ವಯಸ್ಸಾದವರನ್ನು ನೋಡಿಕೊಳ್ಳುವುದು ಎಂಬ ರೊಮ್ಯಾಂಟಿಕ್ ಕಲ್ಪನೆಯನ್ನು ಅಣಕಿಸುವ ವಾಸ್ತವಗಳನ್ನೂ ಗಮನಿಸಬೇಕಲ್ಲವೇ?

author-geetha‘ಕಾಲ ಕೆಟ್ಟೋಗಿದೆ… ಈಗಿನ ಮಕ್ಕಳು ಹಿರಿಯರನ್ನು ನೋಡಿಕೊಳ್ಳುವುದೇ ಇಲ್ಲ..’

‘ಈಗಿನ ಮಕ್ಕಳು ಅಂದರೆ?..’

‘ಅವರ ಕೆಲಸ, ಅವರ ಸಂಸಾರ ಮುಖ್ಯ ಈಗ.. ಅಪ್ಪ, ಅಮ್ಮನ್ನ ಕ್ಯಾರೆ ಅನ್ನೊಲ್ಲ..’

‘ಎಲ್ಲಾ ಕಾಲದಲ್ಲಿಯೂ ಅಷ್ಟೇ ಅಲ್ಲವೇ? ಈಗ ಹಿರಿಯರಾಗಿ ಆರೈಕೆ ಬಯಸುತ್ತಿರುವವರೆಲ್ಲಾ ಅವರ ಹಿರಿಯರ ಆರೈಕೆ ಮಾಡಿದ್ದಾರೆಯೇ?’

‘ಅಂದರೇ?’

‘ಹಿರಿಯರನ್ನು ಜತೆಯಲ್ಲೇ ಇರಿಸಿಕೊಂಡಿದ್ದರೆ, ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಅಂತಲೇ?.. ಹಲವೊಮ್ಮ ಮನೆಯವರಿಗಿಂಥ ಅವರಿಗೆ ಡಾಕ್ಟರ್, ನರ್ಸ್ ಗಳ ಆರೈಕೆಯ ಅಗತ್ಯವಿರುತ್ತದೆ’

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮೂವೀ ನೋಡಲಿಲ್ಲವೇ? ಅಪ್ಪನನ್ನು ಬಿಟ್ಟು ಹೋಗ್ತಾನೆ ಮಗ.. ಅಪ್ಪ ತಪ್ಪಿಸಿಕೊಂಡು ಬಿಡ್ತಾರೆ.. ಹುಡುಕೋಕ್ಕೆ ಅವರು ಪಡೋ ಪಾಡು.. ಬಿಟ್ಟು ಹೋಗದೆ ಜತೆಯಲ್ಲೇ ಇಟ್ಟುಕೊಂಡಿದ್ದರೆ ? ನೆಮ್ಮದಿ ಇರುತ್ತಿತ್ತೋ.. ‘

‘ಅಲ್ಲಾ.. ಜೊತೆಯಲ್ಲೇ ಇಟ್ಟುಕೊಂಡಿದ್ದರೆ ಜೀವನ ನಡೆಸೋದು ಹೇಗೆ? ಕೆಲಸಕ್ಕೆ ಹೋಗಬೇಡವೇ ಅವನು? ದುಡ್ಡು ಬೇಡವೇ ಜೀವನಕ್ಕೆ? ಮನೆಯಲ್ಲಿಯೇ 24 ಗಂಟೆ ಇರಲಾಗುತ್ತದೆಯೇ?’

‘ಓ.. ಆ ಮೂವೀ ನೋಡಿದ್ರಾ ನೀವು?’

