ಎಸ್ ಎಂ ಕೃಷ್ಣ ಭಿನ್ನರ ತಾಳಕ್ಕೆ ಕುಣಿಯೋ ಸಾಧ್ಯತೆ ತೀರಾ ಕಡಿಮೆ

ಡಿಜಿಟಲ್ ಕನ್ನಡ ವಿಶೇಷ:

ರಾಜಕೀಯದಲ್ಲಿ ಬಂಡಾಯ ಸಾಮಾನ್ಯ. ಕೆಲವೊಮ್ಮೆ ಅದು ತಾರ್ಕಿಕ ಅಂತ್ಯ ಕಾಣುತ್ತದೆ. ಇನ್ನೂ ಕೆಲವೊಮ್ಮೆ ಅಧಿಕಾರ ರಾಜಕಾರಣದಲ್ಲಿ ನಲುಗಿ ಮಲಗುತ್ತದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡಾಯ ಸಾರಿರುವ ಸಚಿವ ಸ್ಥಾನ ವಂಚಿತರು ಮುಂದಿನ ಮಾರ್ಗದರ್ಶನಕ್ಕಾಗಿ ತಮ್ಮತ್ತ ನೋಡುತ್ತಿದ್ದರೂ ಎಸ್.ಎಂ. ಕೃಷ್ಣ ಅವರು ಯಾವುದೇ ದುಡುಕಿನ ಹೆಜ್ಜೆ ಇಡದಿರುವ ಸಾಧ್ಯತೆಯೇ ಹೆಚ್ಚು.

ಹಾಗೆ ನೋಡಿದರೆ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅನೇಕ ಬಾರಿ ಕೃಷ್ಣ ಅವರ ವಾಗ್ಬಾಣಕ್ಕೆ ಗುರಿಯಾಗಿದೆ. ಸಿದ್ದರಾಮಯ್ಯ ಸಂಪುಟ ಸಮತೋಲಿತವಲ್ಲ ಎಂದು ಮೊದಲು ಟೀಕೆ ಮಾಡಿದವರು ಕೃಷ್ಣ. ಇದೀಗ 14 ಮಂದಿ ಸಚಿವರನ್ನು ಸಂಪುಟದಿಂದ ಕೈಬಿಡುವ ಮೂಲಕ ಸಿದ್ದರಾಮಯ್ಯನವರು ಕೃಷ್ಣ ಆರೋಪವನ್ನು ಅನುಮೋದಿಸಿದ್ದಾರೆ. ಒಂದೊಮ್ಮೆ ಸಂಪುಟ ಸಮರ್ಥವಾಗಿದ್ದಿದ್ದರೆ ಇಷ್ಟೊಂದು ಮಂದಿಯನ್ನು ಕೈಬಿಡುವ ಅಗತ್ಯ ಬರುತ್ತಿರಲಿಲ್ಲ ಎಂಬುದು ಬೇರೆ ಮಾತು. ಆದರೆ ಈಗ ಎದ್ದಿರುವ ಬಂಡಾಯದಲ್ಲಿ ಅನಗತ್ಯ ಆಸಕ್ತಿ ತೋರಿ ರಾಜಕೀಯ ಮುತ್ಸದ್ಧಿ ಹೆಸರಿಗೆ ಕಳಂಕ ತಂದುಕೊಳ್ಳಲು ಸಿದ್ಧರಿಲ್ಲದ ಕೃಷ್ಣ ಸ್ಥಿತಪ್ರಜ್ಞತೆ ಮೊರೆ ಹೋಗಲಿದ್ದಾರೆ.

