ಸಿದ್ದರಾಮಯ್ಯ ವಿರುದ್ಧ ಮುಂದುವರೆದ ಪ್ರಸಾದ್-ಮಾಲಕರಡ್ಡಿ ವಾಗ್ದಾಳಿ, ಯಾವುದೇ ಗೊಂದಲ ಇಲ್ಲ ಅಂದ್ರು ದಿನೇಶ್

ಡಿಜಿಟಲ್ ಕನ್ನಡ ಟೀಮ್:

ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಕಾಣಿಸಿಕೊಂಡಿರುವ ಬಂಡಾಯದ ಹಗ್ಗ-ಜಗ್ಗಾಟ ಸೋಮವಾರವೂ ಮುಂದುವರಿದಿದೆ. ಭಿನ್ನಮತೀಯ ನಾಯಕರಾದ ಶ್ರೀನಿವಾಸ ಪ್ರಸಾದ್, ಮಾಲಕರಡ್ಡಿ ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದರೆ, ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಪ್ರದೇಶ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ರಾಜಕೀಯವಾಗಷ್ಟೇ ಅಲ್ಲ ವೈಯುಕ್ತಿಕವಾಗಿಯೂ ಇನ್ನು ಮುಂದೆ ಯಾವುದೇ ಸಂಬಂಧವಾಗಲಿ, ಮಾತುಕತೆಯನ್ನಾಗಲಿ ಇಟ್ಟುಕೊಳ್ಳುವುದಿಲ್ಲ. ಅವರ ನಾಯಕತ್ವ ಬದಲಾವಣೆಯೇ ತಮ್ಮ ಒಂದಂಶದ ಕಾರ್ಯಕ್ರಮ ಎಂದು ಕಾಂಗ್ರೆಸ್ ಬಂಡಾಯ ನಾಯಕ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ಸಂಪುಟ ಪುನಾರಚನೆ ನಂತರ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿರುವ ಪ್ರಸಾದ್ ಅವರ ನಿವಾಸ ಸೋಮವಾರವೂ ರಾಜಕೀಯ ಚಟುವಟಿಕೆಗಳ ತಾಣವಾಗಿತ್ತು. ಅತೃಪ್ತ ನಾಯಕರಲ್ಲದೆ ಸಿದ್ದರಾಮಯ್ಯ ಅವರಿಗೂ ಆಪ್ತರಾಗಿರುವ ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರ ಜತೆ ಮಾತಾಡಿದ ಪ್ರಸಾದ್, ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ತಮ್ಮನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ರಾಜ್ಯಕ್ಕೆ ಖದ್ದು ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅವರು ಬರಲಿ ಬಿಡಲಿ, ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದರು.

ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅತೃಪ್ತರನ್ನು ನಾನು ಕಲೆ ಹಾಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾನು ಯಾರನ್ನೂ ಕಲೆ ಹಾಕಬೇಕಾಗಿಲ್ಲ. ಇವರ ಸರ್ವಾಧಿಕಾರಿ ವರ್ತನೆ ಬಗ್ಗೆ ಬೇಸತ್ತು, ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಎಷ್ಟು ಸಂಖ್ಯಾಬಲವಿದೆ ಎನ್ನುವುದು ಮುಖ್ಯವಲ್ಲ. ನಮ್ಮ ಹೋರಾಟ ಮತ್ತು ಬದ್ಧತೆ ಮುಖ್ಯ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ವಾಸ್ತವಾಂಶ ಮನದಟ್ಟು ಮಾಡಿಕೊಟ್ಟಿದ್ದೇನೆ. ಪಕ್ಷದ ಹಿತಷ್ಟಿಯಿಂದ ಕೈಗೆತ್ತಿಕೊಂಡಿರುವ ಹೋರಾಟದ ಬಗ್ಗೆ ವರಿಷ್ಠರ ಗಮನಕ್ಕೆ ತರುವಂತೆ ಮನವಿ ಮಾಡಿದ್ದೇನೆ. ಸಿದ್ದರಾಮಯ್ಯ ಹಠಾವೂ ಚಳುವಳಿಯ ನಾಯಕತ್ವ ವಹಿಸಿಕೊಳ್ಳುವಂತೆ ಅವರನ್ನು ಕೋರಿಲ್ಲ.

ಕಾಂಗ್ರೆಸ್ ಉಳಿವಿಗಾಗಿ ನಮ್ಮ ಜತೆ ಇರುವುದಾಗಿ ತಿಳಿಸಿದ್ದಾರೆ. ನಮಗೆ ಅಷ್ಟೇ ಸಾಕು ಎಂದು ತಿಳಿಸಿದರು.

ಸಿದ್ದರಾಮಯ್ಯ ವಿರುದ್ಧ ಮಾಲಕರಡ್ಡಿ ಮತ್ತೆ ಬ್ಯಾಟಿಂಗ್

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ತಮ್ಮ ವೈಯುಕ್ತಿಕ ವರ್ಚಸ್ಸು ವೃದ್ಧಿಗಷ್ಟೇ ಸೀಮಿತವಾಗಿ ಸರ್ವಾಧಿಕಾರಿ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಏಳ್ಗೆಗೆ ಕಿಂಚಿತ್ತೂ ಗಮನ ಕೊಟ್ಟಿಲ್ಲ ಎಂದು ಮತ್ತೊಬ್ಬ ಭಿನ್ನಮತೀಯ ನಾಯಕ ಡಾ. ಎ.ಬಿ. ಮಾಲಕರಡ್ಡಿ ಟೀಕಿಸಿದ್ದಾರೆ.

