ವಿದೇಶಿ ನೇರ ಬಂಡವಾಳಕ್ಕೆ ಭಾರತ ಮುಕ್ತ, ನಾವು ತಿಳಿದಿರಬೇಕಾದ ಮೂಲಭೂತ ಮಾಹಿತಿಗಳು

ಡಿಜಿಟಲ್ ಕನ್ನಡ ವಿಶೇಷ:

ವಿದೇಶಿ ನೇರ ಬಂಡವಾಳ ಎಂದರೆ ಅದೇನು? ಎಂದು ಕೇಳುವರಿಗೂ ‘ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್’ ಅಂದರೆ ‘ಓಹ್ ಅದಾ’ ಎನ್ನುವ ಮಟ್ಟಿಗೆ ಎಫ್ಡಿಐ ಪ್ರಸಿದ್ಧಿ. ಇದು ಭಾರತದ ಅರ್ಥ ವ್ಯವಸ್ಥೆಗೆ ಬಹಳಷ್ಟು ಚೇತರಿಕೆ ನೀಡಿದೆ, ನೀಡುತ್ತಿದೆ. ಭಾರತಕ್ಕೆ ತನ್ನ ಅಭಿವೃದ್ಧಿಯ ಸಂಖ್ಯೆಯನ್ನು ಉಳಿಸಿಕೊಳ್ಳಲು ಇದು ಅವಶ್ಯಕವಾಗಿದೆ. ಭಾರತದಲ್ಲಿನ ಯುವ ಜನತೆಗೆ ಕೆಲಸ ಸೃಷ್ಟಿಸುವುದು ಸರಕಾರದ ಮುಂದಿರುವ ಬಹು ದೊಡ್ಡ ಸವಾಲು. ಹೀಗೆ ಹೊಸ ಕೆಲಸ ಸೃಷ್ಟಿಗೆ, ಭಾರತದ ಎಲ್ಲಾ ರೀತಿಯ ಬೆಳವಣಿಗೆಗೆ ಅನುಕೂಲವಾಗಲಿ ಎಂದು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ. ಇದರಿಂದ ಭಾರತ ಹೂಡಿಕೆದಾರ ಸ್ವರ್ಗವಾಗಲಿದೆ.

