ಬ್ರೆಕ್ಸಿಟ್ ತಲ್ಲಣ: ಜಾಗತಿಕ ಷೇರು ಮಾರುಕಟ್ಟೆ ಕಂಪನ, ಭಾರತೀಯರಿಗೆ ಉದ್ಯೋಗ ಕಳೆದುಕೊಳ್ಳೋ ಭೀತಿ

ಡಿಜಿಟಲ್ ಕನ್ನಡ ಟೀಮ್:

ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರ ನಡೆಯುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಹಲವು ಬೆಳವಣಿಗೆಗಳಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಹಿಡಿದು, ಐಟಿ ಹಾಗೂ ಇತರೆ ಕ್ಷೇತ್ರಗಳ ಮೇಲೂ ಇದರ ಪರಿಣಾಮ ವ್ಯತಿರಿಕ್ತವಾಗಿದೆ.

ಬ್ರೆಕ್ಸಿಟ್ ನಂತರದ ಪ್ರಮುಖ ಬೆಳವಣಿಗೆಗಳು ಹೀಗಿವೆ:

  • ಬ್ರಿಟನ್ ಯುರೋಪ್ ಒಕ್ಕೂಟದಿಂದ ಹೊರ ಬರುತ್ತಿದ್ದಂತೆ ಜಾಗತಿಕ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. 2 ಟ್ರಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ನಷ್ಟವಾಗಿದೆ. 31 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಿನವೊಂದರ ಮಹಾ ಕುಸಿತ ಇದಾಗಿದೆ. ಅಮೆರಿಕದ ಡಾಲರ್ ಮುಂದೆ ಪೌಂಡ್ ಮೌಲ್ಯ ಶೇ.8 ರಷ್ಟು ಕುಸಿತ ಯುರೋಪ್ ಮಾರುಕಟ್ಟೆಗೆ ದೊಡ್ಡ ಹಿನ್ನಡೆಯಾಗಿದೆ. ಇದರ ಪರಿಣಾಮವಾಗಿ ಹೂಡಿಕೆದಾರರು ಚಿನ್ನ ಹಾಗೂ ಸರ್ಕಾರಿ ಬಾಂಡ್ ಗಳ ಮೇಲೆ ಹಣ ಹಾಕಲು ಹೆಚ್ಚು ಒಲವು ತೋರುತ್ತಿದ್ದಾರೆ.
  • ಟಾಟಾ ಷೇರು ಕುಸಿತ. ಬ್ರೆಕ್ಸಿಟ್ ನಿಂದ ತೊಂದರೆಗೊಳಗಾದ ಕಂಪನಿಗಳ ಪಟ್ಟಿಯಲ್ಲಿ ಭಾರತದ ಟಾಟಾ ಒಂದಾಗಿದೆ. 1907ರಿಂದ 19 ವಿವಿಧ ಕಂಪನಿಗಳನ್ನು ಟಾಟಾ ಬ್ರಿಟನ್ ನಲ್ಲಿ ಹೊಂದಿದೆ. ಟಾಟಾದ ಶ್.29 ರಷ್ಟು ಆದಾಯ ಬರುವುದು ಬ್ರಿಟನ್ ನಿಂದಲೇ. ಟಾಟಾ ಮೋಟಾರ್ಸ್ ನ ಶೇ. 7.99 ರಷ್ಟು, ಟಾಟಾ ಸ್ಟೀಲ್ ನ ಶೇ. 6.37 ರಷ್ಟು ಹಾಗೂ ಟಾಟಾ ಕನ್ಸಲ್ಟೆನ್ಸಿಯ ಶೇ. 2.78 ರಷ್ಟು ಷೇರು ಕುಸಿದಿದೆ.
  • ಬ್ರಿಟನ್ ನಿರ್ಗಮನದಿಂದ ತೀವ್ರ ಒತ್ತಡಕ್ಕೆ ಸಿಲುಕಿದ್ದ ಪ್ರಧಾನಿ ಡೇವಿಡ್ ಕೆಮರೂನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಯುರೋಪ್ ಯೂನಿಯನ್ ನಿಂದ ಹೊರಬಂದರೂ ಅದರೊಂದಿಗಿನ ಸಂಬಂಧ ಉಳಿಸಿಕೊಳ್ಳಬೇಕು. ದೇಶಕ್ಕೆ ಈಗ ಹೊಸ ಸಾರಥಿಯ ಅಗತ್ಯವಿದೆ. ಹೀಗಾಗಿ ಅಕ್ಟೋಬರ್ ವೇಳೆಗೆ ನೂತನ ಪ್ರಧಾನಿ ಆಯ್ಕೆಯಾಗಬೇಕು. ಹೊಸ ನಾಯಕ ದೇಶವನ್ನು ಉತ್ತಮ ಹಾದಿಯಲ್ಲಿ ಕರೆದೊಯ್ಯಬೇಕು ಎಂದಿದ್ದಾರೆ ಕೆಮರೂನ್.
  • ಬ್ರೆಕ್ಸಿಟ್ ನಿಂದಾಗಿ ಯುರೋಪ್ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಬ್ರಿಟನ್ ಹಾಗೂ ಇತರೆ ಯುರೋಪ್ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಭಾರತದ ಐಟಿ ಕ್ಷೇತ್ರದ ರಫ್ತಿನಲ್ಲಿ ಶೇ.17 ರಷ್ಟು ಯುಕೆಯದ್ದು. ಇದರ ಮೌಲ್ಯ 100 ಬಿಲಿಯನ್ ಡಾಲರ್ ಆಗಿದ್ದು, ಸದ್ಯ ಭಾರತೀಯ ಮೂಲದವರಿಗೆ ಉದ್ಯೋಗ ಅಭದ್ರತೆ ಎದುರಾಗಿದೆ.
  • ಬ್ರೆಕ್ಸಿಟ್ ರುಪಾಯಿಯ ಮೇಲೂ ಪರಿಣಾಮ ಬೀರಿದೆ. ‘ಇದು ಸದ್ಯದ ಚಲನೆ. ದೀರ್ಘಾವಧಿಯಲ್ಲಿ ರುಪಾಯಿ ಮೇಲೆ ಪರಿಣಾಮ ಉಳಿಯುವುದಿಲ್ಲ. ಬೇರೆ ಕರೆನ್ಸಿಗಳಿಗೆ ಹೋಲಿಸಿದರೆ ನಮ್ಮ ಸ್ಥಿರತೆ ಚೆನ್ನಾಗಿಯೇ ಇದೆ. ಬ್ರೆಕ್ಸಿಟ್ ನಮ್ಮ ಅರ್ಥವ್ಯವಸ್ಥೆ ಮೇಲೆ ಹೆಚ್ಚಿನ ಕಂಪನ ತರದಂತೆ ಎಲ್ಲ ಉಪಕ್ರಮಗಳೂ ನಮ್ಮ ಬಳಿ ಇವೆ’ ಅನ್ನೋದು ಆರ್ಬಿಐ ಗವರ್ನರ್ ರಘುರಾಮ ರಾಜನ್ ಆಶ್ವಾಸನೆ.

Leave a Reply