ಮುಖ್ಯಮಂತ್ರಿಗೆ ಮುತ್ತು, ಎನ್ ಎಸ್ ಜಿ ಸುಖ-ದುಃಖ, ಬಿಹಾರದ ಟಾಪರ್ ಗಳು ಜೈಲಿಗೆ

ಮುಖ್ಯಮಂತ್ರಿಗೆ ಮುತ್ತಿನ ಭಾಗ್ಯ… ಭಾನುವಾರದ ಮೆರುಗಿದು. ಅರಮನೆ ಮೈದಾನದಲ್ಲಿ ‘ಕರ್ನಾಟಕ ಪ್ರದೇಶ ಕುರುಬ ಸಮಾಜ’ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆಯಾಗಿತ್ತು. ಉಪಸ್ಥಿತರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಗಿರಿಜಾ ಎಂಬುವವರು ಕೆನ್ನೆಗೆ ಮುತ್ತಿಟ್ಟರು. ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತ, ತಾಯಿಯ ವಾತ್ಸಲ್ಯ ಭಾವದಿಂದ ಕೊಟ್ಟ ಮುತ್ತದು, ಸಿದ್ದರಾಮಯ್ಯನಂಥವರ ಸಿಂಹ ಈವರೆಗೆ ಬಂದಿಲ್ಲ ಅಂತ ಹೊಗಳಿದರು.

CM Kiss1

 

ಎನ್ ಎಸ್ ಜಿ ಕನಸು ಜೀವಂತ, ಆದ್ರೆ ಯಶವಂತ್ ಸಿನ್ಹಾ ಸಿಡಿಮಿಡಿ

ಎನ್ ಎಸ್ ಜಿ ಸದಸ್ಯತ್ವದಲ್ಲಿ ಎಲ್ಲವೂ ಕೈಬಿಟ್ಟುಹೋಗಿಲ್ಲ ಎಂಬ ಆಶಾವಾದ ಮೊಳಕೆ ಒಡೆದಿದೆ. ಭಾರತದ ಸದಸ್ಯತ್ವ ಹಾಗೂ ಅಣು ಪ್ರಸರಣ ನೀತಿಗೆ ವಿನಾಯತಿ ಕೊಡುವ ಬಗ್ಗೆ ಪರಾಮರ್ಶಿಸಲು ಎನ್ ಎಸ್ಜಿ ಒಕ್ಕೂಟವು ಉನ್ನತ ಸಮಿತಿಯೊಂದನ್ನು ರಚಿಸಿರುವುದಾಗಿ ವರದಿಗಳು ಬರುತ್ತಿವೆ. ಇದು ಈ ವರ್ಷಾಂತ್ಯಕ್ಕೆ ತನ್ನ ನಿರ್ಧಾರ ಪ್ರಕಟಿಸಲಿದೆ. ಇನ್ನೊಂದೆಡೆ, ‘ಎನ್ ಎಸ್ ಜಿ ಸೇರುವುದಕ್ಕೆ ಇಷ್ಟೆಲ್ಲ ಉತ್ಸುಕತೆ ತೋರಿಸುವ ಅಗತ್ಯವೇ ಇಲ್ಲ. ಈ ಸರ್ಕಾರಕ್ಕೆ ತಪ್ಪು ಸಲಹೆ ಕೊಡುವವರೇ ಹೆಚ್ಚಿದ್ದಾರೆ. ಪಾಕಿಸ್ತಾನದ ಜತೆಗಿನ ಸರ್ಕಾರದ ನೀತಿಯೂ ಸರಿ ಇಲ್ಲ. ಇವೆಲ್ಲವುಗಳ ಬಗ್ಗೆ ನಮ್ಮ ಸಲಹೆ ಪಡೆಯುವುದಕ್ಕೂ ಈಗ ಅಧಿಕಾರದಲ್ಲಿರುವವರು ಸಿದ್ಧರಿಲ್ಲ’ ಎಂದು ಬಿಜೆಪಿ ಮಾರ್ಗದರ್ಶಕ ಮಂಡಳಿಯ ಹಿರಿಯ ರಾಜಕಾರಣಿ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ.

