ಹಿರಿಯ ಅಧಿಕಾರಿಗಳಿಗೆ ಬೆಂಡೆತ್ತಿದ್ರು ಸಿದ್ದರಾಮಯ್ಯ, ಭಾರತಕ್ಕೆ ಎಂಟಿಸಿಆರ್ ಸದಸ್ಯತ್ವ ಅಧಿಕೃತ, ಬೆಂಗ್ಳೂರಲ್ಲಿ ಮಳೆಗೆ ಮರ ಬಿದ್ದು ವ್ಯಕ್ತಿ ಸಾವು, ಸಲಿಂಗಿಗಳ ಬಳಿ ಕ್ಷಮೆ ಕೇಳಿ ಅಂದ್ರು ಪೋಪ್

Huge tree fell down due to heavy wind and rain, leaving once person dead and another injured at Malleshwaram 18th Cross, in Bengaluru on Monday.

ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಸೋಮವಾರ ಸುರಿದ ಭಾರಿ ಮಳೆಗೆ ಕಾರಿನ ಮೇಲೆ ಉರುಳಿರುವ ಮರ

ಡಿಜಿಟಲ್ ಕನ್ನಡ ಟೀಮ್:

ಭೂಕಬಳಿಕೆ ತಡೆಗೆ ಆಯಾ ಜಿಲ್ಲೆಗಳ ಸರ್ಕಾರಿ ಜಮೀನು ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ನಾಮಫಲಕದ ಮೂಲಕ ಪ್ರಕಟಿಸುವಂತೆ ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಆದೇಶಿಸಿದ್ದಾರೆ.

ಜತೆಗೆ ಆಯಾ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಸರ್ಕಾರಿ ಯೋಜನೆಗಳು ಹಾಗೂ ಅದರ ಪ್ರಗತಿಯ ಬಗ್ಗೆ ಅಂಕಿ-ಅಂಶದ ಸಮೇತ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ವಿಧಾನಸೌಧದಲ್ಲಿ ಸೋಮವಾರ ನಡೆದ ನಾನಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ವಿಭಾಗಾಧಿಕಾರಿಗಳು, ಕಾರ್ಯದರ್ಶಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸಿದ್ದರಾಮಯ್ಯನವರು ಸೂಚನೆ ನೀಡಿದರು.

ಸರ್ಕಾರಿ ಭೂಮಿಯನ್ನು ಅಧಿಕಾರಿಗಳಿಗೆ ರಕ್ಷಣೆ ಮಾಡಲಾಗದಿದ್ದರೆ ಸಾರ್ವಜನಿಕರೇ ರಕ್ಷಣೆ ಮಾಡಿಕೊಳ್ಳುತ್ತಾರೆ ಇಂತಿಂಥ ಪ್ರದೇಶದಲ್ಲಿ ಇಂತಿಷ್ಟು ಸರಕಾರಿ ಭೂಮಿ ಇದೆ ಎಂಬುದು ಜನರಿಗೆ ಗೊತ್ತಾದರೆ ಅದನ್ನು ಭೂ ಕಬಳಿಕೆಯಿಂದ ತಡೆಯುವುದರ ಜತೆಗೆ ರಕ್ಷಣೆಯನ್ನೂ ಮಾಡುತ್ತಾರೆ. ಕಬಳಿಕೆ ಯತ್ನ ನಡೆದರೆ ಮಾಹಿತಿ ನೀಡುತ್ತಾರೆ. ಹೀಗಾಗಿ, ಇಡೀ ಜಿಲ್ಲೆಯಲ್ಲಿರುವ ಸರ್ಕಾರಿ ಭೂಮಿಯ ಸಮಗ್ರ ಮಾಹಿತಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ನಾಮಫಲಕದಲ್ಲಿ ಇರಬೇಕು ಎಂದು ಖಡಾಖಂಡಿತವಾಗಿ ಹೇಳಿದರು.

ಸರ್ಕಾರವು ಸಾವಿರಾರು ಕೋಟಿ ರುಪಾಯಿ ಯೋಜನೆ ಜಾರಿಗೆ ತಂದರೂ ಅವು ಜನರಿಗೆ ತಲುಪುತ್ತಿಲ್ಲ. ಇದಕ್ಕೆ ಅಧಿಕಾರಿಗಳೇ ಅಡ್ಡಿ ಎಂಬುದು ಸಾರ್ವಜನಿಕರ ದೂರು. ಹೀಗಾಗಿ ಪ್ರತಿ ಯೋಜನೆ, ಅದರ ಪ್ರಗತಿ ಬಗ್ಗೆ ಪೂರ್ಣ ಮಾಹಿತಿಯನ್ನು ಕಚೇರಿ ಆವರಣದಲ್ಲಿ ಪ್ರಕಟಿಸಿ ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ ವರ್ಗದ ಕಾರ್ಯವೈಖರಿ ಬಗ್ಗೆ  ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಇದೆ. ಸರಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದರೂ ಯೋಜನೆಗಳನ್ನು ಜಾರಿಗೆ ತರಲು ನಿಮಗೇನು ತೊಂದರೆ. ನೀವು ನಾಲ್ಕು ಗೋಡೆ ಮಧ್ಯೆ ಕುಳಿತು ಕೆಲಸ ಮಾಡುತ್ತೀರಿ. ಕೊಠಡಿಯಿಂದ ಹೊರಗೆ ಬಂದು ನಾಲ್ಕು ದಿಕ್ಕು ತಿರುಗಿದರೆ ಪ್ರಪಂಚ ಗೊತ್ತಾಗುತ್ತದೆ.  ನೀವು ಹೊರಗೆ ಬರದಿರುವುದರಿಂದ ಕೆಳಹಂತದ ಅಧಿಕಾರಿಗಳು ಅಸಡ್ಡೆ ತೋರುತ್ತಾರೆ. ಹಿಂದೆ ಬ್ರಿಟಿಷರ ಕಾಲದಲ್ಲಿ ರಸ್ತೆ ಇಲ್ಲದಿದ್ದರೂ ಅಮಲ್ದಾರರು ಕುದುರೆ ಮೇಲೆ ಗ್ರಾಮಾಂತರ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದರು. ಆದರೆ ಈಗ ರಸ್ತೆ, ವಾಹನ ಎಲ್ಲಾ ಸೌಲಭ್ಯವಿದ್ದರೂ ಅಲ್ಲಿಗೆ ಹೋಗಲು ನಿಮಗೇನು ದಾಡಿ ಎಂದು ಖಾರವಾಗಿ ಪ್ರಶ್ನಿಸಿದರು.

ನಾವು ಐದು ವರ್ಷಕ್ಕೊಮ್ಮೆ ಚುನಾವಣೆಗೆ ಹೋಗುತ್ತೇವೆ. ನಮ್ಮ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತೇವೆ. ಆದರೆ, ನೀವು ಯೋಜನೆ ಅನುಷ್ಟಾನಕ್ಕೆ ಕ್ರಮಕೈಗೊಳ್ಳದ ಕಾರಣ ಜನತೆ ನಮ್ಮನ್ನು ಥೂ.. ಛೀ.. ಎಂದು  ಉಗಿಯುತ್ತಾರೆ. ಆಳ್ವಿಕೆ ಮಾಡುವವರು ಐದು ವರ್ಷಕ್ಕೊಮ್ಮೆ ಬದಲಾವಣೆ ಆಗುತ್ತಾರೆ. ಬೇರೆಯವರು ಬರುತ್ತಾರೆ. ಇದು ಇದ್ದಿದ್ದೇ ಎಂಬ ಜಿಡ್ಡುತನ ನಿಮ್ಮನ್ನು ಆವರಿಸಿರುವುದೇ ಇದಕ್ಕೆಲ್ಲ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.

