ನೀವು ನೋಡಬೇಕಿರುವ ‘ಕೃತಿ’, ಜತೆಯಲ್ಲೇ ತಿಳಿಯಬೇಕಿರುವ ಡಿಜಿಟಲ್ ಯುಗಾರಂಭದ ಸಂಗತಿ

ಡಿಜಿಟಲ್ ಕನ್ನಡ ಟೀಮ್:

ಶಿರೀಶ್ ಕುಂದೇರ್ ನಿರ್ದೇಶನದ ‘ಕೃತಿ’ ಎಂಬ 18 ನಿಮಿಷಗಳ ಕಿರುಚಿತ್ರ ಯೂಟ್ಯೂಬಿನಲ್ಲಿ ಬಿಡುಗಡೆಯಾದ ಮೂರು ದಿನಗಳಲ್ಲಿ 23 ಲಕ್ಷ ನೋಟಗಳನ್ನು ದಾಟಿ ಮುನ್ನುಗ್ಗುತ್ತಿದೆ.

ಮನೋಜ್ ವಾಜಪೇಯಿ, ರಾಧಿಕಾ ಆಪ್ಟೆ ಹಾಗೂ ನೇಹಾ ಶರ್ಮ ಅಭಿನಯದ ಸೈಕಾಲಜಿಕಲ್ ಥ್ರಿಲ್ಲರ್ ವಿಭಾಗದ ಚಿತ್ರ ತುಂಬ ನೋಡಿಸಿಕೊಂಡು ಹೋಗುವ ಗುಣ ಹೊಂದಿದೆ. ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’ ಅಂತ ಲೂಸಿಯಾದಂಥ ಚಿತ್ರವು ಭ್ರಾಮಕ ಜಗತ್ತನ್ನು ಥ್ರಿಲ್ಲರ್ ಕಣ್ಣುಗಳಿಂದ ಹೇಗೆ ನೋಡಿತ್ತೋ ಅಂಥದೇ ಪ್ರಯತ್ನವನ್ನು ಮೂರೇ ಪಾತ್ರಗಳ ಭಿನ್ನ ನೆಲೆಯಲ್ಲಿ ಚುಟುಕಾಗಿ ಹೇಳಿ ಮುಗಿಸುತ್ತದೆ ಈ ಚಿತ್ರ. ಚಿತ್ರ ಯೂಟ್ಯೂಬಿನಲ್ಲಿ ಎಲ್ಲರಿಗೂ ಲಭ್ಯವಿರುವುದರಿಂದ ಆ ಬಗ್ಗೆ ಹೆಚ್ಚೇನೂ ಹೇಳದೇ, ನೋಡುವುದಕ್ಕೊಂದು ಕೊಂಡಿ ಬೆಸೆಯಬಹುದು.

ಇದನ್ನು ಡಿಜಿಟಲ್ ವೇದಿಕೆಯ ಪ್ರಯತ್ನವಾಗಿ ನೋಡಿದಾಗ ಪುಳಕ ಇನ್ನಷ್ಟು ಹೆಚ್ಚುತ್ತದೆ. ಆ್ಯಪ್, ಸ್ಮಾರ್ಟ್ ಫೋನುಗಳ ಯುಗದಲ್ಲಿ ಇಂಥ ಕಿರುಚಿತ್ರಗಳೇ ಭವಿಷ್ಯದ ಬಿಂಬವೇ? ಈ ಬಗೆಯ ಪಾಕೆಟ್ ಫಿಲ್ಮ್ ಗಳು ವೆಬ್ ಧಾರಾವಾಹಿಗಳು ಯೂಟ್ಯೂಬಿನಲ್ಲಿ ಹೆಚ್ಚುತ್ತಿವೆ. ಟಿವಿಎಫ್, ವೈ ಫಿಲ್ಮ್ಸ್ ನಂಥವುಗಳ ಪ್ರಯತ್ನ ಗಮನಾರ್ಹ.

