ಸಂವೇದನೆಗಳೇ ಸತ್ತು ಬಿದ್ದಿರುವಾಗ ಅತ್ಯಾಚಾರ ಮುಕ್ತ ಸಮಾಜದ ಕನಸು ಎಲ್ಲಿಯದು?

ಚೈತನ್ಯ ಹೆಗಡೆ

ಇದನ್ನು ರೇಪ್ ಟೂರಿಸಂ ಎಂಬ ಕೆಟ್ಟ ಶಬ್ದದಲ್ಲಿ ಕರೆಯೋಣವೇ?

ಅತ್ಯಾಚಾರ ಸಂತ್ರಸ್ತೆಯನ್ನು ಪೋಲೀಸ್ ಠಾಣೆಯಲ್ಲಿ ಸಂದರ್ಶಿಸಿದ ರಾಜಸ್ಥಾನ ಮಹಿಳಾ ಆಯೋಗದ ಸದಸ್ಯೆ, ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಾಳೆ! ಅದು ಹೇಗೋ ಹೊರಬಿದ್ದು ವೈರಲ್ ಆಗಿದೆ. ಈ ಬಗ್ಗೆ ಆ ಸದಸ್ಯೆಗೆ ಯಾವ ಪಶ್ಚಾತ್ತಾಪವೂ ಇಲ್ಲ. ‘ಸೆಲ್ಫಿ ತೆಗೆದುಕೊಂಡಿದ್ದು ಕರ್ತವ್ಯದ ಒಂದು ಭಾಗ. ಇದನ್ನು ಹೀಗೆ ಸೋರಿಕೆ ಮಾಡಿದವರು ಯಾರು ಅಂತ ನೋಡಬೇಕು. ನಾನೇಕೆ ಕ್ಷಮೆ ಕೇಳಲಿ?’ ಇದು ಆಯೋಗದ ಘನಂದಾರಿ ಸದಸ್ಯೆ ಸೆಲ್ಫಿ ಪ್ರಿಯೆ ಸೌಮ್ಯ ಗುಜ್ಜಾರ್ ನಿಲುವು. ಈ ಸೆಲ್ಫಿಯಲ್ಲಿ ರಾಜಸ್ಥಾನ ವಿಭಾಗದ ಅಧ್ಯಕ್ಷೆಯೂ ಹಣಕಿದ್ದಾರೆ. ‘ಆಯೋಗದ ಸದಸ್ಯೆ ಸೆಲ್ಫಿ ತೆಗೆಯುತ್ತಿರೋದು ಗೊತ್ತೇ ಆಗ್ಲಿಲ್ಲ. ನಾನು ಇಂಥದ್ದಕ್ಕೆಲ್ಲ ಅವಕಾಶ ಮಾಡಿಕೊಡ್ತಿರಲಿಲ್ಲ. ಅವರಿಂದ ಲಿಖಿತ ವಿವರಣೆ ಕೇಳಿದ್ದೇನೆ’ ಅನ್ನೋದು ಅಧ್ಯಕ್ಷರ ವಿವರಣೆ.

ಇದ್ದಿದ್ದರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ಈ ಬಗ್ಗೆ ಸ್ಪಷ್ಟ ನಿಲುವು ತಾಳಿದರಲ್ಲದೇ, ‘ಸದಸ್ಯೆಯಿಂದ ವಿವರಣೆ ಕೇಳಿದ್ದೇನೆ ಹಾಗೂ ಈ ಘಟನೆ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ. ಆದರೆ ಪ್ರಮಾದವೆಸಗಿದ ಸೌಮ್ಯ ಗುಜ್ಜಾರ್ ಮಾತ್ರ, ‘ಮೇಲ್ಮಟ್ಟದಿಂದ ಸಂದೇಶ ಬಂದಿದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ’ ಅಂತ ದಿನಾಂತ್ಯದಲ್ಲಿ ಹೇಳಿದ್ದಾರೆ. ತಾವೆಸಗಿದ ಸಂವೇದನಾರಹಿತ ಕೃತ್ಯಕ್ಕೆ ಎಳ್ಳಷ್ಟೂ ಅಪರಾಧಿ ಪ್ರಜ್ಞೆ ಅವರಲ್ಲಿಲ್ಲ.

