ಕೋಟ್ಯಂತರ ಡಾಲರ್ ಸುರಿದು ಪನಾಮಾ ಕಾಲುವೆ ಹಿಗ್ಗಿಸಲಾಗಿದೆ, ನೀವು ಓದಲೇಬೇಕಾದ ಮಹಾಸಾಗರಗಳೆರಡರ ಕೊಂಡಿಯ ರೋಚಕ ಕತೆ ಇಲ್ಲಿದೆ!

ಡಿಜಿಟಲ್ ಕನ್ನಡ ಟೀಮ್:

ಪನಾಮಾ ಕಾಲುವೆ.. ಅಮೆರಿಕ ಮತ್ತು ಏಷ್ಯಾ ರಾಷ್ಟ್ರಗಳ ನಡುವಣ ವ್ಯಾಪಾರಕ್ಕೆ ವೇದಿಕೆಯಾಗಿರುವ ಸಮುದ್ರ ಮಾರ್ಗದ ಸಂಪರ್ಕ ಕೊಂಡಿ. ಈ ಪನಾಮಾ ಕಾಲುವೆ ಕಥೆ ಈಗೇಕೆ ಅಂತೀರಾ? 77 ಕಿ.ಮೀ ಉದ್ದದ ಈ ಕಾಲುವೆ ನವೀಕರಣಗೊಂಡಿದೆ. ಈ ನವೀಕರಣ ಮಾರ್ಗ ಭಾನುವಾರ ಲೋಕಾರ್ಪಣೆಯಾಗಲಿದೆ. ಇದರೊಂದಿಗೆ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವಣ ಹಡಗು ಸಂಚಾರ ಮತ್ತಷ್ಟು ಸುಗಮವಾಗಲಿದ್ದು ಜಾಗತಿಕ ವ್ಯಾಪಾರಕ್ಕೆ ಹೊಸ ಶಕ್ತಿಯಾಗಲಿದೆ. ಹೀಗಾಗಿ ಪನಾಮಾ ಕಾಲುವೆಯ ಮಹತ್ವ ಹಾಗೂ ಅದರ ಬಗೆಗಿನ ಕುತೂಹಲ ಅಂಶ ಇಲ್ಲಿದೆ..

ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪನ್ನಗಳ ರಫ್ತು ಮತ್ತು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಅವಲಂಬಿತವಾಗಿರೋದೇ ಸಮುದ್ರ ಯಾನ ಹಾಗೂ ಹಡಗುಗಳ ಮೇಲೆ. ಹೀಗೆ ಅಮೆರಿಕ ರಾಷ್ಟ್ರಗಳಿಗೂ ಏಷ್ಯಾ ರಾಷ್ಟ್ರಗಳ ನಡುವಣ ಸಮುದ್ರ ಮಾರ್ಗವನ್ನು ಕಿರಿದಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಈ ಪನಾಮಾ ಕಾಲುವೆ. ಈಗ ಈ ಕಾಲುವೆ ವಿಸ್ತರಣೆಯಿಂದ ಜಾಗತಿಕ ವ್ಯಾಪಾರ ಮತ್ತಷ್ಟು ಸಲೀಸಾಗಲಿದೆ.

ಈ ಕಾಲುವೆಗೆ ಶತಮಾನದ ಇತಿಹಾಸವಿದೆ. ಈ ಪನಾಮಾ ಕಾಲುವೆ ನಿರ್ಮಾಣಕ್ಕೆ ಮೊದಲು ಕೈ ಹಾಕಿದ್ದು ಫ್ರಾನ್ಸ್. ಅದೂ 1881 ರಲ್ಲಿ. ಆದರೆ, ಎಂಜಿನಿಯರಿಂಗ್ ಸಮಸ್ಯೆಗಳಿಂದ ಈ ಯೋಜನೆ ಕೈಚೆಲ್ಲಿತು. ನಂತರ ಅಮೆರಿಕ 1904 ರಲ್ಲಿ ಈ ಯೋಜನೆ ಕೈಗೆತ್ತಿಕೊಂಡು ಹತ್ತು ವರ್ಷಗಳ ನಂತರ ಅಂದರೆ, 1914ರಲ್ಲಿ ಕಾಮಗಾರಿ ಪೂರ್ಣಗೊಂಡು ಚಾಲನೆ ಆರಂಭವಾಯಿತು.