ಇದಕ್ಕೆ ಸಿದ್ಧ ಮಾರುಕಟ್ಟೆ ಇನ್ನೂ ರೂಪುಗೊಂಡಿಲ್ಲವಾದರೂ ಅಂಥದೊಂದು ಪ್ರಯತ್ನದಲ್ಲಿರುವುದು ಖಚಿತವಾಗುತ್ತಿದೆ. ಉದಾಹರಣೆಗೆ ಟಿವಿಎಫ್ ಪರ್ಮನೆಂಟ್ ರೂಮ್ಮೇಟ್ ಎರಡನೇ ಸರಣಿ ಒಲಾ ಕ್ಯಾಬ್ ಪ್ರಾಯೋಜಕತ್ವ ಹೊಂದಿದ್ದು, ಕೇವಲ ಜಾಹೀರಾತು ಆಗಿ ಅಲ್ಲದೇ ಈ ಸರಣಿಯ ಉದ್ದಕ್ಕೂ ಒಲಾವನ್ನೂ ಒಂದು ಪಾತ್ರವಾಗಿಸಿರುವ ಮಾರುಕಟ್ಟೆ ತಂತ್ರವನ್ನು ಗಮನಿಸಬಹುದು.

ಯೂಟ್ಯೂಬಿನಲ್ಲಿ ಲಕ್ಷಾಂತರ ನೋಟ ಗಿಟ್ಟಿಸಿಕೊಂಡ ವಿಡಿಯೋಗಳಿಗೆ ಜಾಹೀರಾತು ಹಣ ಬರುತ್ತದಾದರೂ ಅದು ಚಿತ್ರದ ಎಲ್ಲ ಬಜೆಟ್ ಪೂರೈಸುವುದು ಅನುಮಾನವೇ. ಹೀಗಾಗಿ ಪ್ರಾರಂಭದಲ್ಲಿ ಗಟ್ಟಿ ವಸ್ತುಗಳ ಮೂಲಕ ನೋಡುಗ ಬಳಗವನ್ನು ಸೃಷ್ಟಿಸಿಕೊಂಡು ನಂತರದ ಹಂತದಲ್ಲಿ ಹಣ ಪಾವತಿಸುವಂತೆ ಪ್ರೇರೇಪಿಸುವ ಸಣ್ಣ ಸಿನಿ ಪ್ರಯಾಣವೊಂದು ಡಿಜಿಟಲ್ ವೇದಿಕೆಯಲ್ಲಿ ಆರಂಭವಾಗಿರುವಂತೆ ತೋರುತ್ತಿದೆ. ಇಪ್ಪತ್ಮೂರು ಲಕ್ಷಕ್ಕೂ ಮಿಕ್ಕಿ ಈಗಾಗಲೇ ಕೃತಿಯನ್ನು ಸವಿದಿರುವ ಕೆಲವರಾದರೂ ಯೂಟ್ಯೂಬಿನಲ್ಲಿ ಕೊಟ್ಟಿರುವ ಕೊಂಡಿ ಹಿಡಿದು movizz.com ಗೆ ಪಯಣಿಸಿ ಅಲ್ಲೊಂದು ಹೊಸ ಜಗತ್ತು ನೋಡಿರುತ್ತಾರೆ. ನಿಜವಾದ ಮಾರ್ಕೆಟಿಂಗ್ ಮಾಡೆಲ್ ಇಲ್ಲಿದೆ. ಇಂಥ ಹಲವು ಪ್ರಯತ್ನಗಳು ಆಗಲಿಕ್ಕಿವೆ ಎಂಬುದಂತೂ ಸ್ಪಷ್ಟ.

ಅದೇನೇ ಇದ್ದರೂ ಇಂಥ ಪ್ರಯತ್ನಗಳೆಲ್ಲಟಿವಿ ವಾಹಿನಿಗಳ ಮಾಮೂಲಿ ಸಂಸಾರಗಾಥೆಗಳಿಗಿಂತ ಭಿನ್ನ ಅನುಭವದ, ಯುವ ಪೀಳಿಗೆಗೆ ಪ್ರಸ್ತುತ ಎನಿಸುವ ಕತೆಗಳನ್ನು ಉಣಬಡಿಸುತ್ತಿರೋದಂತೂ ಸುಳ್ಳಲ್ಲ.

ಕೃತಿ ನೋಡಿ…

Leave a Reply