ವಾದ್ರಾ ಪ್ರಕರಣದ ತನಿಖಾ ವರದಿ ಬರುತ್ತಿದ್ದಂತೆ ಸಮಿತಿ ಬಗ್ಗೆಯೇ ಕಾಂಗ್ರೆಸ್ ಖ್ಯಾತೆ, ಸಲಿಂಗಿಗಳು ತೃತೀಯ ಲಿಂಗಿಗಳಲ್ಲ, ಯಶಸ್ವಿಯಾಯ್ತು ಕ್ಷಿಪಣಿ ಪರೀಕ್ಷೆ, ವಿಶ್ವಬ್ಯಾಂಕ್ ಪ್ರಶಂಸೆ

ದೆಹಲಿಯಲ್ಲಿ ಅಪಹರಣಕ್ಕೊಳಗಾಗಿದ್ದ ಸೋನು, ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದ. ವಿದೇಶ ವ್ಯವಹಾರ ಸಚಿವಾಲಯದ ಪ್ರಯತ್ನದ ಮೂಲಕ ಮನೆಗೆ ಮರಳಿದ್ದಾನೆ. ಡಿ ಎನ್ ಎ ಪರೀಕ್ಷೆಯಲ್ಲಿ ಸೋನು ತಾಯಿ ಕುರಿತೂ ಸ್ಪಷ್ಟತೆ ಮೂಡಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜತೆಗಿನ ಆಪ್ತ ಚಿತ್ರವಿದು.

ಡಿಜಿಟಲ್ ಕನ್ನಡ ಟೀಮ್:

ಹರ್ಯಾಣದಲ್ಲಿ ರಾಬರ್ಟ್ ವಾದ್ರ ವಿರುದ್ಧದ ಭೂ ಹಗರಣದ ಕುರಿತು ತನಿಖೆ ನೇಮಿಸಲಾಗಿರುವ ಎಸ್.ಎನ್ ಧಿಂಗ್ರಾ ಸಮಿತಿ ತನಿಖೆ ಮುಗಿಸಿ ಇನ್ನೇನು ಸರ್ಕಾರಕ್ಕೆ ವರದಿ ಸಲ್ಲಿಸುತ್ತೆ ಅಂದುಕೊಳ್ಳುವಷ್ಟರಲ್ಲಿ ಪ್ರಕರಣ ಹೊಸ ತಿರುವು ಪಡೆದಿದೆ. ಅದೇನಂದ್ರೆ, ರಾಬರ್ಟ್ ವಾದ್ರಾ ವಿರುದ್ಧದ ವರದಿ ನೀಡಲು ಮತ್ತಷ್ಟು ಸಮಯ ಬೇಕು ಎಂದು ತನಿಖಾ ಸಮಿತಿ ಮುಖ್ಯಸ್ಥರು ಕೋರಿದ್ದಾರೆ.

ಈ ಪ್ರಕರಣದ ಬಗ್ಗೆ ಮತ್ತಷ್ಟು ಹೊಸ ಮಾಹಿತಿ ಲಭ್ಯವಾಗಿದ್ದು, ಈ ಹಗರಣದಲ್ಲಿ ಯಾವ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಹೀಗಾಗಿ ಅಂತಿಮ ವರದಿ ಸಲ್ಲಿಸಲು ಕೆಲವು ವಾರಗಳ ಕಾಲಾವಕಾಶ ಬೇಕು ಎಂದು ಮುಖ್ಯಮಂತ್ರಿ ಖಟ್ಟರ್ ಅವರನ್ನು ಕೋರಿರುವುದಾಗಿ ನ್ಯಾ.ಎಸ್.ಎನ್ ಧಿಂಗ್ರಾ ಅವರ ಆಪ್ತ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಗುರುವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿದ್ಯಮಾನಗಳು ಹೀಗಿವೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಹೂಡಾ ಹರ್ಯಾಣ ರಾಜ್ಯಪಾಲರಿಗೆ ಈ ಸಮಿತಿಯ ವಿರುದ್ಧ ಬರೆದಿರುವ ಪತ್ರದಲ್ಲಿ ಸಮಿತಿಯ ನೇಮಕದ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು. ಅವರು ಪತ್ರದಲ್ಲಿ ಹೇಳಿದಿಷ್ಟು:

‘ರಾಜ್ಯ ಬಿಜೆಪಿ ಸರ್ಕಾರ ಈ ತನಿಖಾ ಸಮಿತಿ ನೇಮಕ ಮಾಡುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಅಗತ್ಯ ಒಪ್ಪಿಗೆ ಪಡೆದಿಲ್ಲ. ತನಿಖೆಯ ಮಧ್ಯದಲ್ಲೇ ಅವಧಿಯ ವಿಸ್ತರಣೆಯನ್ನು ಮಾಡಿದೆ. ಈ ಎಲ್ಲ ಕಾರಣಗಳಿಂದ ಈ ಸಮಿತಿಯ ನೇಮಕ ಸಂವಿಧಾನಾತ್ಮಕವಾಗಿಲ್ಲ.’

