ಶಕ್ತಿಪ್ರದರ್ಶನ ಸ್ವರೂಪ ಪಡೆಯುತ್ತಿರುವ ಬಂಡಾಯ, ಡಿಕೆಶಿ-ದಿನೇಶ್ ಗೆ ಸಂಧಾನ ಹೊಣೆ, ಮಲಪ್ರಭಾ ನಾಲೆ ಟೆಂಡರ್ ಭಾರೀ ಅಕ್ರಮ ಅಂದ್ರು ಶೆಟ್ಟರ್

ಸಾಧನಾ ಮ್ಯೂಸಿಕ್ ಶಾಲೆಯ ಗಾಯಕಿ ಡಾ.ಸಂಧ್ಯಾರಾವ್ ಅವರ ಕಂಠದಲ್ಲಿ ಮೂಡಿಬಂದಿರುವ ಹಾಡುಗಳ ‘ಸಂಧ್ಯಾ’ ಸಿಡಿ ಬಿಡುಗಡೆ ಮಾಡಿದ ಕವಿ ಬಿ.ಆರ್ ಲಕ್ಷ್ಮಣ ರಾವ್ ಹಾಗೂ ಖ್ಯಾತ ಗಾಯಕಿ ಮಂಜುಳಾ ಗುರುರಾಜ್.

ಡಿಜಿಟಲ್ ಕನ್ನಡ ಟೀಮ್:

ಶಕ್ತಿಪ್ರದರ್ಶನ ಸ್ವರೂಪ ಪಡಿತಿದೆ ಕಾಂಗ್ರೆಸ್ ಬಂಡಾಯ

ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಸ್ಫೋಟಗೊಂಡಿರುವ ಬಂಡಾಯ ಶಕ್ತಿಪ್ರದರ್ಶನ ಸ್ವರೂಪ ಪಡೆಯುತ್ತಿದೆ. ಭಿನ್ನರು ನಾಯಕತ್ವಕ್ಕಾಗಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರತ್ತ ನೋಡುತ್ತಿದ್ದರೆ, ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಪಕ್ಷದ ರಾಜ್ಯ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ನಡೆಸುತ್ತಿರುವ ಸಂಧಾನ ಮಾತುಕತೆಗಳು ನಿರೀಕ್ಷಿತ ಫಲ ಕೊಟ್ಟಿಲ್ಲ.

ಮೊದಲಿಗೆ ಸಿದ್ದರಾಮಯ್ಯ ಅವರ ಸುತ್ತ ತಿರುಗುತ್ತಿದ್ದ ಬಂಡಾಯದ ಸೆಲೆ ಇದೀಗ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಸುತ್ತಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೂಲಕ ವರಿಷ್ಠರಿಗೆ ಅಹವಲು ಸಲ್ಲಿಸಲು ಭಿನ್ನರು ನಿರ್ಧರಿಸಿದ್ದಾರೆ. ಮುಂಬೈಯಲ್ಲಿರುವ ಕೃಷ್ಣ ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೃಷ್ಣ ಅವರ ಜತೆ ಮಾತುಕತೆ ನಂತರ ಮುಂದಿನ ನಡೆ ನಿರ್ಧಾರವಾಗುವುದು ಎಂದು ಭಿನ್ನರ ಪಾಳೆಯದ ಖಮರುಲ್ ಇಸ್ಲಾಂ ತಿಳಿಸಿದ್ದಾರೆ.

ವಿಧಾನಮಂಡಲ ಅಧಿವೇಶನ ನಡೆಯುವ ಜುಲೈ 4 ರಂದು ಶಕ್ತಿ ಪ್ರದರ್ಶನಕ್ಕೂ ಭಿನ್ನರು ನಿರ್ಧರಿಸಿದ್ದು, ಅಂದು ಬೆಳಗ್ಗೆ ಸಭೆ ಸೇರಿ ಕಾರ್ಯತಂತ್ರ ರೂಪಿಸಲಿದ್ದಾರೆ. ಅಧಿವೇಶನದಲ್ಲಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಇರಿಸು-ಮುರಿಸು ಉಂಟು ಮಾಡುವುದು ಅವರ ಉದ್ಧೇಶ.

