ಕಾರ್ಬನ್ ಡೈ ಆಕ್ಸೈಡ್ ಅಬ್ಬರ ಸಾಕು, ಅದು ಕಲ್ಲಾಗಬೇಕು: ಇದು ಛೂಮಂತ್ರವಲ್ಲ, ಇತ್ತೀಚಿನ ತಂತ್ರ

author-ananthramuಕಳೆದ ಐದು ವರ್ಷಗಳಿಂದ ಚೀನಾ ತನ್ನ ಸ್ಥಾನವನ್ನು ಯಾವ ದೇಶಕ್ಕೂ ಬಿಟ್ಟುಕೊಟ್ಟಿಲ್ಲ-ಅದಕ್ಕೆ ಚಿನ್ನದ ಪ್ರಶಸ್ತಿ. ಎರಡನೆಯ ಸ್ಥಾನಕ್ಕೆ ಅಮೆರಿಕವೊ ಅಥವಾ ಯೂರೋಪಿಯನ್ ಯೂನಿಯನ್ನೊ? ಆಗಾಗ ಸ್ಫರ್ದೆ ಇರುತ್ತದೆ. ಒಮ್ಮೆ ಅದು ಮೇಲು, ಇನ್ನೊಮ್ಮೆ ಇದು ಮೇಲು. ಬೆಳ್ಳಿ ಮತ್ತು ಕಂಚಿನ ಪ್ರಶಸ್ತಿ ಅದಲು ಬದಲಾಗುತ್ತಿರುತ್ತವೆ. ಭಾರತದ ಸ್ಥಾನ ಮಾತ್ರ ಅಭಾದಿತ-ನಾಲ್ಕನೆಯ ಸ್ಥಾನ. ಒಂದುವೇಳೆ ಮಾಲಿನ್ಯಕ್ಕೆ ಮೌಲ್ಯ ಕಟ್ಟಿದರೆ ಪರಿಸ್ಥಿತಿ ಮೇಲಿನಂತಿರುತ್ತಿತ್ತು; ಇದು ಇಂದಿನ ಸ್ಫರ್ಧಾತ್ಮಕ ಜಗತ್ತಿನ ಅಸಲಿ ಮುಖ. ಕೆಲವು ವರ್ಷಗಳ ಹಿಂದೆ ಅಮೆರಿಕ ತಿರುಗಿಬಿದ್ದಿತ್ತು. ಭಾರತದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಜಾನುವಾರುಗಳಿವೆ, ಅವುಗಳು ಬಿಡುವ ಹೂಸು ಭೂಮಿಯ ತಾಪವನ್ನೇ ಹೆಚ್ಚಿಸಿದೆ ಎಂದು ರಾಂಗ್ ಆಗಿತ್ತು. ಭಾರತ ತಿರುಗೇಟು ನೀಡಿತ್ತು. ನಿಮ್ಮ ತಲಾವಾರು ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆ ಎಷ್ಟಿದೆ ನೋಡಿ- ತಲಾ 17 ಟನ್ನು; ನಮ್ಮದು 2 ಟನ್ನು ಕೂಡ ಇಲ್ಲ ಎಂದು ಹೇಳಿ ಬಾಯಿ ಮುಚ್ಚಿಸಿತ್ತು.  ಕೈಗಾರಿಕಾ ಕ್ರಾಂತಿಯೇನೋ ದೊಡ್ಡ ಸದ್ದುಮಾಡಿತು, ಆದರೆ ಸದ್ದುಮಾಡದೆ ನಾಲ್ಕು ಖೂಳರನ್ನು ಬಿಟ್ಟಿತ್ತು. ಅವುಗಳಿಂದ ಪಾರಾಗಲು ಬಗೆಬಗೆಯ ಉಪಾಯಗಳಿಗೆ ಮೊರೆಹೋಗಬೇಕಾಗಿದೆ. ಭೂವಾಯುಗೋಳವನ್ನು ಕೆಡಿಸಿದ್ದಕ್ಕೆ, ಅದು ತರುತ್ತಿರುವ ಹವಾಗುಣ ಬದಲಾವಣೆಗೆ ಎಲ್ಲ ದೇಶಗಳು ಪರಸ್ಪರ ನಿಂದನೆಯಲ್ಲಿ ತೊಡಗಿವೆ. ಆಗಾಗ ವಿಶ್ವಸಂಸ್ಥೆ ಗುಡುಗುತ್ತದೆ. ಇದರಿಂದ ಭೂಮಿಯ ತಾಪತ್ರಯ ಬದಲಾದಂತೇನೂ ಇಲ್ಲ.