ಬಿಹಾರದ ಟಾಪರ್ಸ್ ಗಳ ಕೈಗೆ ಬೇಡಿ

ಬಿಹಾರದ ಇಂಟರ್ ಮಿಡಿಯೇಟ್ ಎಕ್ಸಾಮ್ (12 ನೇ ತರಗತಿ) ನ ಫಲಿತಾಂಶದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಅಗ್ರಸ್ಥಾನ ಪಡೆದಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಮಾನವಶಾಸ್ತ್ರದಲ್ಲಿ ಅಗ್ರಸ್ಥಾನ ಪಡೆದಿದ್ದ ರೂಬಿ ರೈ ಎಂಬ ವಿದ್ಯಾರ್ಥಿನಿ ಶನಿವಾರ ಬಿಹಾರ ಶಾಲಾ ಪರೀಕ್ಷಾ ಮಂಡಳಿ (ಬಿಎಸ್ಇಬಿ) ನಡೆಸಿದ ಮರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ಆಕೆಯನ್ನು ಬಂಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ನ್ಯಾಯಾಲಯ ಶನಿವಾರ ರೂಬಿ ಹಾಗೂ ಇತರೆ ವಿಭಾಗಗಳ ಅಗ್ರಶ್ರೇಯಾಂಕಿತರನ್ನು ಬಂಧಿಸಲು ಜಾಮೀನುರಹಿತ ಬಂಧನದ ವಾರೆಂಟ್ ಜಾರಿ ಮಾಡಿತ್ತು. ಆ ಪೈಕಿ ವಿಜ್ಞಾನ ವಿಭಾಗದ ಸೌರಭ್ ಶ್ರೇಷ್ಠ, ಮೂರನೇ ಅಗ್ರಶ್ರೇಯಾಂಕಿತ ರಾಹುಲ್ ಕುಮಾರ್ ಮತ್ತು ವಿಷ್ಣು ರೈ ಕಾಲೇಜಿನ ಪ್ರಾಂಶುಪಾಲರ ಪುತ್ರಿ ಶಾಲಿನಿ ರೈ ಸಹ ಇದ್ದರು. ಪ್ರಕರಣದಲ್ಲಿ ಈವರೆಗೂ 17 ಮಂದಿ ಬಂಧನವಾಗಿದ್ದು, ಮಿಕ್ಕವರನ್ನು ಶೀಘ್ರವೇ ಬಂಧಿಸಲಾಗುವುದು ಎಂದಿದ್ದಾರೆ ಎಸ್ಐಟಿ ಅಧಿಕಾರಿ ಮನು ಮಹರಾಜ್.

ಈ ಹಗರಣ ಬೆಳಕಿಗೆ ಬಂದ ನಂತರ ಬಿಎಸ್ಇಬಿಯ ನೂತನ ಮುಖ್ಯಸ್ಥ ಆನಂದ್ ಕಿಶೋರ್, 300 ನೌಕರರ ವರ್ಗಾವಣೆ ಮಾಡಿದ್ದು, 27 ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆಂಬ ವರದಿಗಳು ಬಂದಿವೆ.

ಆಪ್ ರಂಪಾಟ ಜೋರು

ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪ್ರಹಸನ ದಿನನಿತ್ಯ ಎಂಬಂತೆ ತೆರೆದುಕೊಳ್ಳುತ್ತಿದೆ. ‘ನಾನಾ ಆರೋಪಗಳ ಮೇಲೆ ಆಪ್ ಶಾಸಕರನ್ನು ಬಂಧಿಸುವುದು ಮೋದಿ ಸರ್ಕಾರದ ಉದ್ದೇಶ. ಹೀಗಾಗಿ ಎಲ್ಲ 60 ಶಾಸಕರನ್ನೂ ಬಂಧಿಸಿ, ನಂತರವಾದರೂ ಅಭಿವೃದ್ಧಿಗೆ ಅನುವು ಮಾಡಿಕೊಡಿ’ ಎಂದು ಕೇಳಲು ಬಂದಿದ್ದೇವೆ ಎಂದು ಹೇಳುತ್ತ, ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನೇತೃತ್ವದಲ್ಲಿ ಹಲವು ಶಾಸಕರು ಪ್ರಧಾನಿ ಕಚೇರಿಗೆ ನುಗ್ಗಲು ಯತ್ನಿಸಿದರು. ಆಗ ಮಧ್ಯಪ್ರವೇಶಿಸಿದ ಪೋಲೀಸರು ಇವರೆಲ್ಲರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

 

emergency- Keshav Shilpa

ತುರ್ತು ಪರಿಸ್ಥಿತಿ ವಾರ್ಷಿಕ ದಿನದ ನೆನಕೆಗೆ ಬೆಂಗಳೂರಿನ ಕೇಶವಶಿಲ್ಪದಲ್ಲಿ ಬಿಜೆಪಿ ನಡೆಸಿದ ಸಭೆಯಲ್ಲಿ ಮುರಳೀಮನೋಹರ ಜೋಶಿ ಪಾಲ್ಗೊಂಡು ಆ ದಿನಗಳ ಕರಾಳ ನೆನಪುಗಳನ್ನು ಹಂಚಿಕೊಂಡರು. ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಶಾಸಕರಾದ ಸಿ. ಟಿ. ರವಿ, ಸುರೇಶ್ ಕುಮಾರ್  ಮತ್ತಿತರರು ಹಾಜರಿದ್ದರು.

 

Leave a Reply