ಟರ್ಕಿ ಮೇಲೆ ಉಗ್ರದಾಳಿ, ತಿಳಿದಿರಲಿ ಈ ಮುಸ್ಲಿಂ ರಾಷ್ಟ್ರವನ್ನಾವರಿಸಿರುವ ಜಾಗತಿಕ ರಾಜಕೀಯದ ಒಳಸುಳಿ

 

ಡಿಜಿಟಲ್ ಕನ್ನಡ ಟೀಮ್:

ಟರ್ಕಿಯ ಅಟಾಟುರ್ಕ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, 41 ಮಂದಿ ಸಾವನ್ನಪ್ಪಿದರೆ 230 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಟರ್ಕಿ ಪ್ರಧಾನಿ ಬಿನಲಿ ಯಿಲ್ಡಿರಿಮ್ ಇದು ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಕೃತ್ಯ ಎಂದು ಆರೋಪಿಸಿದ್ದಾರೆ.

ಮಂಗಳವಾರ ರಾತ್ರಿ ಟ್ಯಾಕ್ಸಿಯಲ್ಲಿ ಬಂದ ಮೂವರು ಆತ್ಮಹತ್ಯಾ ಬಾಂಬರ್ ಗಳು ಗುಂಡಿನ ದಾಳಿಯನ್ನೂ ನಡೆಸಿದರು. ಆದರೆ ಇದುವರೆಗೂ ಯಾವುದೇ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತಿಲ್ಲ.

ಟರ್ಕಿ ಮೇಲಿನ ಈ ಉಗ್ರರ ದಾಳಿ ಅಚ್ಚರಿಯ ಸಂಗತಿಯೇನಲ್ಲ. ಕಾರಣ, ಇಸಿಸ್ ಉಗ್ರ ಸಂಘಟನೆಯ ಕೇಂದ್ರಸ್ಥಾನವಾಗಿರೋ ಸಿರಿಯಾ ಪಕ್ಕದಲ್ಲಿರುವ ಟರ್ಕಿ, ಉಗ್ರರ ಗುರಿಯಾಗೋದು ದೊಡ್ಡ ವಿಷಯವಲ್ಲ. ಆದರೆ, ಇಷ್ಟುದಿನಗಳು ಇಲ್ಲದ್ದು ಕಳೆದ ಒಂದು ವರ್ಷದಲ್ಲಿ ಟರ್ಕಿ ಮೇಲೆ ಉಗ್ರರ ಕೆಂಗಣ್ಣು ನೆಟ್ಟಿರೋದೇಕೆ ಎಂಬುದನ್ನು ಗಮನಿಸಬೇಕಾಗಿದೆ.

ಟರ್ಕಿ ಸಿರಿಯಾದ ಅಸಾದ್ ಆಡಳಿತದ ಬದಲಾವಣೆಯನ್ನು ಬಯಸಿತ್ತು. ಹಾಗಾಗಿ ನೆರೆಯ ರಾಷ್ಟ್ರದಲ್ಲಿ ಇಸಿಸ್ ಉಗ್ರರ ಅಟ್ಟಹಾಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಮತ್ತೊಂದೆಡೆ ಅಮೆರಿಕ ಸಹ ಅಸಾದ್ ಆಡಳಿತ ನಿರ್ಗಮನಕ್ಕಾಗಿ ಕಾಯುತ್ತಿತ್ತು. ಹಾಗಾಗಿ ಆರಂಭದಲ್ಲಿ ಉಗ್ರರ ವಿರುದ್ಧ ಕಠಿಣ ನಿಲುವು ತಾಳುವಲ್ಲಿ ಎಡವಿತ್ತು ಟರ್ಕಿ. ಇಲ್ಲಿ ಕೆಲವೊಂದು ಜಡಕುಗಳೂ ಇವೆ. ಅದೇನೆಂದರೆ ಕುರ್ದ್ ಸಮುದಾಯದ ಬಂಡುಕೋರರನ್ನು ಟರ್ಕಿ ಹತ್ತಿಕ್ಕುತ್ತಿದೆ. ಇದೇ ಕುರ್ದಿಶ್ ಬಂಡಾಯಗಾರರು ಐ ಎಸ್ ಐಎಸ್ ವಿರುದ್ಧ ಹೋರಾಡುತ್ತಿದ್ದಾರೆ.

