ಭಾರತದ ಎನ್ಎಸ್ಜಿ ಸದಸ್ಯತ್ವ ತಪ್ಪಿಸಿ ಖುಷಿಪಡಲು ಹೊರಟಿದ್ದ ಚೀನಾಕ್ಕೀಗ ಸಂಕಷ್ಟ!

ಡಿಜಿಟಲ್ ಕನ್ನಡ ಟೀಮ್:

ಪರಮಾಣು ಪೂರೈಕೆ ಸಮೂಹ (ಎನ್ಎಸ್ಜಿ) ದಲ್ಲಿ ಸದಸ್ಯತ್ವ ಕೈತಪ್ಪಿದ ನಿರಾಸೆಯಿಂದ ಭಾರತ ಹೊರಬರುತ್ತಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತ ಚರ್ಚೆಯ ಕಾವು ಮಾತ್ರ ಕಮ್ಮಿಯಾಗಿಲ್ಲ. ಒಂದೆಡೆ ಭಾರತದ ಸದಸ್ಯತ್ವ ತಪ್ಪಿಸಿದ ಚೀನಾಗೆ ತೃಪ್ತಿ ಸಿಗುವ ಬದಲು ಆತಂಕ ಎದುರಾಗಿದೆ. ಮತ್ತೊಂದೆಡೆ ಭಾರತದ ಸದಸ್ಯತ್ವ ಕೈತಪ್ಪಲು ಚೀನಾ ಹೊಣೆ ಹೊರಬೇಕು ಎಂದು ಅಮೆರಿಕದ ಅಧಿಕಾರಿಗಳು ಕಿಡಿಕಾರಿದ್ದಾರೆ.

ಇತ್ತೀಚೆಗೆ ಸಿಯೋಲ್ ನಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ಭಾರತ ಸದಸ್ಯತ್ವಕ್ಕೆ ವಿರೋಧಿಸಿ ಚೀನಾ ಮೇಲ್ನೋಟಕ್ಕೆ ಜಯ ಸಾಧಿಸಿತ್ತು. ಆದರೆ ಚೀನಾಗೆ ಈ ಸಭೆಯಲ್ಲಿನ ಒಟ್ಟಾರೆ ಫಲಿತಾಂಶ ನಿಜಕ್ಕೂ ಆಘಾತ ತಂದಿದೆ.

ಕಾರಣ,

ಎನ್ಎಸ್ಜಿ ವೇದಿಕೆಯ ಮೂಲಕ ತಾನೊಂದು ಶಕ್ತಿಶಾಲಿ ರಾಷ್ಟ್ರ ಎಂದು ವಿಶ್ವಕ್ಕೆ ಸಾರಲು ಹೊರಟಿತ್ತು ಚೀನಾ. ಎನ್ಎಸ್ಜಿಗೆ ಸಂಬಂಧಿಸಿದಂತೆ ತನ್ನ ಭಾರತ ವಿರೋಧಿ ನಿಲುವಿಗೆ ಹೆಚ್ಚು ರಾಷ್ಟ್ರಗಳ ಬೆಂಬಲ ಪಡೆಯುವ ಮಹದಾಸೆ ಹೊಂದಿತ್ತು. ಮತ್ತೊಂದೆಡೆ ಚೀನಾ ಮುಖ್ಯ ಸಂಧಾನ ಅಧಿಕಾರಿ ಸಹ ಈ ಸಭೆಯಲ್ಲಿ ಎನ್ಎಸ್ಜಿ ಸದಸ್ಯರ ಮೂರನೇ ಒಂದು ಭಾಗ ರಾಷ್ಟ್ರಗಳ ಬೆಂಬಲ ಪಡೆಯುವ ಭರವಸೆ ನೀಡಿದ್ದರು. ಇದರೊಂದಿಗೆ 15 ಕ್ಕೂ ದೇಶಗಳ ಬೆಂಬಲದೊಂದಿಗೆ ಸೂಪರ್ ಪವರ್ ರಾಷ್ಟ್ರವಾಗುವ ಕನಸು ಕಟ್ಟಿತ್ತು.

