ತೆಂಗು-ಅಡಿಕೆ ಬೆಳೆಗಾರರ ಬೇಡಿಕೆ ಏನು?, ಅತೃಪ್ತರ ಓಲೈಕೆಗೆ ಅಧಿಕಾರ ಹಂಚಿಕೆಯ ಅಸ್ತ್ರ, ಸಿದ್ರಾಮಯ್ಯರಿಂದಲೇ ರಾಜ್ಯ ಕಾಂಗ್ರೆಸ್ ಮುಕ್ತ ಅಂದ್ರು ಪ್ರಸಾದ್, 8 ಸೈನಿಕರ ಹತ್ಯೆ, ಆಪ್ ಶಾಸಕನ ಬಂಧನ, ಸ್ವಾಮಿ ಏನ್ ಹೇಳಿದ್ರು?, ಡ್ಯಾಮಿಟ್.. 15 ದಿನ ನೀರು

ಡಿಜಿಟಲ್ ಕನ್ನಡ ಟೀಮ್:

ಫ್ರೀಡಂ ಪಾರ್ಕ್ ನಲ್ಲಿ ತೆಂಗು-ಅಡಿಕೆ ಬೆಳೆಗಾರರ ಹೋರಾಟ

ಬರಗಾಲ ಹಾಗೂ ಬೆಲೆ ಕುಸಿತದಿಂದ ರಾಜ್ಯದ ತೆಂಗು ಮತ್ತು ಅಡಿಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರದ ವಿರುದ್ಧ ಶನಿವಾರ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಈ ಪ್ರತಿಭಟನೆ ಆಯೋಜಿಸಿತ್ತು. ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಸರ್ಕಾರದ ಮುಂದೆ ಬೆಡಿಕೆ ಇಟ್ಟಿದ್ದು ಹೀಗೆ:

‘ರಾಜ್ಯದ 12 ಜಿಲ್ಲೆಗಳಲ್ಲಿ 1.20 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೆಂಗು ಹಾಗೂ ಅದೇ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆ ಬೀಳದೆ ಕೆಲವೆಡೆ ಮರಗಳು ಒಣಗಿವೆ. ತೆಂಗಿಗೆ ನುಸಿ ರೋಗ, ಅಡಿಕೆಗೆ ಕೋಳೆ ಮತ್ತು ಹಳದಿ ರೋಗದ ಸಮಸ್ಯೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರಿಯಾದ ಬೆಲೆ ಇಲ್ಲ. 1 ಕೆ.ಜಿ ತೆಂಗಿನ ಕಾಯಿಗೆ ₹ 22 ಇದ್ದ ಬೆಲೆ ಈಗ ₹ 7ಕ್ಕೆ ಬಂದಿದೆ. ಇನ್ನು ಅಡಿಕೆ ಒಂದು ಕ್ವಿಂಟಾಲ್ ಗೆ ₹ 90 ಸಾವಿರ ಇದ್ದ ಬೆಲೆ ಈಗ 20-23 ಸಾವಿರಕ್ಕೆ ಕುಸಿದಿದೆ. ಹೀಗಾಗಿ ತೆಂಗು, ಅಡಿಕೆ ಬೆಳೆಗಾರರನ್ನೊಳಗೊಂಡಂತೆ, ವರ್ತಕರು ಮತ್ತು ಸಂಬಂಧಪಟ್ಟ ಮಾರುಕಟ್ಟೆ ಮತ್ತು ತೋಟಗಾರಿಕೆ ಅಧಿಕಾರಿಗಳನ್ನು ಸೇರಿಸಿ ತೆಂಗು ಮತ್ತು ಅಡಿಕೆ ಮಂಡಳಿ ಸ್ಥಾಪಿಸಬೇಕು. ಯಾವುದೇ ಪರಿಸ್ಥಿತಿ ಬಂದರು ಸ್ಥಿರ ಬೆಲೆ ಕಾಪಾಡಲು ನೀತಿ ರೂಪಿಸಬೇಕು. ಬೆಳೆಗಾರರ ರಕ್ಷಣೆಗೆ ದೊಡ್ಡ ಮೊತ್ತದ ಆವರ್ತ ನಿಧಿ ಸ್ಥಾಪಿಸಬೇಕು.’