ಕೆಲವು ವಿಭಾಗಗಳಲ್ಲಿ ಶೇ. 100ರಷ್ಟು ಹಾಗೂ ಮತ್ತೆ ಕೆಲ ವಿಭಾಗಗಳಲ್ಲಿ ಭಾಗಶಃ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸರ್ಕಾರ ಅವಕಾಶ ಕಲ್ಪಿಸಿದೆ.
ಭಾರತವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯುವ ಭರದಲ್ಲಿ ನಮ್ಮ ದೇಶದ ವಿತ್ತ ವ್ಯವಸ್ಥೆಯ ಮೇಲೆ ಹಿಡಿತ ಕಳೆದು ಕೊಂಡರೆ ಹೇಗೆ? ಇಂದು ವ್ಯಾಪಾರಕ್ಕೆ ಬಂದವರು ನಾಳೆ ನಮ್ಮ ಕಾಯಿದೆ ಕಾನೂನಿನ ಮೇಲೆ ಸವಾರಿ ಮಾಡುವುದಿಲ್ಲ ಎನ್ನುವ ನಂಬಿಕೆ ಏನು? ಒಂದು ಮಟ್ಟದ ಜೀವನ ಶೈಲಿಗೆ ಒಗ್ಗಿಕೊಂಡ ಮೇಲೆ ನಾವು ಅವರು ಹೇಳಿದ ಹಾಗೆ ಕೇಳದೆ ಬೇರೆ ದಾರಿ ಯಾವುದಿದೆ? ಹೀಗೆ ಹಲವು ಸಂಶಯಗಳು ಜನ ಸಾಮಾನ್ಯರಲ್ಲಿ ಮಾತ್ರವಲ್ಲ, ಹಲವು ಆರ್ಥಿಕ ತಜ್ಞರಲ್ಲೂ ಇದೆ. ಈ ವಿಷಯದಲ್ಲಿ ಆರ್ಥಿಕ ತಜ್ಞರ ನಡುವೆಯೇ ಒಮ್ಮತವಿಲ್ಲ.
ಇದೆಲ್ಲಾ ಪಕ್ಕಕ್ಕಿರಲಿ, ಇಂದು ದೇಶಕ್ಕೆ ಬಂಡವಾಳ ಬೇಕು. ಹಾಗೆಯೇ ನಮ್ಮ ಅಖಂಡತೆ, ಭದ್ರತೆಗೆ ಅದು ಅಡ್ಡಿ ಉಂಟುಮಾಡಬಾರದು. ಹಾಗಾಗಿ ಇದೊಂದು ಸೂಕ್ಷ್ಮ ವಿಷಯ.
ಏನಿದು ಎಫ್ಡಿಐ?
ಸ್ಥೂಲವಾಗಿ ಹೇಳುವುದಾದರೆ ಒಂದು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಸಂಸ್ಥೆ, ಇನ್ನೊಂದು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದು.  ಹೂಡಿಕೆ ಇನ್ವೆಸ್ಟ್ಮೆಂಟ್ ರೂಪದಲ್ಲಿ ಮಾತ್ರ ಅಲ್ಲದೆ ಬಂಡವಾಳ ಹೂಡಿಕೆ ಆಗಿರುತ್ತದೆ. ಅಂದರೆ ಒಂದು ಸಂಸ್ಥೆಯಲ್ಲಿನ 10 ಪೆರ್ಸೆಂಟ್ ಗೂ ಮೀರಿದ ವೋಟಿಂಗ್ ಶಕ್ತಿ ಹೂಡಿಕೆದಾರ ಸಂಸ್ಥೆಯ ಪಾಲಾಗುತ್ತದೆ.
ಕೇವಲ ಹಣ ಹೂಡಿಕೆ ಒಂದೇ ಇಲ್ಲಿನ ಮೂಲ ಉದ್ದೇಶವಲ್ಲ, ದಿನ ನಿತ್ಯದ ಸಂಸ್ಥೆಯ ಆಗು ಹೋಗುಗಳಲ್ಲಿ ಭಾಗವಹಿಸುವುದು,  ಉದ್ದಿಮೆಯ ಸಹಭಾಗಿತ್ವ, ತಾಂತ್ರಿಕ ಪರಿಣತಿಯ ವಿನಿಮಯ ಅಷ್ಟೆ ಅಲ್ಲದೆ, ನಿಖರ ವಿಷಯಗಳ ನಿಪುಣತೆ ಹಂಚಿಕೆ ಕೂಡ ಇಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಈ ಎಲ್ಲಾ ವಿಷಯಗಳಿಂದ ಇದು ಕೇವಲ ಹಣ ಹೂಡಿಕೆಗಿಂತ ವಿಭಿನ್ನ ಮತ್ತು ಹೆಚ್ಚು ಫಲದಾಯಕ.