ಈ ಮಧ್ಯೆ ಈ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ಅವರನ್ನು ಸಿಲುಕಿಸಲು ಸರ್ಕಾರದಿಂದ ತನಿಖಾ ಸಮಿತಿ ಮುಖ್ಯಸ್ಥ ಮಾಜಿ ನ್ಯಾ.ಧಿಂಗ್ರಾ ಅವರಿಗೆ ಕೆಲವು ಸವಲತ್ತುಗಳನ್ನು ಮಾಡಿಕೊಡಲಾಗಿದೆ ಎಂಬ ಆರೋಪವನ್ನೂ ಕಾಂಗ್ರೆಸ್ ಮಾಡಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಧಿಂಗ್ರಾ ಅವರ ಸಂಪರ್ಕ ಹೊಂದಿರುವ ಶಾಲೆಗೆ ರಸ್ತೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ನೀಡಲಾಗಿತ್ತು. ಶೀಘ್ರವೇ ಅರ್ಜಿ ಪರಿಗಣಿಸಿ, ಅರ್ಜಿ ಸಲ್ಲಿಸಿದ ದಿನವೇ ಹಣ ಬಿಡುಗಡೆ ಮಾಡಲಾಗಿತ್ತು. ಈ ನೆರವಿನಿಂದ ಬಿಜೆಪಿ ಸರ್ಕಾರ ಸಮಿತಿಯಿಂದ ತನಗೆ ಬೇಕಾದಂತೆ ವರದಿ ಸಿದ್ಧಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ತನಿಖೆಯ ವೇಳೆ ವಾದ್ರಾ ಅವರಿಗೆ ಸಮನ್ಸ್ ನೀಡಿಲ್ಲ. ಕೇವಲ ಸರ್ಕಾರಿ ಅಧಿಕಾರಿಗಳ ವಿಚಾರಣೆ ನಡೆಸಿರುವುದನ್ನು ಪ್ರಶ್ನಿಸಲಾಗಿತ್ತು ಎಂದು ಹೇಳಲಾಗಿದೆ.

ಸಲಿಂಗಿಗಳು ತೃತಿಯ ಲಿಂಗಿಗಳಲ್ಲ ಅಂತು ಸುಪ್ರಿಂ ಕೋರ್ಟ್

ತೃತೀಯ ಲಿಂಗಿಗಳಿಗೆ ಮೀಸಲು ನೀಡಬೇಕು ಎಂದು ಸುಪ್ರಿಂ ಕೋರ್ಟ್ 2014 ರಲ್ಲಿ ತೀರ್ಪು ನೀಡಿತ್ತು. ಆದರೆ ತೃತೀಯ ಲಿಂಗಿ ಅಥವಾ ಪರಿವರ್ತಿತ ಲಿಂಗಿಗಳ ವ್ಯಾಪ್ತಿಗೆ ಯಾರೆಲ್ಲ ಬರುತ್ತಾರೆ ಎಂಬ ಸ್ಪಷ್ಟತೆ ಇರಲಿಲ್ಲ. ಇದೀಗ ಸುಪ್ರೀಂ ಕೋರ್ಟ್, ಈ ತೃತೀಯ ಲಿಂಗ ವರ್ಗದಲ್ಲಿ ಸಲಿಂಗಿಗಳು (ಗೇ ಹಾಗೂ ಲೆಸ್ಬಿಯನ್ಸ್) ಹಾಗೂ ಬೈಸೆಕ್ಸುಯಲ್ (ಉಭಯ ಲಿಂಗದ ಲೈಂಗಿಕ ಆಸಕ್ತರು) ಬರುವುದಿಲ್ಲ ಎಂದು ಗುರುವಾರ ಪ್ರಕಟಿಸಿದೆ.

2014ರಲ್ಲಿ ನೀಡಿದ್ದ ತೀರ್ಪಿನ ನಂತರ ಈ ತೃತೀಯ ಲಿಂಗದಲ್ಲಿ ಯಾರೆಲ್ಲಾ ಒಳಪಡಬೇಕು ಎಂಬ ಗೊಂದಲಕ್ಕೆ ಏರ್ಪಟ್ಟಿತ್ತು. ಇದರ ವಿಚಾರಣೆ ನಡೆಸಿದ ನ್ಯಾ.ಎ.ಕೆ ಸಿಕ್ರಿ ಮತ್ತು ಎನ್.ವಿ ರಮಣ ಅವರ ಪೀಠ ಈ ಎರಡು ವರ್ಗಗಳು ತೃತೀಯ ಲಿಂಗಿಗಳಲ್ಲ ಎಂದು ಸ್ಪಷ್ಟ ತೀರ್ಪು ನೀಡಿದೆ.