ಈ ಕಾಲುವೆಯಿಂದ ಸಮುದ್ರ ಮಾರ್ಗ ಕಿರಿದಾಗಿದ್ದೇಗೆ..

ಒಮ್ಮೆ ವಿಶ್ವ ಭೂಪಟವನ್ನು ಕಣ್ಮುಂದೆ ತಂದುಕೊಳ್ಳಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ರಾಷ್ಟ್ರಗಳು ಏಷ್ಯಾ ರಾಷ್ಟ್ರಗಳಾದ ಭಾರತ, ಚೀನಾ, ಮಲೇಷಿಯಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಇತರೆ ರಾಷ್ಟ್ರಗಳ ಜತೆ ಸಮುದ್ರ ಮಾರ್ಗದಲ್ಲಿ ಸಂಪರ್ಕ ಸಾಧಿಸಬೇಕೆಂದರೆ ಎರಡು ಮಾರ್ಗವಿದೆ. ಒಂದು ಆಫ್ರಿಕಾ ಖಂಡವನ್ನು ದಾಟಿ ಹಿಂದೂ ಮಹಾಸಾಗರದಿಂದ ಭಾರತದ ಮುಖೇನ ಇತರೆ ಏಷ್ಯಾ ರಾಷ್ಟ್ರಗಳನ್ನು ತಲುಪುತ್ತದೆ. ಮತ್ತೊಂದು ದಕ್ಷಿಣ ಅಮೆರಿಕವನ್ನು ಸುತ್ತು ಹಾಕಿ ಆಸ್ಟ್ರೇಲಿಯಾ ಕಡೆಯಿಂದ ಸಂಪರ್ಕ ಸಾಧಿಸುವುದು.

panama-canal-map

Panama_Canal_Map_EN

ಪನಾಮಾ ಕಾಲುವೆ ಹಾಗೂ ಅದು ಸಾಗುವ ಮಾರ್ಗ..

ಆದರೆ, ಈ ಎರಡು ಸುದೀರ್ಘ ಹಾದಿಗೆ ಬ್ರೇಕ್ ಹಾಕಿ ಸುಗಮ ಮಾರ್ಗ ಕಲ್ಪಿಸಿರೋದೆ ಪನಾಮಾ ಕಾಲುವೆ. ಭೂಪಟದಲ್ಲಿ ಉತ್ತರ ಅಮೆರಿಕ ಹಾಗೂ ದಕ್ಷಿಣ ಅಮೆರಿಕ ನಡುವೆ ಚಿಕ್ಕ ಎಳೆಯಲ್ಲಿ ಸಂಪರ್ಕಕೊಂಡಿಯಂತೆ ಕಾಣುವ ಪ್ರದೇಶವೇ ಪನಾಮ ದೇಶ.

ಈ ಭಾಗದಲ್ಲಿರುವ ಕೆರೆ ಹಾಗೂ ಕಾಲುವೆಗಳ ಮಾರ್ಗವಾಗಿ ಉತ್ತರ ಅಟ್ಲಾಂಟಿಕ ಮತ್ತು ದಕ್ಷಿಣ ಫೆಸಿಫಿಕ್ ಸಾಗರ ನಡುವೆ ಸಂಪರ್ಕ ಕಲ್ಪಿಸಲಾಗಿದೆ. ಈ 77 ಕಿ.ಮೀ ಉದ್ದದ ಸಂಪರ್ಕವನ್ನೇ ಪನಾಮಾ ಕಾಲುವೆ ಅಂತಾರೆ.