ಈ ಸೆಲ್ಫಿ ಟೂರ್ ಅದೆಷ್ಟು ಕ್ರೂರವಾದದ್ದು ಎಂದು ತಿಳಿದುಕೊಳ್ಳುವುದಕ್ಕೆ ಆಳ್ವಾರ್ ನ 30ರ ಹರೆಯದ ಆ ಮಹಿಳೆ ಅನುಭವಿಸಿದ್ದ ಭೀಕರತೆ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. 51 ಸಾವಿರ ರುಪಾಯಿಗಳ ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಆಕೆಯ ಗಂಡ ತನ್ನಿಬ್ಬರು ಸೋದರರೊಂದಿಗೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಮೂವರು ಸೇರಿ ಆಕೆಯ ತೋಳಿನ ಮೇಲೆ ನಿಂದನಾತ್ಮಕ ಹಚ್ಚೆ ಹಾಕಿಸಿದ್ದಾರೆ. ಇಷ್ಟೆಲ್ಲ ಆದ ಮೇಲೆ ಭಾರತೀಯ ಕಾನೂನಿನಲ್ಲಿ ‘ದಾಂಪತ್ಯದಲ್ಲಿನ ಅತ್ಯಾಚಾರ’ಕ್ಕೆ ಕಾಯ್ದೆಗಳಿಲ್ಲದ ಕಾರಣ ಮುಚ್ಚಿಹೋಗಬಹುದಾಗಿದ್ದ ಪ್ರಕರಣವು ಪತಿ ಮಹಾಶಯನ ಸಹೋದರರ ಭಾಗಿದಾರಿಕೆಯಿಂದಾಗಿ ಎಫ್ ಐ ಆರ್ ದಾಖಲೆಯಾಗಿದೆ. ಇಂಥ ಸಂತ್ರಸ್ತೆಯನ್ನು ಮಾತನಾಡಿಸಲು ಹೋದಾಗ ಇರಬೇಕಾದ ಸಂವೇದನೆ ಏನು? ಸೆಲ್ಫಿ ವೈಭೋಗದಲ್ಲಿ ಸೌಮ್ಯ ಗುಜ್ಜಾರ್ ಹಲ್ಕಿಸಿಯುತ್ತಿರುವ ಬಗೆಯೇನು?

ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ಜನರೆಲ್ಲ ಸಿಡಿದೆದ್ದ ರೀತಿ ನೋಡಿದರೆ, ಅತ್ಯಾಚಾರವನ್ನು ಗಂಭೀರವಾಗಿ ಗ್ರಹಿಸುವ ಮನೋಸ್ಥಿತಿ ಸಮಾಜದಲ್ಲಿ ನೆಲೆಯಾಯಿತಲ್ಲ ಎಂಬ ಸಮಾಧಾನ ಮೂಡಿತ್ತು. ಕೆಲವೇ ದಿನಗಳಲ್ಲಿ, ಅಂಥ ಸುಧಾರಣೆಗಳೇನೂ ಆಗಿಲ್ಲ ಎಂಬ ಹತಾಶೆ ಕಾಡುತ್ತಿದೆ. ಅತ್ಯಾಚಾರವನ್ನು ಪ್ರತಿಬಂಧಿಸುವ ಕಾಯ್ದೆ ಕಟ್ಟಳೆಗಳ ಮಾತು ಆಮೇಲಿನದು. ಆದರೆ ಮಹಿಳಾ ಸುರಕ್ಷತೆಗೆ ಸಮಾಜ ಸನ್ನದ್ಧವೇ ಎಂಬ ಪ್ರಶ್ನೆಗೆ ಹೌದೆಂದು ಉತ್ತರಿಸಲು ಧೈರ್ಯವಾಗುವುದಿಲ್ಲ.

ಶುಕ್ರವಾರ ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ಹಾಡಹಗಲೇ ಅಪರಿಚಿತ ಯುವಕನೊಬ್ಬನಿಂದ ಕೊಲೆಯಾಗಿಹೋದ  ಇನ್ಫೊಸಿಸ್ ಉದ್ಯೋಗಿ 24ರ ಹರೆಯದ ಸ್ವಾತಿ ಕತೆಯನ್ನೇ ನೋಡಿ. ಜನರ ನಡುವೆ ಆತ ಕೊಂದುಹೋದ ಎರಡು ತಾಸುಗಳವರೆಗೂ ಆಕೆಯ ದೇಹ ಅಲ್ಲೇ ಬಿದ್ದಿತ್ತು. ಎಲ್ಲರೂ ತಮ್ಮ ತಮ್ಮ ರೈಲು ಹಿಡಿದು ಜಾಗ ಖಾಲಿ ಮಾಡಿದರಷ್ಟೆ.

