ಸಾಧನೆಯ ಶಿಖರ ಏರಿದರೂ ಈಡೇರದ ಕನಸು, ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಮೆಸ್ಸಿ ನಿರಾಸೆಯ ವಿದಾಯ

ಡಿಜಿಟಲ್ ಕನ್ನಡ ಟೀಮ್:

ಕೆಲ ಕ್ರೀಡಾಪಟುಗಳ ದುರಾದೃಷ್ಟವೇ ಹಾಗೆ, ಅಪ್ರತಿಮ ಪ್ರತಿಭೆಯಿಂದ ವಿಶ್ವ ಕ್ರೀಡಾಭಿಮಾನಿಗಳ ಮನ ಗೆದ್ದರೂ ಕನಸಿನ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ವೃತ್ತಿಜೀವನಕ್ಕೆ ನಿರಾಸೆಯ ವಿದಾಯ ಹೇಳುತ್ತಾರೆ. ಅದೇ ರೀತಿ ಭಾನುವಾರ ನಡೆದ ಕೊಪ ಅಮೆರಿಕ ಫುಟ್ಬಾಲ್ ಕಪ್ ನ ಫೈನಲ್ ಪಂದ್ಯದಲ್ಲಿನ ಸೋಲಿನೊಂದಿಗೆ ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಲಿಯೋನಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ.

ಮೆಸ್ಸಿ ವಿಶ್ವದ ಶ್ರೇಷ್ಠ ಫುಟ್ಬಾಲಿಗರ ಸಾಲಿನಲ್ಲಿ ಸ್ಥಾನ ಪಡೆದಿರುವ ಮಹಾನ್ ಆಟಗಾರ. ಮೈದಾನದಲ್ಲಿ ಅತ್ಯಾಕರ್ಷಕ ಪ್ರದರ್ಶನದ ಮೂಲಕ ವಿಶ್ವ ಫುಟ್ಬಾಲ್ ಪ್ರಿಯರ ಹೃದಯದಲ್ಲಿ ಅಭಿಮಾನದ ಮಂಟಪ ಕಟ್ಟಿಕೊಂಡಿರುವಾತ. ಕ್ಲಬ್ ಫುಟ್ಬಾಲ್ ವೃತ್ತಿಜೀವನದಲ್ಲಿ ಬಾರ್ಸಿಲೋನಾ ಪರ ಮೆಸ್ಸಿಯ ಸಾಧನೆ ಶಿಖರ ಹೇಗಿದೆ ಅಂದರೆ, ಈತನ ದಾಖಲೆಗಳೇ ಫುಟ್ಬಾಲ್ ಕ್ರೀಡೆಗೆ ವಿಶಿಷ್ಠ ಮೆರಗು ತರುವಂತಿವೆ. ಆದರೆ, ದೇಶದ ತಂಡ ಪ್ರತಿನಿಧಿಸಿದ ಮೆಸ್ಸಿಗೆ ಅಂತಾರಾಷ್ಟ್ರೀಯ ಫುಟ್ಬಾಲ್ ನ ಕನಸು ಮಾತ್ರ ಈಡೇರಲೇ ಇಲ್ಲ.

ಬಾರ್ಸಿಲೋನಾ ಪರ ಮೆಸ್ಸಿ ಗೆದ್ದಿರುವ ಪ್ರಶಸ್ತಿಗಳ ಪಟ್ಟಿ ದೊಡ್ಡದಾಗಿಯೇ ಇದೆ. ಆದರೆ, ಅರ್ಜೆಂಟೀನಾ ಪರ ವಿಶ್ವಕಪ್ ಹಾಗೂ ಕೊಪ ಅಮೆರಿಕ ಪ್ರಶಸ್ತಿ ಮಾತ್ರ ಮೆಸ್ಸಿ ಕೈಗೆ ಸಿಗದೇ ಹೋಯಿತು. ಇದು ಕೇವಲ ಮೆಸ್ಸಿಯ ಆಸೆ ಅಷ್ಟೇ ಅಲ್ಲ. ಆತನ ಕೈನಲ್ಲಿ ಈ ಎರಡು ಪ್ರಶಸ್ತಿಗಳನ್ನು ನೋಡಬೇಕೆಂಬುದು ಕೋಟ್ಯಂತರ ಅಭಿಮಾನಿಗಳ ಕನಸು.

ಮೆಸ್ಸಿಯಂತೆ ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಪ್ರಶಸ್ತಿಯನ್ನು ಪಡೆಯದೇ ನಿರಾಸೆ ಅನುಭವಿಸಿದವರ ಪೈಕಿ ನಮಗೆ ಸಿಗುವ ಹತ್ತಿರದ ಉದಾಹರಣೆ ಭಾರತ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರ ಈ ಇಬ್ಬರಿಗೂ ವಿಶ್ವಕಪ್ ಪ್ರಶಸ್ತಿ ಸಿಗದ ನೋವು ಅಭಿಮಾನಿಗಳಲ್ಲಿ ಇನ್ನು ಮಾಸಿಲ್ಲ. ಇವರೆಲ್ಲ ಚಾಂಪಿಯನ್ ಆಟಗಾರರೆ. ಆದರೆ ಪ್ರಶಸ್ತಿ ಮಾತ್ರ ಇವರ ಮುಡಿಗೆ ಸೇರಿಲ್ಲ. ಇದನ್ನು ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ, ಈ ಮಹಾನ್ ಆಟಗಾರರ ಕೈ ಸೇರುವ ಅದೃಷ್ಟ ಆ ಪ್ರಶಸ್ತಿಗಳಿಗಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಮೆಸ್ಸಿ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿರೋದು ಆಘಾತವೇ ಸರಿ. ಆತ ಇನ್ನು 4 ವರ್ಷ ಆಡಬಲ್ಲ. ಸೋಲಿನ ನೋವಿನಲ್ಲಿ ತೆಗೆದುಕೊಂಡ ಈ ನಿರ್ಧಾರ ಶಾಶ್ವತಾವಾಗುತ್ತದೆಯೇ ಅಥವಾ ಈ ನಿರ್ಧಾರ ಬದಲಾಗುತ್ತದೆಯೇ ಕಾದುನೋಡಬೇಕು. ಅಂದಹಾಗೇ, ಮೆಸ್ಸಿ ಕೇವಲ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದು, ಕ್ಲಬ್ ಫುಟ್ಬಾಲ್ ನಲ್ಲಿ ಮುಂದುವರಿಯಲಿದ್ದಾರೆ. ಇದು ಮೆಸ್ಸಿ ಅಭಿಮಾನಿಗಳಿಗೆ ಕೊಂಚ ನೆಮ್ಮದಿಯ ವಿಷಯ. ಮೆಸ್ಸಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇ ಆದರೆ, ಅರ್ಜೆಂಟೀನಾ ತಂಡದಲ್ಲಿ ತೆರವಾಗಿರುವ ಇವರ ಸ್ಥಾನ ತುಂಬಲು ಇನ್ನೆಷ್ಟು ವರ್ಷಗಳು ಬೇಕಾಗುತ್ತೋ.

Leave a Reply