ಕಾಲುವೆ ವಿಸ್ತರಣೆ ಅಂದ್ರೆ…

102 ವರ್ಷಗಳ ಇತಿಹಾಸ ಹೊಂದಿರುವ ಈ ಕಾಲುವೆಯಲ್ಲಿ ಇಷ್ಟು ದಿನವಿದ್ದ ಹಡಗು ಸಂಚಾರ ಸಾಮರ್ಥ್ಯ ಕಡಿಮೆ ಇತ್ತು (5 ಸಾವಿರ ಕಂಟೇನರ್ ಸಾಮರ್ಥ್ಯದ ಹಡಗು). ಈಗ ಇದರ ಸಾಮರ್ಥ್ಯ ಹೆಚ್ಚಿದ್ದು 14 ಸಾವಿರ ಕಂಟೇನರ್ ಸಾಮರ್ಥ್ಯದ ಹಡಗು ಸಂಚಾರ ಮಾಡಬಹುದು. ಇದರೊಂದಿಗೆ ಮೂರುಪಟ್ಟು ಹೆಚ್ಚಿನ ಸಾಮರ್ಥ್ಯದ ಹಡಗು ಸಂಚಾರ ಆರಂಭಗೊಂಡಿದೆ. ಪರಿಣಾಮ ಇನ್ನು ಮುಂದೆ ಉತ್ಪನ್ನ ಹಾಗೂ ಸರಕು ಸಾಗಾಣೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣಬಹುದಾಗಿದೆ. ಈ ಕಾಲುವೆ ವಿಸ್ತೀರ್ಣಕ್ಕೆ ತಗುಲಿರುವ ವೆಚ್ಚ 5.4 ಬಿಲಿಯನ್ ಅಮೆರಿಕನ್ ಡಾಲರ್. 2007 ರಲ್ಲಿ ಈ ಕಾಲುವೆ ವಿಸ್ತರಣೆ ಕಾರ್ಯಾರಂಭಗೊಂಡಿದ್ದು, 2015ರಲ್ಲಿ ಮುಕ್ತಾಯಕಂಡಿದೆ. ಜೂನ್ 26, 2016 ರಂದು ಈ ಕಾಲುವೆ ಲೋಕಾರ್ಪಣೆಯಾಗುತ್ತಿದೆ.

ಇಲ್ಲಿ 77 ಕಿ.ಮೀ ಉದ್ದಕ್ಕೂ ಈ ಕಾಲುವೆಯನ್ನು ವಿಸ್ತರಿಸಿಲ್ಲ. ಈ ಪನಾಮಾ ಕಾಲುವೆಯ ಎರಡು ತುದಿಯಲ್ಲಿರುವ ಪ್ರವೇಶ ದ್ವಾರಗಳನ್ನು ವಿಸ್ತರಿಸಲಾಗಿದೆ. ಅವುಗಳೆಂದರೆ ಅಟ್ಲಾಂಟಿಕ್ ಸಾಗರದ ಕಡೆ ಗಟುನ್ ಪ್ರದೇಶದಲ್ಲಿ ಹಾಗೂ ಫೆಸಿಫಿಕ್ ಸಾಗರದ ಕಡೆ ಮೈರಾಫ್ಲೋರ್ಸ್ ಪ್ರವೇಶ ದ್ವಾರಗಳು. ಈ ಎರಡು ದ್ವಾರಗಳನ್ನು ಮೇಲಿನ ನಕ್ಷೆಯಲ್ಲಿ ಕಾಣಬಹುದು. ಈ ಹಡಗು ಸಂಚಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ಪ್ರವೇಶ ದ್ವಾರಗಳಲ್ಲಿ ಅಳವಡಿಸಲಾಗಿರುವ ಲಾಕ್ ವ್ಯವಸ್ಥೆ. ಅದ್ಹೇಗೆ ಅಂತಾ ಇಲ್ಲಿ ನೋಡಿ..

panama-canal locks

ಪನಾಮಾ ಕಾಲುವೆಯಲ್ಲಿ ಪ್ರಮುಖ ಪಾತ್ರ ವಹಿಸುವ ಲಾಕ್ ವ್ಯವಸ್ಥೆಯ ಗ್ರಾಫಿಕ್ ಚಿತ್ರ..

