ನಮ್ಮ ಇಂಗಾಲದ ಹೆಜ್ಜೆ ಗುರುತನ್ನು ನಾವೇ ಕಡಿಮೆ ಮಾಡಬೇಕಲ್ಲವೇ?

author-sumangalaಆಗ ತಾನೇ ವಿವಾಹವಾದ ನವ ವಧು ತನ್ನ ಪತಿ ಗೃಹವನ್ನು ಪ್ರವೇಶಿಸುವ ಪ್ರಕ್ರಿಯೆಯನ್ನು ನೆನಪಿಗೆ ತಂದುಕೊಳ್ಳಿ. ಅಕ್ಕಿ, ಬೆಲ್ಲ, ತುಂಬಿದ ಕಳಶವನ್ನು ಒದ್ದು ಹೊಸ್ತಿಲು ದಾಟುವ ಆಕೆ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಮನೆಯೊಳಗೆ ಸಾಗುತ್ತಾಳೆ. ಮನೆಗೆ ಮಹಾಲಕ್ಷ್ಮಿ ಬಂದಷ್ಟೇ ಸಂಭ್ರಮದಿಂದ ಆಕೆಯನ್ನು ಬರಮಾಡಿಕೊಳ್ಳುತ್ತಾರೆ. ಹಾಗೆಯೇ ಒದ್ದೆ ನೆಲದಲ್ಲಿ, ಮರಳ ಮೇಲೆ ನಡೆದಾಡಿದಾಗಲೂ ಕೂಡಾ ಹೆಜ್ಜೆಯ ಗುರುತು ಮೂಡುತ್ತದೆ.
ಈ “ಹೆಜ್ಜೆಯ ಗುರುತು” ವನ್ಯಜೀವಿಗಳಲ್ಲಿ ಅವುಗಳ ಇರುವಿಕೆಯ ಸಂದೇಶವನ್ನು ಸಾರುತ್ತದೆ. ಪ್ರಾಣಿ ಅಥವಾ ವ್ಯಕ್ತಿಯ ತೂಕ ಹೆಚ್ಚಾದಷ್ಟೂ ಹೆಜ್ಜೆಯ ಗುರುತು ಆಳವಾಗಿ ಮೂಡುತ್ತದೆ. ನಮ್ಮ ಹೆಜ್ಜೆ ಗುರುತನ್ನು ಉಳಿಸಿ ಹೋಗುವ ಪ್ರಯತ್ನವನ್ನು ಜೀವ ಸಂಕುಲದ ಎಲ್ಲವೂ ಮಾಡಿದರೆ..? ಇಲ್ಲ. ಬೇರಾವ ಜೀವಿಗಳೂ ಹಾಗೆ ಮಾಡುವುದಿಲ್ಲ. ಮನುಷ್ಯನನ್ನುಳಿದು.
ಇವತ್ತಿನ ನನ್ನ ಮನೆಯಲ್ಲಿ ನಾವು ಮಾತಾಡುತ್ತಿರುವುದು ಕೂಡಾ ನನ್ನ ಹೆಜ್ಜೆಯ ಗುರುತಿನ ಬಗೆಗೇ. ಇದು ಅಂತಿಂಥ ಹೆಜ್ಜೆಗುರುತಲ್ಲ. ಇಂಗಾಲದ ಹೆಜ್ಜೆಗುರುತು.
ಈ “ಇಂಗಾಲ” ಅಥವಾ “ಕಾರ್ಬನ್.” ಹಾಗೆಯೇ ಇರುವವರೆಗೂ ಯಾವುದೇ ತೊಂದರೆಯಿಲ್ಲ. ಆದರೆ ಇದು ಬಳಕೆಯಾಗಿ “ಇಂಗಾಲದ ಡೈ ಆಕ್ಸೈಡ್ ” ಆಯಿತೋ ಪರಿಸರಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ. ನಾವೆಷ್ಟು ಇಂಗಾಲವನ್ನು ಬಳಸುತ್ತೇವೆ ಎನ್ನುವುದರ ಆಧಾರದ ಮೇಲೆ, ಇಂಗಾಲದ ಹೆಜ್ಜೆಯ ಗುರುತನ್ನು ಅಳೆಯಬಹುದು. ನಾವು ಹೆಚ್ಚು ಹೆಚ್ಚು ಇಂಗಾಲವನ್ನು ಬಳಸಿದಷ್ಟೂ ನಮ್ಮ ಇಂಗಾಲದ ಹೆಜ್ಜೆಗುರುತು ಆಳವಾಗುತ್ತಾ ಹೋಗುತ್ತದೆ.
