ಆರಾಮಾಗಿರಬೇಕು ಅಂತಾದ್ರೆ ತೆರಿಗೆ ಕಟ್ಬಿಡಿ, ನೀರಿಂಗಿಸೋಕೆ ಮರೀಬೇಡಿ, ವಿಜ್ಞಾನ ಹೇಗೆ ಬೆಳೀತಿದೆ ನೋಡಿ- ಇದು ಮೋದಿ ಮನ್ ಕಿ ಬಾತ್

ಡಿಜಿಟಲ್ ಕನ್ನಡ ಟೀಮ್:

ತೆರಿಗೆ ಕಟ್ಟದ ಆಸ್ತಿಗೆ ದಂಡ ಕಟ್ಟಲು ಸೆಪ್ಟೆಂಬರ್ 30 ಡೆಡ್ ಲೈನ್ ಎಚ್ಚರಿಕೆ.. ಇತ್ತೀಚೆಗೆ ಉಡಾವಣೆಯಾದ ಉಪಗ್ರದಲ್ಲಿ ಕೊಡುಗೆ ನೀಡಿದ್ದ ಯುವ ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳಿಗೆ ಪ್ರಶಂಸೆ.. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಭಾಗವಹಿಸುವಿಕೆ ಮಹತ್ವ.. ಮಹಿಳೆಯರ ಸಾಧನೆಯ ಹಾದಿ.. ಅಂತಾರಾಷ್ಟ್ರೀಯ ಯೋಗ ದಿನ ಯಶಸ್ಸಿನ ಮೆಲಕು.. ನೀರಿನ ಉಳಿಕೆ ಮತ್ತು ಬಳಕೆ..  ಇವಿಷ್ಟು ಪ್ರಧಾನಿ ನರೇಂದ್ರ ಮೋದಿ ತಮ್ಮ 21ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಚರ್ಚಿಸಿದ ಪ್ರಮುಖ ಅಂಶಗಳು.

ಮೋದಿ ಕಾರ್ಯಕ್ರಮದಲ್ಲಿ ಹಂಚಿಕೊಂಡ ಮನದಾಳದ ಮಾತುಗಳು ಹೀಗಿದ್ದವು:

‘ತೆರಿಗೆ ಲೆಕ್ಕ ತಪ್ಪಿಸಿ ಹೊಂದಿರುವ ಆಸ್ತಿ, ಸಂಪತ್ತಿಗೆ ಸೆಪ್ಟೆಂಬರ್ 30 ರ ಒಳಗಾಗಿ ಸರಿಯಾದ ಪ್ರಮಾಣದಲ್ಲಿ ದಂಡ ಕಟ್ಟಿ. ಇದರಿಂದ ಮುಂದಿನ ದಿನಗಳಲ್ಲಿ ಎದುರಾಗುವ ತೊಂದರೆಯಿಂದ ಪಾರಾಗಿ. ನಾವೇಕೆ ಕಾನೂನನ್ನು ಉಲ್ಲಂಘಿಸಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆದಾಯ ಮತ್ತು ಆಸ್ತಿಯ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಬಾರದೇಕೆ? ಈ ಎಲ್ಲ ಅವಕಾಶಗಳನ್ನು ಪಾರದರ್ಶಕ ಆಡಳಿತಕ್ಕಾಗಿ ಕಲ್ಪಿಸಲಾಗಿದೆ. ಇದೊಂದು ಕೊನೆಯ ಅವಕಾಶವಾಗಿದ್ದು ಎಲ್ಲರು ಇದನ್ನು ಬಳಸಿಕೊಂಡು ನೆಮ್ಮದಿಯಾಗಿರಬಹುದು. ಈ ಅವಧಿಯಲ್ಲಿ ಅಕ್ರಮ ಗಳಿಕೆಗೆ ದಂಡ ಕಟ್ಟಿದವರಿಗೆ ಯಾವ ಪ್ರಶ್ನೆಗಳನ್ನೂ ಕೇಳಲಾಗುವುದಿಲ್ಲ. ಈ ದೇಶದಲ್ಲಿ 125 ಕೋಟಿ ಜನಸಂಖ್ಯೆ ಇದೆ. ಆದರಲ್ಲಿ ತೆರಿಗೆ ಕಟ್ಟುತ್ತಿರುವವರ ಸಂಖ್ಯೆ ಕೇವಲ 1.5ಲಕ್ಷ ಜನರು ಮಾತ್ರ 50 ಲಕ್ಷದಷ್ಟು ತೆರಿಗೆ ಕಟ್ಟಬಹುದಾದ ಆದಾಯ ಹೊಂದಿದ್ದಾರೆ. ಇದರಲ್ಲೇ ನಮಗೆ ವಾಸ್ತವ ಮರೆಯಾಗುತ್ತಿರುವುದು ತಿಳಿಯುತ್ತದೆ.

ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ಮಳೆ ಬೀಳಲಾರಂಭಿಸಿದೆ. ಈ ಬಾರಿ ಸರಾಸರಿಯ ಮಳೆಯಾಗಲಿದೆ ಅಂದಿದ್ದಾರೆ ವಿಜ್ಞಾನಿಗಳು. ಮಾನ್ಸೂನ್ ಆಗಮಿಸಿರುವ ಸಂದರ್ಭದಲ್ಲಿ ದೇಶದ ರೈತರಿಗೆ ಶುಭಕೋರುತ್ತೇನೆ. ಮಳೆಗಾಲವನ್ನು ಸಂಪೂರ್ಣವಾಗಿ ಆನಂದಿಸಿ. ಆದರೆ, ನೀರಿನ ಮಹತ್ವವನ್ನು ಮಾತ್ರ ಮರೆಯಬೇಡಿ.

ರೈತರಂತೆ ವಿಜ್ಞಾನಿಗಳು ಸಹ ದೇಶದ ಏಳಿಗೆಗೆ ಹಗಲಿರುಳು ಶ್ರಮವಹಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಉಡಾವಣೆಯಾದ ಐತಿಹಾಸಿಕ ಉಪಗ್ರಹಕ್ಕೆ ಕೊಡುಗೆ ನೀಡಿದ್ದ ಯುವ ವಿಜ್ಞಾನಿಗಳನ್ನು ನಿನ್ನೆಯಷ್ಟೆ ಪುಣೆಯಲ್ಲಿ ಭೇಟಿ ಮಾಡಿದೆ. ಚೆನ್ನೈನ ವಿದ್ಯಾರ್ಥಿಗಳು ಇದೇ ರೀತಿಯ ಕೊಡುಗೆ ನೀಡಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯುವ ಪೀಳಿಗೆ ವಿಜ್ಞಾನ ಮತ್ತು ಸಂಶೋಧನೆಗಳತ್ತ ಹೆಚ್ಚು ತೊಡಗಿಸಿಕೊಳ್ಳಬೇಕು.

pune student

ಪ್ರಜಾಪ್ರಭುತ್ವ ನಮ್ಮ ಶಕ್ತಿ ಎಂಬುದನ್ನು ಮರೆಯಬಾರದು. ದೇಶದ ಪ್ರತಿಯೊಬ್ಬ ಪ್ರಜೆಗೂ ಅಧಿಕಾರ ಸಿಗಬೇಕು. ಜನ್ ಭಾಗಿದಾರಿ (ಪ್ರಜೆಗಳ ಭಾಗಿತ್ವ) ಪ್ರಜಾಪ್ರಭುತ್ವದ ಮೂಲಅಂಶ. ಇದನ್ನು ಸರಿಯಾಗಿ ಬಳಸಿ ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಿಗೊಳಿಸಬೇಕು. ನಮ್ಮ ಈ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಆಗಾಗ್ಗೆ ಟೀಕೆಗಳು ಬರುತ್ತಿವೆ. ಇಂಥ ಟೀಕೆಗಳಿಗೂ ಅವಕಾಶವಿರುವುದಕ್ಕೆ ಕಾರಣ ಪ್ರಜಾಪ್ರಭುತ್ವ. 1975ರ ಜೂನ್ ತುರ್ತು ಪರಿಸ್ಥಿತಿ ನೆನೆಪಿದೆಯಾ? ಆಗಿನ ದಿನಗಳಲ್ಲಿ ಜನರ ಅಭಿಪ್ರಾಯಗಳಿಗೆ ನಿರ್ಬಂಧ ಹೇರಲಾಗಿತ್ತು. ಈಗ ಎಲ್ಲರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಬಹುದು.