ಈ ಪನಾಮಾ ಕಾಲುವೆ ನಿರ್ಮಾಣ ವಿಶ್ವ ಎಂಜಿನಿಯರಿಂಗ್ ಕ್ಷೇತ್ರದಲ್ಲೇ ಒಂದು ಅದ್ಭುತ. ಕಾರಣ, ಈ ಪನಾಮಾ ಕಾಲುವೆ ಸಮುದ್ರಮಟ್ಟಕ್ಕಿಂತ ಎತ್ತರ ಪ್ರದೇಶದಲ್ಲಿದೆ. ಸಮುದ್ರ ಮಟ್ಟಕ್ಕೂ ಪನಾಮಾ ಕಾಲುವೆ ನೀರಿನ ಮಟ್ಟಕ್ಕೂ ಇರುವ ವ್ಯತ್ಯಾಸ 85 ಅಡಿಗಳಷ್ಟು. ಹೀಗಾಗಿ ಈ ಕಾಲುವೆಯ ಎರಡು ದ್ವಾರಗಳಲ್ಲೂ ತಲಾ 3 ಲಾಕ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಲಾಕ್ ಗಳು ಈ 85 ಅಡಿಗಳಷ್ಟು ನೀರಿನ ಮಟ್ಟದ ವ್ಯತ್ಯಾಸ ಸಮಸ್ಯೆಗೆ ಪರಿಹಾರವಾಗಿವೆ.

ಪ್ರತಿ ಹಡಗು ಸಂಚಾರ ಮಾಡುವಾಗಲು ಈ ಮೂರು ಲಾಕ್ ಗಳು ಕೆಲಸ ಮಾಡಿ 85 ಅಡಿಗಳಷ್ಟು ನೀರಿನ ಮಟ್ಟ ಹೆಚ್ಚಿಸಿ ಹಡಗು ಸಾಗುವಂತೆ ಮಾಡಲಾಗುತ್ತದೆ. ಪ್ರತಿಯೊಂದು ಲಾಕ್ ನ ಬಳಿ ಬಂದಾಗಲೂ ಗೇಟ್ ಗಳು ಮುಚ್ಚಿಕೊಳ್ಳುತ್ತವೆ. ಆಗ ಕೃತಕವಾಗಿ ನೀರಿನ ಮಟ್ಟ ಹೆಚ್ಚಿಸಿ ಹಡಗು ಪನಾಮಾ ಕಾಲುವೆ ಪ್ರವೇಶಿಸುವಂತೆ ಮಾಡುತ್ತದೆ. ನಂತರ ಈ ಹಡಗು ಮತ್ತೊಂದು ದ್ವಾರದ ಮೂಲಕ ಹಾದು ಹೋಗುವಾಗಲೂ ಇದೇ ಮಾದರಿಯಲ್ಲಿ ಲಾಕ್ ಗಳ ಮೂಲಕ ನೀರಿನ ಮಟ್ಟ ಇಳಿಸಿ ಹಡಗು ಸಂಚಾರ ಮುಂದುವರಿಯಲಿದೆ.

ಇಷ್ಟೊಂದು ಗಮನಾರ್ಹ ಅಂಶಗಳನ್ನೊಂದಿರುವ ಈ ಪನಾಮಾ ಕಾಲುವೆ ಸಾಮರ್ಥ್ಯ ಹೆಚ್ಚಿರೋದು, ಮುಂದಿನ ದಿನಗಳಲ್ಲಿ ಜಾಗತಿಕ ವ್ಯಾಪಾರವನ್ನು ಮತ್ತಷ್ಟು ಸುಗಮಗೊಳಿಸಲಿದೆ.

Leave a Reply