ಅಧಿಕಾರದ ಭ್ರಮೆಗೆ ಸಿಕ್ಕಿರುವ ಯಡಿಯೂರಪ್ಪ ಪಾಲಿಗೆ ಅನ್ಯ ನಾಯಕರು ಆಗಿದ್ದಾರೆ ಮನುಷ್ಯ ಮುಟ್ಟಿದ ಕಾಗೆ!

author-thyagarajರಾಜಕೀಯವಾಗಿ ಎಷ್ಟೆಲ್ಲ ಏಟು ಬಿದ್ದಿದ್ದರೂ ಹಳೆಯ ಅನುಭವಗಳಿಂದ ಪಾಠ ಕಲಿಯದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಪ್ರತಿಪಕ್ಷದಲ್ಲಿರುವಾಗಲೇ ಬಂಡಾಯವೆಂಬ ಬಂಡೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕೈಯಲ್ಲಿ ಅಧಿಕಾರ ಇಲ್ಲದಿದ್ದಾಗ ಅದಕ್ಕಾಗಿ ಯಡಿಯೂರಪ್ಪನವರು ಹಗಲು-ಇರುಳು ನರಳಿದ್ದರು. ಆದರೆ ಅದು ಕೈಗೆ ಸಿಕ್ಕ ನಂತರ ಹಳೇ ಸ್ಥಿತಿ ಮರೆತು ವರಸೆಯನ್ನೇ ಬದಲಿಸಿದ್ದಾರೆ. ಅವರು ಬದಲಿಸಿರುವ ವರಸೆಯಲ್ಲಿ ಏಕಚಕ್ರಾಧಿಪತ್ಯ ಸ್ಥಾಪನೆಯ ಹಪಾಪಹಿ, ಶೋಭಾ ಕರಂದ್ಲಾಜೆ ಕೃಪಾಪೋಷಿತ ಸ್ವಜನ ಪಕ್ಷಪಾತ, ಆಹಮಿಕೆ, ದ್ವೇಷಾಸೂಯೆ ಮಿಳಿತವಾಗಿದೆ. ಇದು ಪಕ್ಷದೊಳಗೆ ಗುಂಪು ರಾಜಕೀಯಕ್ಕೆ ಕಾರಣವಾಗಿದ್ದು, ಮುಂದಿನ ಚುನಾವಣೆ ರಾಜಕೀಯ ಭವಿಷ್ಯದತ್ತ  ಪ್ರತಿಕೂಲ ಸಂಕೇತಗಳನ್ನು ರವಾನಿಸುತ್ತಿದೆ.

ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಭವಿಷ್ಯ ಮತ್ತು ರಾಜ್ಯ ರಾಜಕೀಯದತ್ತ ಯಡಿಯೂರಪ್ಪನವರ ತುಡಿತ ಎರಡನ್ನೂ ಸಮೀಕರಿಸಿ ರಾಷ್ಟ್ರೀಯ ನಾಯಕರು ಈ ಮಾಜಿ ಮುಖ್ಯಮಂತ್ರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದರು. ಹಾಗೆ ಪಟ್ಟ ಕಟ್ಟುವಾಗ ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿ, ಮತ್ತೆ ಪಕ್ಷಕ್ಕೆ ಮರಳಿದ್ದರಲ್ಲಿ ಆಗಿದ್ದ ‘ಪಕ್ಷದ್ರೋಹ’ವನ್ನು ಪಕ್ಕಕ್ಕಿಟ್ಟರು. ನೀವು ಇಡೀ ರಾಜ್ಯಕ್ಕೆ ಮುಖಂಡರು ಎಂದು ಸಾರಿದರು. ಪಕ್ಷವನ್ನು ಇಡಿಯಾಗಿ ಅವರ ಕೈಗೆ ಕೊಟ್ಟರು. ಆದರೆ ಯಡಿಯೂರಪ್ಪನವರು ಮಾತ್ರ ಪಕ್ಷದೊಳಗೆ ತಮ್ಮವರನ್ನು ಹುಡುಕುತ್ತಾ ಗುಂಪು ರಾಜಕೀಯ ಮಾಡುತ್ತಿದ್ದಾರೆ. ಹಿಂದೆ ತಮ್ಮೊಂದಿಗೆ ಕೆಜೆಪಿಗೆ ಬಂದಿದ್ದವರಿಗೆ, ಬಿಜೆಪಿ ಬಿಟ್ಟಿದ್ದವರಿಗೆ ಮಣೆ ಹಾಕುತ್ತಿದ್ದಾರೆ. ತಮ್ಮ ಜತೆ ಬಾರದವರನ್ನು ಶತ್ರುಗಳಂತೆ ಪರಿಭಾವಿಸುತ್ತಿದ್ದಾರೆ. ತತ್ಪರಿಣಾಮ ಇದೀಗ ರಾಜ್ಯ ಬಿಜೆಪಿಯಲ್ಲೂ ಮೂಲನಿವಾಸಿಗಳು ಹಾಗೂ ವಲಸಿಗರು ಎಂಬ ಎರಡು ಗುಂಪು ಢಾಳಾಗಿ ಗೋಚರಿಸುತ್ತಿದೆ. ಅಸಹನೆ ಸ್ಫೋಟಗೊಂಡಿದೆ. ಆಡಳಿತಪಕ್ಷ ಕಾಂಗ್ರೆಸ್ಸನ್ನೂ ನಾಚಿಸುವಂತೆ!

ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ ಯಡಿಯೂರಪ್ಪನವರು ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ಮೆರೆದಿರುವ ಸ್ವಜನ ಪಕ್ಷಪಾತ. ಪಕ್ಷ ನಿಷ್ಠರನ್ನು ಕಡೆಗಣಿಸಿ ತಮ್ಮ ನಿಷ್ಠರನ್ನು ಮೆರೆಸಲು ಹೊರಟಿರುವ ಯಡಿಯೂರಪ್ಪನವರು ಬಿಜೆಪಿ ವರ್ಚಸ್ಸನ್ನು ಕರಗಿಸುತ್ತಿದ್ದಾರೆ. ಅವರ ಪಕ್ಷಪಾತ ಧೋರಣೆ ಎಷ್ಟರ ಮಟ್ಟಿಗೆ ಇದೆಯೆಂಬುದಕ್ಕೆ ಎರಡನೇ ಹಂತದ ನಾಯಕರು ಯಡಿಯೂರಪ್ಪ ನಡೆ ವಿರುದ್ಧ ನಡೆಸಿರುವ ಸಭೆಯೇ ಸಾಕ್ಷಿ.

ನಿಜ, ಒಬ್ಬ ಬ್ಯಾಟ್ಸ್ ಮನ್ ಸಿಕ್ಸರ್ ಅಥವಾ ಬೌಂಡರಿ ಬಾರಿಸಲು ಹೋಗಿ ಹಿಟ್ ವಿಕೆಟ್ ಮಾಡಿಕೊಂಡರೆ ಅದಕ್ಕೊಂದು ಅರ್ಥ ಇರುತ್ತದೆ. ಪಾಪ, ಏನೋ ರನ್ ಹೊಡೆಯಲು ಹೋಗಿ ಔಟಾದರು ಅಂತಾ. ಆದರೆ ಯಡಿಯೂರಪ್ಪನವರ ವರ್ತನೆ ಸುಖಾಸುಮ್ಮನೆ ಬ್ಯಾಟ್ ತಗೊಂಡು ವಿಕೆಟ್ಟಿಗೆ ಬಾರಿಸಿದಂತಿದೆ. ಯಾವತ್ತಿಗೂ ಸಮಾಲೋಚನೆ ಪ್ರಕ್ರಿಯೆ ಸಂಘಟನೆಯ ಬಹುಮುಖ್ಯ ಭಾಗ ಮತ್ತು ಶಕ್ತಿ. ನಾಯಕನಾದವನು ಈ ಸಮಾಲೋಚನೆ ಮಂಥನದಲ್ಲಿಯೇ ತೀರ್ಮಾನಗಳನ್ನು ಹೊಮ್ಮಿಸಬೇಕು. ಆಗ ಅಸಮಾಧಾನ, ಅಸಹನೆ ಎಂಬ ಪದಗಳಿಗೆ ಆಸ್ಪದ ಇರದು.