ಆದ್ರೆ ಆಗಿದ್ದು ಮಾತ್ರ ಬೇರೆ. ಭಾರತದ ಸದಸ್ಯತ್ವಕ್ಕೆ 45 ರಾಷ್ಟ್ರಗಳು ಭಾರತ ಸದಸ್ಯತ್ವಕ್ಕೆ ಒಪ್ಪಿದರೆ, ಕೇವಲ ನಾಲ್ಕು ರಾಷ್ಟ್ರಗಳು ವಿರೋಧಿಸಿದ್ದವು. ಇದು ಚೀನಾಗೆ ಈಗ ನುಂಗಲಾರದ ತುತ್ತಾಗಿದೆ. ಹೀಗಾಗಿ ಎನ್ಎಸ್ಜಿ ಸಭೆಯಲ್ಲಿ ತನ್ನ ಭಾರತ ವಿರೋಧಿ ನೀತಿಗೆ ಹೆಚ್ಚು ರಾಷ್ಟ್ರಗಳ ಬೆಂಬಲ ಪಡೆಯುವ ಉದ್ದೇಶದೊಂದಿಗೆ ನೇಮಕ ಮಾಡಲಾಗಿದ್ದ ಮುಖ್ಯ ಸಂಧಾನ ಅಧಿಕಾರಿ ವಾಂಗ್ ಕ್ವನ್ ಅವರನ್ನು ಆ ಸ್ಥಾನದಿಂದ ತೆಗೆದುಹಾಕಿದೆ.

ಕೇವಲ ಭಾರತವನ್ನು ಎನ್ಎಸ್ಜಿಯಿಂದ ದೂರವಿಡುವುದೇ ಮುಖ್ಯ ಧ್ಯೇಯವಾಗಿದ್ದರೆ, ಚೀನಾ ಈ ಮಟ್ಟಿಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಚೀನಾದ ಈ ಭಾರತ ವಿರೋಧಿ ನೀತಿಯ ಹಿಂದೆ ಮತ್ತೊಂದು ಅಜೆಂಡಾ ಅಡಗಿತ್ತು.

ಅದೇನಂದ್ರೆ, ದಕ್ಷಿಣ ಚೀನಾ ಸಮುದ್ರ ಪ್ರದೇಶದ ಮೇಲೆ ತನ್ನ ಹಿಡಿತಕ್ಕೆ ಸಂಬಂಧಿಸಿದಂತೆ ಫಿಲಿಪ್ಪೈನ್ಸ್ ವಿರುದ್ಧದ ಕಾದಾಟದ ವಿಚಾರಣೆ ನಡೆಸುತ್ತಿರುವ ಹಾಲೆಂಡ್ ನ ಹೇಗ್ ನಲ್ಲಿರುವರುವ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ ಅನ್ನು ದುರ್ಬಲಗೊಳಿಸುವುದು.

ಏನಿದು ಚೀನಾ- ಫಿಲಿಪ್ಪೈನ್ಸ್ ತಗಾದೆ?

ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಚೀನಾದ ಅತಿಯಾದ ನಿಯಂತ್ರಣ ಮತ್ತು ಅಲ್ಲಿನ ಕೆಲವು ದ್ವೀಪಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಫಿಲಿಪ್ಪೈನ್ಸ್ ಪ್ರಶ್ನೆ ಮಾಡಿದೆ. ಈ ತಗಾದೆ ವಿಚಾರಣೆ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ ನಲ್ಲಿ ನಡೆಯುತ್ತಿದೆ.