ಅರೆ! ನಾವು ಯಾವ ಇಂಗಾಲವನ್ನೂ ಬಳಸುವುದಿಲ್ಲವಲ್ಲ ಎಂದುಕೊಳ್ಳುತ್ತಿದ್ದೀರಾ? ನೀವು ಸ್ಕೂಟರ್, ಬೈಕ್, ಕಾರು ಬಳಸಿದಾಗ, ಗ್ಯಾಸ್ ಉರಿಸಿದಾಗ, ವಿದ್ಯುತ್ ಬಳಸಿದಾಗ, ನೀವು ಬಳಸುವ ಟೂಥ್ ಬ್ರಷ್ ನಿಂದ ಹಿಡಿದು ಮಸ್ಕಿಟೋ ಕಾಯಿಲ್ ನವರೆಗೂ ಎಲ್ಲ ವಸ್ತುಗಳ ತಯಾರಿಕೆಯಲ್ಲಿ ಇಂಗಾಲದ ಡೈಆಕ್ಸೈಡ್ ಅಡಗಿದೆ. ಇದೆಲ್ಲವೂ ನಮ್ಮ ಹೆಜ್ಜೆಗುರುತನ್ನು ಮತ್ತಷ್ಟು ಆಳವಾಗಿಸಿದೆ.
ನಮ್ಮ ಜೀವನ ಶೈಲಿ ಸರಳವಾಗಿದ್ದಷ್ಟೂ ನಮ್ಮ ಕಾರ್ಬನ್ ಫುಟ್ ಪ್ರಿಂಟ್ ತೆಳುವಾಗಿರುತ್ತದೆ. ಐಶಾರಾಮಿ ಜೀವನ ಶೈಲಿ ನಮ್ಮ ಇಂಗಾಲದ ಹೆಜ್ಜೆಗುರುತನ್ನು ಆಳವಾಗಿಸುತ್ತದೆ. ಇದು ಆಳವಾದಷ್ಟೂ ವಾಯುಮಂಡಲಕ್ಕೆ ಸೇರುತ್ತಿರುವ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಉದಾಹರಣೆಗೆ: ಅಮೆರಿಕದ ಪ್ರಜೆಯ ಹೆಜ್ಜೆಯ ಗುರುತು ಹೆಚ್ಚು ಆಳ. ಯಾಕೆಂದರೆ, ಅವನು ೧೮ ಕಿ.ಗ್ರಾಂ ಪೆಟ್ರೋಲಿಯಂ ಮತ್ತು ಕಲ್ಲಿದ್ದಲು, ೧೩ ಕಿ.ಗ್ರಾಂ ಖನಿಜಗಳು, ೧೨ ಕಿ.ಗ್ರಾಂ ಕೃಷಿ ಉತ್ಪನ್ನಗಳು ಮತ್ತು ೯ ಕಿ.ಗ್ರಾಂ ಅರಣ್ಯಾಧಾರಿತ ಉತ್ಪನ್ನಗಳನ್ನು ದಿನವೊಂದಕ್ಕೆ ಬಳಸುತ್ತಾನೆ. ಇದರಲ್ಲಿ ಆಫ್ರಿಕಾದ ರಾಷ್ಟ್ರವೊಂದರ ೪೦ ಜನರು ಬದುಕಬಲ್ಲರು. ಅಂದರೆ, ಆಫ್ರಿಕಾದ ಜನರ ಹೆಜ್ಜೆಗುರುತು ಶೂನ್ಯ ಎಂದಾದರೆ, ಅಮೆರಿಕ ಪ್ರಜೆಯ ಹೆಜ್ಜೆ ಗುರುತು ಆಳವಾಗಿ ಮೂಡಿದೆ.