‘ಹೂಂ.. ನಾಗು ಹೋಗಿದ್ದಾಗ ಥಿಯೇಟರ್ ಮುಕ್ಕಾಲು ತುಂಬಿತ್ತು. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ವಯಸ್ಸಾದವರು! ಅವರ ಮಕ್ಕಳೊಂದಿಗೆ ಬಂದಿದ್ದರು. ಅಜ್ಜಿಯನ್ನು ಕರೆದುಕೊಂಡು ಬಂದ ಮೊಮ್ಮಕ್ಕಳು ಇದ್ದರು. ಲಿಫ್ಟ್ ಗೆ ಕಾಯಬೇಕಾಗಿ ಬಂದಾಗ, ಅಜ್ಜಿ.. ನಿಂತ್ಕೊಳೋಕೆ ಆಗುತ್ತಾ? ಎಂದು ವಿಚಾರಿಸುತ್ತಿದ್ದ ಇಪ್ಪತ್ತರ ಹರೆಯದ ಮೊಮ್ಮಗ ಇದ್ದ. ನನ್ನೊಂದಿಗೆ ಸಿನಿಮಾ ನೋಡಲು ಬಂದಿದ್ದ. ನನ್ನ ಸ್ನೇಹಿತೆ ಅರ್ಧದಲ್ಲಿಯೇ ಎದ್ದು ಹೋದಳು.. ಮನೆಯಿಂದ ಅವಳತ್ತೆಯ ಫೋನು.. ಮಾವನವರಿಗೆ ಹುಷಾರಿಲ್ಲ ಅಂತ..’

‘ಓ.. ಹಾಗಲ್ಲ..’

‘ಮೂವತ್ತರಿಂದ ಅರವತ್ತು ವರ್ಷ ವಯಸ್ಸಿನಲ್ಲಿ ಇರುವವರು ನಿಜಕ್ಕೂ ಹೈರಾಣಾಗಿರುತ್ತಾರೆ. ಒಂದೆಡೆ ಅವರ ಮಕ್ಕಳು.. ಇನ್ನೊಂದೆಡೆ ಅಪ್ಪ, ಅಮ್ಮ.. ಅವರ ಕೆಲಸ.. ಮುಂದಿನ ಭವಿಷ್ಯಕ್ಕೆ ಭದ್ರತೆ.. ಗಂಡ ಹೆಂಡತಿ ಇಬ್ಬರೂ ದುಡಿದರಷ್ಟೇ ಪಥ ನಡೆಯುವ ಪರಿಸ್ಥಿತಿ. ಮನೆಯಲ್ಲಿ ಕೂತು ಇಪ್ಪನಾಲ್ಕು ಗಂಟೆ ಆರೈಕೆ ಮಾಡಲು ಹೇಗೆ ಸಾಧ್ಯ?’

‘ಅಲ್ಲಾ.. ಏನೆಂದರೆ..’

‘ಹೊರಗಿನ ಸಹಾಯ ತೆಗೆದುಕೊಂಡರೆ, ವೃದ್ಧಾಶ್ರಮದಲ್ಲಿ ಬಿಟ್ಟರೆ ಕೆಟ್ಟ ಹೆಸರು.. ತಲೆ ಕೆಟ್ಟು..’

ಮೆಲ್ಲನೆ ಹೋಗಿ ಆ ಅಪರಿಚಿತೆಯ ಭುಜದ ಮೇಲೆ ಕೈಯಿರಿಸಿದೆ. ತಟ್ಟನೆ ಆಕೆ, ಆಕೆಯ ಎದುರಿಗಿದ್ದವರು ನನ್ನತ್ತ ಕಣ್ಣರಳಿಸಿದರು.

‘ಸಾರಿ.. ನಿಮ್ಮಿಬ್ಬರ ಮಾತು ಕೇಳಿಸಿಕೊಂಡೆ. ನಾನೂ ಆ ಮೂವೀ ನೋಡಿ ಬಂದೆ.. ಅನಂತನಾಗ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರಲ್ಲವೇ.. ಹಾಗಾಗಿ ಸಿಂಪತಿ ಅವರೆಡೆಗೆ.. ರಕ್ಷಿತ್ ಶೆಟ್ಟಿ ಇನ್ನೂ ಚೆನ್ನಾಗಿ ಅಭಿನಯಿಸಬೇಕಿತ್ತು..!’

