ಪ್ರಧಾನಿ ಮೋದಿ ಮಹಾ ಸಂದರ್ಶನ: ನಿಖರತೆ ಎಷ್ಟು, ನುಣುಚಿಕೊಂಡಿದ್ದೆಷ್ಟು?

ಡಿಜಿಟಲ್ ಕನ್ನಡ ಟೀಮ್:

ಟೈಮ್ಸ್ ನೌ ವಾಹಿನಿ ಜತೆ ಪ್ರಧಾನಿ ನರೇಂದ್ರ ಮೋದಿ ಸಂದರ್ಶನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ಲಭಿಸಿದವು. ಹಾಗೆಯೇ ಕೆಲವೆಡೆ ಅಸ್ಪಷ್ಟತೆ ಇರುವುದೂ ಅರಿವಾಯಿತು. ಮೋದಿಯ ಯಾವತ್ತಿನ ಟೀಕಾಕಾರರು ಹೇಳುವಂತೆ, ‘ಇದೆಂಥ ಸಂದರ್ಶನ, ಏನೂ ಕೇಳಲೇ ಇಲ್ಲ’ ಎಂಬಷ್ಟರಮಟ್ಟಿಗೇನೂ ಇರಲಿಲ್ಲ. ಅಂತೆಯೇ ನರೇಂದ್ರ ಮೋದಿಯವರ ಕಟ್ಟರ್ ಬೆಂಬಲಿಗರು ಪ್ರತಿಪಾದಿಸುವಂತೆ ‘ಆಹಹಾ ಅತ್ಯಮೋಘ’ವೂ ಅಲ್ಲ.

ನಿಜ. ಅರ್ನಾಬ್ ಗೋಸ್ವಾಮಿಯ ಎಲ್ಲ ಪ್ರಶ್ನೆಗಳೂ ಪ್ರಾರಂಭದಲ್ಲಿ ‘ಮೋದಿಯವರೇ ನೀವೆಷ್ಟು ಗ್ರೇಟ್ ಅಂತಂದ್ರೆ…’ ಎಂಬ ಉಬ್ಬಿಸುವ ಧಾಟಿಯಲ್ಲೇ ಶುರುವಾಗುತ್ತಿತ್ತು. ಮುಖ್ಯವಾಹಿನಿ ಮಾಧ್ಯಮದ ಬಗ್ಗೆ ತಮ್ಮದೇ ಬಿಗುತನ ಹೊಂದಿರುವ ಪ್ರಧಾನಿ ಮೋದಿಯವರನ್ನು ಯಾವತ್ತೂ ಲಭ್ಯರನ್ನಾಗಿಸಿಕೊಳ್ಳುವ ಸವಾಲನ್ನು ಸಂಪಾದಕ ಜೀಕುತ್ತಿದ್ದದ್ದು ಸ್ಪಷ್ಟ.

ಅಷ್ಟಾಗಿಯೂ…

ವಿದೇಶಿ ನೀತಿ, ಹಣದುಬ್ಬರ, ಉದ್ಯೋಗಸೃಷ್ಟಿ, ಸಂಸತ್ ಕಲಾಪ, ಕೃಷಿ ಸೇರಿದಂತೆ ಎಲ್ಲ ಆಯಾಮಗಳನ್ನೂ ಸಂದರ್ಶನವು ಸ್ಪರ್ಶಿಸಿತು ಎಂಬುದನ್ನೇನೂ ತಳ್ಳಿಹಾಕುವಂತಿಲ್ಲ. ಕೊನೆಯಲ್ಲಿ ರಾಜನ್ ಪ್ರಶಂಸೆ ಮತ್ತು ಸುಬ್ರಮಣಿಯನ್ ಸ್ವಾಮಿ ಕುರಿತ ಅಸಮಾಧಾನವೇ ಶೀರ್ಷಿಕೆಯಾಗುವಂತಾಯ್ತಾದರೂ ಹಲವು ವಿಷಯಗಳು ಗಮನಾರ್ಹ.

