ಸ್ವಾಮಿಗೂ ವಾದ್ರಾಗೂ ಶುರುವಾದಾಗ ಸೆಣಸು, ಜೈರಾಂ ರಮೇಶರ ನೆನೆದಿಹುದು ಮನಸು!

 

ಡಿಜಿಟಲ್ ಕನ್ನಡ ವಿಶೇಷ:

ವಾರಾಂತ್ಯಕ್ಕೊಂದು ತಮಾಷೆಯ ಕದನವಿದೆ. ಅದುವೇ ಸುಬ್ರಮಣಿಯನ್ ಸ್ವಾಮಿ ವರ್ಸಸ್ ರಾಬರ್ಟ್ ವಾದ್ರಾ.

ತಮಾಷೆ ಏಕೆ ಅಂದ್ರಾ? ಸುಬ್ರಮಣಿಯನ್ ಸ್ವಾಮಿ ಏನೋ ಅರುಣ್ ಜೇಟ್ಲಿಯವರನ್ನು ಗುರಿಯಾಗಿಸಿ ಬಾಣ ಎಸೆದರೆ, ಅನಿರೀಕ್ಷಿತವಾಗಿ ರಾಬರ್ಟ್ ವಾದ್ರಾ ಬಂದು ಲಬೋ ಎನ್ನಬೇಕೇ? ನಿಜ, ವಾದ್ರಾಗೆ ಈ ಹಿಂದೆ ಸ್ವಾಮಿಯಿಂದ ಸಾಕಷ್ಟು ಗುದ್ದಿಸಿಕೊಂಡಿದ್ದರ ಉರಿ ಇದೆ. ಆದರೆ ಸ್ವಾಮಿ ವಾಗ್ಬಾಣ ಯಾಕೆ ಜೇಟ್ಲಿಯವರನ್ನು ಗುರಿಯಾಗಿರಿಸಿಕೊಂಡಿತ್ತೆಂಬುದಕ್ಕೆ ಸರಳ ಕಾರಣ, ಈ ಹೊತ್ತಿಗೆ ಸೂಟು- ಟೈ ಕಟ್ಟಿಕೊಂಡು ಚೀನಾದಲ್ಲಿ ಹೂಡಿಕೆ ಆಕರ್ಷಿಸುತ್ತಿರುವವರು ವಿತ್ತ ಸಚಿವ ಅರುಣ್ ಜೇಟ್ಲಿ. ಹೀಗಾಗಿ ಸ್ವಾಮಿ ಕಣ್ಣಿಗೆ ವೇಟರ್ ಥರ ಕಂಡವರು ಯಾರು ಎಂಬುದನ್ನು ಊಹಿಸುವುದಕ್ಕೆ ತೀರ ಬುದ್ಧಿಮತ್ತೆ ಬೇಕಾಗಿಲ್ಲ.

ಅಂದಹಾಗೆ, ಸುಬ್ರಮಣಿಯನ್ ಸ್ವಾಮಿ ಹೇಳಿದ್ದೇನು? ‘ನಮ್ಮ ದೇಶದ ಸಚಿವರುಗಳು ವಿದೇಶಕ್ಕೆ ತೆರಳಿದಾಗ ದೇಶೀಯ ಆಧುನಿಕ ಉಡುಗೆಗಳನ್ನು ತೊಡುವಂತೆ ಬಿಜೆಪಿ ಬುದ್ಧಿ ಹೇಳಬೇಕು. ಇಲ್ಲವಾದರೆ, ನಮ್ಮ ಸಚಿವರುಗಳು ಸೂಟುಬೂಟಿನಲ್ಲಿ ವೇಟರ್ ಗಳಂತೆ ಕಾಣ್ತಾರೆ’ ಇದು ಸ್ವಾಮಿ ಅವರ ಟ್ವೀಟ್.

ರಾಬರ್ಟ್ ವಾದ್ರಾ ತಮ್ಮ ಫೇಸ್ಬುಕ್ ಪೇಜಿನಲ್ಲಿ ಟಣ್ಣೆಂದು ನೆಗೆದೇಬಿಟ್ರು. ವಾದ್ರಾ ಬರೆದಿದ್ದು- ‘ಹಾಗಾದರೆ ವೇಟರ್ ಆಗಿರುವುದು ಗೌರವಾರ್ಹವಲ್ಲವೇ? ಗಮನ ಸೆಳೆಯುವುದಕ್ಕಾಗಿ ಹಾತೊರೆಯುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿಕೆ, ಕಠಿಣ ಪರಿಶ್ರಮದಿಂದ ದುಡಿಯುತ್ತಿರುವ ವೇಟರ್ ಗಳನ್ನು ಅವಹೇಳನ ಮಾಡಿದಂತೆ. ಇದು ಕೆಳಮಟ್ಟದ್ದು ಹಾಗೂ ವರ್ಗಭೇದದ ದೃಷ್ಟಿಕೋನ ಹೊಂದಿರುವುದು.’

ಇದಕ್ಕೆ ಸ್ವಾಮಿ ಪ್ರತಿಕ್ರಿಯೆಯೂ ಬಂದಾಗಿದೆ. ‘ವಾದ್ರಾ ತಾನು ಜೈಲಿನಿಂದ ತಪ್ಪಿಸಿಕೊಳ್ಳೋದು ಹೆಂಗೆ ಅಂತ ಯೋಚಿಸಲಿ. ರಾಜಕೀಯ ವಿಷಯಗಳಲ್ಲಿ ಪ್ರತಿಕ್ರಿಯಿಸೋ ಅಗತ್ಯ ಇಲ್ಲ..’