ಫೇಸ್ಬುಕ್ನಲ್ಲಿ ತಿರುಚಿದ ಚಿತ್ರ ಹಾಕಿದ ಮಾತ್ರಕ್ಕೆ ನಿನ್ನನ್ನು ಯಾರೂ ಅವಮಾನಿಸಲಾರರು ಎಂಬ ವಿಶ್ವಾಸವೊಂದನ್ನು ಸುತ್ತಲಿನ ಸಮಾಜ ಕಟ್ಟಿಕೊಟ್ಟಿದ್ದರೆ ವಿನುಪ್ರಿಯ ಎಂಬ ಯುವತಿ ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ. ನಗ್ನದೇಹಕ್ಕೆ ಈಕೆಯ ಮುಖ ಅಂಟಿಸಿ ಫೇಸ್ಬುಕ್ನಲ್ಲಿ ತೇಲಿಬಿಟ್ಟಿರುವ ಹುಡುಗರ ಕೃತ್ಯ ಮಾನಸಿಕ ಅತ್ಯಾಚಾರವಲ್ಲದೇ ಮತ್ತೇನಲ್ಲ ಎಂಬ ಸಂವೇದನೆ ಪೋಲೀಸರಲ್ಲಿದ್ದಿದ್ದರೆ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಅವರು ವಿಳಂಬಿಸುತ್ತಿರಲಿಲ್ಲ.

ಹೀಗಿಲ್ಲಿ ಸಂವೇದನಾಶೂನ್ಯ ಸೆಲ್ಫಿ ವೈಭೋಗ ಮೆರೆಯುತ್ತಿರುವ ಹೊತ್ತಿಗೆ ಬಿಹಾರದ 21 ವರ್ಷದ ಹೆಣ್ಣೊಬ್ಬಳು ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಆಕೆಯ ಮೇಲಾಗಿರುವ ಅತ್ಯಾಚಾರ ನಿರ್ಭಯ ಪ್ರಕರಣದ ಎಲ್ಲ ಕ್ರೌರ್ಯಗಳನ್ನೂ ಒಳಗೊಂಡಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಜನನಾಂಗಕ್ಕೆ ಪಿಸ್ತೂಲು, ಕಟ್ಟಗೆ ತುರುಕಿ ನಡುರಸ್ತೆಯಲ್ಲಿ ನಗ್ನವಾಗಿ ಬಿಟ್ಟುಹೋಗಿದ್ದಾರೆ ಅತ್ಯಾಚಾರಿಗಳು. ಹೇಗೆಂದರೂ ಸತ್ತಳೆಂದುಕೊಂಡಿದ್ದರು ವಿಕೃತರು.

ಇವರ ಈ ಮಟ್ಟದ ವಿಕೃತಿಗೆ ಕುಟುಂಬದ ಬೆಂಬಲ, ಸಂತ್ರಸ್ತೆ ಪರ ನಿಲ್ಲದ ಸಮಾಜದ ಧೃತಿಗೇಡಿ ನೈತಿಕ ರಹಿತ ಸ್ಥಿತಿಯೇ ಕಾರಣ ಅನ್ನೋದು ಗಮನಿಸಬೇಕಾದ ಅಂಶ. ಎಲ್ಲ ಶುರುವಾಗಿದ್ದು ಸಮೀಉಲ್ಲಾ ಎಂಬಾತ ಈಕೆಯ ಬೆನ್ನು ಬಿದ್ದು, ಶೌಚಕ್ಕೆ ಹೋಗಿದ್ದ ಸಂದರ್ಭದಲ್ಲಿ ಮೊಬೈಲ್ ಫೋನ್ ಚಿತ್ರೀಕರಣ ನಡೆಸಿ ಅದನ್ನಿಟ್ಟುಕೊಂಡು ಈಕೆಯನ್ನು ಬ್ಲಾಕ್ಮೇಲ್ ಮಾಡಲು ತೊಡಗಿದಾಗ. ಆದರೆ ಇದಕ್ಕೆ ಹೆದರದ ಯುವತಿ ಮತ್ತಾಕೆಯ ಅಮ್ಮ ಈ ಸಮೀಉಲ್ಲಾನ ಮನೆಗೆ ಹೋಗಿ ಈತನ ಪುಂಡಾಟಿಕೆಯನ್ನು ಮನೆಯವರ ಗಮನಕ್ಕೆ ತರುತ್ತಾರೆ. ಎಂಥ ಕ್ರೌರ್ಯ ನೋಡಿ. ತಮ್ಮದೇ ಮನೆಯ ಹೆಣ್ಣುಮಗಳಿಗೆ ಇಂಥ ಸ್ಥಿತಿ ಬಂದಿದ್ದರೇನು ಗತಿ ಅಂಥ ಒಮ್ಮೆ ಯೋಚಿಸಲಾಗದ ಆ ಧೂರ್ತ ಕುಟುಂಬ ಅಮ್ಮ- ಮಗಳನ್ನು ಬಯ್ದು ಕಳುಹಿಸುತ್ತದೆ! ಪೋಲೀಸರ ಬಳಿ ಹೋದರೆ, ‘ಇದೆಲ್ಲ ಇದ್ದದ್ದೇ’ ಎಂಬ ಧಾಟಿಯಲ್ಲಿ ಅವರು ದೂರನ್ನೇ ದಾಖಲಿಸುವುದಿಲ್ಲ. ಇವೆಲ್ಲವುಗಳಿಂದ ತಾವೇನು ಮಾಡಿದರೂ ನಡೆಯುತ್ತದೆ ಹಾಗೂ ಇವರಿಗೆ ಯಾರ ಬೆಂಬಲವೂ ಇಲ್ಲ ಎಂಬುದನ್ನರಿತ ಸಮೀಉಲ್ಲಾ ಮತ್ತವನ ಸಹಚರರಾದ ಅಲಿಉಲ್ಲಾ, ಜವೀಯುಲ್ಲಾ, ಕಲಿಮುಲ್ಲಾ, ನೂರುಲ್ಲಾ ಜತೆಗೂಡಿ ಈಕೆಯ ಮನೆಯಿಂದಲೇ ಎಳೆತಂದು ಅತ್ಯಾಚಾರ ನಡೆಸಿ ರಸ್ತೆಯಲ್ಲಿ ಬಿಸಾಡಿ ಹೋಗುತ್ತಾರೆ! ಜೂನ್ 15ಕ್ಕೆ ಈ ಅಮಾನುಷ ಕೃತ್ಯ ನಡೆದರೂ ಪೋಲೀಸರು ಅಳೆದೂ ತೂಗಿ, ಮಾಧ್ಯಮಗಳಲ್ಲೆಲ್ಲ ವರದಿ ಪ್ರಕಟವಾದ ನಂತರ, ಅಂತೂ- ಇಂತೂ ಜೂನ್ 22ಕ್ಕೆ ದೂರು ದಾಖಲಿಸಿಕೊಳ್ಳುತ್ತಾರೆ. ಅಷ್ಟೊತ್ತಿಗಾಗಲೇ ಸಾಕ್ಷ್ಯಗಳೆಲ್ಲ ಕದಡಿದ್ದವು. ಸದ್ಯಕ್ಕೆ ಆರೋಪಿ ಸಮೀಉಲ್ಲಾನನ್ನು ಬಂಧಿಸಲಾಗಿದೆ. ಈಗಲೂ, ಇದು ರೇಪ್ ಅಲ್ಲ ಹಲ್ಲಾಹಲ್ಲಿ ಅಷ್ಟೇ ಅಂತ ಕೆಲವು ಮಾಧ್ಯಮಗಳು ಪ್ರತಿಪಾದಿಸುತ್ತಿವೆ. ಇಂಥ ತರ್ಕಗಳಿಗೆಲ್ಲಿ ಅಸ್ಖಲಿತ ಇಂಗ್ಲಿಷಿನಲ್ಲಿ ಉತ್ತರಿಸುವಷ್ಟು ಸುಶಿಕ್ಷಿತರಲ್ಲವಲ್ಲ ಸಂತ್ರಸ್ತರು…

