ವಿಧಾನ ಮಂಡಲ ನೂತನ ಸದಸ್ಯರ ಅಗಾಧ ಆಲಸ್ಯ ಕಂಡು ತಬ್ಬಿಬ್ಬಾದ್ರು ಮುಖ್ಯಮಂತ್ರಿ ಸಿದ್ದರಾಮಯ್ಯ!

 

ಡಿಜಿಟಲ್ ಕನ್ನಡ ಟೀಮ್:

ವಿಧಾನಸಭೆ ಹಾಗೂ ವಿಧಾನ ಪರಿಷತ್ತಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರ ಅಗಾಧ ಆಲಸ್ಯ ಕಂಡು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನಯವರೇ ತಬ್ಬಿಬ್ಬಾದ ಈ ಪ್ರಸಂಗ ನೋಡಿ.

ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದ 36 ಹಾಗೂ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ಆಯ್ಕೆಯಾದ 37 ಅಂದರೆ ಒಟ್ಟಾರೆ 73 ನೂತನ ಸದಸ್ಯರಿಗೆ ವಿಕಾಸಸೌಧದಲ್ಲಿ ಗುರುವಾರ ಬೆಳಗ್ಗೆ 10.30 ಕ್ಕೆ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಈ ಎಲ್ಲ ಸದಸ್ಯರಿಗೂ ಸಂಬಂಧಪಟ್ಟ ಸಚಿವಾಲಯದಿಂದ ವೈಯಕ್ತಿಕ ಆಹ್ವಾನ ಪತ್ರಿಕೆ, ಎಸ್ಸೆಮೆಸ್ ಸಂದೇಶ, ಕೊನೆಗೆ ಫೋನ್ ಕರೆಗಳೂ ಹೋಗಿದ್ದವು.

ಶಿಬಿರ ಉದ್ಘಾಟಿಸಿ ಭಾಷಣ ಮಾಡಬೇಕಿದ್ದ ಸಿಎಂ ಕರೆಕ್ಟ್ ಟೈಮಿಗೆ ಬಂದು ನೋಡ್ತಾರೆ ಅಲ್ಲಿದ್ದದ್ದು ಕೇವಲ ನಾಲ್ಕು ಮಂದಿ ಸದಸ್ಯರು ಮಾತ್ರ! ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ರಿಜ್ವಾನ್ ಅರ್ಶದ್ ಹಾಗೂ ಪ್ರದೀಪ್ ಶೆಟ್ಟರ್ ಮಾತ್ರ. ಉಳಿದ 69 ಮಂದಿ ನಾಪತ್ತೆ. ಮುಖ ಕಿವುಚಿಹೋದ ಸಿಎಂ, ‘ಏನ್ರೀ ಇದು, ಸಿಎಂ ಆಗಿ ನಾನೇ ಸರಿಯಾದ ಸಮಯಕ್ಕೆ ಬಂದಿದ್ದೀನಿ. ಇವರಿಗೇನ್ರೀ ಆಗಿರೋದು? ಜನಪ್ರತಿನಿಧಿಗಳು, ಅದರಲ್ಲೂ ಹೊಸದಾಗಿ ಆಯ್ಕೆ ಆಗಿರೋರೇ ಹಿಂಗೆ ಮಾಡಿದರೆ ಹೆಂಗ್ರೀ? ಸೀರಿಯೆಸ್ ನೆಸ್ ಬೇಡವೇನ್ರೀ’ ಅಂತ ಅಧಿಕಾರಿಗಳತ್ತ ತಿರುಗಿ ಕೊಂಚ ಕೋಪದಿಂದಲೇ ಪ್ರಶ್ನೆ ಮಾಡಿದ್ರು. ಪಾಪ, ಅವರೇನು ಹೇಳಿಯಾರು, ಮೇಲೆ-ಕೆಳಗೆ ನೋಡುತ್ತಾ ಹಿ..ಹಿ..ಹೀ.. ಅಂತ ಹಲ್ಲು ಗಿಂಜಿದರು. ಸಿಎಂ ಇಲ್ಲಿ ಭಾಷಣ ಮುಗಿಸಿ ಹೊಸಕೋಟೆಯಲ್ಲಿ 11.30 ಕ್ಕೆ ಡೇರಿ ಮತ್ತು ಉತ್ಪನ್ನ ಘಟಕದ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೇನು ಮಾಡುವುದು, ತರಬೇತಿ ಪಡೆಯಬೇಕಾದ ಸದಸ್ಯರೇ ಬಂದಿಲ್ಲವಲ್ಲ.