ಅದೇನೇ ಇರಲಿ…. ವಾದ್ರಾ ‘ವರ್ಗಭೇದ ಪಾಠ’ ಮಾತ್ರ ಕ್ರೂರ ವ್ಯಂಗ್ಯ. ಭಾರತವನ್ನು ಬನಾನಾ ರಿಪಬ್ಲಿಕ್ ಅಂತ ಆಡಿಕೊಂಡಿದ್ದ ಮಹಾನುಭಾವರಿಂದ ಯಾರನ್ನೂ ಕೀಳಾಗಿ ಕಾಣಬಾರದೆಂಬ ಉಪದೇಶ!

2012 ರಲ್ಲಿ ಭ್ರಷ್ಟಾಚಾರ ವಿರೋಧಿ ಭಾರತ ಸಂಘಟನೆಯ ಕಾರ್ಯಕರ್ತರು ವಾದ್ರಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದಾಗ, ವಾದ್ರ ನೀಡಿದ್ದ ಪ್ರತಿಕ್ರಿಯೆ ಹೀಗಿತ್ತು: ‘ಮ್ಯಾಂಗೊ ಪೀಪಲ್ ಇನ್ ಬನಾನಾ ರಿಪಬ್ಲಿಕ್’. ಇಲ್ಲಿ ವಾದ್ರಾ ಭಾರತವನ್ನು ಬನಾನಾ ರಿಪಬ್ಲಿಕ್ (ಅಸ್ಥಿರ ದೇಶ) ಹಾಗೂ ಸಾಮಾನ್ಯ ಜನರನ್ನು (ಆಮ್ ಆದ್ಮಿ) ಮಾವಿನ ವ್ಯಾಪಾರಿಗಳು ಎಂದಿದ್ದ. (ಲ್ಯಾಟಿನ್ ಅಮೆರಿಕ ರಾಷ್ಟ್ರಗಳಲ್ಲಿ ಸಂಪನ್ಮೂಲಗಳಿಲ್ಲದೇ ಅಸ್ಥಿರತೆ ತೀವ್ರವಾಗುತ್ತ, ಕೇವಲ ಬಾಳೆಹಣ್ಣಿನಂಥ ಉತ್ಪನ್ನಗಳ ರಫ್ತಿನ ಮೇಲಷ್ಟೇ ಅವಲಂಬಿಸಿರುವ ‘ಬಡತನ’ದ ಸ್ಥಿತಿ ಹಿನ್ನೆಲೆಯಲ್ಲಿ ಬನಾನಾ ರಿಪಬ್ಲಿಕ್ ಎಂಬ ಪದ ಬಂದಿದೆ)

ಭೂತದ ಬಾಯಲ್ಲಿ ಭಗವದ್ಗೀತೆ!

ಇಷ್ಟಾಗಿ ಸ್ವಾಮಿ ಸಲಹೆಯ ವೈಯಕ್ತಿಕ ಗುರಿಯನ್ನು ತೆಗೆದಿರಿಸಿ ನೋಡಿದರೆ ಇದು ಯೋಚಿಸಬೇಕಾದ ವಿಷಯವೇ. ಹೀಗೆ ಯೋಚಿಸಿದಾಗ, ಕೋಟಿನುದ್ದಕ್ಕೂ ತಮ್ಮ ಹೆಸರನ್ನೇ ಕೆತ್ತಲಾಗಿದ್ದ ಉಡುಗೆ ಧರಿಸಿದ್ದ ಪ್ರಧಾನಿ, ಯಾವತ್ತೂ ಕೋಟಿನಲ್ಲೇ ಹೊಳೆಯುವ ಹೆಚ್ಚಿನ ನ್ಯೂಸ್ ಆ್ಯಂಕರ್ ಗಳು ಎಲ್ಲರೂ ವಿಚಾರ ಮಾಡಬೇಕಾದದ್ದು…

ಈ ಹಂತದಲ್ಲಿ ಯಾರನ್ನಾದರೂ ನೆನಪಿಸಿಕೊಳ್ಳಬೇಕೆಂದರೆ ಅದು ಕಾಂಗ್ರೆಸ್ಸಿನ ಜೈರಾಂ ರಮೇಶ್ ಅವರನ್ನು. 2010 ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್ಮೆಂಟ್ (ಐಐಎಫ್ಎಂ) ನ ಏಳನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ತೆರಳಿದ್ದ ಜೈರಾಮ್ ರಮೇಶ್, ಘಟಿಕೋತ್ಸವದಲ್ಲಿ ಹಾಕಿಕೊಂಡಿದ್ದ ಗೌನ್ ಅನ್ನು ಕಿತ್ತೆಸೆದು ಹೇಳಿದ್ದು: ‘ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷಗಳಾಗಿವೆ. ಆದರೂ ನಾವು ವಸಾಹತುಶಾಹಿಗಳ ಕೆಟ್ಟ ಸಂಪ್ರದಾಯಕ್ಕೆ ಅಂಟಿಕೊಂಡಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ. ಘಟಿಕೋತ್ಸವದಲ್ಲಿ ಪುರಾತನ ಕಾಲದವರಂತೆ ಹಾಗೂ ಪೋಪ್ ಗಳಂತೆ ಗೌನ್ ತೊಟ್ಟು ಬರುವುದೇಕೆ. ಸಾಮಾನ್ಯ ಉಡುಪಿನಲ್ಲಿ ಏಕೆ ಬರುವುದಿಲ್ಲ.’

ಚಪ್ಪಾಳೆ!

Leave a Reply