ಹೊಸ ಕೋರ್ ಕಮಿಟಿ ಪಟ್ಟಿಗೆ ಸಿಗದ ವರಿಷ್ಠರ ಅನುಮತಿ, ಅತಿಜಾಣ್ಮೆ ಮೆರೆಯಲು ಹೋದ ಯಡಿಯೂರಪ್ಪಗೆ ಮಂಗಳಾರತಿ!

ಡಿಜಿಟಲ್ ಕನ್ನಡ ಟೀಮ್:

ಯಾಕೋ, ಏನೋ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಟೈಮ್ ಸರಿಯಿದ್ದಂತಿಲ್ಲ. ಅತಿ ಬುದ್ಧಿವಂತಿಕೆ ಮೆರೆಯಲು ಹೋಗಿ ದಿಲ್ಲಿ ವರಿಷ್ಠರಿಂದ ತಪರಾಕಿ ಹಾಕಿಸಿಕೊಂಡು ಬಂದಿದ್ದಾರೆ.

ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ಸ್ವಜನ ಪಕ್ಷಪಾತ ಖಂಡಿಸಿ ಬೆಂಗಳೂರಲ್ಲಿ ಮಂಗಳವಾರ ತಮ್ಮ ವಿರುದ್ಧ ಅತೃಪ್ತರು ಸಭೆ ನಡೆಸುತ್ತಿದ್ದ ವೇಳೆ ಅವರಿಗೆ ಪಾಠ ಕಲಿಸಲು ಯಡಿಯೂರಪ್ಪನವರು ತಂತ್ರವೊಂದನ್ನು ಹೂಡಿದ್ದರು. ತಮಗಾಗದ ಕೆಲವರನ್ನು ಹೊರಗಿಟ್ಟು ಆತುರವಾಗಿ ಸಿದ್ಧಪಡಿಸಿದ 22 ಸದಸ್ಯರ ನೂತನ ಕೋರ್ ಕಮಿಟಿ ಪಟ್ಟಿ ಜತೆ ದಿಲ್ಲಿಗೆ ದೌಡಾಯಿಸಿದ್ದರು. ಆ ಪಟ್ಟಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಂದ ಅನುಮೋದನೆ ಪಡೆದು ಭಿನ್ನರಿಗೆ ಸೂಕ್ತ ಉತ್ತರ ಕೊಡಬೇಕು ಎನ್ನುವುದು ಅವರ ಯೋಜನೆ ಆಗಿತ್ತು.

ಆದರೆ ಅವರ ಹಣೆಬರಹ ಸರಿಯಿರಲಿಲ್ಲ. ಅಲ್ಲಿ ಆಗಿದ್ದೇ ಬೇರೆ. ಯಡಿಯೂರಪ್ಪ ಅವರಿಗೆ ಭೇಟಿ ಕೊಟ್ಟಿದ್ದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್. ಕೋರ್ ಕಮಿಟಿಯಲ್ಲಿ ಇಷ್ಟೊಂದು ಸದಸ್ಯರಿರುವುದು ಅಪೇಕ್ಷಣೀಯ ಅಲ್ಲ. ಇತರ ನಾಯಕರ ಜತೆ ಸಮಾಲೋಚನೆ ನಡೆಸಿ, ಪಟ್ಟಿಯನ್ನು ಪರಿಷ್ಕರಿಸಿ. ಸದಸ್ಯರ ಸಂಖ್ಯೆ ಕಡಿಮೆ ಮಾಡಿಕೊಂಡು ಬನ್ನಿ ಎಂದು ಅವರು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಯಡಿಯೂರಪ್ಪ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ದಿಲ್ಲಿಯಿಂದ ಬರಿಗೈಯಲ್ಲಿ ಮರಳಿದ್ದಾರೆ.

ಯಡಿಯೂರಪ್ಪ ಅವರು ಸಿದ್ಧಪಡಿಸಿದ್ದ ಕೋರ್ ಕಮಿಟಿ ಸದಸ್ಯರ ಪಟ್ಟಿಯಲ್ಲಿ ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಆರೆಸ್ಸಸ್ ಪ್ರಚಾರಕ, ರಾಷ್ಟ್ರೀಯ ಉಪಾಧ್ಯಕ್ಷ ಸಂತೋಷ್ ಹಾಗೂ ಸಂಸದ ನಳಿನ್ ಕುಮಾರ್ ಕಟಿಲು ಹೆಸರನ್ನು ಕೈ ಬಿಟ್ಟಿದ್ದರು. ಶೋಭಾ ಕರಂದ್ಲಾಜೆ, ಅನಂತಕುಮಾರ್, ಈಶ್ವರಪ್ಪ, ಅಶೋಕ್ ಮತ್ತಿತರರ ಹೆಸರು ಇತ್ತು. ಆದರೆ ಈ ಪಟ್ಟಿ ರೂಪಿಸುವಾಗಲೂ ರಾಜ್ಯದ ಪ್ರಮುಖ ಮುಖಂಡರ ಜತೆ ಸಮಾಲೋಚನೆ ನಡೆಸಿರಲಿಲ್ಲ.

ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಬಗ್ಗೆ ವರಿಷ್ಠರಿಗೆ ಈಗಾಗಲೇ ದೂರು ಹೋಗಿತ್ತು. ಅವರು ಮಂಗಳವಾರ ಕೊಂಡೊಯ್ದಿದ್ದ ಕೋರ್ ಕಮಿಟಿ ಪಟ್ಟಿಯ ಗತಿಯೂ ಇದೇ ಆಗಿದೆ ಎಂಬ ಮಾಹಿತಿಯೂ ಸಿಕ್ಕಿತ್ತು. ಹೀಗಾಗಿ ಪಟ್ಟಿಗೆ ಅನುಮೋದನೆ ನೀಡದೆ ವಾಪಸ್ಸು ಕಳುಹಿಸಿದ್ದಾರೆ. ಇದರಿಂದ ಯಡಿಯೂರಪ್ಪನವರಿಗೆ ಮುಖಭಂಗ ಆದಂತಾಗಿದೆ.

Leave a Reply