ಆದರೆ ಯಡಿಯೂರಪ್ಪನವರು ಪದಾಧಿಕಾರಿಗಳ ನೇಮಕ ಮಾಡುವಾಗ ಹಿರಿಯ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕೋರ್ ಕಮಿಟಿ ಸಭೆಯಲ್ಲೂ ಚರ್ಚಿಸಿಲ್ಲ. ಜಿಲ್ಲಾ ಮಟ್ಟದಲ್ಲೂ ಅಭಿಪ್ರಾಯಗಳನ್ನು ಕ್ರೋಡೀಕರಿಸಿಲ್ಲ. ಶೋಭಾ ಕರಂದ್ಲಾಜೆ ಒಬ್ಬರೇ ಅವರ ಪಾಲಿನ ಕೋರ್ ಕಮಿಟಿ, ಹೈಕಮಾಂಡ್, ಲೋಕಮಾಂಡ್ ಎಲ್ಲ. ಬೆಂಗಳೂರಲ್ಲೇ ಕುಳಿತುಕೊಂಡು ಜಿಲ್ಲಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಿ ಬಿಸಾಕಿದ್ದಾರೆ. ಒಂದು ಹುದ್ದೆಗೆ ಹತ್ತು ಮಂದಿ ಆಕಾಂಕ್ಷಿಗಳಿರುತ್ತಾರೆ. ಸಮಾಲೋಚನೆ ಪ್ರಕ್ರಿಯೆ ನಡೆದಿದ್ದರೆ ಉಳಿದ ಒಂಬತ್ತು ಮಂದಿಯನ್ನು ಸಮಾಧಾನ ಮಾಡಲು ಅವಕಾಶವಾಗುತ್ತಿತ್ತು. ಜತೆಗೆ ತೆಗೆದುಕೊಂಡ ತೀರ್ಮಾನಕ್ಕೂ ಅವರನ್ನು ಬಾಧ್ಯಸ್ಥರನ್ನಾಗಿ ಮಾಡಿಕೊಳ್ಳಬಹುದಿತ್ತು. ಸಮೂಹ ಸಮ್ಮತಿಯಲ್ಲಿ ಭಿನ್ನಾಭಿಪ್ರಾಯ ಕರಗಿ ಹೋಗುತ್ತಿತ್ತು.

ಯಡಿಯೂರಪ್ಪನವರ ಆತುರ ಹಾಗೂ ಯಾರನ್ಯಾಕೆ ಕೇಳಬೇಕು ಎಂಬ ದರ್ಪದ ವರ್ತನೆ ಪರಿಣಾಮವಾಗಿ ಯಾರ್ಯಾರೋ ಪದಾಧಿಕಾರಿಗಳಾಗಿದ್ದಾರೆ. ಹತ್ತಾರು ವರ್ಷಗಳಿಂದ ಪಕ್ಷಕ್ಕೆ ದುಡಿದವರು ಪಕ್ಕಕ್ಕೆ ಸರಿಸಲ್ಪಟ್ಟು, ನಿನ್ನೆ-ಮೊನ್ನೆ ಬಂದವರು, ಬಕೆಟ್ ಹಿಡಿದವರು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕೆಲವು ಕಡೆ ಪದಾಧಿಕಾರಿಗಳು ಪಕ್ಷದ ಇತರರಿಗೆ ಗೊತ್ತೇ ಇಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರು ಪದಾಧಿಕಾರಿಗಳಾಗಿರುವುದೂ ಉಂಟು. ಯಾರನ್ನು ಕೇಳಿದರೂ ಅನ್ಯಾಯ ಆಗಿದೆ ಎನ್ನುವ ಉತ್ತರ ಬರುತ್ತಿದ್ದು, ಹಳಬರಿಗೆ ಉತ್ತರ ಕೊಡಲಾಗದ ಸ್ಥಿತಿ ಇತರ ನಾಯಕರದಾಗಿದೆ. ಹಿಂದೆ ಯಡಿಯೂರಪ್ಪನವರ ಕಾರಣಕ್ಕೆ ಬಿಜೆಪಿ ವಿಭಜನೆ ಆದಾಗ ಮೈತಳೆದ ಕೆಜೆಪಿ, ಬಿಎಸ್ಸಾರ್ ಕಾಂಗ್ರೆಸ್ ಮತ್ತಿತರ ಪಕ್ಷಗಳು ಈಗ ಬಿಜೆಪಿ ಜತೆ ಒಂದಾದಾಗ ಒಂದಷ್ಟು ಹೊಸಬರು ಪಕ್ಷಕ್ಕೆ ಆಮದಾಗಿದ್ದಾರೆ. ಅವರಿಗೆ ಸಿಕ್ಕ ಆದ್ಯತೆ ಬಿಜೆಪಿಯ ಹಳಬರಿಗೆ ಸಿಕ್ಕಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಬಿಜೆಪಿಯೊಳಗೆ ಕೆಜೆಪಿ, ಬಿಎಸ್ಸಾರ್ ಮೂಲದ ಪ್ರತ್ಯೇಕ ಗುಂಪು ಮೈತಳೆದಿದೆ. ಈ ಗುಂಪು ವ್ಯಾವಹಾರಿಕವಾಗಿ ಬಿಜೆಪಿ ಜತೆ ಸೇರಿಕೊಂಡಿದೆಯೇ ಹೊರತು ಭಾವನಾತ್ಮಕವಾಗಿ ಅಲ್ಲ. ಹೀಗಾಗಿ ಬಿಜೆಪಿಯೊಳಗೆ ತಾರಕ ಮುಟ್ಟಿರುವ ಗುಂಪು ರಾಜಕೀಯ ಪ್ರತ್ಯೇಕ ಸಭೆ ಮಟ್ಟಕ್ಕೂ ಹೋಗಿದೆ.

