ಯುವತಿಯನ್ನು ಬಲಿ ಪಡೀತು ಫೇಸ್ಬುಕ್ ವಿಕೃತಿ, ಸಾಧ್ವಿಗಿಲ್ಲ ಜಾಮೀನು, ಏರಿಂಡಿಯಾ ವಿಳಂಬಕ್ಕೆ ವೆಂಕಯ್ಯ ಸಿಟ್ಟಾದ್ರು, ಶೂಟಿಂಗ್ ಬೆಳ್ಳಿಗೆರೆ…

ಬೆಂಗಳೂರಿನ ಮಹದೇವಪುರದಲ್ಲಿ ವಾಹನಗಳ ಮಾಲಿನ್ಯ ತಪಾಸಣೆ ನಡೆಸಲಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯ ಈ ಅನಿರೀಕ್ಷಿತ ತಪಾಸಣೆಯಲ್ಲಿ ಹಲವು ವಾಹನಗಳು ನ್ಯೂನತೆ ಹೊಂದಿದ್ದು ಬಯಲಾಯಿತು.

ಸಾಧ್ವಿಗಿಲ್ಲ ಜಾಮೀನು

ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಅವರಿಗೆ ಜಾಮೀನು ನೀಡುವುದಕ್ಕೆ ಮೊಕಾ ನ್ಯಾಯಾಲಯ ನಿರಾಕರಿಸಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್ ಐ ಎ), ಸಾಧ್ವಿ ದೋಷಮುಕ್ತರೆಂದು ಘೋಷಿಸಿದ್ದರ ಹೊರತಾಗಿಯೂ ಜಾಮೀನು ನಿರಾಕರಣೆಯಾಗಿದೆ.

ಇದಕ್ಕೆ ನ್ಯಾಯಾಲಯ ನೀಡಿರುವ ಕಾರಣಗಳು ಹೀಗಿವೆ:

ಎನ್ ಐ ಎ ದೋಷಮುಕ್ತ ಆಗಿಸಿದ ಮಾತ್ರಕ್ಕೆ ಆರೋಪ ತಳ್ಳಿಹಾಕಲು ಸಾಧ್ಯವಿಲ್ಲ. ಏಕೆಂದರೆ ಮೇಲ್ನೋಟಕ್ಕೆ ಆರೋಪಿಯು ಈ ಅಪರಾಧದಲ್ಲಿ ಭಾಗಿಯಾಗಿರುವ ಸಾಕ್ಷ್ಯಗಳಿವೆ. ಸ್ಫೋಟಕ್ಕೆ ಬಳಕೆಯಾದ ಮೊಟಾರ್ ಬೈಕ್ ಸಾಧ್ವಿ ಹೆಸರಲ್ಲಿರುವುದನ್ನು ನಿರಾಕರಿಸುವುದಕ್ಕೆ ಸಾಧ್ಯವಿಲ್ಲ. ಸಾಕ್ಷಿದಾರರು ಹೇಳಿಕೆ ಬದಲಿಸಿರುವುದು ನಿಜವಾಗಿದ್ದರೂ, ಜಿಹಾದನ್ನು ಎದುರಿಸುವ ಕುರಿತಾದ ಭೋಪಾಲದ ಸಭೆಯಲ್ಲಿ ಸಾಧ್ವಿ ಉಪಸ್ಥಿತಿ ಇದ್ದದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಆ ಸಭೆಯಲ್ಲಿ ಹಿಂದೂರಾಷ್ಟ್ರ ಸ್ಥಾಪನೆ ಹಾಗೂ ಸಂವಿಧಾನಕ್ಕೆ ಹೊರತಾದ ರಹಸ್ಯ ಸರ್ಕಾರ ಹೊಂದುವುದು ಮುಂತಾದ ಚರ್ಚೆಗಳಾಗಿವೆ.

ಸದ್ಯಕ್ಕೆ ಸಾಧ್ವಿ ಪ್ರಗ್ಯಾ ಸಿಂಗ್ ಭೋಪಾಲದ ಆಯುರ್ವೇದ ಆಸ್ಪತ್ರೆಯಲ್ಲಿ ನಾನಾ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫೇಸ್ಬುಕ್ ನ ತಿರುಚಿದ ಚಿತ್ರ ಯುವತಿಯನ್ನೇ ಬಲಿ ಪಡೆಯಿತು!