ಉಗ್ರದಾಳಿ: 8 ಸೈನಿಕರ ಹತ್ಯೆ, 20 ಮಂದಿಗೆ ಗಾಯ

ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರೀಯ ಮೀಸಲು ಪೋಲೀಸ್ ಪಡೆಯ ಕಾವಲು ವಾಹನಗಳ ಸಂಚಾರದ ವೇಳೆ ಉಗ್ರರು ನಡೆಸಿದ ದಾಳಿಯಲ್ಲಿ 8 ಸೈನಿಕರು ಮೃತರಾಗಿ 20 ಮಂದಿ ಗಾಯಗೊಂಡಿದ್ದಾರೆ. ಯೋಧರು ಗುಂಡಿನ ಅಭ್ಯಾಸದ ನಂತರ ಹಿಂತಿರುಗುತ್ತಿದ್ದರು.

ಇದು ಜಮ್ಮು- ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮತ್ತೆ ಶುರುವಾಗುತ್ತಿರುವುದರ ಸೂಚನೆಯಂತಿದೆ. ಏಕೆಂದರೆ ಇದೇ ತಿಂಗಳಲ್ಲಾಗುತ್ತಿರುವ ನಾಲ್ಕನೇ ದಾಳಿ ಇದಾಗಿದೆ. ಈ ಹಿಂದಿನ ದಾಳಿಗಳಲ್ಲಿ ಗಡಿಭದ್ರತಾ ಪಡೆಯ ನಾಲ್ವರು ಯೋಧರು ಪ್ರಾಣ ತೆತ್ತಿದ್ದರು. ಇಂದಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ, ಉಳಿದವರಿಗಾಗಿ ಹುಡುಕಾಟ ನಡೆದಿದೆ.

ಅತೃಪ್ತರ ಮನವೊಲಿಸಲು ಸಿಎಂ ಬಳಸ್ತಿರೋದು ಅಧಿಕಾರ ಹಂಚಿಕೆಯ ಅಸ್ತ್ರ

ರಾಜ್ಯ ಕಾಂಗ್ರೆಸ್ ನಲ್ಲಿ ಎದ್ದಿರುವ ನಾಯಕತ್ವ ವಿರೋಧಿ ಬಂಡಾಯ ಶಮನಗೊಳಿಸಲು ಅಧಿಕಾರ ಹಂಚಿಕೆ ಎಂಬ ಅಸ್ತ್ರ ಪ್ರಯೋಗಿಸ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ಬಂಡಾಯ ಗುಂಪಿನಲ್ಲಿ ಕಾಣಿಸಿಕೊಂಡಿರೊ ಎಸ್.ಟಿ. ಸೋಮಶೇಖರ್ ಹಾಗೂ ಬೈರತಿ ಬಸವರಾಜ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದ ನಿರ್ದೇಶಕರನ್ನಾಗಿ ತರಾತುರಿಯಲ್ಲಿ ನೇಮಕಾತಿ ಮಾಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇತರೆ ಶಾಸಕರಿಗೂ ಪ್ರಮುಖ ನಿಗಮಗಳ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಸ್ವತಃ ಮುಖ್ಯಮಂತ್ರಿಯವರೇ ಅತೃಪ್ತ ಶಾಸಕರನ್ನು ಸಂಪರ್ಕಿಸಿ, ಮಂತ್ರಿಮಂಡಲದಿಂದ ಹೊರಗಿಟ್ಟಿರುವುದಕ್ಕೆ ವಿವರಣೆ ನೀಡಿದ್ದಾರೆ. ದುಡಕಬೇಡಿ, ಮುಂದಿನ ದಿನಗಳಲ್ಲಿ ನಿಮಗೆ ಅವಕಾಶ ದೊರೆಯುತ್ತದೆ. ಇರುವ ಅಧಿಕಾರವನ್ನು ಹಂಚಿಕೊಳ್ಳೋಣ. ನಿಮಗೆ ಇಂತಹ ಪ್ರಾಧಿಕಾರ ಅಥವಾ ನಿಗಮದ ಹೊಣೆ ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ರು ಸಿಎಂ.