ಈ ಎಫ್ಡಿಐ ನಲ್ಲಿ ಎರಡು ವಿಧವಿದೆ. ಒಂದು ಹಣದ ಒಳಬರುವಿಕೆ ಇದನ್ನು ಇನ್ವರ್ಡ್ ಇನ್ವೆಸ್ಟ್ಮೆಂಟ್ ಎಂದು ವ್ಯಾಖ್ಯಾನಿಸುತ್ತಾರೆ. ಮತ್ತೊಂದು ಹಣದ ಹೊರ ಹೋಗುವಿಕೆ ಇದನ್ನ ಔಟ್ವರ್ಡ್ ಇನ್ವೆಟ್ಮೆಂಟ್ ಎನ್ನಲಾಗುತ್ತದೆ. ಇವೆರಡರ ನಡುವಿನ ಹಣವನ್ನು ನೆಟ್ ಎಫ್ಡಿಐ  ಎಂದು ಗುರುತಿಸಲಾಗುತ್ತದೆ. ಇದನ್ನ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ.
ಭಾರತಕ್ಕೆ  ವಿದೇಶದಿಂದ ಬಂದ ಹೂಡಿಕೆ 1000 ರೂಪಾಯಿ ಎಂದು ಕೊಳ್ಳಿ. ಇದನ್ನು ಇನ್ವರ್ಡ್ ಇನ್ವೆಸ್ಟ್ಮೆಂಟ್ ಎನ್ನಬಹುದು. ಭಾರತ ಬೇರೆ ದೇಶದಲ್ಲಿ ಮಾಡಿದ ಹೂಡಿಕೆ 200 ರೂಪಾಯಿ ಎಂದರೆ ಅದು ಔಟ್ವರ್ಡ್ ಇನ್ವೆಟ್ಮೆಂಟ್. ಇವುಗಳ ಅಂತರ 800 ರೂಪಾಯಿಯನ್ನು ನೆಟ್ ಎಫ್ಡಿಐ ಅಥವಾ ನಿವ್ವಳ ವಿದೇಶಿ ಹೂಡಿಕೆ ಎನ್ನಬಹುದು.
ಭಾರತದಲ್ಲಿ ಬದಲಾದ ಬಂಡವಾಳ ನೀತಿ ಮತ್ತು ಮುಕ್ತ ಮಾರುಕಟ್ಟೆ ನೀತಿಯಿಂದ ನೇರ ವಿದೇಶಿ ಬಂಡವಾಳ ಐದು ಮಾರ್ಗದಲ್ಲಿ ಹರಿದು ಬರಬಹುದು, ಅವೆಂದರೆ…
೧)  ಸರಕಾರದ  ಮೂಲಕ, Government (SIA /FIPB ): ಸರಕಾರ ಸೆಕ್ರೆಟರಿಯೇಟ್ ಆಫ್ ಇಂಡಸ್ಟ್ರಿಯಲ್ ಅಸ್ಸಿಸ್ಟೆನ್ಸ್ (SIA ) ಮತ್ತು ಫಾರಿನ್ ಇನ್ವೆಸ್ಟ್ಮೆಂಟ್ ಪ್ರೊಮೋಷನ್ ಬೋರ್ಡ್ ಎನ್ನುವ ಸಂಸ್ಥೆಗಳನ್ನು ಸ್ಥಾಪಿಸಿದೆ. ಹೂಡಿಕೆ ಮಾಡಲು ಇಚ್ಛಿಸುವ ವಿದೇಶಿ ಸಂಸ್ಥೆಗಳು ಈ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಬಹುದು. ಇಲ್ಲಿ ಯಾವ ಉದ್ದಿಮೆಯಲ್ಲಿ ಎಷ್ಟು ಹೂಡಿಕೆ ಮಾಡಬಹುದು ಎನ್ನುವ ಒಂದು ಚಾರ್ಟ್ ಇದೆ. ಅದರ ಅನುಸಾರ ಹೂಡಿಕೆಗೆ ಅವಕಾಶವಿದೆ.
೨)ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ನೇರ ಹೂಡಿಕೆ ಮಾಡಬಹುದು.
೩) ಅನಿವಾಸಿ ಭಾರತೀಯರ ಹೂಡಿಕೆಯನ್ನು ಕೂಡ ವಿದೇಶಿ ಹೂಡಿಕೆ ಎಂದು ಪರಿಗಣಿಸಲಾಗುವುದು.
೪) ವಿದೇಶಿ ಸಂಸ್ಥೆಗಳು ಇಲ್ಲಿನ ಸಂಸ್ಥೆಯ ಷೇರು ಕೊಳ್ಳುವ ಮೂಲಕ ಹೂಡಿಕೆ ಮಾಡಬಹುದು.
೫) ನೊಂದಾಯಿತವಲ್ಲದ ಸಂಸ್ಥೆಗಳ ಈಕ್ವಿಟಿ ಷೇರು ಕೊಳ್ಳುವುದರ ಮೂಲಕ ಕೂಡ ವಿದೇಶಿ ಬಂಡವಾಳ ಹೂಡಿಕೆ ಮಾಡಬಹುದು.
ಈ ರೀತಿಯ ಹೂಡಿಕೆಯಿಂದ ಬಹಳ ಉಪಯೋಗವಿದೆ. ಹೂಡಿಕೆದಾರ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಎರಡೂ ಸಂಸ್ಥೆಗಳಿಗೂ ಇದರಿಂದ ಲಾಭವೇ ಹೇಗೆ ಎನ್ನುವುದನ್ನು ನೋಡೋಣ.
ಹೂಡಿಕೆದಾರ ಸಂಸ್ಥೆ ಅಥವಾ ವಿದೇಶಿ ಸಂಸ್ಥೆಗೆ  ಇದರಿಂದ

