ಸಿದ್ದು ಸಾಧನೆ ಪುಸ್ತಕ ಮಕ್ಕಳ ಮೇಲೆ ಹೇರಿಕೆ, ನಂಗೆ ಗೊತ್ತೇ ಇಲ್ಲ ಅನ್ನೋದು ಮುಖ್ಯಮಂತ್ರಿಯ ಎಂದಿನ ಹಾರಿಕೆ!

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ಇತಿಹಾಸದ ಶ್ರೇಷ್ಠ ರಾಜರು, ಸ್ವಾತಂತ್ರ ಹೋರಾಟಗಾರರು ಹಾಗೂ ದೇಶಭಕ್ತರ ಬಗ್ಗೆ ಓದುತ್ತಿದ್ದ ರಾಜ್ಯದ ವಿದ್ಯಾರ್ಥಿಗಳು ಈಗ ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಹಾಗೂ  ರಾಜಕೀಯ ಜೀವನವನ್ನು ಓದಬೇಕಂತೆ. ಹೀಗೆಂದು ಹೇಳ್ತಿರೋದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆ.

‘ಇಟ್ಟ ಗುರಿ ದಿಟ್ಟ ಹೆಜ್ಜೆ’ ಇದು ಸಿದ್ದರಾಮಯ್ಯ ಅವರ ಸರ್ಕಾರದ ಮೂರು ವರ್ಷಗಳ ಸಾಧನೆ ಹಾಗೂ ಅವರ ರಾಜಕೀಯ ಜೀನವದ ಹಾದಿಯ ಕುರಿತ ಪುಸ್ತಕ. ಈ ಪುಸ್ತಕವನ್ನು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಖರೀದಿಸಬೇಕು. ಅದೂ ಶಾಲಾ ಅಭಿವೃದ್ಧಿ ಹಣದಲ್ಲಿ. ಈ ಬಗ್ಗೆ ಉಪ ನಿರ್ದೇಶಕರು ಮತ್ತು ಬಿಇಒಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿತ್ತು.

ಈ ಸುತ್ತೋಲೆಯಿಂದ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಓದುವ ಅಗತ್ಯ ವಿದ್ಯಾರ್ಥಿಗಳಿಗೇನಿದೆ? ಎಂಬ ಪ್ರಶ್ನೆ ಮೂಡುತ್ತಿದೆ. ಅಲ್ಲದೇ ಸುತ್ತೋಲೆ ಮೂಲಕ ಬಲವಂತವಾಗಿ ಈ ರೀತಿಯ ಒತ್ತಡ ಹೇರುವುದು ಎಷ್ಟರ ಮಟ್ಟಿಗೆ ಸರಿ ಎಂಬ ವಿವಾದವನ್ನು ಹುಟ್ಟುಹಾಕಿದೆ. ಇಷ್ಟೇ ಅಲ್ಲ, ಈ ವಿವಾದಾತ್ಮಕ ಸುತ್ತೋಲೆಯನ್ನು ಮಾರ್ಚ್ 28 ರಂದೇ ನೀಡಲಾಗಿದೆ. ಆಗಿನ ಆಯುಕ್ತರಾದ ಸತ್ಯಮೂರ್ತಿ ಅವರು ಈ ಸುತ್ತೋಲೆ ಹೊರಡಿಸಿದ್ದು, ಮಾ.31 ರಂದು ಇವರು ನಿವೃತ್ತಿಯಾಗಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಗಳನ್ನು ಮಾಧ್ಯಮದವರು ಪ್ರಶ್ನಿಸಿದರೆ, ‘ಯಾವ ಸುತ್ತೋಲೆ? ನಂಗೇನೂ ಗೊತ್ತೇ ಇಲ್ಲ. ನಾನು ಏನ್ ಹೇಳಲಿ?’

‘ಐ ಡೋಂಟ್ ನೋ..’ ಅಂದ್ರು ಸಿಎಂ. ಸರಕಾರದ ಮುಖ್ಯಸ್ಥರಿಗೆ ವಿಷಯ ಗೊತ್ತಿಲ್ಲ ಅಂದ್ರೆ ಏನರ್ಥ? ಕೊನೆಪಕ್ಷ ಇಂಥ ಹೊಗಳುಭಟ ಕಾರ್ಯಗಳಾಗಿದ್ದರೆ ಖಂಡನೀಯ, ಅಂಥ ಆದೇಶಗಳನ್ನಾದರೂ ಹಿಂಪಡೆಯುತ್ತೇವೆ ಎಂಬ ಮಾತಾದರೂ ಮುಖ್ಯಮಂತ್ರಿ ಅವರಿಂದ ಬರಬೇಕಿತ್ತು.

ತಮ್ಮ ಸರ್ಕಾರದ ಸಾಧನೆ ಹಾಗೂ ತಮ್ಮ ರಾಜಕೀಯ ಜೀವನದ ಪುಸ್ತಕ ಹೊರಬಂದು, ಅದನ್ನು ಖರೀದಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಿ ಮೂರು ತಿಂಗಳಾದರೂ ಸ್ವತಃ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲಾ ಅಂದ್ರೆ ನಂಬೋದಾದ್ರು ಹೇಗೆ? ತಮ್ಮ ಸರ್ಕಾರದ ಇಲಾಖೆಗಳು ತಮ್ಮ ಗಮನಕ್ಕೆ ತಾರದೇ ಸುತ್ತೋಲೆ ಹೊರಡಿಸಲು ಹೇಗೆ ಸಾಧ್ಯ? ಈ ಎಲ್ಲ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು.

Leave a Reply