ಪ್ರಾರಂಭದಲ್ಲಿ ಅಸ್ಪಷ್ಟತೆಯನ್ನು ಗಮನಿಸಿಬಿಡೋಣ…

  • ಪಾಕಿಸ್ತಾನದ ವಿಷಯದಲ್ಲಿ ‘ಲಕ್ಷ್ಮಣರೇಖೆ’ ಯಾವುದು ಎಂಬುದಕ್ಕೆ ಪ್ರಧಾನಿ ಬಳಿಯೂ ಉತ್ತರವಿಲ್ಲ. ‘ಅಲ್ಲಿನ ಚುನಾಯಿತ ಸರ್ಕಾರಕ್ಕೆ ಲಕ್ಷ್ಮಣರೇಖೆ ವಿಧಿಸಬೇಕೋ ಅಥವಾ ಇತರೇ ಆಟಗಾರರಿಗೋ… ಹೀಗಾಗಿ ಮೇಜಿನೆದುರು ಮಾತುಕತೆ ಆಗುತ್ತಿರುತ್ತೆ, ಯೋಧರು ತಮ್ಮ ಕಾರ್ಯ ಮಾಡ್ತಿರ್ತಾರೆ. ಆದರೆ ನನ್ನ ಎಲ್ಲ ಸಂವಾದ ಪ್ರಯತ್ನಗಳಿಂದಾಗಿ ಜಗತ್ತು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಸ್ಥಿತಿ ಬಂದಿದೆ’ ಅನ್ನೋದು ಪ್ರಧಾನಿ ಪ್ರತಿಪಾದನೆ. ಪಠಾಣ್ ಕೋಟ್ ನಂತಹ ದಾಳಿಗಳು ಮರುಕಳಿಸುತ್ತಲೇ ಇರುವಾಗ, ಮೊನ್ನೆಯಷ್ಟೇ ಉಗ್ರರ ದಾಳಿಗೆ ಗಡಿ ಭದ್ರತಾ ಪಡೆಯ 8 ಯೋಧರು ಹುತಾತ್ಮರಾಗಿರುವಾಗ, ಪ್ರಧಾನಿ ಈ ಮಾತುಗಳು ಹಿಂದಿನ ಸರ್ಕಾರದಲ್ಲಿದ್ದ ಯಥಾಸ್ಥಿತಿಯನ್ನೇ ಮುಂದುವರಿಸಿರುವ ಸೂಚನೆಯೇ ಹೊರತು ಮತ್ಯಾವ ಹೊಸ ಭರವಸೆಯನ್ನೂ ಹುಟ್ಟಿಸುತ್ತಿಲ್ಲ. ಇನ್ನು, ಜಾಗತಿಕ ಒತ್ತಡ ರೂಪುಗೊಳ್ಳುತ್ತಿರುವ ಅಂಶವೂ ಅಂಥ ಪ್ರಮುಖದ್ದೇನಲ್ಲ. ಇದೇ ಸಂದರ್ಶನದಲ್ಲಿ ವಿದೇಶಿ ನೀತಿ ಬಗ್ಗೆ ಮಾತನಾಡುತ್ತ ಪ್ರಧಾನಿ ಮೋದಿ ‘ವಿದೇಶಿ ನೀತಿ ಎಂಬುದು ಸಹಮತ ಮೂಡಿಸುವ ಉಪಕರಣ ಅಲ್ಲ. ಬದಲಿಗೆ ಸಾಮಾನ್ಯ ಹಿತಾಸಕ್ತಿ ಎಲ್ಲಿ ಸಂಧಿಸುತ್ತದೆ ಎಂಬುದರ ಮೇಲೆ ರೂಪುಗೊಳ್ಳುತ್ತದೆ’ ಎಂದರಲ್ಲ… ಹಾಗೆಯೇ ಪಾಕಿಸ್ತಾನ ತಮಗೆ ಸಹಾಯಕ ಎಂದಾಗಲೆಲ್ಲ ಅಮೆರಿಕ ಸೇರಿದಂತೆ ವಿದೇಶಿ ಶಕ್ತಿಗಳು ಅದಕ್ಕೆ ನೀರೆರೆಯುತ್ತವೆ ಅಷ್ಟೆ.
  • ಕಪ್ಪುಹಣ ವಾಪಸು ಬಂದಾಗ ಎಲ್ಲರ ಖಾತೆಗೆ ₹15 ಲಕ್ಷ ಸಿಗುತ್ತದೆ ಎಂಬ ಮಾತು…

