ಮುಂದುವರಿದಿದೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮುಖ್ಯಮಂತ್ರಿ ಕಾರ್ಯ

ಡಿಜಿಟಲ್ ಕನ್ನಡ ಟೀಮ್:

ಅಧಿಕಾರಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮ ಮುಂದುವರಿದಿದೆ. ವಿಧಾನಸೌಧದ ಸಮ್ಮೇಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಎರಡನೇ ದಿನದ ಸಮ್ಮೇಳನದಲ್ಲಿ ವಿವಿಧ ಇಲಾಖೆಗಳ ಕಾರ್ಯ ಪರಿಶೀಲನೆ ನಡೆಯುತ್ತಿದ್ದಾಗ ಹಲವು ಪ್ರಶ್ನೆಗಳನ್ನು ಮುಖ್ಯಮಂತ್ರಿಯಿಂದ ತೂರಿಬಂದವು.

ಸರ್ಕಾರಿ ಆಸ್ಪತ್ರೆಗಳಲ್ಲಿ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಕುಸಿಯಲು ಕಾರಣ ಏನು ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ ಕೋಟ್ಯಂತರ ರೂ. ಹಣ ನೀಡಿದರೂ, ಕೊಳವೆ ಬಾವಿ ಕೊರೆಯಲು ನಿಮಗೇನು ದಾಡಿ ಎಂದು ತರಾಟೆಗೆ ತೆಗೆದುಕೊಂಡರು. ಅರಣ್ಯ ವಾಸಿಗಳಿಗೆ ಹಕ್ಕುಪತ್ರ ನೀಡಲು ವಿಳಂಬ ಮಾಡಿದರೆ, ಅಂತಹ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಲ್ಲದೆ, ಅವರ ಸೇವಾ ಪುಸ್ತಕದಲ್ಲಿ ನಮೂದು ಮಾಡಬೇಕಾಗುತ್ತದೆ ಎಂದೂ ಎಚ್ಚರಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಖರ್ಚು ಮಾಡುವುದನ್ನೇನೂ ಕಡಿಮೆ ಮಾಡಿಲ್ಲವಾದರೂ ಜನರೇಕೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಎಂಬುದಕ್ಕೆ ಉತ್ತರ ಬಯಸಿದರು ಮುಖ್ಯಮಂತ್ರಿ. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ನುರಿತ ವೈದ್ಯರೇ ಖಾಸಗಿ ಆಸ್ಪತ್ರೆಗಳಲ್ಲೂ ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಾರೆ.

ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚಿನ ಸೌಲತ್ತು ನೀಡಿದ್ದೇವೆ. ಕೇವಲ ನಗರ ಪಾಲಿಕೆ ಮಟ್ಟದಲ್ಲಿಲ್ಲದೆ ಜಿಲ್ಲಾ, ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲೂ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ನುರಿತ ವೈದ್ಯರನ್ನು ನೇಮಕ ಮಾಡಿದ್ದೇವೆ. ಇಷ್ಟಾದರೂ ಜನರೇಕೆ ಆಸ್ಥೆ ವಹಿಸುತ್ತಿಲ್ಲ ಎಂಬ ಬಗ್ಗೆ ನವೆಂಬರ್ ವೇಳೆಗೆ ನಡೆಸುವ ಸಭೆಯಲ್ಲಿ ವಿವರ ವರದಿ ನೀಡಬೇಕೆಂಬ ತಾಕೀತು ಮಾಡಿದರು ಮುಖ್ಯಮಂತ್ರಿ.

ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡುವ ಉದ್ದೇಶದಿಂದಲೇ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ. ಆದರೆ ಎಲ್ಲಿಯೂ ಸಮರ್ಪಕವಾಗಿ ಹಕ್ಕು ಪತ್ರ ನೀಡುವ ಕಾರ್ಯ ನಡೆದಿಲ್ಲ. ಇದಕ್ಕೆ ಅರ್ಜಿ ವಿಲೇವಾರಿಯಲ್ಲಿ ಅಧಿಕಾರಿಗಳು ಅನುಸರಿಸುತ್ತಿರುವ ವಿಳಂಬವೇ ಕಾರಣ ಎಂದು ದೂರಿದ ಮುಖ್ಯಮಂತ್ರಿ, ಮರುಪರಿಶೀಲನೆಗೆ ಬಂದಿರುವ ಅರ್ಜಿಗಳೂ ಸೇರಿದಂತೆ ಎಲ್ಲವನ್ನೂ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು. ಹಕ್ಕುಪತ್ರ ನೀಡಿಕೆಯಲ್ಲಿ ತಾಂತ್ರಿಕ ಕಾರಣಗಳನ್ನು ಹೇಳುತ್ತ ಕೂರದೇ, ಸಮಸ್ಯೆಗಳಿದ್ದಲ್ಲಿ ಕಂದಾಯ, ಅರಣ್ಯ, ಕಾನೂನು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಸ್ಪಷ್ಟೀಕರಣ ಪಡೆದು, ಹಕ್ಕುಪತ್ರ ವಿತರಿಸುವಂತೆ ಆದೇಶಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ನಿಗದಿಪಡಿಸಿದ 8369 ಕೊಳವೆ ಬಾವಿಗಳನ್ನು ಕಳೆದ ಮೂರು ವರ್ಷಗಳಲ್ಲಿಪೂರೈಸಲಾಗಲಿಲ್ಲವಲ್ಲ ಇದು ನಾಚಿಕೆ ವಿಷಯವಲ್ಲವೇ ಅಂತ ತರಾಟೆ ತೆಗೆದುಕೊಂಡು, ಮಳೆಗಾಲ ಮುಗಿಯುತ್ತಲೇ ಡಿಸೆಂಬರ್ ವೇಳೆಗೆ ಎಲ್ಲ ಪೂರ್ಣವಾಗಿರಬೇಕು ಅಂತ ಎಚ್ಚರಿಸಿದರು.

ಪರಿಶಿಷ್ಟ ಜಾತಿ, ವರ್ಗಗಳ ಆರೋಗ್ಯ ಪರಿಪಾಲನೆ ನಿಟ್ಟಿನಲ್ಲಿ ಬಡಾವಣೆಗಳು ಸುವ್ಯವಸ್ಥಿತವಾಗಿರುವುದು ಅವಶ್ಯ. ಈ ನಿಟ್ಟಿನಲ್ಲಿ ಕಾಮಗಾರಿಗಳ ಗುಣಮಟ್ಟದ ಕುರಿತು ದೂರುಗಳು ಬರುತ್ತಿದ್ದು ಆ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಹಿಂದುಳಿದ ವರ್ಗದ ವಸತಿನಿಲಯಗಳಲ್ಲಿ ಖಾಲಿ ಇರುವ 400 ವಾರ್ಡನ್ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಎಂದು ಸೂಚಿಸಿದರು.

Leave a Reply