ಸದ್ಯ ಈ ಪ್ರದೇಶಗಳ ಮೇಲಿರುವ ಚೀನಾ ನಿಯಂತ್ರಣ, ವಿಶ್ವಸಂಸ್ಥೆ ಸಮುದ್ರ ನೀತಿ ಒಪ್ಪಂದ (ಯು ಎನ್ ಸಿ ಎಲ್ ಒ ಎಸ್) ದ ಉಲ್ಲಂಘನೆಯಾಗಿದೆ. ಚೀನಾ ಈ ಗುಂಪಿನ ಸದಸ್ಯತ್ವ ಹೊಂದಿರುವುದರಿಂದ ಈ ಕಾನೂನು ಉಲ್ಲಂಘಿಸುವಂತಿಲ್ಲ. ಹೀಗಾಗಿ ಈ ವಿಚಾರಣೆಯ ತೀರ್ಪು ತನ್ನ ವಿರುದ್ಧವಾಗಿ ಬರುತ್ತದೆ ಎಂಬುದು ಚೀನಾ ಅರಿವಿಗೆ ಬಂದಿದೆ. ಈ ಕಾರಣಕ್ಕಾಗಿಯೇ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ ಪ್ರಕ್ರಿಯೆಯೇ ಕಾನೂನುಬಾಹಿರ ಎಂದು ಪ್ರತಿಪಾದಿಸಲು ಮುಂದಾಗಿದೆ ಚೀನಾ. ಇದಕ್ಕಾಗಿ ತನ್ನ ಬಳಿ 60 ದೇಶಗಳ ಬೆಂಬಲವಿದೆ ಎಂದು ಚೀನಾ ಹೇಳಿಕೊಂಡು ಬೀಗಿತ್ತು. ಆದರೆ, ಎನ್ಎಸ್ಜಿ ಸಭೆಯಲ್ಲಿ ಚೀನಾ ನಿಲುವಿಗೆ ಕೇವಲ 4 ರಾಷ್ಟ್ರಗಳ ಬೆಂಬಲ ಸಿಕ್ಕಿರುವುದು, ಈ ವಿಚಾರದಲ್ಲಿ ನಿರೀಕ್ಷೆಗೆ ತಕ್ಕ ಬೆಂಬಲ ಸಿಗುವುದೇ ಎಂಬ ಭಯ ಚೀನಾವನ್ನು ಆವರಿಸಿದೆ.

ಅಷ್ಟೇ ಅಲ್ಲದೆ, ಎನ್ಎಸ್ಜಿ ಸದಸ್ಯತ್ವ ಕೈತಪ್ಪಿರುವ ಭಾರತ ಈ ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್ ವಿಚಾರದಲ್ಲಿ ಉಳಿದ ರಾಷ್ಟ್ರಗಳನ್ನು ತನ್ನ ವಿರುದ್ಧ ಎತ್ತಿಕಟ್ಟುವುದಕ್ಕೆ ಯಶಸ್ವಿಯಾಗಿಬಿಡಬಲ್ಲುದೇನೋ ಎಂಬುದು ಚೀನಾದ ಆತಂಕ.

ಈ ಮಧ್ಯೆ ಎನ್ಎಸ್ಜಿ ಸದಸ್ಯತ್ವದಲ್ಲಿ ಭಾರತ ವಿರೋಧಿ ನಿಲುವು ತಾಳಿದ ಚೀನಾ ವಿರುದ್ಧ ಅಮೆರಿಕ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿ ಟಾಮ್ ಶಾನನ್ ಹೇಳಿರುವುದಿಷ್ಟು:

‘ಎನ್ಎಸ್ಜಿ ಸರ್ವಾನುಮತ ವ್ಯವಸ್ಥೆಯ ಸಂಸ್ಥೆಯಾಗಿದೆ. ಇಂತಹ ವ್ಯವಸ್ಥೆಯಲ್ಲಿ ಒಂದು ದೇಶ ಯಾವುದೇ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಬಹುದು. ಹಾಗೆಂದು ಆ ರಾಷ್ಟ್ರವನ್ನು ಹೊರಗಿಡದೇ ಉತ್ತರದಾಯಿಯನ್ನಾಗಿಸಬೇಕು. ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಚೀನಾ ಪ್ರಾಬಲ್ಯ ಹೊಂದಿರುವಂತೆ ಭಾರತ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ತನ್ನ ನಿಯಂತ್ರಣ ಸಾಧಿಸಬೇಕು. ಭಾರತ ಎನ್ಎಸ್ಜಿ ಸದಸ್ಯತ್ವ ಪಡೆಯುವಂತೆ ಮಾಡಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಸಿಯೋಲ್ ಸಭೆಯ ವಿದ್ಯಮಾನಗಳ ಬಗ್ಗೆ ಉಭಯ ದೇಶಗಳು ಕೂತು ಚರ್ಚಿಸಬೇಕು. ರಾಜತಾಂತ್ರಿಕವಾಗಿ ಹೇಗೆ ನಿಭಾಯಿಸಬೇಕು ಎಂಬುದನ್ನು ಕಂಡುಕೊಂಡು ಮುಂದಿನ ಪ್ರಯತ್ನದಲ್ಲಿ ಯಶಸ್ವಿಯಾಗಬೇಕು.’

Leave a Reply