ಯಡಿಯೂರಪ್ಪನವರ ಈ ವರ್ತನೆಗೆ ಮುಖ್ಯಕಾರಣ ಅವರೇ ಆವಾಹನೆ ಮಾಡಿಕೊಂಡಿರುವ ಅತಿರಂಜಿತ ಭ್ರಮೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಬಗೆಗಿನ ಜನವಿರೋಧಿ ಭಾವನೆ ಬಿಜೆಪಿಗೆ 150 ಸೀಟುಗಳನ್ನು ತಂದುಕೊಟ್ಟು ಬಿಡುತ್ತದೆ, ಅದರಿಂದ ತಾವು ಅನಭಿಷಿಕ್ತ ಮುಖ್ಯಮಂತ್ರಿ ಆಗಿಬಿಡುತ್ತೇನೆ ಎಂಬ ಭ್ರಮೆ ಅವರನ್ನು ಇನ್ನಿಲ್ಲದಂತೆ ಅಟಕಾಯಿಸಿಕೊಂಡಿದೆ. ಈ ಭ್ರಮೆಯ ದಾಸರಾಗಿರುವ ಅವರು ಪಕ್ಷದ ಇತರ ನಾಯಕರನ್ನು ದೂರ ಇಟ್ಟಿದ್ದಾರೆ. ಅವರನ್ನೆಲ್ಲ ವಿಶ್ವಾಸಕ್ಕೆ, ಸನಿಹಕ್ಕೆ ತೆಗೆದುಕೊಂಡರೆ ನಾಳೆ ಸಿಗಬಹುದಾದ ಅಧಿಕಾರದ ಸಹಜ ಪಾಲುದಾರರು ಅವರಾಗಿ ಬಿಡುತ್ತಾರೆ. ಇದರಿಂದ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಏರ್ಪಡುತ್ತದೆ. ಅವರನ್ನೆಲ್ಲ ದೂರ ಇಟ್ಟರೆ ಭವಿಷ್ಯದ ಪೈಪೋಟಿಯನ್ನು ನಿವಾರಿಸಿಕೊಳ್ಳಬಹುದು ಎಂಬ ದುರ್ಬುದ್ಧಿ ಅವರ ಭ್ರಮೆಯನ್ನು ಆಳುತ್ತಿದೆ. ಹೀಗಾಗಿ ಪಕ್ಷದ ಇತರ ನಾಯಕರನ್ನು ಮನುಷ್ಯ ಮುಟ್ಟಿದ ಕಾಗೆಯಂತೆ ನೋಡುತ್ತಿದ್ದಾರೆ. ಯಾರನ್ನೂ ಹತ್ತಿರಕ್ಕೇ ಸೇರಿಸುತ್ತಿಲ್ಲ.

ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಂಕಲ್ಪ ಸಾರಿದ್ದರು. ಅವತ್ತಿನ ಮಾತಿಗಷ್ಟೇ ಸೀಮಿತ. ಪ್ರವಾಸ ಅವರೇ ಹೋಗುತ್ತಾರೆ. ಯಾವೊಬ್ಬ ಹಿರಿಯ ನಾಯಕರನ್ನೂ ಜತೆಗೆ ಕರೆದೊಯ್ಯುವುದಿಲ್ಲ. ಜತೆಗೆ ಬರುವಂತೆ ಕರೆಯುವುದೂ ಇಲ್ಲ. ವಿಧಾನಸಭೆ ಪ್ರತಿಪಕ್ಷ ನಾಯಕರ ಜಗದೀಶ್ ಶೆಟ್ಟರ್ ರಾಜ್ಯ ಸರಕಾರದ ನಾನಾ ಇಲಾಖೆಗಳ ಅವ್ಯವಹಾರಗಳನ್ನು ಒಂದೊಂದಾಗಿ ಪತ್ರಿಕಾಗೋಷ್ಠಿಯಲ್ಲಿ ಹೊರಗೆಡವುತ್ತಿದ್ದಾರೆ. ರಾಜ್ಯಾಧ್ಯಕ್ಷರು ಒಂದೇ ಒಂದು ಸಂದರ್ಭಕ್ಕೂ ಸಾಕ್ಷಿ ಆಗಲಿಲ್ಲ. ಶೆಟ್ಟರ್ ತೆಗೆದಿಟ್ಟ ಅಕ್ರಮಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲಿಲ್ಲ. ಹಾಗೆ ಹೋರಾಟ ರೂಪಿಸಿಬಿಟ್ಟರೆ ಅದರ ಕೀರ್ತಿ ಶೆಟ್ಟರ್ ಗೆ ಹೋಗುತ್ತದೆ ಎಂಬ ಸಂಕುಚಿತ ಮನೋಭಾವ. ರಾಜ್ಯಾಧ್ಯಕ್ಷರಾಗಿ ಮೂರು ತಿಂಗಳು ಕಳೆಯಿತು. ಒಮ್ಮೆಯೂ ಅನಂತಕುಮಾರ್, ಸದಾನಂದಗೌಡ, ಜಗದೀಶ್ ಶೆಟ್ಟರ್, ಆಶೋಕ್, ಈಶ್ವರಪ್ಪ, ಸಿ.ಟಿ. ರವಿ ಅವರಂಥ ಹಿರಿಯ ನಾಯಕರನ್ನು ಕೂರಿಸಿಕೊಂಡು ಅದು ಸಂಘಟನೆ ಇರಲಿ, ಹೋರಾಟದ ವಿಚಾರ ಇರಲಿ ಸಮಾಲೋಚನೆ ಮಾಡಲಿಲ್ಲ. ಮುಂದೇನು ಎಂದು ಯೋಜನೆ ರೂಪಿಸಲಿಲ್ಲ. ನರೇಂದ್ರ ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತಾಡುತ್ತಿದ್ದರೆ ಮೊನ್ನೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ತಮ್ಮ ಆಪ್ತ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಜತೆಯೇ ಕೈ ಜೋಡಿಸಿಬಿಟ್ಟರು. ಇವರು ತೆಗೆದುಕೊಳ್ಳುವ ಎಷ್ಟೋ ತೀರ್ಮಾನಗಳು ಮಾಧ್ಯಮದ ಮೂಲಕ ಬೇರೆಯ ನಾಯಕರಿಗೆ ಗೊತ್ತಾಗುವ ಪರಿಸ್ಥಿತಿ ಇದೆ. ಅಷ್ಟರ ಮಟ್ಟಿಗೆ ಅವರೆಲ್ಲರನ್ನು ಕತ್ತಲಲ್ಲಿ ಇಟ್ಟಿದ್ದಾರೆ. ಇತರ ನಾಯಕರ ಜತೆ ಮಾತುಕತೆಯೇ ಇಲ್ಲವೆಂದ ಮೇಲೆ, ಅವರ್ಯಾರು ಕಾಣಬಾರದು ಎಂದು ಕಾಪು ಕಟ್ಟಿಕೊಂಡ ಮೇಲೆ ವಿಚಾರ ವಿನಿಮಯದ ಪ್ರಶ್ನೆಯಾದರೂ ಎಲ್ಲಿಂದ ಬರುತ್ತದೆ?