ನನ್ನ ಮಾತಿಗೆ ಅವರಿಬ್ಬರೂ ನಕ್ಕರು. ‘ತಪ್ಪಿಸಿಕೊಂಡ ಅಪ್ಪ ಸಿಕ್ಕರು.. ಹೀರೋಗೆ ಡಾಕ್ಟರ್ ಹೆಂಡತಿ ಸಿಕ್ಕಳು.. ಎಲ್ಲಾ ಸರಿ.. ಮುಂದೆ?.. ಅವರಿಬ್ಬರೂ ಕೆಲಸಕ್ಕೆ ಹೋಗದೆ ಅಪ್ಪನ ಮುಂದೆ ಕುಳಿತುಕೊಳ್ಳಲು ಸಾಧ್ಯವೇ?’ ಆಕೆ ಮುಂದುವರಿಸಿದರು.

‘ಆ ಕಥೆ ಬರೆದವರೊಂದಿಗೆ, ಆ ಡೈರೆಕ್ಟರ್ ಒಂದಿಗೆ ಮಾತಾಡೋಣ ಇರಿ.. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಪಾರ್ಟ್ ಟೂ ಮಾಡೋಕ್ಕೆ ಹೇಳೋಣ..’

‘ನಮ್ಮೆಜಮಾನರು ರಜ ಹಾಕಿ ಮನೆಯಲ್ಲಿದ್ದರು. ಹಾಗಾಗಿ ನಾನು ಆ ಪಿಕ್ಚರ್ ನೋಡಿದ್ದು. ಸಂಜೆ ಒಂದರ್ಧ ಗಂಟೆ ಬಂದು ಈ ಪಾರ್ಕಿನಲ್ಲಿ ಕುಳಿತರೆ ಆಯ್ತು. ಅಷ್ಟೇ ನನ್ನ ಸಮಯ. ಮದುವೆಯಾಗಿ ಇಪ್ಪತೈದು ವರ್ಷಗಳ ಮೇಲೆ ಆಗಿದೆ. ಒಂದೆರಡು ವರ್ಷ ಓಡಾಡಿಕೊಂಡು ಇದ್ದೆವೇನೋ.. ನನ್ನ ಜೀವನ ಪೂರಾ ಇವರ ಸೇವೆ ಮಾಡೋದೇ ಆಗಿ ಹೋಗಿದೆ. ನಾಳೆ ನಮಗೆ ವಯಸ್ಸಾದಾಗ ನಮ್ಮ ಮಕ್ಕಳು ಮಾಡ್ತಾರೆ ಅಂದುಕೊಂಡಿದೀರಾ? ನಾವು ಮಾಡುತ್ತಿರುವುದು ನೋಡಿಯೇ ಸಾಕಾಗಿದೆ ನಮ್ಮ ಮಕ್ಕಳಿಗೆ.. ವೃದ್ಧಾಶ್ರಮದ ಬುಕ್ಕಿಂಗ್ ನಾವೇ ಮಾಡಿಕೊಂಡುಬಿಡಬೇಕು.’

ಕಿರುನಗೆ ನಕ್ಕು ಮುಂದೆ ನಡೆದೆ. ಪಾರ್ಕಿನಲ್ಲಿ ನಡೆಯುವಾಗ ಕಿವಿಗೆ ಬೀಳುವ ಅರೆಬರೆ ಮಾತುಕಥೆ ನನ್ನ ಕಥೆಗಳಿಗೆ, ಲೇಖನಗಳಿಗೆ ಸ್ಫೂರ್ತಿ. ಕೆಲವೊಮ್ಮೆ ಭಾಗವಹಿಸುತ್ತೇನೆ ಕೂಡ.