ಈ ಮಧ್ಯೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾಜಿ ಸಚಿವ ಅಂಬರೀಷ್ ಅವರನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿ, ಮನವೊಲಿಸಲು ಪ್ರಯತ್ನಿಸಿದ್ರು. ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಯವರು ನಿಮ್ಮನ್ನು ಮಂತ್ರಿಮಂಡಲದಿಂದ ಕೈಬಿಟ್ಟಿದ್ದಾರೆ. ನಿಮ್ಮನ್ನು ಕೈಬಿಟ್ಟ ನಂತರದ ಬೆಳವಣಿಗೆ ವರಿಷ್ಠರ ಗಮನಕ್ಕೂ ಬಂದಿದೆ. ಮತ್ತೆ ನಿಮಗೆ ಅಧಿಕಾರ ದೊರೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ನೀವು ನಾಯಕತ್ವ ಮತ್ತು ಪಕ್ಷದ ವಿರುದ್ಧ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಬೇಡಿ ಎಂದು ಕೇಳಿಕೊಂಡರು.

ಇದಕ್ಕೆ ಪ್ರತಿಯಾಗಿ ಅಂಬರೀಷ್ ಪ್ರತಿಕ್ರಿಯಿಸಿರುವುದು ಹೀಗೆ: ‘ಮತ್ತೆ ಸಂಪುಟ ಸೇರಲು ನಾನೇನು ಚಪ್ಪಲಿಯೇ ? ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೂ ಕಾದು ನೋಡೋಣ. ನಂತರ ನಮ್ಮ ನಿರ್ಧಾರ ತಿಳಿಸುತ್ತೇನೆ.’

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಸಿದ್ರಾಮಯ್ಯ ಸಾಕು: ಶ್ರೀನಿವಾಸ ಪ್ರಸಾದ್

‘ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವಾಗಿಸಲು ಬಿಜೆಪಿಯ ಅಗತ್ಯವೇ ಇಲ್ಲ.. ಸಿದ್ದರಾಮಯ್ಯ ಅವರನ್ನು ಐದು ವರ್ಷ ಅಧಿಕಾರ ಪೂರೈಸಲು ಬಿಟ್ಟರೆ ಸಾಕು ಅವರೇ ಕಾಂಗ್ರೆಸ್ ಅನ್ನು ರಾಜ್ಯದಿಂದ ಮುಕ್ತ ಮಾಡುತ್ತಾರೆ..’ ಇದು ಕಾಂಗ್ರೆಸ್ ಬಂಡಾಯ ಗುಂಪಿನ ಸಾರಥಿ ಶ್ರೀನಿವಾಸ ಪ್ರಸಾದ್ ಅವರ ಮಾತು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಶ್ರೀನಿವಾಸ ಪ್ರಸಾದ್ ಹೇಳಿದಿಷ್ಟು:

‘ಕಾಂಗ್ರೆಸ್ ಗೆ ಮುಕ್ತಿ ನೀಡಲು ಏನು ಮಾಡಬೇಕೊ ಅದನ್ನು ಸಿದ್ದರಾಮಯ್ಯ ಉಳಿದ ಎರಡು ವರ್ಷ ಅವಧಿಯಲ್ಲಿ ಮಾಡಿ ಮುಗಿಸುತ್ತಾರೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ ಇವರೇ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಮತ್ತೊಬ್ಬರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಇವರು ನೈತಿಕತೆ ಉಳಿಸಿಕೊಂಡಿಲ್ಲ. ನಾಯಕತ್ವ ಬದಲಾವಣೆ ನಮ್ಮ ಅಜೆಂಡಾ. ಹೈಕಮಾಂಡ್ ಗೂ ಈ ಬಗ್ಗೆ ತಿಳಿಸಿದ್ದೇವೆ. ಸಂಖ್ಯಾಬಲದ ಆಧಾರದ ಮೇಲೆ ನಾವು ನಾಯಕತ್ವ ಬದಲಾವಣೆ ಕೇಳ್ತಿಲ್ಲ. ವಿಷಯದ ಆಧಾರದಲ್ಲಿ ಕೇಳ್ತಿದ್ದೇವೆ. ಮುಂದೆ ಯಾರು ನಾಯಕರಾಗಬೇಕು ಅಂತ ನಾವು ಬೇಡಿಕೆ ಇಡುತ್ತಿಲ್ಲ. ಆದ್ರೆ ಈ ಸೋಗಲಾಡಿ ಸಮಾಜವಾದಿಯನ್ನು ಮೊದಲು ಅಧಿಕಾರದಿಂದ ಕೆಳಗಿಳಿಸಿ ಎನ್ನುತ್ತಿದ್ದೇವೆ.

ಸಮಾಜವಾದ ಎನ್ನುವ ಸಿದ್ದರಾಮಯ್ಯ 70 ಲಕ್ಷ ಬೆಲೆ ಬಾಳು ಹೊಬ್ಲೊಟ್ ವಾಚ್ ಕಟ್ಟಿಕೊಂಡಿದ್ದು , ತಮ್ಮ ಮಗನಿಗೆ ನಿಯಮ ಉಲ್ಲಂಘಿಸಿ ಡಯೋಗ್ನಾಸ್ಟಿಕ್ ಪ್ರಯೋಗಾಲಯ ತೆರೆಯಲು ಅನುಮತಿ ನೀಡಿದ್ದು, ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದು , ಎಸಿಬಿಯಲ್ಲಿ ದೂರು ದಾಖಲಾಗಿರುವುದು ಸಿದ್ದರಾಮಯ್ಯನವರ ನಿಜವಾದ ಮುಖವನ್ನು ಕಳಚಿದೆ. ಈ ಹಿಂದೆ ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯನಿಗೂ ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯಗೂ ಸಾಕಷ್ಟು ವ್ಯತ್ಯಾಸವಿದೆ.’

ಸಿದ್ದಗಂಗಾ ಶ್ರೀಗಳ ಆರೋಗ್ಯ ಸುಧಾರಣೆ

ಅನಾರೋಗ್ಯದಿಂದ ಶುಕ್ರವಾರ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಸೇರಿದ್ದ ಸಿದ್ದಗಂಗಾ ಮಠಾಧೀಶರಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ‘ಶ್ರೀಗಳಿಗೆ ಸ್ವಲ್ಪ ಜಾಂಡೀಸ್ ಜತೆಗೆ ಪಿತ್ತನಾಳದಲ್ಲಿ ಬ್ಲಾಕೇಜ್ ಇತ್ತು. ಇಆರ್ ಪಿಸಿ ಶಸ್ತ್ರಚಿಕಿತ್ಸೆ ಮೂಲಕ ನಿವಾರಿಸಲಾಗಿದೆ’ ಎಂದರು ಆಸ್ಪತ್ರೆಯ ವೈದ್ಯರಾದ ಡಾ.ರವೀಂದ್ರ.

ರಾಜ್ಯ ಅಣೆಕಟ್ಟುಗಳಲ್ಲಿನ ನೀರು ಇನ್ನು 15 ದಿನಗಳಿಗೆ ಮಾತ್ರ!