ಯಡಿಯೂರಪ್ಪನವರ ಈ ಸರ್ವಾಧಿಕಾರಿ ವರ್ತನೆ ಬಗ್ಗೆ ವರಿಷ್ಠರಿಗೆ ಈಗಾಗಲೇ ದೂರು ಹೋಗಿದೆ. ಎರಡನೇ ಹಂತದ ನಾಯಕರು ನಡೆಸಿರುವ ಸಭೆಗೆ ಕೋರ್ ಕಮಿಟಿ ಅಲ್ಲದೇ ಸಂಘ ಪರಿವಾರ, ವರಿಷ್ಠರ ಸಹಮತ ಇದೆ ಎಂಬುದು ಗಮನಾರ್ಹ ಸಂಗತಿ. ಬಿಜೆಪಿಯಲ್ಲಿ ಈಗ ಆಗುತ್ತಿರುವ ಬೆಳವಣಿಗೆಗಳು ಯಡಿಯೂರಪ್ಪನವರ ಗುಂಪು ರಾಜಕೀಯ ನಾಗಾಲೋಟಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ.

ಇನ್ನೊಂದು ವಿಚಾರ. ಹಿಂದೆ ಕುಮಾರಸ್ವಾಮಿ ಅಧಿಕಾರ ಕೊಡದೇ ವಂಚನೆ ಮಾಡಿದಾಗ, ಯಡಿಯೂರಪ್ಪನವರ ವಿರುದ್ಧ ಯಾವುದೇ ಭ್ರಷ್ಚಾಚಾರ ಆಪಾದನೆಗಳು ಇಲ್ಲದಿದ್ದಾಗ, ಇಡೀ ನಾಡಿನ ಅನುಕಂಪ ಇರುವಾಗಲೂ ಬಿಜೆಪಿ ಗಳಿಸಿದ್ದು 110 ಸೀಟುಗಳನ್ನು ಮಾತ್ರ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಮಾಜಿ ಮುಖ್ಯಮಂತ್ರಿ ಆಗುವಷ್ಟೊತ್ತಿಗೆ ಮೆತ್ತಿಕೊಂಡ ಕೆಸರು ಕಡಿಮೆಯೇನಲ್ಲ. ಜನ ಅದನ್ನಿನ್ನು ಮರೆತಿಲ್ಲ. ಜತೆಗೆ ಈಗೊಂದಿಷ್ಟು ರಾಡಿ ಎಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ವಿರೋಧಿ ಅಲೆ ಎಂದಾಕ್ಷಣ ಅದು ಬಿಜೆಪಿಗೆ ಜನ ಕೊಡುವ ಅಧಿಕಾರದ ಲೈಸೆನ್ಸ್ ಎಂದು ಅರ್ಥವಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಬಿಜೆಪಿ ಅಧಿಕಾರ ಹಿಡಿಯಲು ಇನ್ನೊಬ್ಬರತ್ತ ಕೈಚಾಚಬೇಕಾಗುತ್ತದೆ, ಇಲ್ಲವೇ ಇನ್ನಿಬ್ಬರು ಕೈಜೋಡಿಸುವುದನ್ನು ನೋಡಿ ಹಲ್ಲು ಕಡಿಯಬೇಕಾಗುತ್ತದೆ, ಅಷ್ಟೇ!

ಲಗೋರಿ: ತನ್ನ ಸುತ್ತ ಗೋಡೆ ಕಟ್ಟಿಕೊಂಡವ ಅನ್ಯರಿಗೂ ಅಪರಿಚಿತನಾಗುತ್ತಾನೆ.

1 COMMENT

Leave a Reply