ಬೆಂಗ್ಳೂರಲ್ಲಿ ಭಾರಿ ಮಳೆಗೆ ಮರ ಬಿದ್ದು ವ್ಯಕ್ತಿ ಸಾವು

ಬೆಂಗಳೂರಿನಲ್ಲಿ ಸೋಮವಾರ ಸುರಿದ ಭಾರಿ ಮಳೆ ವ್ಯಕ್ತಿಯೊಬ್ಬನ ಬಲಿ ಪಡೆದಿದೆ. ಮಲ್ಲೇಶ್ವರಂ 18 ನೇ ಅಡ್ಡರಸ್ತೆಯಲ್ಲಿ ಮರವೊಂದು ಬೇರು ಸಮೇತ ಉರುಳಿ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಅಸಾವುಲ್ ಷರೀಫ್ (45) ಸಾವನ್ನಪ್ಪಿದ್ದಾನೆ. ಇದೇ ಸಂದರ್ಭದಲ್ಲಿ ಸಾಗುತ್ತಿದ್ದ ಕಾರೊಂದು ಸಂಪೂರ್ಣ ಜಖಂ ಆಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಕೆ.ಸಿ ಜೆನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಇತರ ಕಡೆಯು ಮಳೆಯ ಆರ್ಭಟ ಜೋರಾಗಿದ್ದು, ಹಲವು ಮರಗಳು ಧರೆಗುರುಳಿವೆ.

ಭಾರತಕ್ಕೆ ಅಧಿಕೃತವಾಗಿ ಸಿಕ್ತು ಎಂಟಿಸಿಆರ್ ಅಧಿಕೃತ ಸದಸ್ಯತ್ವ

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ರಾಷ್ಟ್ರಗಳ ಗುಂಪಿಗೆ ಭಾರತ ಅಧಿಕೃತ ಎಂಟ್ರಿ ಪಡೆದಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಬೇರೆ ರಾಷ್ಟ್ರಗಳೊಂದಿಗೆ ಭಾರತದ ಕೊಡು, ಕೊಳ್ಳುವಿಕೆ ವ್ಯವಹಾರಕ್ಕೆ ವೇದಿಕೆ ಸೃಷ್ಟಿಯಾಗಿದೆ.

ಕಳೆದ ವಾರ ಎನ್ಎಸ್ಜಿ ಸದಸ್ಯತ್ವ ಕೈತಪ್ಪಿ ನಿರಾಸೆ ಅನುಭವಿಸಿದ್ದ ಭಾರತಕ್ಕೆ ಎಂಟಿಸಿಆರ್ ಸದಸ್ಯತ್ವ ತೃಪ್ತಿ ತಂದಿದೆ. ಈ ಸದಸ್ಯತ್ವ ಸಿಗುವ ಮುನ್ನ ಇದರ ಆಳ ಮತ್ತು ಅಗಲದ ಬಗ್ಗೆ ಡಿಜಿಟಲ್ ಕನ್ನಡ ಪ್ರಕಟಿಸಿದ್ದ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

ರಾಜನ್ ಉತ್ತರಾಧಿಕಾರಿ ಹುಡುಕಾಟ, ನಾಲ್ವರ ಬಗ್ಗೆ ಸರ್ಕಾರದ ಒಲವು

ಮುಂದಿನ ಸೆಪ್ಟೆಂಬರ್ ರಘುರಾಮ್ ರಾಜನ್ ತೆರವು ಮಾಡಲಿರುವ ಆರ್ಬಿಐ ಗವರ್ನರ್ ಸ್ಥಾನಕ್ಕೆ ಆರ್ಬಿಐ ಡೆಪ್ಯುಟಿ ಗವರ್ನರ್ ಉರ್ಜಿತ್ ಪಟೇಲ್ ಜತೆಗೆ ಮಾಜಿ ಡೆಪ್ಯುಟಿ ಗವರ್ನರ್ ಗಳಾದ ರಾಕೇಶ್ ಮೋಹನ್ ಮತ್ತು ಸುಬಿರ್ ಗೋಕರ್ಣ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥೆ ಅರುಂದತಿ ಭಟ್ಟಾಚಾರ್ಯ ಹೆಸರುಗಳು ಚರ್ಚೆ ಆಗುತ್ತಿವೆ.

