ಬಿಜೆಪಿ ಅರಣ್ಯ ದೃಷ್ಟಿಕೋನದಲ್ಲಿ ಖಂಡಿತಾವಾಗ್ಲು ಸಮಸ್ಯೆ ಇದೆ!

ಡಿಜಿಟಲ್ ಕನ್ನಡ ಟೀಮ್:

ರಾಷ್ಟ್ರೀಯ ಅರಣ್ಯ ಸಂಪತ್ತು ಕಾಪಾಡುವ ನಿಟ್ಟಿನಲ್ಲಿ ಸ್ಪಷ್ಟ ಯೋಜನೆ ರೂಪಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಪದೇ ಪದೇ ಎಡವುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ, ಇದೇ ತಿಂಗಳು 16 ರಂದು ಸಚಿವಾಲಯ ತನ್ನ ವೆಬ್ ಸೈಟ್ ನಲ್ಲಿ ರಾಷ್ಟ್ರೀಯ ಅರಣ್ಯ ನೀತಿ ಕರಡನ್ನು ಪ್ರಕಟಿಸಿತ್ತು. ಆದ್ರೆ ಈಗ ಅದು ಅರಣ್ಯ ನೀತಿ ಕರಡು ಅಲ್ಲ. ಅಧ್ಯಯನದ ವರದಿಯನ್ನು ಕರಡು ಎಂದು ತಪ್ಪಾಗಿ ಪ್ರಕಟಿಸಲಾಗಿದೆ ಎಂದು ಯೂಟರ್ನ್ ಮಾಡಿದೆ.

ರಾಷ್ಟ್ರೀಯ ಕರಡು ನೀತಿ ಎಂದು ಸಚಿವಾಲಯ ಪ್ರಕಟಿಸುವುದರ ಜತೆಗೆ ಜೂನ್ 30 ರ ಒಳಗಾಗಿ ಈ ಕುರಿತಂತೆ ಆಕ್ಷೇಪ, ಸಲಹೆಗಳಿದ್ದರೆ ತಿಳಿಸಿ ಎಂದೂ ಕರೆ ನೀಡಿತ್ತು. ಆದ್ರೆ ಶನಿವಾರ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿ, ‘ಇದು ಅರಣ್ಯ ನೀತಿಯ ಕರಡು ಅಲ್ಲ.. ಭೋಪಾಲ್ ನಲ್ಲಿರುವ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೆಜ್ಮೆಂಟ್ ನ ಅಧ್ಯಯನದ ವರದಿ’ ಎಂದಿದೆ.

ಸದ್ಯ ನಮ್ಮಲ್ಲಿರುವ ಅರಣ್ಯ ನೀತಿಯನ್ನು ರಚಿಸಿದ್ದು 1988 ರಲ್ಲಿ. ಸರಿಸುಮಾರು 3 ದಶಕಗಳಷ್ಟು ಹಳೆಯದು. ಹೀಗಾಗಿ ಈ ನೀತಿಯ ಬದಲಾವಣೆ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಸಚಿವಾಲಯ ಪ್ರಕಟಿಸಿರೋ ವರದಿಯನ್ನೇ ನೋಡುವುದಾದರೆ, ಇದರಲ್ಲಿರುವ ಶಿಫಾರಸ್ಸುಗಳು ಅರಣ್ಯ ಸಂಪತ್ತನ್ನು ವೃದ್ಧಿಸುವ ಯಾವುದೇ ಅಂಶಗಳನ್ನು ಹೊಂದಿಲ್ಲ. ಇದರೊಂದಿಗೆ ಕೇಂದ್ರ ಸರ್ಕಾರಕ್ಕೆ ಅರಣ್ಯ ನೀತಿಯ ಬಗ್ಗೆ ಸೂಕ್ತ ದೃಷ್ಟಿಕೋನದ ಕೊರತೆ ಇರುವುದು ಸಾಬೀತಾಗಿದೆ.