ಉತ್ತರಪ್ರದೇಶದಲ್ಲಿ ಏಳು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವಾಗುತ್ತದೆ. ಅದಾಗಿ 20 ದಿನಗಳ ನಂತರ ಅವಳನ್ನು ಮನೆಯಿಂದ ಹೊರಗೆಳೆದು ಕೊಲ್ಲುತ್ತಾರೆ. ಇದರ ಬೆನ್ನಿಗೇ ಆರೋಪಿಗಳಾಗಿರುವ ಆ ಗ್ರಾಮ ಸಮಿತಿ ಮುಖ್ಯಸ್ಥ ಮತ್ತವನ ಮಗ ತಲೆಮರೆಸಿಕೊಂಡಿದ್ದಾರೆ. ಇವರನ್ನು ಬಂಧಿಸಿದ ನಂತರವಷ್ಟೇ ತಮ್ಮ ಮಗಳ ಅಂತ್ಯಸಂಸ್ಕಾರ ಮಾಡುತ್ತೇವೆ ಅಂತ ದುಃಖ- ಆಕ್ರೋಶಗಳಲ್ಲಿ ಕುಳಿತಿರುವ ಸಂತ್ರಸ್ತೆಯ ಮನೆಯವರ ಮೇಲೆಯೇ ಪೋಲೀಸರ ಲಾಠಿಚಾರ್ಜ್ ಆಗಿದೆ!

ಸಮಾಜದಲ್ಲಿ, ಪೋಲೀಸ್ ವ್ಯವಸ್ಥೆಯಲ್ಲಿ, ಮಹಿಳೆಯರ ಸುರಕ್ಷತೆಗಾಗಿಯೇ ಇರುವ ಸಂಸ್ಥೆಗಳಲ್ಲಿ ಈ ಮಟ್ಟದ ಸಂವೇದನಾಶೂನ್ಯತೆ ಮಡುಗಟ್ಟಿರಬೇಕಾದರೆ ವಿಶ್ವಾಸಕ್ಕೆ ಇನ್ನೇನುಳಿದಿದೆ?

Leave a Reply