಗಾರರ ಸಹಕಾರದಲ್ಲಿ ಅವರು ಸಂಗೀತ ನೀಡಿದ ಮೊದಲ ಗೀತೆ ‘ಕೂಹೂ ಕೋಗಿಲೆಯೇ. ತೀಡುವ ತಂಗಾಳಿಯೇ ಹೇಳೇ ನಿನಗೇನು ಬಂಧನ’ ರೆಕಾರ್ಡ್‍ ಆಯಿತು. ಈ ನಾದ ಸಂಭ್ರಮದಲ್ಲಿ ಹಂಸಲೇಖ ಸಂತೋಷಕ್ಕೆ ಪಾರವೇ ಇಲ್ಲ. ಅಲ್ಲಿದ್ದ ಸೀನಿಯರ್ ರೆಕಾರ್ಡಿಸ್ಟ್ ಸೆಲ್ವರಾಜ್ ಹಂಸಲೇಖ ಹೆಗಲು ಮುಟ್ಟಿ ಕೇಳಿದರು. ‘ಹೌ ಈಸ್ ಇಟ್?’ ಹಂಸಲೇಖ ತಮ್ಮ ಸಂಭ್ರಮ ಹೇಳಿಕೊಂಡಾಗ ಅವರು ತಣ್ಣನೆಯ ಸ್ವರದಲ್ಲಿ ಹೇಳಿದರು ‘ಫರ್ಗೆಟ್ ದಿಸ್ ಸಾಂಗ್, ಥಿಂಕ್ ನೆಕ್ಸ್ಟ್! ಹ್ಯಾಪಿನೆಸ್ ಆಫ್ ಎ ಸಕ್ಸಸ್ ಶುಡ್ ನಾಟ್ ಕಿಲ್ ದಿ ನೆಕ್ಸ್ಟ್ ವರ್ಕ್!’ ಇದು ಹಂಸಲೇಖ ಅವರು ಕಲಿತ ದೊಡ್ಡ ಪಾಠ. ಅದನ್ನು ಕೂಡಲೇ ತಮ್ಮ ನೋಟ್ ಬುಕ್‍ನಲ್ಲಿ ಬರೆದಿಟ್ಟುಕೊಂಡರು. ಅಲ್ಲಿಂದ ಮುಂದೆ ಯಶಸ್ಸಿನ ಸಂಭ್ರಮ ತಲೆ ಮೇಲೆ ಏರದಂತೆ ನೋಡಿಕೊಂಡರು. ಅದರಿಂದಲೇ ಒಂದು,  ಮುನ್ನೂರನ್ನು ದಾಟಿತು. ಮುನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ ಮೂರು ಸಾವಿರಕ್ಕೂ ಹೆಚ್ಚಿನ ಗೀತೆಗಳನ್ನು ಬರೆದ ದೇಶದ ಏಕೈಕ ಸಾಧಕ ಎನ್ನುವ ಹೆಗ್ಗಳಿಕೆ ಅವರದಾಯಿತು.

‘ಹೆಣ್ಣೆ ನಿನಗೇನು ಬಂಧನ’ ಚಿತ್ರದ ಗೀತೆಗಳೆಲ್ಲವೂ ಚೆನ್ನಾಗಿದ್ದರೂ ಸುದ್ದಿ ಮಾಡಲಿಲ್ಲ. ಸೋಲಿಗೆ ಖಚಿತ ಕಾರಣ ಯಾರಿಗೂ ತಿಳಿಯಲಿಲ್ಲ. ಇದೇ ಹೊತ್ತಿನಲ್ಲಿ ಮದ್ರಾಸಿನ ಚೋಳ ಹೋಟಲ್‍ ಎದುರಿನ ಬೀಡಾ ಅಂಗಡಿಯಲ್ಲಿ ರವೀಂದ್ರನಾಥ್ ಅವರ ಮದ್ರಾಸ್ ಫಿಲ್ಮ ಇನ್ಸಟ್ಯೂಟ್‍ನ ಸಹಪಾಠಿ ರಜನೀಕಾಂತ್ ಸಿಕ್ಕರು. ಮಾತಿನ ನಡುವೆ ಹೇಳಿದರು ‘ನೋಡ್ರಿ ಹಂಸಲೇಖ, ನೀವು ಇಂಡಸ್ಟ್ರೀಗೆ ಹೊಸಬರು, ಬಂದ ಕೂಡಲೇ ನಿಮ್ಮನ್ನು ರೆಕಗ್ನೈಸ್ ಮಾಡೋಕೆ ನೀವೇನು ದೇವತೆಯಲ್ಲ. ಸ್ವಲ್ಪ ಗಿಮ್ಮಿಕ್ಸ್ ಮಾಡ್ಬೇಕ್ರಿ, ನಾನು ಮಾಡಿದ ಹಾಗೆ! ಜನ ನಿಮ್ಮ ಕಡೆ ನೋಡೋಕೆ ಶುರು ಮಾಡಿದ ಮೇಲೆ ಟ್ಯಾಲೆಂಟ್ ತೋರಿಸಬೇಕು. ಮೊದಲು ಗಿಮ್ಮಿಕ್ಸ್ ನಂತರ ಟ್ಯಾಲೆಂಟ್,  ಇದೇ ಸಿನಿಮಾದ ಫಾರ್ಮಲಾ’ ಅಂದ್ರು.