ಈ ನಮ್ಮ ಮನೆಯ ಎಲ್ಲ ಸದಸ್ಯರೂ ಈ ರೀತಿ ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತಾ ಹೋದಲ್ಲಿ? ಪರಿಣಾಮವನ್ನು ಈಗಾಗಲೇ ನೋಡುತ್ತಿದ್ದೇವೆ. ಕಳೆದ ಒಂದು ಲಕ್ಷ ವರ್ಷಗಳಲ್ಲೇ ಮೊದಲ ಬಾರಿಗೆ ಅರ್ಕಟಿಕ್ ಮಂಜುಮುಕ್ತವಾಗಲಿದೆ. ಜಾಗತಿಕ ತಾಪಮಾನದ ಏರಿಕೆಯಿಂದ ಹವಾಮಾನದಲ್ಲಿ ಏರುಪೇರಾಗಲಿದೆ.
ಹೀಗಾಗಬಾರದು ಎನ್ನುವುದಾದರೆ? ನಮ್ಮ ಇಂಗಾಲದ ಹೆಜ್ಜೆಗುರುತನ್ನು ಕಿರಿದಾಗಿಸೋಣ. ಅದಕ್ಕೇನು ಮಾಡಬೇಕು?
ಉದಾಹರಣೆಗೆ, ಚಪ್ಪಲಿ ಅಂಗಡಿಯಲ್ಲಿ ಇದ್ದೀರಾ? ಒಂದು ಜೊತೆ ಚಪ್ಪಲಿ ತೊಟ್ಟಿದ್ದೀರಿ, ಮತ್ತೊಂದು ಮನೆಯ rack ನಲ್ಲಿ ಇದೆ. ಒಂದು ಜೊತೆ ಖರೀದಿಸಿದ್ದೀರಿ. ಆದರೆ ಷೋ ಕೇಸ್ ನಲ್ಲಿ ಇರುವ ಮಗದೊಂದು ಜೊತೆ ಆಕರ್ಷಕವಾಗಿದೆ! ಹಣವಿದೆ, ಖರೀದಿಸಬಹುದು. ಇಲ್ಲವಾದರೆ ಕ್ರೆಡಿಟ್ ಕಾರ್ಡ್ ಇದೆ. ಆದರೆ.. ಕೊಳ್ಳುವ ಮುನ್ನ ಯೋಚಿಸಿ.. ನಿಮಗೆ ಅದು ನಿಜಕ್ಕೂ ಅವಶ್ಯಕವೇ? ಎಂದು.
ನಮಗರಿಯದೇ ನಾವು ಭಾರವಾಗುತ್ತಿದ್ದೇವೆ. ಅದರ ತಯಾರಿಕೆಯಲ್ಲಿ ಬಳಕೆಯಾದ ಇಂಗಾಲ ನಿಮ್ಮ ಹೆಜ್ಜೆಗುರುತನ್ನು ಆಳವಾಗಿಸಲಿದೆ. ಇಂತಹ ಎಷ್ಟೊಂದು ಉದಾಹರಣೆಗಳನ್ನು ನೀವು ನೋಡಬಹುದು? ಪಟ್ಟಿ ಮಾಡಿ. ಒಂದೊಂದನ್ನೇ ಕಡಿಮೆ ಮಾಡಿ! ನಮ್ಮ ಮನೆಯನ್ನು ನಾವೇ ಚೆಂದಗೊಳಿಸಬೇಕಲ್ಲವೇ?

(ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಲೇಖಕಿ, ವಿಜ್ಞಾನ ಮತ್ತು ಪರಿಸರ ಸಂಬಂಧಿ ಬರಹಗಳಿಂದ ಪರಿಚಿತರು. ಈ ವಿಭಾಗದಲ್ಲಿ ಇವರ ಹಲವು ಕೃತಿಗಳು ಪ್ರಕಟವಾಗಿವೆ.)

Leave a Reply