ಈ ಬಾರಿ ಮಹಿಳಾ ರಾಜಕಾರಣಿ ಬಗ್ಗೆ ಲೇಖನ ಬರೆಯಬೇಕೆಂದುಕೊಂಡಿದ್ದೆ. ಪಾರ್ಕಿನಲ್ಲಿ ಕೇಳಿಸಿಕೊಂಡ ಈ ಮಧ್ಯವಯಸ್ಕ ಮಹಿಳೆಯರ ಸಂಭಾಷಣೆ, ನಮ್ಮ ಸಿ.ಎಂ ಅವರಿಗೆ ಗಿರಿಜಾ ಅವರು ಕೊಟ್ಟ ಮುತ್ತಿಗಿಂಥ ಹೆಚ್ಚು ಕಾಡಿತು. (ಗಿರಿಜಾ ಅವರು ಕೊಟ್ಟ ಮುತ್ತು ನನ್ನನೇಕೆ ಕಾಡಬೇಕು? ಮುಂದಿನ ವಾರ ವಿವರಿಸುತ್ತೇನೆ.)

ಅವರಿಬ್ಬರ ಸಂಭಾಷಣೆಯನ್ನೇ ಯಥಾವತ್ತಾಗಿ ಬರೆದಿದ್ದೇನೆ. ಲೇಖನಕ್ಕಿಂಥ ಕಥೆಯಂತೆಯೋ ಹರಟೆಯಂತೆಯೋ ಭಾಸವಾಗುವಾಗುತ್ತಿದೆ. ಆದರೆ ನಾನು ಹೇಳಬೇಕು ಅಂದುಕೊಂಡಿದ್ದೂ ಅಷ್ಟೇ, ಅದೇ!

ಕಾಯಿಲೆಗಳೂ ಹೆಚ್ಚುತ್ತಿವೆ. ಅದಕ್ಕೆ ತಕ್ಕ ಹಾಗೆ ಟ್ರೀಟ್ ಮೆಂಟ್ ಹಾಗೂ ಔಷಧಗಳೂ ಕೂಡ. ಹೀಗಿರುವಾಗ life expectancy (ಆಯುಷ್ಯ) ಕೂಡ ಹೆಚ್ಚು.ಈ dementia, Alziemers ಕಾಯಿಲೆಯಂತೂ ವಿಪರೀತ ಹೆಚ್ಚಿದೆ. ಆ ಕಾಯಿಲೆಯಿಂದ ಬಳಲುವವರನ್ನು ನೋಡಿಕೊಳ್ಳುವುದು ಕಷ್ಟ. ಯಾವ ಘಳಿಗೆಯಲ್ಲಿ ಹೇಗೋ ಹೇಳಲು ಬರುವುದಿಲ್ಲ. ಸೊಸೆಯಾದವಳು ಅರೆಘಳಿಗೆ ಮಲಗಲು ಕೋಣೆಯ ಬಾಗಿಲು ಭದ್ರಪಡಿಸಿಕೊಳ್ಳಬೇಕು.. ಅಡಿಗೆ ಮನೆ ಬಾಗಿಲು ಹಾಕಿಕೊಂಡು ಅಡಿಗೆ ಮಾಡಬೇಕು. (ಸೊಸೆ ನನ್ನ ಸ್ನೇಹಿತೆ. ಅವಳ ಮಾವನವರಿಗೆ dementia.. ಹಿಂದೆಯಿಂದ ಬಂದು ಹಿಡಿದುಕೊಂಡು ಬಿಡುತ್ತಾರೆ) ಕೆಲಸದವಳು ಆತನನ್ನು ಕೊಣೆಯಲ್ಲಿ ಕೂಡಿಹಾಕಿದರೆ ಮಾತ್ರ ಕೆಲಸಕ್ಕೆ ಬರುವುದು. ಅವರಿಗಾಗಿ ನರ್ಸ್ ಗೊತ್ತು ಮಾಡಿದರೆ, ಆತ/ಆಕೆ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳಬೇಕು.. ಅವರ ಊಟ ತಿಂಡಿ ಹೊತ್ತು ಹೊತ್ತಿಗೆ ಸರಿಯಾಗಿ ಆಗಬೇಕು. ಮನೆಯಲ್ಲಿ ಸದಾ ಯಾರಾದರು ಇರಲೇಬೇಕು. ಕೆಲಸ ಬಿಡುವವರು ಯಾರು? ಬಿಟ್ಟರೆ ಏರುತ್ತಿರುವ ಖರ್ಚುಗಳನ್ನು ನಿಭಾಯಿಸುವುದು ಹೇಗೆ? ಈ ಖಾಯಿಲೆ ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿಸುತ್ತಿರುವಾಗ ಸಾಮಾಜಿಕವಾಗಿ ಕೂಡ ಅವರನ್ನು ಕುಗ್ಗಿಸುವುದು ಎಷ್ಟು ಸರಿ?.. tension ಇಂದಾಗಿ ಶುಗರ್, ಬಿ.ಪಿ ಮಧ್ಯವಯಸ್ಕರನ್ನು ಆಕ್ರಮಿಸಿಕೊಂಡು ವೃದ್ಧಾಪ್ಯ ಆತುರದಿಂದ ಬಾಗಿಲು ತಟ್ಟುತ್ತಿದೆ.