ಈ ಮಧ್ಯೆ ಭಿನ್ನಮತ ಶಮನಕ್ಕೆ ಸಿದ್ದರಾಮಯ್ಯ ನಾನಾ ಸರ್ಕಸ್ ಮಾಡುತ್ತಿದ್ದು, ಶ್ರೀನಿವಾಸ ಪ್ರಸಾದ್ ಮತ್ತು ಅಂಬರೀಷ್ ಮನವೊಲಿಕೆ ಹೊಣೆಯನ್ನು ಶಿವಕುಮಾರ್, ದಿನೇಶ್ ಗುಂಡೂರಾವ್ ಅವರಿಗೆ ವಹಿಸಿದ್ದಾರೆ.

ಸಿದ್ದರಾಮಯ್ಯ ಅಂಜುಬುರುಕ ಸಿಎಂ; ಮಾಲಕರಡ್ಡಿ

ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ಗಡ ಗಡ ನಡಗುತ್ತಾರೆ. ಅವರೊಬ್ಬ ಅಂಜುಬುರುಕ ಮುಖ್ಯಮಂತ್ರಿ ಎಂದು ಹಿರಿಯ ನಾಯಕ ಡಾ. ಎ.ಬಿ. ಮಾಲಕರಡ್ಡಿ ಕಿಡಿಕಾರಿದ್ದಾರೆ. ಖರ್ಗೆ ಅವರನ್ನು 1972 ರಲ್ಲಿ ರಾಜಕಾರಣಕ್ಕೆ ಕರೆತಂದವನು ನಾನು. ಅವರ ಮಕ್ಕಳು ಅಧಿಕಾರ ಅನುಭವಿಸಬೇಕು. ನಾವು ಗುಲಾಮರಂತೆ ಇರಬೇಕಾ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಪರ ರಿಜ್ವಾನ್ ಬ್ಯಾಟಿಂಗ್

ಇನ್ನೊಂದೆಡೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಆಡಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೇಲ್ಮನೆ ಸದಸ್ಯ ರಿಜ್ವಾನ್ ಅರ್ಶದ್, ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರಿಗೆ ಮಾಡೋಕೆ ಬೇರೆ ಕೆಲಸವಿಲ್ಲ. ಭಿನ್ನಮತೀಯರು ಕರೆಯದಿದ್ದರೂ ಮೇಲೆ ಬಿದ್ದು ಹೋಗುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ, ಅದೂ ರಂಜಾನ ಮಾಸದಲ್ಲಿ ದಿನಕ್ಕೆ ಐದು ಬಾರಿ ನಮಾಜು ಮಾಡಿಕೊಂಡು ಇರಬೇಕಾದವರು ಬೀದಿಗೆ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.

ಅಧಿಕಾರದ ಬೆಲೆ ಎಲ್ಲರಿಗೂ ಗೊತ್ತಿದೆ; ಡಿಕೆಶಿ

ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಅಧಿಕಾರ ಕಳೆದುಕೊಂಡರೆ ಏನಾಗುತ್ತದೆ ಎಂಬುದರ ಬಗ್ಗೆ ನಾವು ಪಾಠ ಕಲಿತಿದ್ದೇವೆ. ಕೆಲವರಿಗೆ ನೋವಾಗಿದೆ, ನಮ್ಮ ಮುಂದೆ 2018 ರ ಚುನಾವಣೆ ಇದೆ. ಅದಕ್ಕಾಗಿ ತಯಾರಾಗಬೇಕಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೇ ಸಾಕು ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ನಾಯಕರು, ಪಕ್ಷದ ಶಿಸ್ತಿನ ಸಿಪಾಯಿ. ಅವರ ಬದ್ಧತೆ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಯಾರಿಗೂ ಇಲ್ಲ ಎಂದರು.