– ಒಂದು ಹೊಸ ಮಾರುಕಟ್ಟೆ ಸಿಕ್ಕ ಹಾಗೆ ಆಯಿತು.
– ಕಡಿಮೆ ಬೆಲೆಯಲ್ಲಿ ನಿಪುಣ ತಂತ್ರಜ್ಞರ ಲಭ್ಯತೆ.
– ವಸ್ತುಗಳ ತಯಾರಿಸುವಿಕೆಯಲ್ಲಿ ಖರ್ಚು ಕಡಿಮೆ.
– ವೇಗ, ನಿಖರತೆಯಲ್ಲಿ ವೃದ್ಧಿ.

ಹಾಗೆಯೇ ಸ್ಥಳೀಯ ಸಂಸ್ಥೆಗೆ, ದೇಶಕ್ಕೆ ಇದರಿಂದ…

– ಹೆಚ್ಚಿದ ಕೆಲಸ, ಹೊಸ ಕೆಲಸದ ಸೃಷ್ಟಿ .
– ಹೊಸ ತಂತ್ರಜ್ಞಾನದ ಸೌಲಭ್ಯ.
– ವಿದೇಶಿ ಹೂಡಿಕೆಯಿಂದ ಹೆಚ್ಚಾಗುವ ಮೀಸಲು ನಿಧಿ.
– ಹೊಸ ಉತ್ಪನ್ನಗಳ ಸಿಗುವಿಕೆ.
ಯಾವುದೋ ಒಂದು ದೇಶ ಇನ್ನೊಂದು ದೇಶದಲ್ಲಿ ತನ್ನ ಉತ್ಪನ್ನ ಉತ್ಪಾದಿಸಲು ಬೇಕಾಗುವ ಕಟ್ಟಡ ನಿರ್ಮಾಣ ಮಾಡುವ ವಿಷಯ ಕೇಳಿದ್ದೀರಾ? ಹೌದು.. ಇದು ಇಂದು ಸಾಧ್ಯವಾಗುತ್ತಿರುವುದು ವಿದೇಶಿ ನೇರ ಬಂಡವಾಳ ಎನ್ನುವ ಈ ಹೊಸ ಹೂಡಿಕೆಯ ಪರಿಕಲ್ಪನೆಯಿಂದ. ಅಮೆರಿಕದ ಯಾವುದೋ ಒಂದು ಕಂಪನಿ ಕರ್ನಾಟಕದ ಯಾವುದೋ ಒಂದು ಹಳ್ಳಿಯಲ್ಲೋ ಮಹಾರಾಷ್ಟ್ರದ ಹೆಸರೇ ಕೇಳಿರದ ಹಳ್ಳಿಯಲ್ಲಿ ತನ್ನ ಘಟಕ ಸ್ಥಾಪಿಸಲು ನೆಲ ಖರೀದಿಸುತ್ತೆ, ಕಟ್ಟಡ ನಿರ್ಮಾಣ ಮಾಡುತ್ತೆ. ಇದು ಕೇವಲ ನೇರ ವಿದೇಶಿ ಬಂಡವಾಳದಿಂದ ಮಾತ್ರ ಸಾಧ್ಯ.
ವಿದೇಶಿಯರು ಎರಡು ರೀತಿಯಲ್ಲಿ ಹೂಡಿಕೆ ಮಾಡಬಹುದು  ೧) ವಿದೇಶಿ ನೇರ ಬಂಡವಾಳ ಹೂಡಿಕೆ (FDI)   ೨) ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್.
ವಿದೇಶಿಯರು ನಮ್ಮ ಬ್ಯಾಂಕ್ ನಲ್ಲಿ ಹಣ ಹೂಡುವುದು, ಷೇರು ಖರೀದಿ ಕೇವಲ ಹೂಡಿಕೆಗಾಗಿ ಇವೆಲ್ಲಾ ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್ ಎನಿಸಿಕೊಳ್ಳುತ್ತವೆ. ಇಲ್ಲಿ ಹೂಡಿಕೆ ಕೇವಲ ವ್ಯಾವಹಾರಿಕವಾಗಿರುತ್ತದೆ.   ನೇರ ವಿದೇಶಿ ಬಂಡವಾಳ ಹೂಡಿಕೆ, ಹಣದ ಹೂಡಿಕೆಯೊಂದಿಗೆ ಭೌತಿಕ ಇರುವಿಕೆ ಕೂಡ ಬಯಸುತ್ತದೆ.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬದಲಾಗಲೇಬೇಕು. ಸಬೂಬು ಹೇಳಿ ಕೂತರೆ ಅವಕಾಶ ವಂಚಿರಾಗಬೇಕಾಗುತ್ತದೆ. ನಿರಂತರ ಬದುಕಿನಲ್ಲಿ ಬದಲಾವಣೆಯೊಂದೇ ಸತ್ಯ ಎನ್ನುವುದರ ಅರಿತು ಅದರೊಂದಿಗೆ ಹೆಜ್ಜೆ ಹಾಕಬೇಕಿದೆ.

Leave a Reply