ಪರಿಹಾರವೇನು? ಹೆಚ್ಚೇನಿಲ್ಲ. ಮಾಡುವುದು ಮಾಡಲೇಬೇಕು. ಮಾಡಲಾಗದಿದ್ದರೆ ದುಡ್ಡಾದರೂ ಖರ್ಚು ಮಾಡಿ ವೃದ್ಧಾಶ್ರಮ, ಸೀನಿಯರ್ ಸಿಟಿಜನ್ ಹೊಂಗಳಿಗೆ ಸೇರಿಸಬೇಕು. ಸರ್ಕಾರ ಕೂಡ ಇತ್ತ ಗಮನ ಹರಿಸಬೇಕು. ಸಾರ್ವಜನಿಕವಾಗಿ , ನ್ಯಾಯಾಧೀಶರಂತೆ ವರ್ತಿಸುವುದನ್ನು ಇತರರು ಬಿಡಬೇಕು.

ಮುಖ್ಯವಾಗಿ ನಮ್ಮ ವೃದ್ಧಾಪ್ಯವನ್ನು ನಾವು ಪ್ಲಾನ್ ಮಾಡಬೇಕು. ಯಾರ ಮೇಲೂ ಹೊರೆ ಆಗದಂತೆ ಇರಲು ಸಾಧ್ಯವೇ ನೋಡಬೇಕು. ಮಕ್ಕಳಿಗೆ ಮಾಡಬೇಕು. ಆದರೆ ವೃದ್ಧಾಪ್ಯಕ್ಕೆ ಒಂದಂಶ ಎತ್ತಿರಬೇಕು. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ effort (ಪ್ರಯತ್ನ) ಇರಬೇಕು.

‘ಅನಾಯಸೇನ ಮರಣಂ

ವಿನಾ ದೈನ್ಯೇನ ಜೀವನಂ’

ಇದು ವಿಧುರನ ಪ್ರಾರ್ಥನೆಯಂತೆ ನಮ್ಮೆಲ್ಲರ ಪ್ರಾರ್ಥನೆ. ಆಶಯ ಕೂಡ ಅದೇ.

ಅದು ಫಲಿಸದವರ ಮೇಲೆ ಕನಿಕರವಿರಲಿ. ಅವರನ್ನು ನೋಡಿಕೊಳ್ಳುತ್ತಿರುವವರ ಮೇಲೆ ಅಭಿಮಾನವಿರಲಿ. ನೋಡಿಕೊಳ್ಳಲಾಗದವರ ಅಸಹಾಯಕತೆಯ ಬಗ್ಗೆ ಕಾಳಜಿಯಿರಲಿ.

Leave a Reply