ಸಿದ್ದರಾಮಯ್ಯನವರು ಕಾಂಗ್ರೆಸ್ಸಿನ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದಾರೆ. ಹೈಕಮಾಂಡ್ ನಿರ್ದೇಶನದಂತೆ ಸಂಪುಟ ಪುನಾರಚನೆ ಮಾಡಿದ್ದಾರೆ. ಕೆಲ ಹಿರಿಯರಿಗೆ ನೋವಾಗಿದೆ. ಮಕ್ಕಳು ನೋವಾದಾಗ ಮನೆಯವರ ಬಳಿ ಹೇಳಿಕೊಳ್ಳದೆ, ಮತ್ಯಾರ ಬಳಿ ಹೇಳಿಕೊಳ್ಳಬೇಕು ಎಂದು ಮರುಪ್ರಶ್ನಿಸಿದರು.

ಒಕ್ಕಲಿಗ ಸಮುದಾಯದವರು ಆತಂಕ ಪಡುವ ಅಗತ್ಯವಿಲ್ಲ. ನನ್ನನ್ನೂ ಕೂಡ ಸಂಪುಟದಿಂದ ಹೊರಗಿಡಲಾಗಿತ್ತು. ಎಸ್.ಎಂ.ಕೃಷ್ಣ ಅವರನ್ನೂ ಕೇಂದ್ರ ಸಂಪುಟದಿಂದ ಕೈಬಿಡಲಾಗಿತ್ತು. ಆಗ ಅವರು ಯಾವ ಅಸಮಾಧಾನವನ್ನೂ ವ್ಯಕ್ತಪಡಿಸಿರಲಿಲ್ಲ. ಯಾರನ್ನೂ ಟೀಕೆ ಮಾಡಿರಲಿಲ್ಲ. ಸೂಕ್ತ ಸಮಯದಲ್ಲಿ ಎಲ್ಲಾ ಸಮುದಾಯವರಿಗೂ ಪ್ರಾತಿನಿಧ್ಯ ಸಿಗುತ್ತದೆ. ಬರೀ ಒಕ್ಕಲಿಗ ಸಮುದಾಯಕ್ಕಷ್ಟೇ ಅಲ್ಲ, ಬೋವಿ, ಕೋಲಿ, ಬಿಲ್ಲವ ಬಹಳಷ್ಟು ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದರು.

ರಮ್ಯಾ ಅಥವಾ ಎಂ. ಕೃಷ್ಣಪ್ಪ ಅವರಲ್ಲಿ ಯಾರು ಸಂಪುಟ ಸೇರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಶಾಸಕರಾದವರು ಸಂಪುಟ ಸೇರುತ್ತಾರೆ. ರಮ್ಯಾ ಅವರನ್ನು ಸಂಸದರನ್ನಾಗಿ ನೋಡಬಯಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು. ರಮ್ಯಾ ಮೇಲ್ಮನೆ ಪ್ರವೇಶ ಸಾಧ್ಯತೆ ಕ್ಷೀಣ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

ಅತೃಪ್ತ 40ಕ್ಕೂ ಹೆಚ್ಚು ಶಾಸಕರು ಶ್ರೀನಿವಾಸ ಪ್ರಸಾದ್ ಅವರ ಜತೆ ಗುರುತಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ನಿಮ್ಮ ಗ್ರಹಿಕೆ ತಪ್ಪು. ಅವರ ಜೊತೆ 123 ಶಾಸಕರು ಇದ್ದೇವೆ. ಅವರು ನಮ್ಮ ಹಿರಿಯ ನಾಯಕರು’ ಎಂದರು.

ಎಸ್.ಎಂ.ಕೃಷ್ಣ ಅವರು ಅತೃಪ್ತ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆಯೇ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಸಾಕಷ್ಟು  ಶಾಸಕರು, ಕಾಂಗ್ರೆಸ್ ಮುಖಂಡರು ಎಸ್.ಎಂ.ಕೃಷ್ಣ ಅವರ ಬಳಿ ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ. ಅವರು ಹಿರಿಯ ಮುತ್ಸದ್ಧಿ. ಅವರ ಹೆಸರು ಎಳೆದು ತರುವುದು ಬೇಡ. ಹಾಳು ಮಾಡುವುದು ಬೇಡ ಎಂದರು.