ಈ ಅಧ್ಯಯನವನ್ನು ರಾಷ್ಟ್ರೀಯ ಅರಣ್ಯ ನೀತಿ ಪರಾಮರ್ಶೆ ಯೋಜನೆ ಎಂದು ನಡೆಸಲಾಯಿತು. ಇದಕ್ಕೆ ವಿಶ್ವಸಂಸ್ಥೆ (ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಫಂಡ್)ಯ ಅನುದಾನ ಪಡೆದಿದ್ದು, ₹ 60 ಲಕ್ಷ ರುಪಾಯಿ ನೀಡಿತ್ತು. ಈ ವರದಿಯಲ್ಲಿ ನೀಡಲಾಗಿರುವ ಎರಡು ಪ್ರಮುಖ ಅಂಶಗಳು ಯಾವ ರೀತಿಯಲ್ಲಿ ಅರಣ್ಯ ನಿರ್ವಹಣೆಗೆ ಪೂರಕ ಎಂಬ ಪ್ರಶ್ನೆ ಮೂಡಿಸಿವೆ. ಅವುಗಳೆಂದರೆ, ಮರಗಳನ್ನು ಉರುವಲು ಮತ್ತಿ ವಾಣಿಜ್ಯ ಬಳಕೆಗೆ ಪ್ರೋತ್ಸಾಹ ನೀಡುವುದು ಹಾಗೂ ಅರಣ್ಯ ನಿರ್ವಹಣೆಯಲ್ಲಿ ಕೈಗಾರಿಕೆಗಳ ಕೊಡುಗೆ. ಇದರೊಂದಿಗೆ ಇತರೆ ಸಲಹೆಗಳು ಈ ವರದಿಯಲ್ಲಿವೆ. ಆದರೆ, ಅರಣ್ಯ ನಿರ್ವಹಣೆ ಮತ್ತು ರಕ್ಷಣೆಯಲ್ಲಿ ಬಡಕಟ್ಟು ಜನರ ಪಾತ್ರದ ಬಗ್ಗೆ ವರದಿಯಲ್ಲಿ ಚರ್ಚೆಯಾಗಿಲ್ಲ.

ವರದಿಯಲ್ಲಿ ದೀರ್ಘಾವಧಿಯ ಅರಣ್ಯ ಸಂಪತ್ತನ್ನು ಹೆಚ್ಚಿಸುವ ಹಾಗೂ ಕಾಪಾಡುವ ಯಾವುದೇ ಸಲಹೆಗಳಿಲ್ಲ. ಮರಗಳ ವಾಣಿಜ್ಯ ಬಳಕೆಗೆ ಅವಕಾಶ ನೀಡುವುದು ಒಂದೆಡೆಯಾದರೆ, ಮತ್ತೊಂದು ಅರಣ್ಯ ನಿರ್ವಹಣೆಯಲ್ಲಿ ಕೈಗಾರಿಕೆಗಳ ಪಾತ್ರ ಮತ್ತೊಂದು ರೀತಿಯಲ್ಲಿ ಗೊಂದಲ ಮೂಡಿಸುತ್ತದೆ. ಕಾರಣ, ಅರಣ್ಯ ಸಂಪತ್ತು ಹಾಗೂ ಕೈಗಾರಿಗೆ ಎರಡು ವಿಭಿನ್ನ ದಿಕ್ಕಿಗೆ ಮುಖಮಾಡಿರುವಂತಹುದು. ಕೈಗಾರಿಕೆಗಳಿಂದಲೇ ಅರಣ್ಯ ನಾಶವಾಗುತ್ತಿದೆ ಎಂಬ ಆರೋಪವೂ ಇದೆ. ಒಂದು ವೇಳೆ ಕೈಗಾರಿಕೆಗಳು ಅರಣ್ಯ ಅಭಿವೃದ್ಧಿಗೆ ಮುಂದಾಗುವುದೇ ಆದಲ್ಲಿ, ಅವುಗಳು ತಮ್ಮ ಉಪಯೋಗಕ್ಕೆ ತಕ್ಕಂತೆ ಮರಗಳನ್ನು ಬೆಳೆಸುತ್ತವೆ. ಮುಂದೊಂದು ದಿನ ಅದಕ್ಕೆ ಕೊಡಲಿ ಬೀಳುವುದಿಲ್ಲ ಎಂಬ ಗ್ಯಾರೆಂಟಿಯೂ ಇಲ್ಲ. ಇವತ್ತಿನ ಹೇರಳ ಅಕೆಶಿಯಾ ತೋಪುಗಳನ್ನು ಅರಣ್ಯ ಎನ್ನಲಾದಿತೆ? ಹೀಗಾಗಿ ಸಚಿವಾಲಯ ಕೈಗಾರಿಕೆಗಳಿಂದ ಅರಣ್ಯ ನಿರ್ವಹಣೆಯಲ್ಲಿ ಅದ್ಯಾವ ರೀತಿಯ ಕೊಡುಗೆ ನಿರೀಕ್ಷಿಸುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ.

ಇತ್ತೀಚೆಗೆ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಪರಿಸರ ಸಚಿವಾಲಯ ನೀಡಿದ್ದ ಪರವಾನಿಗೆ ಸಹ ಸರ್ಕಾರದ ಇಬ್ಬರು ಸಚಿವರ ನಡುವೆ ಚಕಮಕಿಗೆ ಕಾರಣಗಿತ್ತು. ಒಟ್ಟಿನಲ್ಲಿ ಅರಣ್ಯ ಸಂರಕ್ಷಣೆ ಸಂಬಂಧ ನಿಖರ ನೀತಿಯೊಂದನ್ನು ರೂಪಿಸುವುದಕ್ಕೆ ಬಿಜೆಪಿ ತಿಣುಕಾಡುತ್ತಿದೆ ಎಂಬುದಂತೂ ಸ್ಪಷ್ಟ.

Leave a Reply