ಜಗನ್ ಮತ್ತು ವಾದ್ರಾ ಅವರ ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಪ್ರಗತಿ

ಡಿಜಿಟಲ್ ಕನ್ನಡ ಟೀಮ್:

ಭ್ರಷ್ಟಾಚಾರ ಪ್ರಕರಣಗಳು ಕೇವಲ ಸುದ್ದಿ ಮಾಡುತ್ತವೋ ಅಥವಾ ತನಿಖೆಗೂ ಒಳಪಡುತ್ತವೋ ಎಂಬುದು ಸಾಮಾನ್ಯರು ಆಗಾಗ ಕೇಳಿಕೊಳ್ಳುತ್ತಿದ್ದ ಪ್ರಶ್ನೆ. ಈ ನಿಟ್ಟಿನಲ್ಲಿ ರಾಬರ್ಟ್ ವಾದ್ರಾ ಮತ್ತು ಜಗನ್ಮೋಹನ ರೆಡ್ಡಿ ಅಕ್ರಮ ಸಂಪತ್ತಿನ ತನಿಖೆ ನಿಟ್ಟಿನಲ್ಲಿ ಆಗಿರುವ ಬೆಳವಣಿಗೆಗಳು ಗಮನಾರ್ಹ.

ಆಸ್ತಿ ದಾಖಲೆ ಕಲೆಹಾಕಿದ ಇ.ಡಿ..

ಅಕ್ರಮ ಹಣ ಗಳಿಕೆ ಪ್ರಕರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಮತ್ತು ಪತ್ನಿ ಭಾರತಿ ಅವರಿಗೆ ಸೇರಿರುವ ₹ 749 ಕೋಟಿ ಮೌಲ್ಯದ ಆಸ್ತಿ ದಾಖಲೆಯನ್ನು ಕಲೆಹಾಕಿದೆ. ಇದರೊಂದಿಗೆ ಪ್ರಕರಣದಲ್ಲಿ ಇವರ ಆಸ್ತಿ ಪ್ರಮಾಣ ₹2,500 ಕೋಟಿಯಷ್ಟು ಏರಿಕೆಯಾಗಿದೆ. 2004 ರಿಂದ 2009 ರವರೆಗೆ ಜಗನ್ ಅವರ ತಂದೆ ವೈ.ಎಸ್ ರಾಜಶೇಖರ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಹೆಚ್ಚಿನ ಹಣ ಗಳಿಸಿದ್ದಾರೆ ಎಂದು ತಿಳಿದುಬಂದಿದೆ.

ಭೂ ಹಗರಣ ತನಿಖೆ ಮುಗಿಸಿದ ಸಮಿತಿ..

ಹರ್ಯಾಣದ ಗುರುಗಾವ್ ನಲ್ಲಿ ಅಕ್ರಮ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಡಿಎಲ್ಎಫ್- ರಾಬರ್ಟ್ ವಾದ್ರಾ ವಿರುದ್ಧ ತನಿಖೆ ಮುಕ್ತಾಯಗೊಂಡಿದೆ. ಹರ್ಯಾಣ ಸರ್ಕಾರ ನೇಮಿಸಿದ್ದ ನ್ಯಾ.ಎಸ್.ಎನ್ ಧಿಂಗ್ರಾ ಸಮಿತಿಯು ತನಿಖೆ ಮುಗಿಸಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ಪ್ರಕ್ರಿಯೆಯಲ್ಲಿ ವಾಣಿಜ್ಯ ಪರವಾನಗಿಗೆ ಸಂಬಂಧಿಸಿದಂತೆ 250 ಕಡತಗಳ ಪರಿಶೀಲನೆ ಮತ್ತು 26 ಅಧಿಕಾರಿಗಳ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರಿಗೂ ಸಮನ್ಸ್ ಜಾರಿ ಮಾಡಿದೆ. ಇದಕ್ಕೆ ಬಿ.ಎಸ್ ಹೂಡಾ ಪ್ರತಿಕ್ರಿಯಿಸಿರುವುದು ಹೀಗೆ, ‘ಇದೊಂದು ರಾಜಕೀಯ ಪ್ರೇರಿತ ತನಿಖೆ. ಇದನ್ನು ರದ್ದುಗೊಳಿಸಬೇಕು.’ ವಾದ್ರಾ ಮಾತ್ರ ತಾವು ಈ ಎಲ್ಲ ಆರೋಪಗಳಿಂದಲೂ ಮುಕ್ತರಾಗಿ ಬಂದು ತಲೆಎತ್ತಿ ಮುನ್ನಡೆಯುವುದಾಗಿ ಹೇಳಿದ್ದಾರೆ.

Leave a Reply