ಸಲಿಂಗಿಗಳ ಬಳಿ ಕ್ರೈಸ್ತರು ಕ್ಷಮೆ ಕೋರಬೇಕು ಅಂದ್ರು ಪೋಪ್

ಸಲಿಂಗಿಗಳ ಮೇಲೆ ನಡೆದಿರುವ ದೌರ್ಜನ್ಯಕ್ಕೆ ಕ್ರೈಸ್ತರು ಅವರ ಬಳಿ ಕ್ಷಮೆ ಕೇಳಬೇಕು ಅಂದಿದ್ದಾರೆ ಪೋಪ್ ಫ್ರಾನ್ಸಿಸ್. ಈ ಬಗ್ಗೆ ಪೋಪ್ ಹೇಳಿರೋದು:

‘ಸಲಿಂಗಿಗಳ ಬೇಧ ಸಲ್ಲದು. ಅವರಿಗೆ ಸೂಕ್ತ ಗೌರವ ನೀಡಬೇಕು. ಈವರೆಗೂ ನಡೆದಿರುವ ತಾರತಮ್ಯಕ್ಕೆ ಚರ್ಚ್ಗಳು ಸಲಿಂಗಿಗಳ ಬಳಿ ಕ್ಷಮೆ ಕೋರಬೇಕು. ಚರ್ಚ್ ಅಂದರೆ ಕ್ರೈಸ್ತ ಸಮುದಾಯ ಎಂದರ್ಥ. ಇಲ್ಲಿ ಚರ್ಚ್ ಪವಿತ್ರವಾಗಿಯೇ ಇದೆ. ಆದರೆ ಪಾಪ ಮಾಡಿರುವವರು ನಾವು. ಈ ಕ್ಷಮೆ ಕೇವಲ ಸಲಿಂಗಿಗಳಿಗೆ ಮಾತ್ರವಲ್ಲ, ದೌರ್ಜನ್ಯಕ್ಕೆ ಒಳಗಾಗಿರುವ ಬಡವರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ನೌಕರ ವರ್ಗಕ್ಕೂ ಅನ್ವಯ ಆಗಬೇಕು.’

ಮೋದಿ ಅವರಿಂದ ಉತ್ತಮ ಕೆಲಸ: ಕಿರಣ್ ಬೇಡಿ ಪ್ರಶಂಸೆ

ಭಾರತವನ್ನು ಜಗತ್ತಿನ ಮುಂಚೂಣಿ ದೇಶವಾಗಿಸಲು ಪ್ರಧಾನಿ ಮೋದಿಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಅವರೊಂದಿಗಿದ್ದೇವೆ ಎಂದು ಪುದುಚೇರಿ ಕೇಂದ್ರಾಡಳಿತ ಪ್ರದೇಶ ರಾಜ್ಯಪಾಲರಾದ ಕಿರಣ್ ಬೇಡಿ ತಿಳಿಸಿದ್ದಾರೆ.

ನಿಸ್ವಾರ್ಥ ಸೇವೆ ಮಾಡುವವರೊಂದಿಗೆ ನಾವಿರುತ್ತೇವೆ. ಹಿಂದಿನ ಪ್ರಧಾನಿಯವರು ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ಆದರೆ ಮೋದಿಯವರು ಸಾಮಾಜಿಕ ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ನೈರ್ಮಲ್ಯೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಜನ ಸ್ವಯಂಪ್ರೇರಿತರಾಗಿ ಸ್ವಚ್ಛತಾ ಅಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ತೆರಿಗೆ ವಂಚನೆ ಎಂಬಬದು ದೇಶಕ್ಕೇ ಮಾಡುವ ವಂಚನೆ. ಹೀಗಾಗಿ ತೆರಿಗೆ ಕಟ್ಟದವರ ವಿರುದ್ಧ ಕಠಿಣ ಕ್ರಮಕ್ಕೆ ಮೋದಿ ಅವರು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಆಡಳಿತ ಪಾರದರ್ಶಕವಾಗಿದ್ದರೆ ಜನ ಉತ್ತಮವಾಗಿ ಸ್ಪಂದಿಸುತ್ತಾರೆ ಎಂದರು.

Leave a Reply