ಈಗ ನೀವೆಲ್ಲರೂ ಸರ್ಕಾರದ ಕಾರ್ಯವನ್ನು ಅಳೆಯಲು ಅವಕಾಶ ಮಾಡಿಕೊಡುತ್ತಿದ್ದೇವೆ. MyGov.in ನಲ್ಲಿ ನೀವು ಸರ್ಕಾರಕ್ಕೆ ನಿಮ್ಮ ಸಲಹೆಯನ್ನು ನೀಡಬಹುದು. ಈಗಾಗಲೇ ಸುಮಾರು 3 ಲಕ್ಷ ಮಂದಿ ತಮ್ಮ ಸಲಹೆಗಳನ್ನು ನೀಡಲಾರಂಭಿಸಿದ್ದು, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

ಬೇಟಿ ಬಚಾವೊ ಬೇಟಿ ಪಡಾವೊ ಧ್ಯೇಯ ಸಾಕಷ್ಟು ಜನರನ್ನು ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಇದಕ್ಕೆ ಸಾಕ್ಷಿ. ಅವನಿ ಚತುರ್ವೇದಿ, ಭಾವನಾ ಕಾಂತ್ ಮತ್ತು ಮೋಹನಾ ಸಿಂಗ್ ಈ ಮೂರು ಮಹಿಳಾ ಫೈಟರ್ ಜೆಟ್ ಪೈಲೆಟ್ ಗಳಾಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಜೂನ್ 21ರಂದು ವಿಶ್ವ ಯೋಗ ದಿನವನ್ನು ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಯಿತು. ಕೋಟ್ಯಂತರ ಜನರು ಯೋಗ ಆಚರಣೆಯಲ್ಲಿ ಭಾಗಿಯಾದರು. ವಿಶ್ವ ಸಂಸ್ಥೆ ಕಟ್ಟದ ಮೇಲೆ ಯೋಗ ಬಿತ್ತರವಾಗಿದ್ದು ಹೆಚ್ಚು ಸುದ್ದಿ ಮಾಡಿತ್ತು. ಈ ಬಾರಿ ಟ್ವಿಟರ್ ಸಹ ಯೋಗ ದಿನಾಚರಣೆಗೆ ಕೈಜೋಡಿಸಿತ್ತು. ಯೋಗ ಡಯಾಬಿಟಿಸ್ ಗೆ ಉತ್ತಮ ಪರಿಹಾರ ಯೋಗಫೈಟ್ಸ್ ಡಯಾಬಿಟಿಸ್ ಹ್ಯಾಶ್ ಟ್ಯಾಗ್ ಮೂಲಕ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.’

—-

ಒಟ್ಟಿನಲ್ಲಿ, ಉಳಿಸಿಕೊಂಡಿರುವ ತೆರಿಗೆ ಕಟ್ಟುವುದು ಹಾಗೂ ಮಳೆ ನೀರು ಸಂಗ್ರಹ ಈ ಬಗ್ಗೆ ಪ್ರಧಾನಿ ಜನರನ್ನು ಹೆಚ್ಚು ಉತ್ತರದಾಯಿ ಮಾಡುವ ಪ್ರಯತ್ನದಲ್ಲಿದ್ದಂತಿತ್ತು. ನಾನು ದೇಶಕ್ಕಾಗಿ ಕೇಳಿಕೊಂಡಾಗ ಎಷ್ಟೊಂದು ಮಂದಿ ಅಡುಗೆ ಅನಿಲದ ಸಬ್ಸಿಡಿ ಬಿಟ್ಟಿದ್ದಾರೆ ಎಂದು ಮತ್ತೆ ನೆನಪಿಸಿಕೊಂಡರು ಮೋದಿ. ಈ ಬಾರಿ ತ್ಯಾಗದ ಹೊಸಕತೆಯನ್ನೂ ಸೇರಿಸಿದರು.

ಚಂದ್ರಕಾಂತ ಕುಲಕರ್ಣಿ ಎಂಬ ನಿವೃತ್ತ ಸರ್ಕಾರಿ ನೌಕರರೊಬ್ಬರು ಅವರ ಪಿಂಚಣಿಯ ದೊಡ್ಡಭಾಗವನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಕೊಟ್ಟಿದ್ದಾರೆ. ಮುಂದಿನ ದಿನಾಂಕಗಳಲ್ಲಿ ಸಹಿ ಮಾಡಿರುವ ಒಟ್ಟಾರೆ ₹2,60,000 ಗಳ 52 ಚೆಕ್ ಗಳನ್ನು ಪ್ರಧಾನಿ ಕಚೇರಿಗೆ ಕಳುಹಿಸಿಬಿಟ್ಟಿದ್ದಾರೆ. ಇಂಥವರೇ ಭಾರತದ ಹೀರೋಗಳು ಎಂದು ಕೊಂಡಾಡಿದ ಪ್ರಧಾನಿ ಮೋದಿ, ದೇಶಕ್ಕಾಗಿ ಎಲ್ಲ ಪ್ರಜೆಗಳೂ ಕೊಡುಗೆ ನೀಡುವಂತೆ ಸ್ಫೂರ್ತಿ ಮಾತಾಡಿದರು.

kulakarni

Leave a Reply