ಈ ಮಾತೂ ಹಂಸಲೇಖ ಅವರ ಮನಸ್ಸನ್ನು ನಾಟಿತು. ಮುಂದೆ ಬಂದ ಸಿನಿಮಾ ‘‍ಪ್ರೇಮಲೋಕ’. ಈ ವೇಳೆಗಾಗಲೇ ರವಿಚಂದ್ರನ್ ಅವರ ‘ನಾನು ನನ್ನ ಹೆಂಡ್ತಿ’ ಸಿನಿಮಾಕ್ಕೆ ಹಂಸಲೇಖ ಹಾಡು ಬರೆದಿದ್ದರು. ಶಂಕರ್-ಗಣೇಶ್ ಈ ಚಿತ್ರದ ಸಂಗೀತ ನಿರ್ದೇಶಕರು. ರವಿಚಂದ್ರನ್ ಬಳಿ ಹಂಸಲೇಖ ಹೇಳಿದರು. ಎಲ್ಲಾ ಹಾಡಿನಲ್ಲೂ ಡಿಫರೆಂಟ್ ಆಗಿರೋ ಗಿಮ್ಮಿಕ್ಸ್‍ಗಳನ್ನು ಟ್ರೈ ಮಾಡ್ತೀನಿ. ರವಿಚಂದ್ರನ್ ಸುಲಭಕ್ಕೆ ಒಪ್ಪಲಿಲ್ಲ. ‘ಏನೋ ಮಾಡೋಕೆ ಹೋಗಿ ಸಿನಿಮಾ ಹಾಳು ಮಾಡ್ತೀರ’ ಅಂತ ಹಿಂಜರೆದರು. ಒಂದು ಹಾಡು ನೋಡಿ ಅಂತ ‘ಈ ನಿಂಬೆ ಹಣ್ಣಿನಂತ ಹುಡುಗಿ’ಗೆ ಟ್ಯೂನ್ ಮಾಡಿದ್ರು. ರವಿಚಂದ್ರನ್ ಬೆರಗಾದ್ರು. ಸಖತ್ ವಿಷ್ಯುವಲ್ ಪಾಸಿಬಲಿಟಿ ಇದ್ಯಲ್ರೀ ಎಂದು ಬೆನ್ನು ತಟ್ಟಿದರು. ಹೀಗೆ ಒಂದಲ್ಲ ಎರಡಲ್ಲ ಹತ್ತು ವೆರೈಟಿ ಸಾಂಗ್ ರೆಡಿಯಾಯ್ತು. ಎಲ್ಲವನ್ನೂ ರವಿಚಂದ್ರನ್ ಬಳಸಿಕೊಂಡರು.ರವಿಚಂದ್ರನ್ ವೇಗ ಹಂಸಲೇಖ ರಾಗ ಜೊತೆಗೂಡಿ ಇತಿಹಾಸವೇ ಸೃಷ್ಟಿಯಾಯಿತು. ಹಂಸಲೇಖ ಗೆಲುವಿಗಾಗಿ ಮಾಡಿದ ಗಿಮ್ಮಿಕ್ಸ್‍ಗಳು  ಕನ್ನಡ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದವು.  ‘ರಣಧೀರ’ಕ್ಕೆ ಬಂದಾಗ ‘ನಾವಿಂದು ಹಾಡೋ’ಗೀತೆಗೆ ಭಾರತೀಯ ಚಿತ್ರರಂಗದಲ್ಲೇ ಮೊದಲಿಗೆ ಬೆಸ ಸಂಖ್ಯೆಯ ತಾಳ ಇಟ್ಟರು. ಹೀಗೆ ಗಿಮ್ಮಿಕ್ಸ್‍ಗಳು ಬೆಳೆಯುತ್ತಾ ಹೋದಂತೆ ಎಲ್ಲರೂ ಹಂಸಲೇಖ ಅವರ ಕಡೆ ಅಚ್ಚರಿಯಿಂದ ನೋಡಲು ಆರಂಭಿಸಿದರು.