CO2 EMISSION

ಈ ಎಲ್ಲ ದೇಶಗಳ ಸಮಾನ ಧರ್ಮವೆಂದರೆ ಕಲ್ಲಿದ್ದಲು ಉರಿಸಿ ಉಷ್ಣಶಕ್ತಿಯ ಪಡೆಯುವ ಸ್ಥಾವರಗಳನ್ನು ಸ್ಥಾಪಿಸಿರುವುದು. ಜಗತ್ತಿನ ಹೆಚ್ಚಿನ ಪಾಲು ಶಕ್ತಿಪೂರೈಕೆಯನ್ನು ಮಾಡುತ್ತಿರುವುದು ಈ ಮೂಲದಿಂದಲೇ. ತೈಲ, ಅನಿಲ, ಸಿಮೆಂಟು ಎಲ್ಲ ಉತ್ಪಾದನೆಯು, ಬಳಕೆಯೂ ಮಾಲಿನ್ಯಕಾರಕವೇ, ಭೂಮಿಗೆ ಜ್ವರ ತಂದಿವೆ. ವಿಶೇಷವೆಂದರೆ ಈ ಸತ್ಯವನ್ನು ಎಲ್ಲ ದೇಶಗಳೂ ಒಪ್ಪಿಕೊಂಡಿವೆ. ಆದರೆ ಉಷ್ಣವರ್ಧಕ ಅನಿಲಗಳ ಉತ್ಪಾದನೆಗೆ ಕಡಿವಾಣ ಹಾಕುತ್ತಿಲ್ಲ, ಅದು ಸುಲಭವೂ ಅಲ್ಲ. ಕೈಗಾರಿಕೆಗಳನ್ನು ಮೂಲೆಗೆ ತಳ್ಳುವುದು ಇಂದಿನ ಸ್ಥಿತಿಯಲ್ಲಿ ಅಸಾಧ್ಯ, ಶಿಲಾಯುಗಕ್ಕೆ ಹಿಂತಿರುಗಲು ಯಾರೂ ತಯಾರಿಲ್ಲ. ‘ಯಂತ್ರ ಕಳಚೋಣ ಬನ್ನಿ’ ಎನ್ನುವುದೇನೋ ಆಕರ್ಷಕ ಮಾತು. ಆದರೆ ಕಳಚಿ ನೋಡಿ, ಮುಂದೆ ಗೊತ್ತಾಗುತ್ತದೆ!