ಸಲೇಂನ 21ರ ಹರೆಯದ ಹುಡುಗಿ ವಿನುಪ್ರಿಯಾ ಸೋಮವಾರ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರಣ, ಫೇಸ್ಬುಕ್ ನಲ್ಲಿ ಯಾವುದೋ ಹುಡುಗಿಯ ನಗ್ನದೇಹಕ್ಕೆ ಈಕೆಯ ಮುಖ ಅಂಟಿಸಿ ಕಿಡಿಗೇಡಿಗಳು ನಡೆಸಿದ ಕೃತ್ಯ.

ತಾನು ಈ ಕಳಂಕವನ್ನು ಭರಿಸಲಾಗದೇ ನಿರ್ಧಾರಕ್ಕೆ ಬಂದಿದ್ದಾಗಿ ಆತ್ಮಹತ್ಯೆ ಟಿಪ್ಪಣಿಯಲ್ಲಿ ಈ ಹುಡುಗಿ ಬರೆದಿರುವುದು ಕರುಳು ಕಿವುಚುವಂತಿದೆ. ಫೇಸ್ಬುಕ್ ನಲ್ಲಿ ಇಂಥ ಪ್ರಕರಣವಾಗುತ್ತಲೇ ಸ್ಥಳೀಯ ಪೋಲೀಸರಿಗೆ ಆಕೆಯ ಪೋಷಕರು ದೂರು ನೀಡಿದರೂ ಯಾವ ಕ್ರಮವನ್ನೂ ಕೈಗೊಳ್ಳದೇ ಇದ್ದದ್ದು ಇಂಥ ದುರಂತದಲ್ಲಿ ಅಂತ್ಯವಾಗಿದೆ. ಈಕೆಯ ಮುಖಕ್ಕೆ ಇನ್ಯಾವುದೋ ನಗ್ನ ಚಿತ್ರ ಅಂಟಿಸಿ ಫೇಸ್ಬುಕ್ಕಿನಲ್ಲಿ ಈಕೆಗೆ ಟ್ಯಾಗ್ ಮಾಡಿದ್ದವರ ಗುರುತಿನ್ನೂ ಪತ್ತೆಯಾಗಿಲ್ಲ.

ಉಗ್ರದಾಳಿ ಹಿಂದೆ ಮತ್ತೆ ಪಾಕ್ ಕೈವಾಡದ ಸುಳಿವು

ಪ್ಯಾಂಪೋರ್ ನಲ್ಲಿ 8 ಸಿ ಆರ್ ಪಿ ಎಫ್ ಯೋಧರ ಸಾವಿಗೆ ಕಾರಣವಾದ ಉಗ್ರದಾಳಿಯನ್ನು ಲಷ್ಕರೆ ತಯ್ಬಾದ ಮುಖ್ಯಸ್ಥ ಹಫೀಜ್ ಮೊಹಮದ್ ಸಯೀದ್ ನ ಅಳಿಯ ಖಲೀದ್ ವಾಲಿದ್ ನಡೆಸಿರುವ ಶಂಕೆಯಿದೆ.

ಸೈನಿಕರು ಕೊಂದಿರುವ ಉಗ್ರರಿಂದ ವಶಪಡಿಸಿಕೊಳ್ಳಲಾದ ಎ. ಕೆ. 47 ರೈಫಲ್, 11 ಗ್ರೇನೆಡ್ಗಳು ಪಾಕಿಸ್ತಾನದಲ್ಲೇ ತಯಾರಾಗಿರುವುದು ದೃಢಪಟ್ಟಿದೆ.