ಟರ್ಕಿ ಮುಸ್ಲಿಂ ರಾಷ್ಟ್ರವೇ ಆಗಿದ್ದರೂ ಅದರ ಮೇಲೆ ಗ್ರೀಕ್ ನಾಗರಿಕತೆಯ ಪ್ರಭಾವವಿದೆ. ಯುರೋಪ್ ಗೆ ಸಂಪರ್ಕ ಕೊಂಡಿಯಂತಿರುವ ದೇಶವಿದು. ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಿ ಆಧುನೀಕರಣವನ್ನು ಅಳವಡಿಸಿಕೊಂಡು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಹೀಗಾಗಿ ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆಕರ್ಷಣೆ ಹಾಗೂ ಆದಾಯ ಮೂಲ. ಉಗ್ರರ ದಾಳಿ ಮೊದಲಿಗೆ ಪೆಟ್ಟು ನೀಡುವುದೇ ಪ್ರವಾಸೋದ್ಯಮಕ್ಕೆ.

ಅಸಾದ್ ಆಡಳಿತ ಬದಲಾಯಿಸುವುದೇ ತನ್ನ ಆದ್ಯತೆ ಎಂಬಂತಿದ್ದ ಟರ್ಕಿ, ಐ ಎಸ್ ಐ ಎಸ್ ಅನ್ನು ಸಮಸ್ಯೆ ಎಂದು ಪರಿಗಣಿಸಿ ಹೋರಾಟಕ್ಕೆ ಮುಂದಾಗಿದ್ದು ತೀರ ಇತ್ತೀಚಿನ ಬೆಳವಣಿಗೆ ಅಂತಲೇ ಹೇಳಬೇಕು. 2015 ರಲ್ಲಿ ಟರ್ಕಿ ಐ ಎಸ್ ಐ ಎಸ್ ವಿರುದ್ಧ ಹೋರಾಟ ನಡೆಸಲು ಅಮೆರಿಕದೊಂದಿಗೆ ಕೈಜೋಡಿಸಿತು. ಇದು ಉಗ್ರರ ಟಾರ್ಗೆಟ್ ಆಗಲು ಪ್ರಮುಖ ಕಾರಣ. ಅಲ್ಲಿಂದ ಟರ್ಕಿ ಮೇಲೆ ಉಗ್ರರ ಮುನಿಸು ತೀವ್ರವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪದೇ ಪದೇ ಉಗ್ರರ ದಾಳಿಗೆ ಸಿಲುಕಿ ಟರ್ಕಿ ನಲುಗುತ್ತಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದ ದಾಳಿ ಸುಮಾರು 95 ಮಂದಿಯನ್ನು ಬಲಿ ಪಡೆದಿತ್ತು. ಪ್ರವಾಸೋದ್ಯಮದ ಮೇಲೆ ಟರ್ಕಿ  ಹೆಚ್ಚು ಅವಲಂಬಿತವಾಗಿರೋ ಕಾರಣ, ಉಗ್ರರ ಟಾರ್ಗೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದರೊಂದಿಗೆ ವಿದೇಶಿಗರಲ್ಲಿ ಭಯ ಹುಟ್ಟಿಸಿ, ಟರ್ಕಿಯ ಆರ್ಥಿಕತೆಗೆ ಪೆಟ್ಟು ನೀಡುವುದು ಈ ದಾಳಿಯ ಮುಖ್ಯ ಉದ್ದೇಶವಾಗಿದೆ.

ನಿಜ. ಐಎಸ್ ಐಎಸ್ ಇರಲಿ, ಅಲ್ ಕಾಯಿದಾ ಆಗಿರಲಿ ಉಗ್ರರಿಗೆ ವಿಧ್ವಂಸಗಳನ್ನು ಸೃಷ್ಟಿಸುವುದಕ್ಕೆ ಕಾರಣಗಳು ಬೇಕಿಲ್ಲ. ಅದು ಇಸ್ಲಾಂ ಬಹುಸಂಖ್ಯಾತ ರಾಷ್ಟ್ರವೇ ಆದರೂ ಅಲ್ಲಿನ ವ್ಯವಸ್ಥೆಯನ್ನು ಸಂಪೂರ್ಣ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದು ಉಗ್ರ ಸಂಘಟನೆಗಳ ಕಾರ್ಯಸೂಚಿ. ಹೀಗಾಗಿ ಟರ್ಕಿ ಐ ಎಸ್ ಐಎಸ್ ಅನ್ನು ತನ್ನ ವೈರಿ ಎಂದು ಭಾವಿಸಿದರೂ, ಭಾವಿಸದಿದ್ದರೂ ಪರಿಸ್ಥಿತಿಯಲ್ಲೇನೂ ತೀರ ಬದಲಾವಣೆ ಇರದು. ಆದ್ದರಿಂದಲೇ, ಜಗತ್ತಿನ ಉಳಿದ ರಾಷ್ಟ್ರಗಳ ಜತೆ ಸೇರಿ ಐ ಎಸ್ ಐ ಎಸ್ ಮೇಲೆ ಸಮರ ಸಾರುವುದೇ ಟರ್ಕಿ ಅನುಸರಿಸಬಹುದಾದ ಉತ್ತಮ ಮಾರ್ಗ ಆಗಬಲ್ಲದು.

