ಹವಾಮಾನ ಇಲಾಖೆಯ ಮಳೆ ಲೆಕ್ಕಾಚಾರ ಪ್ರತಿಬಾರಿ ತಪ್ಪಾಗುತ್ತಿರೋದೇಕೆ?

Rain hit in Bengaluru on Wednesday.

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ಸಾಲಿನ ಮುಂಗಾರು ಮಳೆ ಪ್ರಮಾಣದ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದ ಭವಿಷ್ಯ ನಿಜವಾಗಿದ್ದರೆ ಇಷ್ಟೊತ್ತಿಗಾಗಲೇ ದೇಶದಾದ್ಯಂತ ಮುಂಗಾರು ಆವರಿಸಬೇಕಿತ್ತು. ಆದರೆ, ಮುಂಗಾರು ಇನ್ನು ಸಂಪೂರ್ಣವಾಗಿ ದೇಶದ ಎಲ್ಲ ಭಾಗಗಳಿಗೂ ವಿಸ್ತರಿಸಿಲ್ಲ. ಕೆಲವೆಡೆ ಮಳೆ ಬೀಳುತ್ತಿದೆಯಾದರೂ ಮತ್ತೆ ಕೆಲವೆಡೆ ಮಳೆ ಕೊರತೆ ಎದುರಾಗಿದೆ.

ಕಳೆದ ಎರಡು ವರ್ಷಗಳಲ್ಲಿ ನಿರೀಕ್ಷಿತ ಮಳೆ ಆಗಿರಲಿಲ್ಲ. ಹೀಗಾಗಿ ಪ್ರಸಕ್ತ ವರ್ಷ ಸರಾಸರಿಗಿಂತ ಉತ್ತಮ ಮಳೆಯಾಗುತ್ತದೆ ಎಂಬ ಹವಾಮಾನ ಇಲಾಖೆ ಭರವಸೆ ಎಲ್ಲರಲ್ಲೂ ನೆಮ್ಮದಿ ತಂದಿತ್ತು. ಆದರೆ, ಇಲ್ಲಿಯವರೆಗೂ ಹವಾಮಾನ ಇಲಾಖೆಯ ಲೆಕ್ಕಾಚಾರದಂತೆ ಮಳೆ ಆಗಿಲ್ಲ.

ಹರ್ಯಾಣ, ದೆಹಲಿ, ಪಂಜಾಬ್ ಮತ್ತು ಉತ್ತರಪ್ರದೇಶಗಳಲ್ಲಿ ಮುಂಗಾರು ಪ್ರವೇಶವಾಗಲು ಇನ್ನು 3-4 ದಿನಗಳು ಬೇಕಿದೆ. ದೇಶದ ಪಶ್ಚಿಮ ಮತ್ತು ಕೇಂದ್ರ ಭಾಗಗಳಲ್ಲಿ ಮುಂಗಾರು ಪ್ರವೇಶವಾಗಿದೆಯಾದರು ಕಳೆದ ವಾರಕ್ಕಿಂತ ಈ ವಾರ ಮಳೆ ಪ್ರಮಾಣ ಕುಸಿತ ಕಂಡಿದೆ. ಶೇ.23 ರಷ್ಟಿದ್ದ ಮಳೆ ಪ್ರಮಾಣ ಶೇ.17 ಕ್ಕೆ ಇಳಿದಿದೆ. ಈಶಾನ್ಯ ಭಾಗಕ್ಕೆ ಜುಲೈ 1ರ ವೇಳೆಗೆ ಮುಂಗಾರು ಪ್ರವೇಶವಾಗಲಿದ್ದು, ವಾಯುವ್ಯ ಭಾಗದಲ್ಲಿ ಜೂ.26 ರಿಂದ ಜುಲೈ 10 ರ ವೇಳೆಗೆ ಮಳೆ ಪ್ರಮಾಣ ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳುತ್ತಿದೆ.

ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ ಈವರೆಗೂ ಶೇ.24 ರಷ್ಟು ಭಾಗಗಳಲ್ಲಿ ಅಧಿಕ ಮಳೆಯಾಗಿದ್ದು, ಶೇ.31 ರಷ್ಟು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಇನ್ನು ಶೇ. 45 ರಷ್ಟು ಭಾಗಗಳಲ್ಲಿ ಮಳೆ ಪ್ರಮಾಣ ಕುಸಿದಿದೆ. ಇದರೊಂದಿಗೆ ಪ್ರತಿ ಬಾರಿಯೂ ಹವಾಮಾನ ಇಲಾಖೆಯ ಮಳೆ ಭವಿಷ್ಯ ಸುಳ್ಳಾಗಿ ವ್ಯತಿರಿಕ್ತ ಫಲಿತಾಂಶ ಬರುತ್ತಿರೋದು ಸಹಜವಾಗಿ ನಿರಾಸೆ ಮೂಡಿಸಿದೆ.

