ಯಡಿಯೂರಪ್ಪ ವಿರುದ್ಧ ಭುಗಿಲೆದ್ದ ಆಕ್ರೋಶ, ಪದಾಧಿಕಾರಿಗಳ ಪಟ್ಟಿ ಬದಲಿಸಲು ಪಟ್ಟು

(ಸಂಗ್ರಹ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯಲ್ಲೂ ಭಿನ್ನಮತ ಭುಗಿಲೆದ್ದಿದ್ದು ಸ್ವಜನಪಕ್ಷಪಾತದಿಂದ ಕೂಡಿರುವ ಪದಾಧಿಕಾರಿಗಳ ಪಟ್ಟಿ ಬದಲಿಸುವಂತೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಅತೃಪ್ತ ನಾಯಕರು ಆಗ್ರಹಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಸಂಸದ ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ 300ಕ್ಕೂ ಹೆಚ್ಚು ಅತೃಪ್ತ ನಾಯಕರು ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಪ್ರಜಾಸತಾತ್ಮಕ ನಿರ್ಣಯ ಕೈಗೊಂಡಿಲ್ಲ. ತಮಗೆ ಬೊಕ್ಕೆ ಕೊಡುವವರಿಗೆ ಸ್ಥಾನಮಾನ ಕೊಟ್ಟಿದ್ದಾರೆ. ಜಿಲ್ಲಾಧ್ಯಕ್ಷರಿಗೆ ಹೊಡೆದವರನ್ನು ರಾಜ್ಯ ಮಟ್ಟದ ಪದಾಧಿಕಾರಿ ಮಾಡಲಾಗಿದೆ. 2018 ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಬೇಕು. ಇಂತಹ ಸನ್ನಿವೇಶದಲ್ಲಿ ಪಕ್ಷದ ಒಗ್ಗಟ್ಟು ಮುರಿಯುವ ಕೆಲಸ ಯಡಿಯೂರಪ್ಪ ಅವರಿಂದ ಆಗಿದೆ. ಹೀಗಾದರೆ ಅಧಿಕಾರಕ್ಕೆ ಬರುವುದು ಹೇಗೆ ಎಂಬ ಪ್ರಶ್ನೆ ಸಭೆಯಲ್ಲಿ ಬಂತು. ಕರ್ನಾಟಕ ಬಿಜೆಪಿಗೆ ಸಾಮೂಹಿಕ ನಾಯಕತ್ವದ ಅವಶ್ಯಕತೆ ಇದೆ ಎಂಬುದನ್ನು ವರಿಷ್ಠರ ಗಮನಕ್ಕೆ ತರಲು ಸಭೆ ನಿರ್ಧರಿಸಿತು.

ಮುಕ್ತ ಮನಸ್ಸಿನಿಂದ ಪದಾಧಿಕಾರಿಗಳ ನೇಮಕ  ಮಾಡಿಲ್ಲ. ಕಾಂಗ್ರೆಸ್ ಲಕೋಟೆ ಸಂಸ್ಕೃತಿಯನ್ನು ಯಡಿಯೂರಪ್ಪನವರು ಅನುಸರಿಸಿದ್ದಾರೆ. ಅವರು ಮೊದಲು ಸರ್ವಾಧಿಕಾರಿ ಧೋರಣೆ ಬಿಡಬೇಕು. ಪಕ್ಷ ಉಳಿಯಬೇಕಾದರೆ ಕೂಡಲೇ ಪದಾಧಿಕಾರಿಗಳ ನೇಮಕ ಪಟ್ಟಿ ರದ್ದುಪಡಿಸಬೇಕು. ಪ್ರತಿ ಜಿಲ್ಲಾ ಘಟಕಗಳಿಂದ ವರದಿ ತರಿಸಿ, ನಂತರ ಅದನ್ನು ಕೋರ್ ಕಮಿಟಿ ಮುಂದಿಟ್ಟು, ಪಕ್ಷಕ್ಕೆ ನಿಷ್ಠೆಯಿಂದ ದುಡಿದವರಿಗೆ ಆದ್ಯತೆ ನೀಡಬೇಕು. ಈಗ ಯಡಿಯೂರಪ್ಪ ಏಕಪಕ್ಷೀಯವಾಗಿ ಮಾಡಿರುವ ಪಟ್ಟಿಯಲ್ಲಿ ಕೆಜೆಪಿಯಿಂದ ಬಂದವರಿಗೆ ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಹಿಂದೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಹೈದ್ರಾಬಾದ್, ಮುಂಬೈ ಹಾಗೂ ಗೋವಾಗೆ ಶಾಸಕರನ್ನು ಕರೆದೊಯ್ದ ನಾಯಕರಿಗೆ ಮಣೆ ಹಾಕಿದ್ದಾರೆ. ಜಾತಿ ಆಧಾರಿತ ಪಕ್ಷ ಸಂಘಟನೆಗೆ ಒತ್ತುಕೊಟ್ಟಂತಿದ್ದಾರೆ. ಇದು ಬಹಳ ಕಾಲ ಉಳಿಯದು ಎಂದು ಸಭೆ ಅಭಿಪ್ರಾಯಪಟ್ಟಿತು. ನಿಗದಿತ ಸಮಯದಲ್ಲಿ ಪಟ್ಟಿ ಬದಲಾವಣೆ ಮಾಡದಿದ್ದರೆ, ವರಿಷ್ಠರಿಗೆ ದೂರು ನೀಡಲು ತೀರ್ಮಾನಿಸಿತು.

ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ಮೂಲ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಹೀಗಾದರೆ ಪಕ್ಷ ಸಂಘಟನೆ ಮಾಡುವುದಾದರೂ ಹೇಗೆ? ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಮೇಲೆ ಬದಲಾವಣೆಯ ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ ಇತ್ತೀಚೆಗೆ ಅವರ ನಡವಳಿಕೆಗಳು ಮತ್ತದೇ ಹಳೇ ಚಾಳಿಗೆ ಸೀಮಿತವಾಗವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನೆಡೆಸುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಬರೀ ಯಡಿಯೂರಪ್ಪ ಮತ್ತವರ ಪಟಾಲಂನಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹಲವು ದಶಕಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸ್ಥಾನಮಾನ  ನೀಡಬೇಕಿತ್ತು. ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಕುರಿತು ತಕ್ಷಣವೇ ಕೋರ್ ಕಮಿಟಿ ಸಭೆ ಕರೆಯಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಒತ್ತಾಯಿಸಿದ್ದಾರೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್. ರುದ್ರೇಗೌಡ, ತುಮಕೂರಿನಿಂದ ಸ್ಪರ್ಧಿಸಿದ್ದ ಜ್ಯೋತಿ ಗಣೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆ. ನಾಗೇಶ್, ಕಲ್ಬುರ್ಗಿ ಗ್ರಾಮಾಂತರದ ದೊಡ್ಡನಗೌಡ ಪಾಟೀಲ ನರಿಬೋಳ, ವಿಜಯಪುರದ ವಿಠಲ ಕಟಕದೋಂಡ, ಬೀದರ್‍ನ ಡಾ. ಶೈಲೇಂದ್ರ ಕಾಶಿನಾಥ ಬೆಲ್ದಾಳೆ, ಬೆಳಗಾವಿ ಗ್ರಾಮಾಂತರದ ಡಾ.ವಿಶ್ವನಾಥ ಈರನಗೌಡ ಪಾಟೀಲ, ಚಾಮರಾಜನಗರದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಹಾವೇರಿಯ ಶಿವರಾಜ ಶರಣಪ್ಪ ಸಜ್ಜನರ್ ಸೇರಿದಂತೆ ಹಲವರನ್ನು ಬದಲಿಸಬೇಕೆಂದು ಅವರು ಆಗ್ರಹಿಸಿದರು.

ಪದಾಧಿಕಾರಿಗಳ ಅಹವಾಲನ್ನು ಸಹನೆಯಿಂದ ಆಲಿಸಿರುವ ನಾಯಕರು ಈ ಎಲ್ಲ ಅಭಿಪ್ರಾಯಗಳನ್ನು ಹಿರಿಯ ನಾಯಕರ ಗಮನಕ್ಕೆ ತರುವ ಆಶ್ವಾಸನೆ ನೀಡಿದರು.

Leave a Reply