ಮಹಿಳಾ ಚಾಲಕಿ ಸಾವು, ಆತ್ಮಹತ್ಯೆಯ ಸಾಧ್ಯತೆ

ಬೆಂಗಳೂರಿನ ಮೊದಲ ಮಹಿಳಾ ಕ್ಯಾಬ್ ಡ್ರೈವರ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದ 39ರ ಹರೆಯದ ವಿ. ಭಾರತಿ, ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಚೀಟಿ ಏನೂ ದೊರೆತಿಲ್ಲವಾದರೂ, ಇದಕ್ಕೆ ಹೊರತಾದ ಅಂಶಗಳೇನೂ ಕಂಡುಬಂದಿಲ್ಲ. ಆತ್ಮಹತ್ಯೆ ಸಾಧ್ಯತೆಯೇ ದಟ್ಟವಾಗಿದ್ದು, ಇದಕ್ಕೆ ಕಾರಣವೂ ತಿಳಿದುಬಂದಿಲ್ಲ. ಹಣಕಾಸಿನ ತೀವ್ರ ಮುಗ್ಗಟ್ಟೇನೂ ಬಾಧಿಸದಿದ್ದರೂ ತಾನು ಏಕಾಂಗಿಯಾಗಿರುವುದರಿಂದ ಹತಾಶಳಾಗಿದ್ದೇನೆಂದು ಕೆಲದಿನಗಳ ಹಿಂದೆ ಹೇಳಿಕೊಂಡಿದ್ದಾಗಿ ಅವರ ಮನೆ ಮಾಲಿಕರು ತಿಳಿಸಿದ್ದಾರೆ.

ಏರ್ ಇಂಡಿಯಾ ವಿಳಂಬಕ್ಕೆ ಸಿಟ್ಟಾದ ವೆಂಕಯ್ಯ

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸೇವೆಯ ವಿಳಂಬಕ್ಕೆ ಕೇಂದ್ರ ಸಚಿವರೇ ಟ್ವಿಟ್ಟರ್ ನಲ್ಲಿ ಹರಿಹಾಯ್ದ ಪ್ರಸಂಗ ಮಂಗಳವಾರ ನಡೆದಿದೆ. ತಾವು ಹೈದರಾಬಾದಿಗೆ ತೆರಳಬೇಕಾಗಿದ್ದ ವಿಮಾನವು ವಿಳಂಬವಾದ್ದರಿಂದ ಅತಿಮುಖ್ಯ ಸಭೆಯನ್ನು ತಪ್ಪಿಸಿಕೊಳ್ಳಬೇಕಾಯಿತು ಎಂದು ಟ್ವಿಟ್ಟರ್ ನಲ್ಲಿ ದೂರಿದರು ಕೇಂದ್ರ ಸಚಿವ ವೆಂಕಯ್ಯ ನಾಯ್ಡು. ನಾಗರಿಕ ವಿಮಾನಯಾನ ಸಚಿವ ಗಜಪತಿ ರಾಜು ಅವರು ಟ್ವಿಟ್ಟರ್ ನಲ್ಲೇ ಸ್ಪಂದಿಸಿ- ‘ಇಂಥ ಸೇವಾ ನ್ಯೂನತೆಗಳನ್ನು ಒಪ್ಪಲಾಗದು. ತನಿಖೆ ನಡೆಸಿ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವುದಕ್ಕೆ ಏರ್ ಇಂಡಿಯಾಕ್ಕೆ ಸೂಚಿಸಿದ್ದೇನೆ’ ಎಂದರು.

‘ಪೈಲಟ್ ಸಂಚಾರ ದಟ್ಟಣೆಯಲ್ಲಿ ಸಿಕ್ಕಿಕೊಂಡು ಕರ್ತವ್ಯಕ್ಕೆ ಬರಲು ತಡವಾದ್ದರಿಂದ ವಿಮಾನ ವಿಳಂಬವಾಯಿತು’ ಎಂದು ಏರ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದ ಸಂಜೀವ್

ವಿಶ್ವಕಪ್ ಶೂಟಿಂಗ್ ಪಂದ್ಯಾವಳಿಯ ಪುರುಷರ 50 ಮೀಟರ್ ರೈಫಲ್ 3 ವಿಭಾಗದಲ್ಲಿ ಭಾರತದ ಸಂಜೀವ್ ರಜಪೂತ್ ಬೆಳ್ಳಿ ಪದಕ ಗೆದ್ದಿದ್ದಾರೆ.

Leave a Reply