ನೇತ್ರ ಚಿಕಿತ್ಸೆ ನಿಮಿತ್ತ ಮುಂಬಯಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೃಷ್ಣ ಅವರು ಬೆಂಗಳೂರಿಗೆ ಈಗ ಬರುತ್ತಾರೆ, ಆಗ ಬರುತ್ತಾರೆ, ಬಂದು ಭಿನ್ನರ ಅಹವಾಲು ಆಲಿಸುತ್ತಾರೆ, ಮುಂದಿನ ನಡೆ ಬಗ್ಗೆ ಸಲಹೆ ನೀಡುತ್ತಾರೆ ಎಂಬ ಮಾತು ಭಿನ್ನರ ಪಾಳೆಯದಲ್ಲಿ ಮೂರು ದಿನಗಳಿಂದಲೂ ಕೇಳಿ ಬರುತ್ತಿದೆ. ಕೃಷ್ಣ ಅವರೇ ಬಂಡಾಯದ ನಾಯಕತ್ವ ವಹಿಸುತ್ತಾರೆ ಎಂಬ ಮಾತು ಭಿನ್ನರ ಅತ್ಯುತ್ಸಾಹದ ಪ್ರತೀಕವಾಗಿತ್ತು. ಆದರೆ ತಮ್ಮ ರಾಜಕೀಯ ಜೀವನದಲ್ಲಿ ಇಂಥ ಅನೇಕ ಬಂಡಾಯಗಳನ್ನು ಕಂಡಿರುವ ಕೃಷ್ಣ ಅವರಿಗೆ ಭಿನ್ನ ಚಟುವಟಿಕೆಗಳ ಸ್ಥಿರತೆ ಮತ್ತು ಆಯುಷ್ಯದ ಬಗ್ಗೆ ಖಾತರಿಯಿಲ್ಲ. ಹೀಗಾಗಿ ಬೆಂಗಳೂರು ಪ್ರಯಾಣ ವಿಳಂಬ ಅವಧಿಯನ್ನು ತಮ್ಮ ನಡೆಯ ನಿಖರತೆಗೆ ವಿನಿಯೋಗಿಸಿದ್ದಾರೆ.

ಕೃಷ್ಣ ಅವರ ಆಲೋಚನೆ ಸರಿಯಾಗಿಯೇ ಇದೆ. ಏಕೆಂದರೆ ಬಂಡಾಯ ಕಾಲದ ಜತೆ ಕರಗಬಹುದು, ಅರಸಿ ಬರುವ ಅಧಿಕಾರದ ಪದತಲದಲ್ಲಿ ಮಲಗಬಹುದು. ಅಧಿಕಾರದ ಮುಂದೆ ಏನೂ ಆಗಬಹುದು. ಆಗ ಭಿನ್ನರನ್ನು ನೆಚ್ಚಿಕೊಂಡ ನಾಯಕರು ಅಪಹಾಸ್ಯಕ್ಕೆ ಗುರಿ ಆಗುತ್ತಾರೆ. ಸಿದ್ದರಾಮಯ್ಯ ಅವರ ಬಳಿ ಅಧಿಕಾರವಿದೆ. ಮಿಗಿಲಾಗಿ ಸನ್ನಿವೇಶ ಖರೀದಿ ತಾಕತ್ತೂ ಇದೆ. ಈ ಪ್ರಜ್ಞೆ ಕೃಷ್ಣ ಅವರಿಗೆ ಚೆನ್ನಾಗಿಯೇ ಇದೆ. ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಕೇಂದ್ರ ಸಚಿವ ಸ್ಥಾನವನ್ನು ಈಗಾಗಲೇ ಅಲಂಕರಿಸಿರುವ ಕೃಷ್ಣ ಅವರಿಗೆ ಅಧಿಕಾರದ ಹಪಾಹಪಿ ಉಳಿದಿಲ್ಲ. ಭಿನ್ನರನ್ನು ನೆಚ್ಚಿಕೊಂಡು ಮತ್ತೊಮ್ಮೆ ಅಧಿಕಾರ ಹಿಡಿಯುವ ಭ್ರಮೆಯೂ ಇಲ್ಲ. ಹೀಗಾಗಿ ಭಿನ್ನಮತೀಯರ ಅಭೀಪ್ಸೆಯಿಂದ ನಾಲ್ಕು ಹೆಜ್ಜೆ ಹೊರಗೆ ನಿಂತೇ ಕೃಷ್ಣ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಈಗ ಭಿನ್ನರ ಪೈಕಿ ಶ್ರೀನಿವಾಸ ಪ್ರಸಾದ್ ಮತ್ತು ಅಂಬರೀಷ್ ಮುಂಚೂಣಿ ನಾಯಕರು. ಕೃಷ್ಣ ಮತ್ತು ಅಂಬರೀಷ್ ನಡುವೆ ಇರುವ ಮಂಡ್ಯ ರಾಜಕೀಯ ವೈಷಮ್ಯ ಸಿದ್ದರಾಮಯ್ಯ ವಿರುದ್ದದ ಸಿಟ್ಟನ್ನೂ ಮೀರಿಸುವಂಥದ್ದು. ಸಿದ್ದರಾಮಯ್ಯ ವಿರುದ್ಧದ ಕೋಪ ಇವರಿಬ್ಬರನ್ನು ಒಂದುಗೂಡಿಸುತ್ತದೆ ಎಂಬ ಬಗ್ಗೆ ಅವರಿಗೇ ಖಾತರಿ ಇಲ್ಲ. ಇನ್ನು ಶ್ರೀನಿವಾಸ ಪ್ರಸಾದ್ ಹೋರಾಟ ಮಹತ್ವಾಕಾಂಕ್ಷೆ ರಹಿತವಾದದ್ದು. ಸಿದ್ದರಾಮಯ್ಯ ಹಠಾವೋ ಅಭಿಪ್ರಾಯ ಕ್ರೋಡೀಕರಣಕ್ಕಷ್ಟೇ ಸೀಮಿತ. ಖಮರುಲ್ ಇಸ್ಲಾಂ ಮಾತನ್ನು ಅವರ ಮನೆಯವರೇ ಕೇಳುತ್ತಾರೆನ್ನುವ ಗ್ಯಾರಂಟಿ ಇಲ್ಲ. ಮೊದಲ ದಿನ ಆಕಾಶ-ಭೂಮಿ ಒಂದುಮಾಡಿ ಎಗರಾಡಿದ ಬಾಬುರಾವ್ ಚಿಂಚನಸೂರ್ ಈಗ ಭಿನ್ನರ ಕೈಗೇ ಸಿಗದೆ ಓಡಾಡುತ್ತಿದ್ದಾರೆ. ಸಮಾನ ಮನಸ್ಕ ವೇದಿಕೆಯ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್ ಹಾಗೂ ಮುನಿರತ್ನ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಪಾಳೆಯದಲ್ಲಿ ಕಾಣಿಸಿಕೊಂಡರೂ ಅವರನ್ನು ಭಿನ್ನರು ಎಂದು ಭಿನ್ನರೇ ಒಪ್ಪಿಲ್ಲ. ಈ ಮಧ್ಯೆ, ಸೋಮಶೇಖರ್ ಮತ್ತು ಭೈರತಿ ಬಸವರಾಜ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸದಸ್ಯರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಉಳಿದ ಭಿನ್ನ ಶಾಸಕರ ಪೈಕಿ ಹಲವರನ್ನು ಇಂಥದೇ ಉಡುಗೊರೆಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಹೀಗಿರುವಾಗ ಯಾರನ್ನು ನಂಬಿಕೊಂಡು, ಯಾರಿಗೋಷ್ಕರ, ಯಾತಕ್ಕಾಗಿ ಕೃಷ್ಣ ಅವರು ರಾಜಕೀಯ ಮಾಡೀಯಾರು? ಅದರಿಂದ ಅವರಿಗೆ ಆಗಬೇಕಿರುವುದಾದರೂ ಏನು? ಹೀಗಾಗಿ ಕೃಷ್ಣ ಅವರು ಈಗಿನ ಭಿನ್ನಮತೀಯ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ತಾವರೆ ಎಲೆ ಮೇಲಿನ ನೀರಿನ ಹನಿಯಂತಿರುವ ಸಂಭವ ಹೆಚ್ಚು.

