ಮತ್ತೆ ನಿರೀಕ್ಷೆ ಹುಟ್ಟಿಸ್ತು ನೀರಜ್ ಪಾಂಡೆ ಮತ್ತು ಅಕ್ಷಯ್ ಕುಮಾರ್ ಕಾಂಬಿನೇಷನ್, ಇದಕ್ಕೆ ಸಾಕ್ಷಿದೆ ‘ರುಸ್ತುಮ್’ ಟ್ರೇಲರ್

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ ‘ರುಸ್ತುಮ್’ ಟ್ರೇಲರ್ ಬಿಡುಗಡೆಯಾಗಿದೆ. ನೈಜ ಘಟನೆ ಆಧಾರಿತ ಈ ಚಿತ್ರದ ಟ್ರೇಲರ್ ಅಭಿಮಾನಿಗಳಲ್ಲಿನ ನಿರೀಕ್ಷೆ ಹೆಚ್ಚಿಸುತ್ತಿದೆ.

1959 ರಲ್ಲಿ ಬಾಂಬೆಯಲ್ಲಿ ನಡೆದ ಕೊಲೆ ಪ್ರಕರಣ ಹಾಗೂ ಭಾರತದ ನೌಕಾ ಸೇನೆಯ ಮಾಜಿ ಕಮಾಂಡರ್ ಕೆ.ಎಂ. ನಾನಾವತಿ ಅವರ ಜೀವನ ಆಧರಿಸಿ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದ ನಿರ್ಮಾಪಕ ನೀರಜ್ ಪಾಂಡೆ ಮತ್ತೊಮ್ಮೆ ನೈಜ ಘಟನೆ ಮೇಲೆ ಚಿತ್ರ ನಿರ್ಮಿಸಿದ್ದಾರೆ. ‘ಎ ವೆಡ್ನೆಸ್ ಡೇ’ ಚಿತ್ರದಿಂದ ನೀರಜ್ ಪಾಂಡೆ ಅವರ ಚಿತ್ರಗಳು ವಿಷಯಾಧಾರಿತವಾಗಿ ಮೂಡಿಬಂದಿದ್ದು, ಅಂತಹುದೇ ಸಾಲಿಗೆ ರುಸ್ತುಮ್ ಸೇರ್ಪಡೆಯಾಗಿದೆ.

ನಿರ್ದೇಶಕ ನೀರಜ್ ಪಾಂಡೆಯವರ ಫಿಲ್ಮೊಗ್ರಫಿ ಗಮನಿಸಿದ್ದೇ ಆದರೆ, ನಾಯಕ- ನಾಯಕಿ ಪ್ರಣಯಗಾಥೆ ಸೂತ್ರದ ಆಚೆಗೆ ಗಂಭೀರ ವಿಷಯಗಳನ್ನು ಆಸಕ್ತಿದಾಯಕವಾಗಿ ಹೇಳುವ ಅವರ ಛಾಪು ಅರಿವಾಗುತ್ತದೆ. ಭಯೋತ್ಪಾದನೆ ಕುರಿತು ಥ್ರಿಲ್ಲಿಂಗ್ ಕಾಮೆಂಟರಿಯಂತಿರುವ ‘ಅ ವೆಡ್ನೆಸ್ ಡೆ’ ಯಾರಿಗೆ ಗೊತ್ತಿಲ್ಲ? ಸೆಲ್ಫೋನ್ ಪೂರ್ವ ಜಮಾನಾದಲ್ಲಿ ಸಿಬಿಐ ಹೆಸರು ಹೇಳಿಕೊಂಡು ರಾಜಕಾರಣಿಗಳಿಂದ ಹಣ ಕಕ್ಕಿಸಿಕೊಂಡವರ ಬಗೆಗಿನ ವರದಿಗಳನ್ನೇ ಆಧರಿಸಿ ಸುತ್ತಿರುವ ಆಸಕ್ತಿಕರ ಕಥಾನಕ ‘ಸ್ಪೆಷಲ್ ಚಬ್ಬೀಸ್’, ಭಾರತದ ಗುಪ್ತಚರ ಇಲಾಖೆ ಬಗ್ಗೆ ಅಭಿಮಾನ ಮೂಡಿಸುವ ‘ಬೇಬಿ’… ಹೀಗೆ ನೀರಜ್ ಪಾಂಡೆ ನಿರ್ದೇಶನದ ಹಾದಿಯೇ ಭಿನ್ನ.

ಈಗ ‘ಸ್ಪೆಷಲ್ 26’ ಮತ್ತು ಬೇಬಿ ಚಿತ್ರಗಳ ಬಳಿಕ ಮತ್ತೆ ಪಾಂಡೆ ಹಾಗೂ ಅಕ್ಷಯ್ ಒಂದಾಗಿರುವುದು ರುಸ್ತುಮ್ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.

ಚಿತ್ರದಲ್ಲಿ ನೌಕಾಪಡೆ ಕಮಾಂಡರ್ ರುಸ್ತುಮ್ ಪರ್ವಿ ಎಂದು ಪಾತ್ರಕ್ಕೆ ಕಾಲ್ಪನಿಕ ಹೆಸರಿಡಲಾಗಿದೆ. ರುಸ್ತುಮ್ ಪರ್ವಿ ಆನಂದದ ಜೀವನ ನಡೆಸುತ್ತಿರುವಾಗ ತನ್ನ ಹೆಂಡತಿ ಹಾಗೂ ಆಕೆಯ ಪ್ರಿಯಕರನ ಜತೆಗಿನ ಸಂಬಂಧವನ್ನು ತಿಳಿಯುತ್ತಾನೆ. ನಂತರ ಆ ಪ್ರಿಯಕರನ ಕೊಲೆ ಹಾಗೂ ಪ್ರಕರಣ ಹೇಗೆಲ್ಲಾ ಸಾಗುತ್ತದೆ ಎಂಬುದು ಚಿತ್ರದ ಮುಖ್ಯ ತಿರುಳು.

ಚಿತ್ರದ ಟ್ರೈಲರ್ ಇಲ್ಲಿದೆ..

Leave a Reply