ಜಗತ್ತಿನ ಸದ್ಯದ ಹಸುರು ಮನೆ ಅನಿಲ ಅಂದರೆ, ಉಷ್ಣವರ್ಧಕ ಅನಿಲಗಳ ಉತ್ಪಾದನೆ ಹತ್ತಿರ ಹತ್ತಿರ ವರ್ಷಕ್ಕೆ 40 ಬಿಲಿಯನ್ ಟನ್ ಮುಟ್ಟುತ್ತಿದೆ. ಇದರಲ್ಲಿ ನಾಲ್ಕು ಮಂದಿ ಖಳನಾಯಕರಿದ್ದಾರೆ. ಕಾರ್ಬನ್ ಡೈ ಆಕ್ಸೈಡ್, ಮೀಥೇನ್, ನೀರಿನ ಬಾಷ್ಪ ಮತ್ತು ನೈಟ್ರಸ್ ಆಕ್ಸೈಡ್. ಜಗತ್ತು ಹೆಚ್ಚು ಹೆದರುತ್ತಿರುವುದು ಖಳನಾಯಕರ ಮುಖಂಡ ಕಾರ್ಬನ್ ಡೈ ಆಕ್ಸೈಡ್‍ಗೆ. ವಿಶ್ವಸಂಸ್ಥೆ ಒಂದೊಂದೇ ದೇಶಗಳನ್ನು ಜಾಡಿಸುತ್ತ ಬಂದಮೇಲೆ ಕೊನೆಯ ಪಕ್ಷ ಕೆಲವು ದೇಶಗಳಾದರೂ ಒಂದಷ್ಟು ಉಪಾಯಗಳನ್ನು ಕಂಡುಕೊಳ್ಳಲು ಯೋಚಿಸುತ್ತಿವೆ. ಅಮೆರಿಕ ಸದ್ಯ ಕಾರ್ಬನ್ ಡೈ ಆಕ್ಸೈಡ್ ಉತ್ಪತ್ತಿಯನ್ನು ಸ್ವಲ್ಪವಾದರೂ ತಗ್ಗಿಸಲು ಅದು ಉತ್ಪತ್ತಿಯಾದ ಜಾಗದಲ್ಲೇ ಸೆರೆಹಿಡಿದು ಸಂಗ್ರಹಿಸಿ, ಟ್ಯಾಂಕರುಗಳಲ್ಲಿ ತುಂಬಿ ಸಾಗಿಸಿ ಹಳೆಯ ತೈಲಬಾವಿಗಳಿಗೆ ಹರಿಸುತ್ತಿದೆ. ಇದರಲ್ಲೂ ಒಂದು ಉಪಾಯವಿದೆ. ಕಾರ್ಬನ್ ಮತ್ತು ಹೈಡ್ರೋ ಕಾರ್ಬನ್ ಸಂಬಂಧಿಗಳಾದ್ದರಿಂದ ಹಳೆಯ ತೈಲಬಾವಿಗಳಲ್ಲಿ ತೈಲ ಶೇಷವಿದ್ದರೆ ಅದನ್ನೂ ಹೆಚ್ಚಿಸುವ ಉಪಾಯ ಇದು. ಇಲ್ಲದಿದ್ದರೆ ಬಾಧಕವಿಲ್ಲ, ಭೂಮಿಯಲ್ಲೇ ಕಾರ್ಬನ್ ಡೈ ಆಕ್ಸೈಡ್ ಉಳಿಯುತ್ತದೆ. ಆದರೆ ಈ ವಿಧಾನ ಬಲು ದುಬಾರಿ ಒಂದು ಟನ್ ಕಾರ್ಬನ್ ಡೈ ಆಕ್ಸೈಡ್‍ಗೆ ಮುಕ್ತಿಕಾಣಿಸಲು 100 ಡಾಲರ್ ಖರ್ಚು. ಸ್ವಲ್ಪ ಸಂಧಿಗೊಂದಿ ಸಿಕ್ಕಿದರೂ ಸಾಕು, ಲೀಕಾಗಿ ಮತ್ತೆ ಪ್ರತ್ಯಕ್ಷವಾಗುತ್ತದೆ. ಯೂರೋಪಿನ ಅನೇಕ ದೇಶಗಳು ಇದನ್ನು ಅನುಸರಿಸುತ್ತಿವೆ, ಜೊತೆಗೆ ಉಪ್ಪಿನ ಗಣಿಗಳಿಗೂ ಕಾರ್ಬನ್ ಡೈ ಆಕ್ಸೈಡ್ ತುಂಬುತ್ತಿವೆ. ಜಗತ್ತಿನ ಮುಂದಿನ ದಿನಗಳು ಮನುಕುಲಕ್ಕೆ ಆಶಾದಾಯಕವಾಗಿರಲಿ, ವಿಜ್ಞಾನ ತಂತ್ರಜ್ಞಾನಗಳಲ್ಲಿ ಎಷ್ಟು ಗರಿಷ್ಠ ಸಾಧನೆ ಮಾಡಬೇಕೋ, ಅಷ್ಟೂ ಮಾಡಿ ಈ ಭೂಮಿಯನ್ನು ‘ಕಾರ್ಬನ್ ಡೈ ಆಕ್ಸೈಡ್ ಮುಕ್ತಮಾಡಿ, ಇಲ್ಲವೇ ಅದರ ಮರುಬಳಕೆ ಮಾಡಿ’ ಎಂಬ ಧ್ಯೇಯಹೊತ್ತು ಒಂದು ಸರ್ಕಾರೇತರ ಸಂಸ್ಥೆ ಕ್ಯಾಲಿಫೋರ್ನಿಯದಲ್ಲಿರುವ ‘ದಿ ಎಕ್ಸ್ಪ್ರೆಸ್ ಫೌಂಡೇಶನ್’ ಕೊನೆಯ ಪಕ್ಷ 2020ರ ಹೊತ್ತಿಗಾದರೂ ಈ ಸಾಧನೆಯನ್ನು ಮಾಡಿದರೆ ‘ಇಗೋ ನಮ್ಮ ಪ್ರೈಜ್ ಇಲ್ಲಿದೆ- ಇಪ್ಪತ್ತು ದಶಲಕ್ಷ ಡಾಲರ್ ನಿಮ್ಮದಾಗುತ್ತದೆ’ ಎಂದು ಆಸೆ ಹುಟ್ಟಿಸಿದೆ. ಇದು ನಿಜಕ್ಕೂ ಸವಾಲು. ಪ್ರೈಜ್ ಇರಲಿ, ಬಿಡಲಿ ವಿಜ್ಞಾನ ಕ್ಷೇತ್ರವಂತೂ ಈ ತಲೆಶೂಲೆಯನ್ನು ನಿವಾರಿಸಿಕೊಳ್ಳಲು ಬಹುವಾಗಿ ಶ್ರಮಿಸುತ್ತಿದೆ. ಕಂಪ್ಯೂಟರ್ ನ ಚಿಪ್ ಗಾತ್ರದ ಅರೆವಾಹಕ ಬಳಸಿ, ಕಾರ್ಬನ್ ಡೈ ಆಕ್ಸೈಡನ್ನು ಮೆಥನಾಲ್ ಅಥವಾ ನೇರವಾಗಿ ಗ್ಯಾಸೋಲಿನ್ ಆಗಿ ಪರಿವರ್ತಿಸುವ ಪ್ರಯೋಗವೊಂದನ್ನು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ಕೈಗೊಂಡಿದೆ. ಅಂದರೆ ಇದು ಒಂದು ಬಗೆಯ ರೀಸೈಕಲ್. ಕೆನಡ CO2ವನ್ನು ಬಿಲ್ಲೆಗಳಾಗಿ ಮಾಡಿ ಇಂಧನವಾಗಿ ಉರಿಸಿ ಎನ್ನುತ್ತಿದೆ – ಇದು `ಸೈಕಲ್ಲೊ’ `ರೀಸೈಕಲ್ಲೋ’ ನೀವೇ ಊಹಿಸಬಹುದು.

ಐಸ್ಲೆಂಡ್ ಬಿಸಿನೀರಿನ ಬುಗ್ಗೆಗಳಿಗೆ ತವರು. ಆ ದೇಶದ ಸುಮಾರು 80 ಭಾಗ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿರುವುದು ಭೂಉಷ್ಣ ಶಕ್ತಿಯಿಂದ. ಈಗ ಈ ದೇಶಕ್ಕೊಂದು ಬ್ರಿಲಿಯಂಟ್ ಐಡಿಯಾ ಹೊಳೆದಿದೆ. ಅಲ್ಲಿ ಜಗತ್ತಿನ ಅತಿ ದೊಡ್ಡ ಉಷ್ಣಸ್ಥಾವರದಲ್ಲಿ ಒಂದಾದ `ಹೆಲಿಶೇದಿ’ ಸ್ಥಾವರ (330 ಮೆಗಾವ್ಯಾಟ್) ಒಂದು ವಿಶೇಷ ಪ್ರಯೋಗಮಾಡಿ ಗೆದ್ದಿದೆ. ಕಾರ್ಬನ್ ಡೈ ಆಕ್ಸೈಡನ್ನು ಭೂಮಿಯ ಆಳಭಾಗಕ್ಕೆ ಪಂಪ್ ಮಾಡುವುದು. ಅನಂತರ ಪ್ರಕೃತಿ ಅದನ್ನೇ ಕಲ್ಲುಮಾಡುತ್ತದೆ. ಲೀಕಾಗುವ ಭಯವಿಲ್ಲ, ಶೇ. 95 ಭಾಗ ಕಾರ್ಬನ್ ಡೈ ಆಕ್ಸೈಡ್ ಹೀಗೆ ಕಲ್ಲಾಗಿರುವುದನ್ನು ಜಗತ್ತಿಗೆ ತೋರಿಸುತ್ತಿದೆ ಐಸ್ಲೆಂಡ್. ಕಾರ್ಬನ್ ಡೈ ಆಕ್ಸೈಡನ್ನು ಭೂಮಿಗೆ ಹೂತುಬಿಟ್ಟರೆ ಸಾಕೆ? ಏಕ್‍ದಂ ಅದು ಕಲ್ಲಾಗಿಬಿಡುತ್ತದೆಯೆ? ಅದೇನು ಛೂಮಂತ್ರವೆ? ಇಲ್ಲ. ವಿಜ್ಞಾನಿಗಳು ಎಲ್ಲವನ್ನೂ ತರ್ಕಬದ್ಧವಾಗಿ ಮಾಡಿದ್ದಾರೆ. 2012ರಲ್ಲಿ ಇಲ್ಲಿ 400ರಿಂದ 800 ಮೀಟರ್ ಆಳಕ್ಕೆ ದೊಡ್ಡ ರಂಧ್ರ ಕೊರೆದು ಸುಮಾರು 220 ಟನ್ನು ಕಾರ್ಬನ್ ಡೈ ಆಕ್ಸೈಡನ್ನು ಅದರೊಳಗೆ ಹರಿಸಿತ್ತು. ಜೊತೆಗೆ ನೀರನ್ನೂ ಬೆರೆಸಿತ್ತು. ಅದು ಕಾರ್ಬಾಲಿಕ್ ಆಮ್ಲವಾಗಿ ಭೂಮಿಯ ಒಳಗಿರುವ ಬಿಸಿಬಿಸಿಯಾದ ಬಸಾಲ್ಟ್ ಶಿಲೆಯನ್ನು ಮುಟ್ಟಿತು. ಶುರುವಾಯಿತು ರಾಸಾಯನಿಕ ಕ್ರಿಯೆ. ಕ್ಯಾಲ್ಸೈಟ್ ಎಂಬ ಖನಿಜ ಹುಟ್ಟಿತು, ಅದು ಕಾರ್ಬನ್ ಡೈ ಆಕ್ಸೈಡನ್ನೇ ಬಳಸಿಕೊಂಡು ಉತ್ಪತ್ತಿಯಾಗಿತ್ತು. ಕೆಲವೇ ತಿಂಗಳಲ್ಲಿ ಪಂಪನ್ನು ಎತ್ತಲು ನೋಡಿದರೆ ಅದು ಜಪ್ಪಯ್ಯ ಎಂದರೂ ಜಗ್ಗಲಿಲ್ಲ. ಕ್ಯಾಲ್ಸೈಟ್ ಖನಿಜ ಬಿಗಿಯಾಗಿ ಹಿಡಿದುಕೊಂಡಿತ್ತು. ಇದು ವಿಜ್ಞಾನಿಗಳಿಗೆ ತಾಕತ್ತು ಕೊಟ್ಟಿತು. ಕೊಲಂಬಿಯ ಯೂನಿವರ್ಸಿಟಿ ಮುಂದಾಯಿತು. ಇಂಥದೇ ಪ್ರಯೋಗದಲ್ಲಿ ಅದೂ ಯಶಸ್ವಿಯಾಯಿತು. ಈಗ ಬೇರೆ ದೇಶಗಳೂ ಇತ್ತ ಮುಖಮಾಡಿವೆ. ಹಾಗೆಯೇ ಐಸ್ಲೆಂಡ್ ಭಾರತದತ್ತಲೂ ಬೊಟ್ಟುಮಾಡುತ್ತಿದೆ. ನಮ್ಮ ಗುಲ್ಗರ್ಗ, ಬೆಳಗಾವಿ, ಬೀದರ್ ಆಚೆ ಹಾಗೂ ಇಡೀ ಮಧ್ಯಪ್ರದೇಶ ಸೇರಿದಂತೆ ಇತ್ತ ಗುಜರಾತಿನಿಂದ ಪೂರ್ವದಲ್ಲಿ ಆಂಧ್ರದವರೆಗೆ ಒಟ್ಟು 5,00,000 ಚದರ ಕಿಲೋ ಮೀಟರ್ ಪ್ರದೇಶವನ್ನು, ಐಸ್ಲೆಂಡ್‍ನಲ್ಲಿರುವಂತೆ ನಮ್ಮಲ್ಲೂ ಬಸಾಲ್ಟ್ ಎಂಬ ಜ್ವಾಲಾಮುಖಿ ಕಲ್ಲು ಆಕ್ರಮಿಸಿದೆ. ನೀವೂ ಇದನ್ನು ಪ್ರಯೋಗಾಲಯ ಮಾಡಿಕೊಳ್ಳಿ ಎನ್ನುತ್ತಿದೆ ಐಸ್ಲೆಂಡ್. ವಾಸ್ತವವಾಗಿ ಐಸ್ಲೆಂಡ್ ಬಹುಪಾಲು ಜೀವಂತ ಜ್ವಾಲಾಮುಖಿಗಳ ಮೇಲೆ ನಿಂತಿದೆ. ಆದರೆ ನಮ್ಮದು ಆರೂವರೆ ಕೋಟಿ ವರ್ಷಗಳ ಹಿಂದೆಯೇ ಟುಸ್ ಆದ ಜ್ವಾಲಾಮುಖಿಗಳ ಪ್ರದೇಶ. ಈಗ ಅವು ಜೀವಂತವಿಲ್ಲ, ಅಲ್ಲಿನ ನೆಲದ ಕೆಳಗಿನ ಉಷ್ಣತೆಯೂ ಹೆಚ್ಚಿಲ್ಲ.

CO2 STONE

ಒಂದು ಅಂಶವಂತೂ ನಿಜ. 500ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಉಷ್ಣಸ್ಥಾವರವೊಂದು ವರ್ಷಕ್ಕೆ 30 ಲಕ್ಷ ಟನ್ನು ಕಾರ್ಬನ್ ಡೈ ಆಕ್ಸೈಡ್ ಉತ್ಪಾದಿಸುತ್ತದೆ. ಈ ಪ್ರಮಾಣವನ್ನು ಹೀರಲು 62 ದಶಲಕ್ಷ ಗಿಡಗಳನ್ನು ನೆಟ್ಟು, ಅವು ಮರವಾಗಲು ಹತ್ತು ವರ್ಷ ಕಾಯಬೇಕು. ಇಂಥ ಪರಿಸ್ಥಿತಿ ಇರುವಾಗ ಐಸ್ಲೆಂಡ್‍ನ ಪ್ರಯೋಗ, ಅದೇ ನೆಲದ ಪರಿಸ್ಥಿತಿ ಇರುವ ಇತರ ದೇಶಗಳಿಗೂ ಮಾದರಿ. ಅದನ್ನಾದರೂ ಮಾಡಬಹುದು. ಹೇಗಿದ್ದರೂ ಹೂಳಬಹುದು ಎಂದು ಕಾರ್ಬನ್ ಡೈ ಆಕ್ಸೈಡನ್ನು ಉತ್ಸರ್ಜಿಸಲು ಹೋದರೆ – ಭೂಮಿಗೆ ಉಳಿಗಾಲವಿರಬಹುದು, ನಮಗಲ್ಲ. ವಿಜ್ಞಾನ ತಂತ್ರಜ್ಞಾನ ಒಡ್ಡಿದ ಸಮಸ್ಯೆಗಳಿಗೆ ಮತ್ತೆ ವಿಜ್ಞಾನ ತಂತ್ರಜ್ಞಾನದ ಮೊರೆಹೋಗಬೇಕು. ವಿಪರ್ಯಾಸವೆಂದರೆ ಇದಲ್ಲವೆ!

Leave a Reply