ಈ ಬಗ್ಗೆ ಜಿ 20 ರಾಷ್ಟ್ರಗಳ ಸಭೆಯಲ್ಲಿ ಹಾಗೂ ಮಾರಿಷಸ್ ಜತೆ ನಡೆಸಿದ ವಿಶೇಷ ಪ್ರಯತ್ನಗಳನ್ನೆಲ್ಲ ಪ್ರಧಾನಿ ನರೇಂದ್ರ ಮೋದಿ ವಿವರಿಸಿದರಾದರೂ, ಮೇಲಿನ ಜನಪ್ರಿಯ ಭರವಸೆಯನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ಬಿಡಿ, ಚುನಾವಣೆಗೆ ಹೋದಾಗ ಪ್ರತಿಪಕ್ಷಗಳಿಗೆ ಅದೊಂದಾದರೂ ಹೇಳುವುದಕ್ಕಿರುತ್ತದಲ್ಲ ಅಂತ ಪ್ರತಿಕ್ರಿಯಿಸಿದರು.

ಉತ್ತರ ಸಿಕ್ಕ ಪ್ರಶ್ನೆಗಳನ್ನು ನೋಡುವುದಾದರೆ….

  • ಪ್ರಧಾನಿ ಮೋದಿ ಅದೇಕೆ ಈ ಪರಿ ವಿದೇಶ ಪ್ರವಾಸ ಮಾಡುತ್ತಾರೆ?

ಮೋದಿ ಹೇಳಿಕೊಂಡಂತೆ… ತಾವು ಈ ಹಿಂದೆ ಯಾವತ್ತೂ ವಿದೇಶಿ ನಾಯಕರನ್ನು ನಿರಂತರ ಭೇಟಿ ಮಾಡುವ ಅವಕಾಶ ಪಡೆದವರಲ್ಲ. ಹೀಗಾಗಿ ವಿದೇಶ ಪ್ರವಾಸ ಮತ್ತು ನೀತಿ ನಿರೂಪಣೆಯಲ್ಲಿ ಅತಿ ಸಕ್ರಿಯವಾಗಿರುವುದು ಅನಿವಾರ್ಯವಾಗಿತ್ತು. ಭಾರತದ ಬಗ್ಗೆ ವಿದೇಶಿ ನಾಯಕರಲ್ಲಿ ಯಾವ ಭಾವನೆ ಇತ್ತೋ, ಆದರೆ ನರೇಂದ್ರ ಮೋದಿಯನ್ನು ಮಾಧ್ಯಮಗಳು ಕಟ್ಟಿಕೊಟ್ಟ ನಕಾರಾತ್ಮಕತೆ ಗಮನಿಸಿದಾಗ, ದೇಶದ ನೇತೃತ್ವದ ನಿಜ ವ್ಯಕ್ತಿತ್ವ ಹೀಗೆ ಎಂದು ತಿಳಿಸುವುದಕ್ಕೆ ಇಂಥ ಭೇಟಿಗಳಲ್ಲಿ ತೊಡಗಿಸಿಕೊಳ್ಳಲೇಬೇಕಿತ್ತು.

  • ಬೇಳೆಕಾಳು- ತರಕಾರಿ ಬೆಲೆ ಹೆಚ್ಚಳದ ಕುರಿತು ಜನರಿಗೇನು ಸಾಂತ್ವನ?