ಮಲಪ್ರಭಾ ನಾಲೆ ನವೀಕರಣದಲ್ಲಿ ಅಕ್ರಮ; ಶೆಟ್ಟರ್ ಆರೋಪ

ಮಲಪ್ರಭಾ ಎಡದಂಡೆ ಮತ್ತು ಬಲದಂಡೆ ನವೀಕರಣ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿ 300 ರಿಂದ 400 ಕೋಟಿ ರೂ. ಮೊತ್ತದ ಬೃಹತ್ ಅವ್ಯವಹಾರ ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

963 ಕೋಟಿ ರೂ. ಬೃಹತ್ ಮೊತ್ತದ ಟೆಂಡರ್ ಅನ್ನು ಒಂದೇ ಪ್ಯಾಕೇಜ್ ಅಡಿ ಒಬ್ಬನೇ ವ್ಯಕ್ತಿಗೆ ಕೊಡಲು ವ್ಯವಸ್ಥಿತ ತಂತ್ರ ನಡೆಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿವ ಮೊದಲೇ ಆ ವ್ಯಕ್ತಿ ಯಂತ್ರೋಪಕರಣ ಜತೆ ಕಾಮಗಾರಿ ಸ್ಥಳದಲ್ಲಿ ನೆಲೆಯೂರಿದ್ದಾನೆ ಎಂದು ದೂರಿದರು.

ಈ ಮೊದಲು ಇದೇ ಕಾಮಗಾರಿ ಜತೆಗೆ ರೈತರ ಹೊಲಗಳಿಗೆ ನೀರು ಹಾಯಿಸುವ ಉಪಕಾಲುವೆ ಅಧುನೀಕರಣ ಸೇರಿ 943 ಕೋಟಿ ರೂ.ಗೆ ಟೆಂಡರ್ ನಿಗದಿಮಾಡಿ, ತುಂಡು ಗುತ್ತಿಗೆ ಕರೆಯಲಾಗಿತ್ತು. ಆದರೆ, ಇದೀಗ ಉಪಕಾಲುವೆ ಹೊರತುಪಡಿಸಿದ ಪ್ರಮುಖ ಕಾಮಗಾರಿವೊಂದಕ್ಕೆ 963 ಕೋಟಿ ರೂ. ನಿಗದಿ ಮಾಡಿ ಒಂದೇ ಟೆಂಡರ್ ಕರೆಯಲಾಗಿದೆ ಎಂದರು.

ಇದರ ಹಿಂದೆ ಕೋಟ್ಯಂತರ ರೂ. ಹಣ ಲಪಟಾಯಿಸುವ ಉದ್ದೇಶವಿದೆ. ಇದೇ ಟೆಂಡರ್ ಗೆ ಸಹಿ ಹಾಕುವುದಿಲ್ಲ ಎಂದು ಮುಖ್ಯ ಎಂಜಿನಿಯರ್, ಆಧೀಕ್ಷಕರ ಎಂಜಿನಿಯರ್ ಹೇಳಿದ್ದರಿಂದ ಅವರನ್ನು ವರ್ಗಾವಣೆ ಮಾಡಿ ಬೇರೊಬ್ಬರನ್ನು ನೇಮಕ ಮಾಡಿ, ಸಹಿ ಹಾಕಿಸಲಾಗಿದೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು  ಈ ಅವ್ಯವಹಾರಕ್ಕೆ ಕಾರಣವಾಗಿದ್ದು ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಅರ್ಕಾವತಿ ಡಿ ನೋಟಿಫಿಕೇಷನ್ ಅವ್ಯವಹಾರ ಮುಚ್ಚಿ ಹಾಕುವ ಪ್ರಯತ್ನ ನಡೆದಿದ್ದು, ಆದಕ್ಕೆ ಸಂಬಂಧಿಸಿದ 50 ಕಡತ ನಾಪತ್ತೆ ಇದಕ್ಕೆ ಉದಾಹರಣೆ. ಇದರ ಹಿಂದೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಡಿಎ ಆಯುಕ್ತರಾಗಿದ್ದ ಶ್ಯಾಂಭಟ್ ಇದ್ದಾರೆ. ಅವರು ಬೇಕೆಂತಲೇ ಇದನ್ನು ನಾಪತ್ತೆ ಮಾಡಿದ್ಧಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ಸರ್ಕಾರದಲ್ಲಿ ಕಡತ ನಾಪತ್ತೆ ಭಾಗ್ಯ ಜೋರಾಗಿದೆ. ಹಿಂದೆ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾ ಜ್ ಇಲಾಖೆಯಲ್ಲೂ ಇದೇ ರೀತಿ ಅವ್ಯವಹಾರದ ಕಡತ ನಾಪತ್ತೆಯಾಗಿದ್ದವು. ಅರ್ಕಾವತಿ ಡಿ ನೋಟಿಫಿಕೇಷನ್ ಕಡತ ನಾಪತ್ತೆ ಬಗ್ಗೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ಅಧಿವೇಶನದಲ್ಲಿ ಹೋರಾಟ ನಡೆಸಲಿದೆ. ಅಗತ್ಯವಾದರೆ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಹೇಳಿದರು.