ಸರಿ, ಬಂದಿದ್ದ ನಾಲ್ವರು ಸದಸ್ಯರ ಜತೆಗೆ ತಿಂಡಿ ತಿನ್ನುವಷ್ಟರಲ್ಲಿ ವಿಧಾನ ಪರಿಷತ್ ಸಚಿವಾಲಯದ ಅಧಿಕಾರಿಗಳು ಮಳೆಗಾಳಿ ವಾತಾವರಣದಲ್ಲೂ ಬೆವರು ಒರೆಸಿಕೊಂಡು ಸದಸ್ಯರಿಗೆ ಫೋನ್ ಕಾಲ್ ಮೇಲೆ ಕಾಲ್ ಮಾಡಿದರು. ತತ್ಪರಿಣಾವಾಗಿ ಅರ್ಧ ಗಂಟೆ ಕಳೆಯೋದರೊಳಗೆ ಇನ್ನೆಂಟು ಮಂದಿ ಎದುಸಿರು ಬಿಡುತ್ತಾ ಬಂದು ಸಭಾಂಗಣ ಸೇರಿಕೊಂಡರು. ಮಾಮೂಲಿನಂತೆ ‘ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್’ ಕತೆ ಅವರ ವಿಳಂಬಗಾಮನಕ್ಕೆ ಉತ್ತರವಾಗಿತ್ತು.

ಇದರ ಹಣೆಬರಹ ಇಷ್ಟೇ ಎಂದುಕೊಂಡ ಸಿಎಂ ಅಲ್ಲಿದ್ದವರಿಗಷ್ಟೇ ಪಾಠ ಮಾಡಿದರು. ಸಮಯ ಪರಿಪಾಲನೆ ಬಗ್ಗೆ ಕಿವಿಮಾತು ಹೇಳಿದರು. ‘ಬದುಕಿನಲ್ಲಿ ಸಮಯ ಬಹಳ ಮುಖ್ಯ. ರಾಜಕಾರಣಿಗಳು ಅದರಲ್ಲೂ ಜನಪ್ರತಿನಿಧಿಗಳು ಅದನ್ನು ಪಾಲಿಸದೇ ಹೋದರೆ ರಾಜಕೀಯ ಭವಿಷ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ’ ಎಂದೆಲ್ಲ ಬುದ್ದಿ ಹೇಳಿದರು. ಆದರೆ ಬಹಳ ಮುಖ್ಯವಾಗಿ ಇದನ್ನು ಆಲಿಸಬೇಕಾದ ಸದಸ್ಯರು ಅಲ್ಲಿರಲಿಲ್ಲ ಅಷ್ಟೇ.

ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಭಾಷಣ ಸರದಿ ಬಿಟ್ಟುಕೊಟ್ಟು ಹೊಸಕೋಟೆ ಡೇರಿ ಕಡೆ ಕಾರು ಹತ್ತಿದ ಸಿದ್ದರಾಮಯ್ಯನವರಿಗೆ ಅತ್ತ ಕಡೆಯಿಂದಲೂ ಬಂದ ಮಾಹಿತಿ ‘ಇನ್ನೂ ಜನ ಸೇರಿಲ್ಲ’ ಎಂಬುದೇ ಆಗಿತ್ತು!

ಅಂದಹಾಗೆ ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ತರಬೇತಿ ನೀಡುವುದು ವಾಡಿಕೆ. ಅವರಿಗೆ ಸಂವಿಧಾನದ ಪ್ರತಿ, ಸದನ ನಿಯಮಗಳು ಮತ್ತು ನಡಾವಳಿಗಳ ಬಗ್ಗೆ ತಿಳುವಳಿಕೆ ಪುಸ್ತಿಕೆಯನ್ನೂ ನೀಡಲಾಗುತ್ತದೆ. ಆದರೆ ತರಬೇತಿ ಶಿಬಿರದ ಬಗ್ಗೆಯೇ ಇಂಥ ಅಸಡ್ಡೆ ಇಟ್ಟುಕೊಂಡಿರೋ ಸದಸ್ಯರಿಂದ ಸದನದಲ್ಲಿ ಉತ್ಕೃಷ್ಟ ಕಲಾಪ ನಿರೀಕ್ಷೆ ಮಾಡೋದು ಹೇಗೆ ಅನ್ನೋದೇ ಮುಖ್ಯ ಪ್ರಶ್ನೆ.

Leave a Reply