ಇಲ್ಲಿ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಎರಡು ವರ್ಷಗಳ ಸತತ ಬರ ಎದುರಿಸಿದಾಗ ತರಕಾರಿ- ಬೇಳೆಕಾಳುಗಳ ಬೆಲೆ ಏರಿಕೆ ಅಪೇಕ್ಷಣೀಯ, ಯಾಕೆಂದರೆ ಅವು ಮಣ್ಣಿನಲ್ಲೇ ಬೆಳೆಯುವಂಥವು. ಈ ಸಂದರ್ಭದಲ್ಲಿ ಕೇಂದ್ರ- ರಾಜ್ಯಗಳ ಪರಸ್ಪರ ದೋಷಾರೋಪಣೆ ಸರಿಯಲ್ಲ. ಆದರೆ, ಪ್ರತಿ ರಾಜ್ಯಕ್ಕೂ ಅದರದ್ದೇ ದಾಸ್ತಾನು ಮಿತಿಯ ಅವಕಾಶವಿದೆ. ಹೀಗಾಗಿ ಇದು ಕೇವಲ ಕೇಂದ್ರದ ಜವಾಬ್ದಾರಿ ಮಾತ್ರವೇ ಆಗಿರುವುದಿಲ್ಲ. ಕಬ್ಬು ಬೆಳೆಯುವ ಧಾವಂತದಲ್ಲಿ ಬೇಳೆಕಾಳುಗಳನ್ನು ಬೆಳೆಯುತ್ತಿದ್ದ ಪ್ರಮಾಣ ವ್ಯಾಪಕವಾಗಿ ಕುಗ್ಗಿದೆ ಎಂಬುದು ಚಿಂತೆಗೀಡುಮಾಡುವ ಸಂಗತಿ. ಈ ನಿಟ್ಟಿನಲ್ಲಿ ಬೇಳೆಕಾಳುಗಳಿಗೇ ಪ್ರತ್ಯೇಕ ಬೆಂಬಲ ಬೆಲೆ, ವಿದೇಶಿ ಆಮದು ಇತ್ಯಾದಿಗಳ ಮೂಲಕ ಕೊರತೆ ನೀಗಿಸುವ ಪ್ರಯತ್ನ ಕೇಂದ್ರ ಸರ್ಕಾರದಿಂದ ಜಾರಿಯಲ್ಲಿದೆ.

  • ಎನ್ ಎಸ್ ಜಿ ವಿಚಾರದಲ್ಲಿ ಪ್ರಯತ್ನದ ಹೊರತಾಗಿಯೂ ಫಲ ಸಿಗದಿರುವುದೇಕೆ?

ಇದಕ್ಕೆ ಉತ್ತರಿಸುವ ನಿಟ್ಟಿನಲ್ಲಿ ಒಂದು ಸಮ್ಮತಿ ಇನ್ನೊಂದು ಬುದ್ಧಿವಂತಿಕೆ ಹೊರಬಿತ್ತು. ಸಮ್ಮತಿ ಏನೆಂದರೆ- ತಮ್ಮ ಅಮೆರಿಕ ಭೇಟಿ ಮತ್ತು ಭಾಷಣಗಳು ಅಷ್ಟೊಂದು ಹೈಪ್ ಆಗಿದ್ದರಿಂದಲೇ ಎನ್ ಎಸ್ ಜಿ ಸದಸ್ಯತ್ವ ಸಿಗದಿದ್ದದ್ದು ದೊಡ್ಡ ಸುದ್ದಿಯಾಯ್ತು ಎಂಬ ಅನಿಸಿಕೆ ಹೊರಹಾಕಿದ್ದು. ಬುದ್ಧಿವಂತಿಕೆ ಅಂದರೆ, ಈ ವಿಷಯದಲ್ಲಿ ಮಾತ್ರ ಹಿಂದಿನ ಸರ್ಕಾರಗಳಿಗೆಲ್ಲ ಶ್ರೇಯಸ್ಸು ಕೊಟ್ಟಿದ್ದು. ಅರ್ಥಾತ್, ಎನ್ ಎಸ್ ಜಿ ಸದಸ್ಯತ್ವಕ್ಕೆ ತಾವು ಮಾತ್ರವಲ್ಲದೇ ಎಲ್ಲ ಸರ್ಕಾರಗಳೂ ಪ್ರಯತ್ನಿಸಿವೆ ಅಂದರೆ ಯಶಸ್ಸು- ವೈಫಲ್ಯಗಳನ್ನು ಎಲ್ಲರಿಗೂ ಆರೋಪಿಸಿ, ತಮಗೆ ಮಾತ್ರ ಅಲ್ಲ ಎಂಬ ಪರೋಕ್ಷ ಮಾತು. ಚೀನಾ ಜತೆಗಿನ ಸಂಬಂಧವನ್ನೂ ಇದೇ ಸಂದರ್ಭದಲ್ಲಿ ವಿವರಿಸಿದ್ದು- ಉಭಯರಿಗೂ ಹಲವು ಪ್ರಾಮಾಣಿಕ ಆಕ್ಷೇಪಗಳು ಇವೆಯಾದರೂ ಚೀನಾದ ಕಣ್ಣಲ್ಲಿ ಕಣ್ಣಿರಿಸಿ ನಮ್ಮ ವಾದ ಮಂಡಿಸುವ ಹಂತಕ್ಕೆ ಭಾರತ ಹೋಗಿರುವುದು ಪ್ರಧಾನಿ ಪ್ರಕಾರ ದೊಡ್ಡ ಬೆಳವಣಿಗೆ.

