ದಿಕ್ಕೆಟ್ಟ ಮಗು ಕಂಡರೆ ನಾವೇನ್ ಮಾಡ್ತೀವಿ? ಅಂತಃಸಾಕ್ಷಿಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾಳೆ ಜಾರ್ಜಿಯಾದ ಈ ಪುಟ್ಟಿ!

ಡಿಜಿಟಲ್ ಕನ್ನಡ ಟೀಮ್:

ನಮ್ಮ ನಡುವೆಯೇ ಬಾಲ್ಯ ಹೇಗೆ ಮುರುಟುತ್ತಿದೆ, ಮಕ್ಕಳು ಹೇಗೆ ಭವಿಷ್ಯ ವಂಚಿತರಾಗುತ್ತಿದ್ದಾರೆ ಎಂಬುದನ್ನು ತಿಳಿಯಪಡಿಸುವುದಕ್ಕೆ ಯುನಿಸೆಫ್ (ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ) ಸಾಮಾಜಿಕ ಪ್ರಯೋಗವೊಂದನ್ನು ಮಾಡಿತು. ಆರು ವರ್ಷದ ಅನ್ನಾವೊ ಎಂಬ ಬಾಲ ಕಲಾವಿದೆಯನ್ನು ಜಾರ್ಜಿಯಾ ಪಟ್ಟಣದ ಬೀದಿಯಲ್ಲಿ ಹಾಗೂ ಉಪಾಹರಗೃಹಗಳಲ್ಲಿ ನಿಲ್ಲಿಸಿ, ಸಂಚರಿಸಿ ಅದರ ರಹಸ್ಯ ವಿಡಿಯೋ ದಾಖಲಿಸಿಕೊಂಡಿತು.

ಹೀಗೆ ಮಾಡುವಾಗ ಅದು ಮೊದಲಿಗೆ ಆಕೆಯನ್ನು ಉತ್ತಮ ಧಿರಿಸು- ಮೇಕಪ್ಪುಗಳಲ್ಲಿರಿಸಿದರೆ, ನಂತರ ಮಣ್ಣು ಮೆತ್ತಿದ ಧಿರಿಸು, ಬಡತನ ಸೂಸುವ ಮೇಕಪ್ಪಿನಲ್ಲಿ ಪ್ರಸ್ತುತಪಡಿಸಿತು. ಉತ್ತಮ ಧಿರಿಸು ತೊಟ್ಟಾಗ ಈ ಪುಟ್ಟಿಯ ಬಳಿ ಸಾರಿದವರು ಹೆಸರು ವಿಚಾರಿಸಿದರು. ಕಳೆದುಹೋಗಿರುವೆಯಾ ಅಂತೆಲ್ಲ ಕಾಳಜಿ ತೋರಿದರು. ರೆಸ್ಟೊರೆಂಟ್ ಹೊಕ್ಕಾಗಲೂ ಮುಗುಳ್ನಗೆ ಸೂಸಿದರು.

ಆದರೆ…

ವಸ್ತ್ರ ಮತ್ತು ಬಣ್ಣ ಬದಲಾಗುತ್ತಲೇ ಇದೇ ಜಗತ್ತು ಆಕೆಯನ್ನು ತಿರಸ್ಕರಿಸಿತು. ಸಂಬಂಧವಿರದಂತೆ ದಾಟಿಕೊಂಡು ಹೋಯಿತು. ರೆಸ್ಟೊರೆಂಟ್ ನಲ್ಲಿ ಈಕೆಯ ಪ್ರವೇಶವಾಗುತ್ತಿದ್ದಂತೆ ಎಲ್ಲರೂ ತಮ್ಮ ಬ್ಯಾಗುಗಳನ್ನು ಭದ್ರಪಡಿಸಿಕೊಂಡರು. ಈಕೆ ಸನಿಹವಾಗುತ್ತಿದ್ದಂತೆ ಮುಖ ಸಿಂಡರಿಸಿದರು.

ಈ ಪ್ರಯೋಗವನ್ನು ಯುನಿಸೆಫ್ ಅರ್ಧದಲ್ಲೇ ನಿಲ್ಲಿಸಬೇಕಾಯಿತು….

‘ಇವಳನ್ನು ಕಳುಹಿಸಿ ಹೊರಗೆ’ ಅಂತ ವ್ಯಕ್ತಿಯೊಬ್ಬ ಹೇಳಿದ ಧಾಟಿಗೆ ಆ ಪಾತ್ರಧಾರಿ ಪುಟ್ಟಿ ಅಳುತ್ತ ಹೊರಬಂದುಬಿಟ್ಟಳು. ಜಗತ್ತಿನ ಅಸಡ್ಡೆಯೆಲ್ಲವೂ ಘನೀಭವಿಸಿದಂತಿರುವ ಆ ದೃಶ್ಯ ಕರುಳು ಕಿವುಚುತ್ತದೆ.

ಹೀಗೆಯೇ ಲಕ್ಷಾಂತರ ಮಕ್ಕಳು ಹೊರತಳ್ಳಿಸಿಕೊಳ್ಳುತ್ತಿದ್ದಾರೆ, ಅವರ ಬಗ್ಗೆ ಯೋಚಿಸಿ ಎಂಬ ಸಂದೇಶ ನೀಡುತ್ತದೆ ವಿಡಿಯೋ.

ಇಷ್ಟಾಗಿಯೂ….

ಕಾಮೆಂಟ್ ವಿಭಾಗದಲ್ಲಿ ನೋಡುಗರೊಬ್ಬರು ದಾಖಲಿಸಿರುವ ಅಭಿಪ್ರಾಯವೂ ಗಮನಾರ್ಹವೇ. ‘ರೆಸ್ಟೊರೆಂಟ್ ನಿಂದ ಹಾಗೆ ಹೊರತಳ್ಳಿದ್ದು ಅಮಾನವೀಯ. ಆದರೆ ನಾವೇ ಇಂಥ ಮಗುವನ್ನು ಒಳ್ಳೆ ಧಿರಿಸಿನಲ್ಲಿ ನೋಡಿದಾಗ ಯಾರದೋ ಮಗು ಕೈಬಿಟ್ಟುಹೋಗಿದ್ದಿರಬಹುದು ಸಹಕರಿಸೋಣ ಎನ್ನಿಸುತ್ತದೆ. ಆದರೆ ಕೆದರಿದ ವಸ್ತ್ರದ ಮಗು ಅನಾಥವೆಂದೆನಿಸಿ ದುಡ್ಡನ್ನೋ ಆಹಾರವನ್ನೋ ಕೊಡಬಹುದೇ ಹೊರತು ಮತ್ತೇನು ಮಾಡಬಲ್ಲೆವೆಂಬ ಅಸಹಾಯಕತೆ ಕಾಡುತ್ತದೆ…’ ಎಂದಿರುವುದೂ ವಾಸ್ತವವೇ.

ಆದರೂ ನಮ್ಮ ಸಂವೇದನೆ ತಾಕುವ ಈ ವಿಡಿಯೋ ವೀಕ್ಷಣೆಗೆ ಮೂರು ನಿಮಿಷ ಎತ್ತಿಡಬೇಕು.

4 COMMENTS

Leave a Reply