ಹಂಸಲೇಖ ಯುಗ ಆರಂಭವಾದ ಮೇಲೆ ತಮ್ಮ ಬತ್ತಳಿಕೆಯಿಂದ ಪ್ರಯೋಗಶೀಲತೆಯ ಬಾಣಗಳನ್ನು ಹೊರ ತೆಗೆದರು. ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದಲ್ಲಿ ಕರ್ನಾಟಕಿ ಮತ್ತು ಹಿಂದೂಸ್ತಾನಿ ಎರಡೂ ಪದ್ದತಿಯನ್ನು ಬಳಸಿ ಗಮನ ಸೆಳೆಯುವ ಸಂಗೀತ ನೀಡಿದರು.  ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲೇ ಸಂಗೀತ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಮೊದಲಿಗರು ಎನ್ನಿಸಿಕೊಂಡರು. ಇದುವರೆಗೂ ಈ ಸಾಧನೆ ಮಾಡಿದ ಏಕೈಕ ಕನ್ನಡಿಗರು ಎನ್ನಿಸಿಕೊಂಡಿದ್ದಾರೆ. ‘ಚೈತ್ರದ ಪ್ರೇಮಾಂಜಲಿ’ಚಿತ್ರದಲ್ಲಿ ಪ್ರಕೃತಿ ಕಲರವನ್ನು ಬಳಸಿದ ಹಂಸಲೇಖ ‘ಮುತ್ತಿನ ಹಾರ’ದ ‘ದೇವರ ಹೊಸೆದ’ಗೀತೆಯಲ್ಲಿ ಕೌಂಟರ್ ಮ್ಯೂಸಿಕ್ ‍ಪ್ರಯೋಗಿಸಿದರು. ‘ಕೌರವ’ದಲ್ಲಿ ಪಾಶ್ಚಾತ್ಯ ಸಂಗೀತದ ಮಾದರಿಗಳನ್ನು ಬಳಸಿದರು. ‘ನೆನಪಿರಲಿ’ಯಲ್ಲಿ ದೇಸಿ ತಂದರು. ಪ್ರತಿ ಹಾಡನ್ನು ಕಂಪೋಸ್ ಮಾಡುವಾಗಲೂ ‘ಇದು ನನ್ನ ಮೊದಲ ಗೀತೆ’ಎಂದು ಕೊಂಡು ಹೊಸತನ ತರಲು ಪ್ರಯತ್ನಿಸೋದೆ ಅವರ ವಿಶೇಷ  ಎನ್ನಿಸಿಕೊಂಡಿದೆ. ‘ಆಕಸ್ಮಿಕ’ ಚಿತ್ರದಲ್ಲಿ ಉದಯಶಂಕರ್ ಅವರಿಗೆ ಮಿಸಲಿಟ್ಟ ಗೀತೆ ಕೊನೆಕ್ಷಣದಲ್ಲಿ ಹಂಸಲೇಖ ಅವರ ಪಾಲಿಗೆ ಬಂದಿತು.  ಹತ್ತೇ ನಿಮಿಷದಲ್ಲಿ ಹಾಡು ಸಿದ್ದವಾಯಿತು. ಆದರೆ ಓಕೆ ಆಗಲಿಲ್ಲ. ಹಂಸಲೇಖ ಸೀದಾ ರಾಜ್ ಕುಮಾರ್ ಅವರ ಮನೆಗೆ ಹೋದರು ಅಣ್ಣಾವ್ರಿಗೇ ಹಾಡನ್ನು ತೋರಿಸಿದರು.ಅವರು ಅದನ್ನು ನೋಡಿ ಕುಣಿದಾಡಿ ಬಿಟ್ಟರು. ಮಧ್ಯಾಹ್ನ ಊಟ ಮುಗಿಸಿ ಮಲಗಲು ಸಿದ್ದರಾಗಿದ್ದವರು. ಕೂಡಲೇ ಚಾಮುಂಡೇಶ್ವರಿ ಸ್ಟುಡಿಯೋಕ್ಕೆ ಬಂದು ಹಾಡಿಯೇ ಬಿಟ್ಟರು. ಹೀಗೆ ಸೃಷ್ಟಿಯಾದ ‘ಹುಟ್ಟಿದರೆ ಕನ್ನಡ ನಾಡಲ್ಲಿ’ ಕನ್ನಡದ ನಾಡಗೀತೆ ಅನ್ನುವಷ್ಟು ಜನಪ್ರಿಯವಾಯಿತು. ಇಷ್ಟಲ್ಲಾ ನೆನಪಾಗಲು ಕಾರಣ ಇನ್ನೊಂದು. ಹಂಸಲೇಖ ಅವರ ಜನ್ಮದಿನ (ಜೂನ್ 23) ನಿನ್ನೆಯಷ್ಟೇ ಆಗಿದೆ. ಈ ವರ್ಷ ತಮ್ಮ ನೆನಪುಗಳನ್ನು ದಾಖಲಿಸುವ ಕಾರ್ಯಕ್ಕೆ ಅವರು ಚಾಲನೆ ನೀಡಿದ್ದಾರೆ, ಅದು ಕೇವಲ ವೈಯಕ್ತಿಕ ನೆನಪುಗಳಲ್ಲಿ ಕನ್ನಡ ಚಿತ್ರರಂಗ ಕನ್ನಡ ನಾಡಿನಲ್ಲಿ ನೆಲೆ ಕಂಡು ಕೊಂಡ ಚರಿತ್ರೆ. ‘ತವರಿನಲ್ಲಿ ಚಂದನ ವನ’ ಅನ್ನೋದು ಪುಸ್ತಕದ ಶೀರ್ಷಿಕೆ. ಇಲ್ಲಿ ಕೂಡ ಹಂಸಲೇಖ ಡಿಫರೆಂಟ್..!

Leave a Reply