ಅದೇನೇ ಇದ್ದರೂ ಪ್ರಸ್ತುತ ಉಗ್ರದಾಳಿಯು ಜಾಗತಿಕ ರಾಜಕಾರಣದೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಗಮನಿಸದೇ ಇರಲಾಗುವುದಿಲ್ಲ. ಇಸ್ರೇಲ್ ಮತ್ತು ರಷ್ಯಾಗಳೊಂದಿಗೆ ತನ್ನ ಮುದುಡಿದ್ದ ಬಾಂಧವ್ಯವನ್ನು ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ಟರ್ಕಿ ಮೇಲೆ ಈ ಭೀಕರ ಉಗ್ರದಾಳಿ ಆಗಿದೆ.

2010ರಲ್ಲಿ ಗಾಜಾಪಟ್ಟಿಗೆ ಇಸ್ರೇಲ್ ಎಲ್ಲ ಪೂರೈಕೆಗಳನ್ನೂ ತಡೆ ಹಿಡಿದಿದ್ದ ಸಂದರ್ಭದಲ್ಲಿ ಟರ್ಕಿಯ ಯೋಧರು ಅದಕ್ಕೆ ವಿರುದ್ಧವಾಗಿ ಪದಾರ್ಥಗಳ ಪೂರೈಕೆಗೆ ಹೋಗಿದ್ದರು. ಇವರಿದ್ದ ನೌಕೆ ಮೇಲೆ ದಾಳಿ ಮಾಡಿದ ಇಸ್ರೇಲ್ ಅಲ್ಲಿದ್ದ ಯೋಧರನ್ನು ಕೊಂದು ಹಾಕಿತ್ತು. ಆಗ ಕಳಚಿಕೊಂಡಿದ್ದ ರಾಜತಾಂತ್ರಿಕ ಸಂದರ್ಭಗಳನ್ನು ಮೊನ್ನೆಯಷ್ಟೇ ರೋಮ್ ನಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹುವಿನೊಂದಿಗೆ ಕುಳಿತು ಪುನರುಜ್ಜೀವನ ಮಾಡಿಕೊಂಡಿದ್ದರು ಟರ್ಕಿ ಪ್ರಧಾನಿ. ಇಸ್ರೇಲ್ ಎಂದರೆ ಉಗ್ರರು ಮತ್ತು ಬಹುತೇಕ ಅರಬ್ ರಾಷ್ಟ್ರಗಳೆಲ್ಲ ಕಿಡಿಕಿಡಿ ಆಗುತ್ತವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ!

ಅಲ್ಲದೇ, ಸಿರಿಯಾ ಗಡಿಯ ಬಳಿ ರಷ್ಯಾ ಯುದ್ಧವಿಮಾನವನ್ನು ಹೊಡೆದುರುಳಿಸಿದ್ದಕ್ಕೆ ಲಿಖಿತ ಕ್ಷಮಾಪಣೆ ಕೇಳಿದ ಟರ್ಕಿ ಈ ಮೂಲಕ ಅದರೊಂದಿಗೂ ತನ್ನ ಸ್ಥಿತಿ ಸುಧಾರಣೆ ಮಾಡಿಕೊಳ್ಳುತ್ತಿದೆ. ಸಿರಿಯಾದ ಅಸಾದ್ ಪರವಾಗಿಯೇ ಇರುವ ರಷ್ಯಾ, ಹಾಗೆ ನೋಡಿದರೆ ಅಮೆರಿಕಕ್ಕಿಂತ ತೀವ್ರವಾಗಿ ಐಎಸ್ ಐಎಸ್ ಅನ್ನು ವಿರೋಧಿಸುತ್ತಿದೆ ಹಾಗೂ ಹಣಿಯುವುದಕ್ಕೆ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಿದೆ.

ಟರ್ಕಿ ವಿಮಾನ ನಿಲ್ದಾಣದ ಮೇಲೆ ಉಗ್ರದಾಳಿ: 41 ಬಲಿ ಎಂಬ ಹೆಡ್ಲೈನ್ ಹಿಂದೆ ಇಷ್ಟೆಲ್ಲ ಸಿಕ್ಕುಗಳಿವೆ.

Leave a Reply