ಹಿಂದೆ ಕೃಷ್ಣ ಅವರು 1999 ರಿಂದ 2004 ರವರೆಗೆ ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದ ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್ ಹಾಗೂ ಎಚ್. ವಿಶ್ವನಾಥ್ ಅವರಿಂದ ಆಗಾಗ್ಗೆ ಭಿನ್ನರಾಗಗಳು ಕೇಳಿ ಬಂದಿದ್ದವು. ಆಗ ಕೃಷ್ಣ ಮೌನರಾಗದಿಂದಲೇ ಅವುಗಳನ್ನು ನಿವಾರಿಸಿಕೊಂಡಿದ್ದರು. ಮಾತಿಗಿಂತ ಮೌನದಿಂದಲೇ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಿಕೊಳ್ಳಬಹುದು ಎಂಬುದು ಅವರ ನಂಬಿಕೆ. ಆ ನಂಬಿಕೆಯಂತೇ ನಡೆದಿದ್ದರು. ಅಧಿಕಾರದಲ್ಲಿದ್ದಾಗಲೇ ಬಾಯಿ ಬಿಡದ, ಬಾಯಿಗೆ ಬೀಳದ ಕೃಷ್ಣ ಇದೀಗ ರಾಜಕೀಯ ವಾನಪ್ರಸ್ಥದಲ್ಲಿರುವಾಗ ಸುಖಾಸುಮ್ಮನೆ ಅನ್ಯರ ಬಾಯಿಗೆ ವಸ್ತುವಾಗುತ್ತಾರೆಯೇ? ಸಾಧ್ಯತೆಗಳು ತೀರಾ ಕಡಿಮೆ.

Leave a Reply