Seer Shivakumara Swamiji admitted BGS Global Hospital in Bengaluru on Friday.

ಸಿದ್ದಗಂಗಾಮಠದ ಶ್ರೀಗಳಾದ ಡಾ.ಶಿವಕುಮಾರ ಸ್ವಾಮಿಜಿ ಅವರ ಆರೋಗ್ಯದಲ್ಲಿ ಶುಕ್ರವಾರ ಏರುಪೇರಾದ ಪರಿಣಾಮ ಅವರನ್ನು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಸೇರಿಸಲಾಯಿತು. ಸ್ವತಃ  ಶ್ರೀಗಳು ಕಾರಿನಿಂದ ಇಳಿದು ಆಸ್ಪತ್ರೆಯೊಳಗೆ ನಡೆದುಕೊಂಡು ಹೋದರು. ಶ್ರೀಗಳು ಆಯಾಸಗೊಂಡಿದ್ದು, ಶೀತದ ಕಾರಣ ಸ್ವಲ್ಪ ಜ್ವರ ಬಂದಿದೆ. ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೇ ಆತಂಕವಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.

 

ಹೊರಟ್ಟಿಗೆ ಮೇಲ್ಮನೆ ಸಭಾಪತಿ ಸ್ಥಾನ; ದತ್ತಾ ಮನವಿ

ವಿಧಾನ ಪರಿಷತ್ತಿಗೆ ಏಳನೇ ಬಾರಿ ಆಯ್ಕೆಯಾಗಿರುವ ಪರಿಪಕ್ವ ರಾಜಕಾರಣಿ ಬಸವರಾಜ ಹೊರಟ್ಟಿ ಅವರು ಸಭಾಪತಿ ಆಗಲು ಕಾಂಗ್ರೆಸ್ ಮತ್ತು ಬಿಜೆಪಿ ಸಹಕರಿಸಬೇಕು ಎಂದು ಜೆಡಿಎಸ್ ನ ವೈ.ಎಸ್.ವಿ. ದತ್ತಾ ಮನವಿ ಮಾಡಿದ್ದಾರೆ.

ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿ, ಸತ್ ಸಂಪ್ರದಾಯದಂತೆ ಹೊರಟ್ಟಿ ಪಕ್ಷಾತೀತ ನೇಮಕಕ್ಕೆ ಪರೋಕ್ಷ ಸಹಕಾರ ನೀಡಬೇಕು. ಮಾಜಿ ಪ್ರಧಾನಿ ದೇವೇಗೌಡರ ಅಣತಿಯಂತೆಯೇ ನಾನು ಈ ಹೇಳಿಕೆ ನೀಡುತ್ತಿದ್ದೇನೆ. ಇದು ವೈಯಕ್ತಿಕವಲ್ಲ. ಪಕ್ಷದ ನಿರ್ಧಾರ ಎಂದು ಹೇಳುವ ಮೂಲಕ ಈ ಮೊದಲು ದೇವೇಗೌಡರ ಆರ್ಶೀವಾದ ನನಗೇ ಎಂದು ಹೇಳಿದ್ದ ಶಂಕರಮೂರ್ತಿ ಅವರಿಗೆ ಟಾಂಗ್ ನೀಡಿದರು.