ಇನ್ನು 15 ದಿನಗಳ ಕಾಲ ಮಾತ್ರ ರಾಜ್ಯದ ಅಣೆಕಟ್ಟುಗಳಲ್ಲಿನ ನೀರುನ್ನು ಕುಡಿಯಲು ಪೂರೈಸಲು ಸಾಧ್ಯ ಎಂದಿದ್ದಾರೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್. ಈ ಬಗ್ಗೆ ಅವರು ಹೇಳಿದ್ದು ಹೀಗೆ:

‘ಜಲಾಶಯದ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ರಾಜ್ಯದಲ್ಲಿ ಸತತ ಬರಗಾಲ ಹಾಗೂ ಸರಾಸರಿ ಮಳೆ ಕೊರತೆಯಿಂದಾಗಿ ಜಲಾಶಯಗಳಿಗೆ ವಾಡಿಕೆಗಿಂತ ಶೇ.60 ರಷ್ಟು ನೀರಿನ ಕೊರತೆ ಇದೆ. ಹೀಗಾಗಿ ಕೆ ಆರ್ ಎಸ್ ಆಣೆಕಟ್ಟಿನಲ್ಲಿ ಪ್ರಸ್ತತ ಶೇಖರಣೆಗೊಂಡಿರುವ ನೀರು ಇನ್ನು ಎರಡು ವಾರಗಳಿಗೆ ಮಾತ್ರ ಕುಡಿಯಲು ಪೂರೈಸಲು ಸಾಧ್ಯ. ಆನಂತರ ಡೆಡ್ ಸ್ಟೋರೆಜ್ ನೀರನ್ನು ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಅಷ್ಟರೊಳಗೆ ಅಣೆಕಟ್ಟುಗಳಿಗೆ ನೀರು ಹರಿದು ಬರದಿದ್ದರೆ ಸಂಕಷ್ಟದ ಪರಿಸ್ಥಿತಿ ಎದುರಾಗಲಿದೆ.’

ಆಪ್ ಶಾಸಕನ ಬಂಧನ, ಕೇಜ್ರಿ ಐಐಟಿ ಅಗ್ರ ಶ್ರೇಯಾಂಕ ಪಡೆದಿಲ್ಲ ಅಂದ್ರು ಸ್ವಾಮಿ… ಇದು ಆಪ್ ರೌಂಡ್ ಅಪ್

ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ ಅವರನ್ನು ಶನಿವಾರ ಪೋಲೀಸರು ಬಂಧಿಸಿದ್ದಾರೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಮೊಹಾನಿಯರನ್ನು ಮಾಧ್ಯಮಗಳ ಎದುರೇ ಪೋಲೀಸರು ಬಂಧಿಸಿ ಒಯ್ದರು. ನಂತರ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಜಾಮೀನು ಸಿಗಲಿಲ್ಲವಾದ್ದರಿಂದ ಸೋಮವಾರದವರೆಗೂ ಇವರು ನ್ಯಾಯಾಂಗ ಬಂಧನದಲ್ಲಿರುತ್ತಾರೆ.

ಇದರ ಬೆನ್ನಲ್ಲೇ ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ‘ದೆಹಲಿಯಲ್ಲಿ ಪ್ರಧಾನಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ’ ಎಂದಿದ್ದಾರೆ.