ಸಂಪುಟ ಪುನಾರಚನೆ ನಂತರ ಶ್ರೀನಿವಾಸಪ್ರಸಾದ್ ಜೊತೆ ಸತತ ಸಂಪರ್ಕ ಇಟ್ಟುಕೊಂಡಿರುವ
ಅವರು ಇಂದಿನ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಬೊಕ್ಕಸಕ್ಕೆ 5,000 ಕೋಟಿ ರುಪಾಯಿ ಹೊರೆಯಾಗುವ ಅನ್ನಭಾಗ್ಯ ಯೋಜನೆಯನ್ನು ಏಕಪಕ್ಷೀಯವಾಗಿ ಪ್ರಕಟಿಸಿದರು. ಪೂರ್ಣ ಪ್ರಮಾಣದಲ್ಲಿ ಸಂಪುಟ ರಚನೆಗೊಳ್ಳುವ ಮುನ್ನ ಇಂಥ  ಘೋಷಣೆ ಮೂಲಕ ವೈಯುಕ್ತಿಕ ವರ್ಚಸ್ಸು ವೃದ್ಧಿಗೆ ಒತ್ತುಕೊಟ್ಟರು. ಇದರಿಂದಾಗಿ ಯೋಜನೆ ಕಾಳಸಂತೆ ವ್ಯವಹಾರ, ಅಕ್ರಮಗಳಿಗೆ ಆಸ್ಪದವಾಯಿತು. ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವಾಯಿತು ಎಂದು ದೂರಿದರು.

ಅನ್ನಭಾಗ್ಯದಿಂದ ಜನಸಾಮಾನ್ಯರಿಗೆ ಅನುಕೂಲವಾಗಿರಬಹುದು. ಆದರೆ, ವೈಯಕ್ತಿಕ ವರ್ಚಸ್ಸಿಗಾಗಿ ಹಿಂದೆ-ಮುಂದೆ ಯೋಚಿಸದೆ ನಿರ್ಧಾರ ತೆಗೆದುಕೊಳ್ಳುವ ಸಿದ್ದರಾಮಯ್ಯ ಪ್ರವೃತ್ತಿ ಸರಿಯಲ್ಲ. ಇದು ಹಿಟ್ಲರ್ ಧೋರಣೆಯಿಂದ ಕೂಡಿದೆ. ತಮ್ಮ ರಾಜಕೀಯ ಬೆಳವಣಿಗೆಗೆ ಕಾರಣರಾದ ಶ್ರೀನಿವಾಸ ಪ್ರಸಾದ್ ಅವರನ್ನು ಸಂಪುಟದಿಂದ ಕೈ ಬಿಡುವಾಗಲೂ ಇದೇ ಹಿಟ್ಲರ್ ಧೋರಣೆ ಅನುಸರಿಸಿದ್ದಾರೆ ಎಂದು ಅವರು ಆರೋಪಿಸಿದರು.

ಯಾವುದೇ ಭಿನ್ನಮತ ಇಲ್ಲ ಅಂದ್ರು ದಿನೇಶ್ ಗುಂಡೂರಾವ್

ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಮತ ಇಲ್ಲ. ಪಕ್ಷದ ಸಂಘಟನೆಗಾಗಿ ಹಿರಿಯ ನಾಯಕರ ಸಹಕಾರ ಅಗತ್ಯವಿದೆ. ಹೀಗಾಗಿ ಶ್ರೀನಿವಾಸ್‍ಪ್ರಸಾದ್, ಅಂಬಿರೀಶ್, ಖಮರುಲ್ಲಾ ಇಸ್ಲಾಂ ಅವರ ಮನವೊಲಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.

ಅಧಿಕಾರ ಶಾಶ್ವತ ಅಲ್ಲ. ಪಕ್ಷದ ಸಂಘಟನೆ ಮುಖ್ಯ. ಅದಕ್ಕೆ ಕೈ ಜೋಡಿಸುವಂತೆ ಖಮರುಲ್ ಇಸ್ಲಾಂ, ಅಂಬರೀಶ್ ಹಾಗೂ ಶ್ರೀನಿವಾಸ್ ಪ್ರಸಾದ್ ಅವರಲ್ಲಿ ಮನವಿ ಮಾಡಿದ್ದೇವೆ. ಮಂತ್ರಿಪಟ್ಟ ಶಾಶ್ವತ ಅಲ್ಲ. ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಕಾಂಗ್ರೆಸ್ ಭವನದಲ್ಲಿ ಹಿಂದುಳಿದ ವರ್ಗಗಳ ಘಟಕದ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು. ಹೊಸ ಪದವಿ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಶೀಘ್ರ ಭೇಟಿ ಮಾಡಿ ಆಶೀರ್ವಾದ ಪಡೆಯುವುದಾಗಿ ಹೇಳಿದರು.

Leave a Reply