ಬಸವರಾಜ ಹೊರಟ್ಟಿ ಅವರು ವೈಯಕ್ತಿಕವಾಗಿ ಸಭಾಪತಿ ಸ್ಥಾನ ಬೇಡ ಎಂದು ಹೇಳಿದ್ದಾರೆ. ಆದರೆ, ಹಿರಿಯ ರಾಜಕಾರಣಿಯಾಗಿ ಎಲ್ಲರೂ ಒಪ್ಪಿ ಅವರನ್ನು ಆ ಸ್ಥಾನಕ್ಕೆ ತಂದರೆ ಸತ್ಸಂಪ್ರದಾಯ ಮುಂದುವರಿಯಲಿದೆ ಎಂದರು.

ಭಾರತಕ್ಕೆ ಎನ್ ಎಸ್ಜಿ ಸದಸ್ಯತ್ವ ಕೈತಪ್ಪಿದ್ರು ಎಸ್  ಸಿ ಒ ಸದಸ್ಯತ್ವ ಸಿಗ್ತಿದೆ

ಭಾರತಕ್ಕೆ ಪರಮಾಣು ಪೂರೈಕೆ ಸಮೂಹದ ಸದಸ್ಯತ್ವ ಕೈಗೆಟುಕಲಿಲ್ಲ. ಆದ್ರೆ, ಎಸ್ ಸಿ ಒ ಸದಸ್ಯತ್ವ ಸಿಕ್ಕಿದ್ದು ಭಾರತದ ನಿರಾಸೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ. ಎನ್ಎಸ್ಜಿ ಸದಸ್ಯತ್ವಕ್ಕೆ ಭಾರತ ಅಂತಿಮ ಕ್ಷಣದವರೆಗೂ ಎಲ್ಲ ರೀತಿಯ ಕಸರತ್ತು ನಡೆಸಿದರೂ ಚೀನಾ ಮಾತ್ರ ತನ್ನ ಒಪ್ಪಿಗೆ ನೀಡಲಿಲ್ಲ. ಪರಮಾಣು ಪ್ರಸರಣ ವಿರೋಧ ಒಪ್ಪಂದಕ್ಕೆ ಸಹಿ ಹಾಕದೇ ಭಾರತಕ್ಕೆ ಸದಸ್ಯತ್ವ ನೀಡುವುದು ಕಾನೂನು ಬಾಹೀರ ಎಂದು ಚೀನಾ ತನ್ನ ನಿರ್ಧಾರ ಸಮರ್ಥಿಸಿಕೊಂಡಿದೆ.

ಎನ್ಎಸ್ಜಿ ಸದಸ್ಯತ್ವ ಗಿಟ್ಟಿಸಿಕೊಳ್ಳಲೆಂದೇ ಪ್ರಧಾನಿ ತಾಶ್ಕೆಂಟ್ ಗೆ ಪ್ರಯಾಣ ಬೆಳೆಸಿದ್ರೂ ಪ್ರಯತ್ನ ಕೈಗೂಡಲಿಲ್ಲ. ಆದರೆ, ಪ್ರಧಾನಿಯವರ ಈ ಭೇಟಿ ವೇಳೆ ಶಾಂಘೈ ಸಹಕಾರ ಸಂಸ್ಥೆ (ಶಾಂಘೈ ಕೋಆಪರೇಷನ್ ಆರ್ಗನೈಸೇಷನ್) ನಲ್ಲಿ ಭಾರತದ ಪೂರ್ಣ ಪ್ರಮಾಣದ ಸದಸ್ಯತ್ವಕ್ಕೆ ಪ್ರಕ್ರಿಯೆ ಶುರುವಾಗಿರೋದು ಸಮಾಧಾನದ ಸಂಗತಿ. ಎಸ್ ಸಿ ಒ ಸಭೆಯಲ್ಲಿ ಮೋದಿ ಹೇಳಿದಿಷ್ಟು:

‘ಈ ಸದಸ್ಯತ್ವದಿಂದ ಭಾರತ ಅತ್ಯುತ್ತಮ ಅನುಕೂಲಗಳನ್ನು ಪಡೆಯಲಿದೆ. ಇಂಧನ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಜತೆ ಭಾರತದ ಸದೃಢ ಆರ್ಥಿಕತೆ ಮತ್ತು ವಿಶಾಲ ಮಾರುಕಟ್ಟೆಯಿಂದ ಆರ್ಥಿಕ ಪ್ರಗತಿಗೆ ಹಾದಿ ನಿರ್ಮಾಣವಾಗಿದೆ. ಈ ಸದಸ್ಯತ್ವವನ್ನು ಬಳಸಿಕೊಂಡು ಭಾರತ ಭದ್ರತೆಯನ್ನು ಬಳಸಿ ಈ ಪ್ರದೇಶದ ಏಳಿಗೆಗೆ ಕಾರ್ಯ ನಿರ್ವಹಿಸಲಿದೆ. ಈ ಸದಸ್ಯತ್ವದಿಂದ ತೀವ್ರವಾದ, ಹಿಂಸೆ ಮತ್ತು ಉಗ್ರವಾದ ವಿರುದ್ಧ ಹೋರಾಡಿ ಆರ್ಥಿಕ ಬೆಳವಣಿಗೆ ಸಾಧಿಸಲು ಸಹಕಾರಿಯಾಗಲಿದೆ.’

ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ

ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಬ್ರಿಟನ್ ಮತ ಹಾಕಿದೆ. ಇದರೊಂದಿಗೆ ಪ್ರಬಲ ಆರ್ಥಿಕ ನೀತಿ ಹೊಂದುವುದು ಹಾಗೂ ವಲಸಿಗರ ಸಮಸ್ಯೆ ತಡೆಯಲು ಪ್ರಬಲ ಗಡಿ ನಿಯಂತ್ರಣ ಸಾಧಿಸುವ ಪ್ರಯತ್ನ ಈ ನಿರ್ಧಾರದಲ್ಲಿದೆ.

ಗುರುವಾರ ನಡೆದ ಮತದಾನದಲ್ಲಿ ಶೇ.52 ರಷ್ಟು ಜನ ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಬಯಸಿದರೆ, ಶೇ. 48 ರಷ್ಟು ಜನ ಒಕ್ಕೂಟದಲ್ಲೇ ಮುಂದುವರಿಯಲು ಬಯಸಿದ್ದರು. ಬ್ರಿಟನ್ ನ ಈ ನಿರ್ಧಾರದಿಂದ ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ಯುರೋಪಿಯನ್ ಒಕ್ಕೂಟದ ಒಗ್ಗಟ್ಟು ಛಿದ್ರವಾಗಿದೆ. ಅಲ್ಲದೇ 28 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟ ಈಗ 27ಕ್ಕೆ ಇಳಿದಿದೆ.

ಬ್ರೆಕ್ಸಿಟ್ ಜನಮತ ಗಣನೆಯಲ್ಲಿ ಪ್ರಧಾನಿ ಡೇವಿಡ್ ಕೆಮರೂನ್ ಯುರೋಪಿಯನ್ ಒಕ್ಕೂಟದಿಂದ ಹೊರಹೋಗದಿರುವ ಅಭಿಮತ ವ್ಯಕ್ತಪಡಿದ್ದರು. ಆದರೆ, ಜನರ ಈ ತೀರ್ಮಾನ ಪ್ರಧಾನಿಯ ಜನಪ್ರಿಯತೆ ಮಂಕಾಗಿಸಿದೆ. ಈ ಬೆಳವಣಿಗೆಯಿಂದ ಕೆಮರೂನ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವ ಒತ್ತಡಕ್ಕೆ ಸಿಲುಕಿದ್ದಾರೆ.

ಇದೇ ವರ್ಷ ವಿದೇಶದಲ್ಲಿ ಮಿನಿ ಐಪಿಎಲ್ ಆಯೋಜನೆಗೆ ಬಿಸಿಸಿಐ ತೀರ್ಮಾನ

ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯನ್ನು ರದ್ದುಗೊಳಿಸಿದ ನಂತರ ಮಿನಿ ಐಪಿಎಲ್ ಟಿ20 ಟೂರ್ನಿಗೆ ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿದೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿರುವುದಿಷ್ಟು:

‘ಸೆಪ್ಟೆಂಬರ್ ತಿಂಗಳಲ್ಲಿ ಬಿಸಿಸಿಐ ಮಿನಿ ಐಪಿಎಲ್ ಅಥವಾ ವಿದೇಶಿ ಐಪಿಎಲ್ (ಐಪಿಎಲ್ ಓವರ್ಸೀಸ್) ಟೂರ್ನಿಯನ್ನು ಆಯೋಜಿಸಲು ಇಚ್ಛಿಸಿದೆ. ಈ ಟೂರ್ನಿಯಲ್ಲಿ ಐಪಿಎಲ್ ನ ಎಲ್ಲ 8 ತಂಡಗಳು ಭಾಗವಹಿಸಲಿವೆ. ಕೇವಲ ಎರಡು ವಾರಗಳಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಐಪಿಎಲ್ ನಷ್ಟು ಹೆಚ್ಚಿನ ಪಂದ್ಯಗಳನ್ನಾಡಿಸುವುದಿಲ್ಲ. ಇಲ್ಲಿ ತವರು ಹಾಗೂ ಹೊರ ಅಂಗಣದ ಪಂದ್ಯಗಳಿರುವುದಿಲ್ಲ.’

ಇದೇ ಸಭೆಯಲ್ಲಿ ಅನಿಲ್ ಕುಂಬ್ಳೆ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಕ ಮಾಡಿದ್ದನ್ನು ಅಂಗೀಕರಿಸಲಾಗಿದೆ. ಇನ್ನು ಕಿರಿಯರ ಕ್ರಿಕೆಟ್ ಗೆ ಸಂಬಂಧಿಸಿದಂತೆ ಒಬ್ಬ ಯುವ ಆಟಗಾರ ಕೇವಲ ಒಂದು ಬಾರಿ ಮಾತ್ರ 19 ವರ್ಷದೊಳಗಿನ ವಿಶ್ವಕಪ್ ನಲ್ಲಿ ಆಡಬಹುದು. ಈ ವರ್ಗದಲ್ಲಿ ಎರಡು ವರ್ಷಗಳ ಕಾಲ ಮಾತ್ರ ದೇಶವನ್ನು ಪ್ರತಿನಿಧಿಸಲು ಸಾಧ್ಯ ಎಂಬ ಬದಲಾವಣೆಗೂ ಒಪ್ಪಿಗೆ ನೀಡಲಾಗಿದೆ.

ಬೆಳ್ಳಿಗೆ ತೃಪ್ತರಾದ್ರು ವಿಕಾಸ್ ಮತ್ತು ಮನೋಜ್

ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ಯ ವಿಶ್ವ ಅರ್ಹತಾ ಟೂರ್ನಿಯಲ್ಲಿ ಭಾರತದ ಬಾಕ್ಸರ್ ಗಳಾದ ವಿಕಾಸ್ ಕೃಷ್ಣನ್ (75 ಕೆ.ಜಿ ವಿಭಾಗ) ಮತ್ತು ಮನೋಜ್ ಕುಮಾರ್ (64 ಕೆ.ಜಿ ವಿಭಾಗ) ಬೆಳ್ಳಿ ಪದಕಕ್ಕೆ ತೃಪ್ತರಾದರು. ನಿನ್ನೆಯಷ್ಟೇ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸುವ ಮೂಲಕ ಈ ಇಬ್ಬರು ಬಾಕ್ಸರ್ ಗಳು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಶುಕ್ರವಾರ ನಡೆದ ಉಪಾಂತ್ಯದ ಪಂದ್ಯದಲ್ಲಿ ವಿಕಾಸ್ ಕೃಷ್ಣನ್ ಗಾಯದ ಸಮಸ್ಯೆಯಿಂದ ಪಂದ್ಯದ ಅರ್ಧದಲ್ಲೇ ಹೊರ ನಡೆದರು. ಉಳಿದಂತೆ 81 ಕೆ.ಜಿ ವಿಭಾಗದಲ್ಲಿ ಸುಮಿತ್ ಸಾಂಗ್ವಾನ್ ಸೋಲನುಭವಿಸಿ ಒಲಿಂಪಿಕ್ಸ್ ಅವಕಾಶ ಕೈಚೆಲ್ಲಿದರು.

Leave a Reply