  • ಯೋಜನೆಗಳು, ಕೋಟ್ಯಂತರ ಹೂಡಿಕೆಯಾಗುತ್ತಿರುವ ಮಾತೆಲ್ಲ ಸರಿ. ಆದರೆ ಉದ್ಯೋಗಸೃಷ್ಟಿ ತ್ವರಿತವಾಗದಿದ್ದರೆ ಸಾಮಾನ್ಯನಿಗೆ ಅದರ ಫಲವೇನು?- ಅತಿ ನೇರವಾಗಿ ಕೇಳಬಹುದಿದ್ದ ಈ ಪ್ರಶ್ನೆಯನ್ನು ಸಂದರ್ಶಕ ಅರ್ನಾಬ್ ಗೋಸ್ವಾಮಿ ಸುತ್ತಿ-ಬಳಸಿ ಮಸ್ಕಾ ಹೊಡೆದು ಕೇಳಿದ್ದಂತೂ ಸ್ಪಷ್ಟ. ಇದಕ್ಕೆ ದೊರೆತ ಉತ್ತರವೇನು?

35 ವರ್ಷ ವಯೋಮಾನದವರೇ 80 ಕೋಟಿಯಷ್ಟಿರುವ ದೇಶದಲ್ಲಿ ಉದ್ಯೋಗದ ಬೇಡಿಕೆ ಅತಿ ತೀವ್ರವಾದದ್ದು. ಉದ್ಯೋಗ ಸೃಷ್ಟಿಗೆ ಬಂಡವಾಳ ಬರಬೇಕಲ್ಲವೇ? ಈಗ ಮುದ್ರಾ ಯೋಜನೆಯಿಂದ ಸುಮಾರು 1.25 ಲಕ್ಷ ಕೋಟಿ ರುಪಾಯಿಗಳ ಸಾಲ ಯಾವುದೇ ಗ್ಯಾರಂಟಿಗೊಳಪಡದೇ ಸಿಕ್ಕಿದೆ. ಹಾಲು ಮಾರುವವ, ವೃತ್ತಪತ್ರಿಕೆ ಹಂಚುವವ, ತಳ್ಳುಗಾಡಿ ವ್ಯಾಪಾರಿ ಇಂಥವರೇ ಕೋಟಿಗಳಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಈ ಹಣ ಸಿಕ್ಕಾಗ ಅದನ್ನು ವ್ಯಾಪಾರ ವೃದ್ಧಿಯಲ್ಲಿ ಬಳಸುತ್ತಾರೆ. ಒಂದು ಕೆಲಸಗಾರರನ್ನು ಇಟ್ಟ ಕಡೆ ಇನ್ನೊಬ್ಬರನ್ನು ನೇಮಿಸಿಕೊಳ್ಳುತ್ತಾರೆ. ಹೀಗೆ ಉದ್ಯೋಗವೃದ್ಧಿಯಾಗುತ್ತದೆ…

Leave a Reply