ದೆಹಲಿ ಜಲ ನಿಗಮದ ಉಪಾಧ್ಯಕ್ಷರು ಮೊಹಾನಿಯಾ. ಜೂನ್ 22ರಂದು ನೀರಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳುವುದಕ್ಕೆ ಮಹಿಳೆಯ ಗುಪೊಂದು ಅವರ ಬಳಿ ಹೋದಾಗ, ಶಾಸಕರು ಮತ್ತು ಅವರ ಬೆಂಬಲಿಗರು ದೂರುದಾರರ ವಿರುದ್ಧ ಏರಿ ಹೋದ ಆಪಾದನೆ ಇದೆ. ಇದೇ ಸಂದರ್ಭದಲ್ಲಿ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾಗಿಯೂ ಮಹಿಳೆಯೊಬ್ಬರು ದೂರು ನೀಡಿದ್ದರು. ಅಲ್ಲದೇ, ಶುಕ್ರವಾರವಷ್ಟೇ 60ರ ವಯಸ್ಸಿನ ಗಂಡಸಿನ ಕೆನ್ನೆಗೆ ಹೊಡೆದ ಆರೋಪವೂ ಶಾಸಕರ ಮೇಲಿದೆ. ಮಹಿಳೆಯರ ಮೇಲೆ ಹಲ್ಲೆ ಹಾಗೂ ಕ್ರಿಮಿನಲ್ ಬಲಪ್ರಯೋಗ, ಲೈಂಗಿಕ ಶಬ್ದಗಳನ್ನು ಬಳಸಿ ನಿಂದನೆ, ವಸ್ತ್ರಹೀನಗೊಳಿಸುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ ಇತ್ಯಾದಿ ಪ್ರಕರಣಗಳನ್ನು ಉಲ್ಲೇಖಿಸಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ, ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ, ಅರವಿಂದ ಕೇಜ್ರಿವಾಲರು ಐಐಟಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದರು ಎಂಬುದು ಸುಳ್ಳೆಂದು ಮಾಹಿತಿ ಹಕ್ಕು ಅರ್ಜಿಯಿಂದ ಬಯಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಭಾರತೀಯ ಧಿರಿಸಿನ ಹೇಳಿಕೆ ಅರುಣ್ ಜೇಟ್ಲಿಯವರನ್ನು ಉದ್ದೇಶಿಸಿದ್ದಲ್ಲ, ಅವರು ಸೂಟಿನಲ್ಲಿ ಚೆನ್ನಾಗಿಯೇ ಕಾಣುತ್ತಿದ್ದಾರೆ ಅಂತ ಸಮಜಾಯಿಷಿ ನೀಡಿದರಲ್ಲದೇ, ಬಿಜೆಪಿ ತಮ್ಮ ಮೇಲೆ ಸಿಟ್ಟುಗೊಂಡಿದೆ ಎಂಬುದು ಮಾಧ್ಯಮ ಸೃಷ್ಟಿ ಅಷ್ಟೇ ಅಂತ ಪ್ರತಿಪಾದಿಸಿದರು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಸುದ್ದಿ ಸಾಲುಗಳು..

  • ಭಾರತದ ಖ್ಯಾತ ಶೂಟರ್ ಜೀತು ರೈ ಅಜರ್ಬಜೈನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಕಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಸಂಪಾದಿಸಿದ್ದಾರೆ. ಶನಿವಾರ ನಡೆದ 10.ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕ್ರಮವಾಗಿ 97,97,98,96 ಮತ್ತು 97 (ಒಟ್ಟು 580 ಅರ್ಹತಾ ಸುತ್ತು ಸೇರಿ) ಅಂಕಗಳನ್ನು ಕಲೆಹಾಕಿ ಬೆಳ್ಳಿ ಪದಕ ಪಡೆದರು. ಶುಕ್ರವಾರವಷ್ಟೇ 50 ಮೀ. ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 10ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದರು.
  • ಭಾರತದ ಭರವಸೆಯ ಸ್ಪ್ರಿಂಟರ್ ದ್ಯುತಿ ಚಂದ್ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿದ್ದಾರೆ. ಅಲ್ಮಟಿಯಲ್ಲಿ ನಡೆದ 26ನೇ ಜಿ.ಕೊಸನೋವ್ ಸ್ಮಾರಕ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ ದ್ಯುತಿ 100 ಮೀ. ಓಟದಲ್ಲಿ 11.30 ಸೆಕೆಂಡ್ ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಅಲ್ಲದೆ ರಿಯೋ ಒಲಿಂಪಿಕ್ಸ್ ಗಾಗಿ ನಿಗದಿ ಪಡಿಸಿದ್ದ 11.32 ಸೆಕೆಂಡ್ ಗಡಿ ದಾಟಿದ್ದರಿಂದ ಪ್ರತಿಷ್ಠಿತ ಟೂರ್ನಿಗೆ ಅರ್ಹತೆಯನ್ನು ಪಡೆದರು.

Leave a Reply