ಹವಾಮಾನ ಇಲಾಖೆ ಮಳೆ ಪ್ರಮಾಣ ಊಹಿಸಲು ಅನುಸರಿಸೋ ಮಾನದಂಡಗಳನ್ನು ನೋಡುವುದಾದರೆ, 19ನೇ ಶತಮಾನದಲ್ಲಿ ಭಾರತದಲ್ಲಿನ ಮಳೆ ಪ್ರಮಾಣವನ್ನು ಹಿಮಾಲಯದ ಹಿಮ ಪದರದ ಆಧಾರದ ಮೇಲೆ ಲೆಕ್ಕಾಚಾರ ಹಾಕುತ್ತಿದ್ದರು. 20ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ಭೌತಶಾಸ್ತ್ರಜ್ಞ ಗಿಲ್ಬರ್ಟ್ ವಾಲ್ಕರ್ ಹವಾಮಾನ ಇಲಾಖೆ ಸಾರಥ್ಯ ವಹಿಸಿದ ನಂತರ ಫೆಸಿಫಿಕ್ ಸಾಗರದಲ್ಲಿ ಎಲ್ ನಿನೋ ಪರಿಣಾಮವನ್ನು ಕಂಡು ಹಿಡಿದ. ಅದನ್ನು ಭಾರತದ ಮಳೆ ಪ್ರಮಾಣ ಊಹಿಸಲು ಮಾನದಂಡವಾಗಿ ಬಳಸಲಾಯಿತು. ಹಲವು ಅಧ್ಯಯನಗಳ ಪರಿಣಾಮ 1989 ರಿಂದ ಇಲ್ಲಿಯವರೆಗೆ ಹವಾಮಾನ ಇಲಾಖೆ ಒಟ್ಟು 16 ಅಂಶಗಳ ಮೇಲೆ ಮಳೆ ಪ್ರಮಾಣವನ್ನು ಊಹಿಸುತ್ತಿದೆ.

ಈ ಪ್ರಯತ್ನಗಳ ಹೊರತಾಗಿಯೂ ಭಾರತದಲ್ಲಿ ಮಳೆಯ ಬೀಳುವುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.

ಪ್ರತಿ ಬಾರಿಯೂ ಹವಾಮಾನ ಇಲಾಖೆ ಭವಿಷ್ಯ ಏಕೆ ಕೈಕೊಡುತ್ತಿದೆ ಅಂತಾ ನೋಡೊದಾದ್ರೆ. ನಮಗೆ ಸಿಗೋದು ಹಲವು ಅಂಶಗಳು. ಅವೇನಂದ್ರೆ, ಭಾರತದ ಮೂರು ದಿಕ್ಕಿನಲ್ಲೂ ವಿಶಾಲ ಸಮುದ್ರ ಭಾಗವಿರುವ ಪರಿಣಾಮ ಮತ್ತು ಭಾರತದ ಭೂ ಸ್ವರೂಪ ಮುಂಗಾರು ವ್ಯವಸ್ಥೆಯನ್ನು ಸಂಕೀರ್ಣವಾಗಿಸಿರೋದು ಪ್ರಮುಖ ತೊಡಕಾಗಿದೆ. ಅದೇ ರೀತಿ ಭೂಮಿಯ ಮೇಲೆ ಹಾಗೂ ಸಮುದ್ರದ ಬಗೆಗಿನ ಮಾನದಂಡಗಳ ದತ್ತಾಂಶಗಳ ಕೊರತೆ, ವಾತಾವರಣದಲ್ಲಿ ಮೋಡಗಳು ಮಾನ್ಸೂನ್ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಸ್ಪಷ್ಟ ಚಿತ್ರಣದ ಕೊರತೆಯಿಂದ ಭಾರತದಲ್ಲಿ ಮಳೆ ಭವಿಷ್ಯ ಹೇಳೋದು ಕಷ್ಟ ಅಂತಾರೆ ಪಂಡಿತರು.

ಹಾಗಂತ ಕೈಚೆಲ್ಲಿ ಕೂರದ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದಾರೆ. ಈ ಬಗ್ಗೆ ಸಮುದ್ರದ ಒಳಗೆ ಹಾಗೂ ಹೊರಗಿನ ವಾತಾವರಣದ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಸಮುದ್ರಶಾಸ್ತ್ರಜ್ಞರು ಹಾಗೂ ಇತರೆ ವಿಜ್ಞಾನಿಗಳು ರೊಬೋಟ್ ಗಳ ನೆರವಿನೊಂದಿಗೆ ಸಮುದ್ರದ ಆಳಕ್ಕೆ ಸಾಗಿ ಸಂಶೋಧನೆ ನಡೆಸಲು ಮುಂದಾಗಿದ್ದಾರೆ. ಇದರಿಂದ ಮುಂದಿನ ವರ್ಷಗಳಲ್ಲಾದರೂ ಹವಾಮಾನ ಇಲಾಖೆ ನಿರ್ದಿಷ್ಟವಾಗಿ ಮಳೆ ಭವಿಷ್ಯ ಹೇಳುತ್ತದೆಯೇ ಅಂತಾ ಕಾದು ನೋಡಬೇಕು.

Leave a Reply