ಯಶಸ್ವಿಯಾಯ್ತು ಭಾರತದ ಕ್ಷಿಪಣಿ ಪರೀಕ್ಷೆ

ನೆಲದಿಂದ ಆಕಾಶದ ಗುರಿ ಹೊಂದಿರುವ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆಯನ್ನು ಗುರುವಾರ ಯಶಸ್ವಿಯಾಗಿ ನಡೆಸಲಾಯ್ತು. ಒಡಿಶಾದ ಬಾಲ್ಸೋರ್ ನ ಚಂದಿಪುರ ಪರೀಕ್ಷಾ ಕೇಂದ್ರದಿಂದ ಈ ಪರೀಕ್ಷೆ ನಡೆಸಲಾಗಿದ್ದು, ಮೊದಲ ಬಾರಿಗೆ ಭಾರತದಲ್ಲಿ ಈ ಪರೀಕ್ಷೆ ನಡೆದಿದೆ. ಮುಂದಿನ ಕೆಲವು ದಿನಗಳಲ್ಲಿ ಮತ್ತಷ್ಟು ಪರೀಕ್ಷೆಗಳು ನಡೆಯಲಿದ್ದು ನಂತರ ಈ ವ್ಯವಸ್ಥೆ ಭಾರತೀಯ ವಾಯು ಪಡೆಯನ್ನು ಸೇರಲಿದೆ. ಇಸ್ರೆಲ್ ಹಾಗೂ ಭಾರತದ ಡಿ ಆರ್ ಡಿಒ ಸಹಯೋಗದಲ್ಲಿ ಈ ಕ್ಷಿಪಣಿ ರೂಪುಗೊಂಡಿದೆ. ಒಟ್ಟು 400 ವಿಜ್ಞಾನಿಗಳು (100 ಇಸ್ರೆಲ್) ಕಳೆದ 7 ವರ್ಷದಿಂದ ಈ ವ್ಯವಸ್ಥೆಗಾಗಿ ಕೆಲಸ ಮಾಡಿದ್ದರು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿಸಾಲುಗಳು..

  • ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ಗುರುವಾರ ಉಗ್ರರ ದಾಳಿ ನಡೆದಿದೆ. ಈ ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಈ ಕೃತ್ಯದ ಹೊಣೆಗಾರಿಕೆಯನ್ನು ತಾಲಿಬಾನ್ ಸಂಘಟನೆ ಹೊತ್ತುಕೊಂಡಿದೆ.
  • ವಿಶ್ವ ಬ್ಯಾಂಕ್ ಮುಖ್ಯಸ್ಥ ಜಿಮ್ ಯಂಗ್ ಕಿಮ್ ಭಾರತಕ್ಕೆ ಆಗಮಿಸಿದ್ದು, ಭಾರತದಲ್ಲಿ ಅತಿ ದೊಡ್ಡ ಸೌರವಿದ್ಯುತ್ ಘಟಕ ಸ್ಥಾಪನೆಗೆ 1 ಬಿಲಿಯನ್ ಡಾಲರ್ (₹ 6750 ಕೋಟಿ) ಸಾಲ ನೀಡುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ 2020 ರ ವೇಳೆಗೆ ಭಾರತ 30 ಪಟ್ಟು ಅಂದರೆ, ಸುಮಾರು 100 ಗಿಗಾವಾಟ್ಸ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ. ಈ ಭೇಟಿಯ ವೇಳೆ ಕಿಮ್, ಭಾರತ ಪ್ರಧಾನಿ ಅವರನ್ನು ಶ್ಲಾಘಿಸಿದರು. ಅವರು ಹೇಳಿದಿಷ್ಟು: ‘ಭಾರತದ ಬೆಳವಣಿಗೆ ನೋಡಿ ಸಂತೋಷವಾಗಿದೆ. ಪ್ರಧಾನಿ ಮೋದಿ ಹಾಗೂ ಅವರ ಸಚಿವ ಸಂಪುಟ ಅಗತ್ಯ ಕ್ಷೇತ್ರಗಳತ್ತ ಗಮನ ಹರಿಸುತ್ತಿದೆ. ಭಾರತ ಶೇ.7.6 ರಷ್ಟು ಬೆಳವಣಿಗೆ ಹೊಂದುವ ಮೂಲಕ ವಿಶ್ವ ಆರ್ಥಿಕತೆಯ ಉಜ್ವಲ ಸ್ಥಳವಾಗಿ ಬಿಂಬಿತವಾಗಿದೆ.’

Leave a Reply