ಇಷ್ಟಕ್ಕೂ ಯಡಿಯೂರಪ್ಪನವರು ಶೋಭಾವಲಂಬಿ ಆಗಿರುವುದರ ಹಿಂದಿನ ಮರ್ಮವಾದರೂ ಏನು?!

ಪಿ. ತ್ಯಾಗರಾಜ್

ಇಷ್ಟಕ್ಕೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಪಕ್ಷದ ಬಹುನಾಯಕರ ಆಕ್ಷೇಪದ ನಡುವೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಯಾಕಿಷ್ಟು ಮಹತ್ವ ಕೊಡುತ್ತಿದ್ದಾರೆ? ಅದ್ಯಾವ ಶಕ್ತಿ, ಮಮಕಾರ ಯಡಿಯೂರಪ್ಪನವರನ್ನು ಈ ಮಟ್ಟಿಗೆ ಶೋಭಾವಲಂಬಿ ಮಾಡಿಟ್ಟಿದೆ..?

ಇದು ರಾಜ್ಯ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಪ್ರಶ್ನೆ.

ಹಿಂದೆ 2009 ರಲ್ಲಿ ಯಡಿಯೂರಪ್ಪನವರ ವಿರುದ್ಧ ತಿರುಗಿ ಬಿದ್ದಿದ್ದ ಬಳ್ಳಾರಿ ರೆಡ್ಡಿ ಬಳಗದೊಡಗೂಡಿ ಹೈದರಾಬಾದ್ ಪ್ರವಾಸ ಕೈಗೊಂಡಿದ್ದ ರೇಣುಕಾಚಾರ್ಯ ಜೋಶ್ ನಲ್ಲಿ ಒಂದು ಧಮಕಿ ಹಾಕಿದ್ದರು. ‘ನಾನೇದರೂ  ಯಡಿಯೂರಪ್ಪ-ಶೋಭಾ ಕರಂದ್ಲಾಜೆ ವಿಚಾರ ಬಿಚ್ಚಿಟ್ಟರೆ ಅವರಿಬ್ಬರೂ ಬೀದಿಗೆ ಬಂದು ಬೀಳ್ತಾರೆ’ ಅಂತಾ. ಪಾಪ, ರೇಣುಕಾಚಾರ್ಯ ಅಂತಾ ಅನಾಹುತವನ್ನೇನೂ ಮಾಡಲಿಲ್ಲ. ಹೇಳಿಕೆ ಬೆನ್ನಲ್ಲೇ ಸಿಕ್ಕ ಮಂತ್ರಿ ಪಟ್ಟ ಅವರ ಬಾಯಿಗೆ ಪ್ಲಾಸ್ಟರ್ ಬಡಿದಿತ್ತು. ರೆಡ್ಡಿ ಒತ್ತಡದಿಂದ ಶೋಭಾ ಕರಂದ್ಲಾಜೆ ಮಾಜಿ ಮಂತ್ರಿ ಆದರು. ಆಗ ವಿಲಿವಿಲಿ ಒದ್ದಾಡಿದ್ದ ಯಡಿಯೂರಪ್ಪ ಮುಂದೆ ಮಾಜಿ ಆಗುವ ಮೂಲಕ ಶೋಭಾ ದುಃಖಕ್ಕೆ ಜತೆಯಾಗಿದ್ದರು.

ಇರಲಿ, ರೇಣುಕಾಚಾರ್ಯ ಅದೇನು ಹೇಳಬೇಕು ಅಂತಿದ್ದರೋ, ಅದೇನು ವಿಷಯ ಇತ್ತೋ, ಇರಲಿಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ನಡುವಣ ಬಾಂಧವ್ಯವೇ ಇವತ್ತಿನ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ಮೂಲಕಾರಣ ಎಂಬುದೇ ನವೀಕೃತ ಕೌತುಕದ ಸಂಗತಿ. ಪಕ್ಷದ ಇತರ ನಾಯಕರು ಮತ್ತು ಶೋಭಾ ಇವರಿಬ್ಬರ ವಿಚಾರ ಬಂದಾಗ ಯಡಿಯೂರಪ್ಪನವರ ಆದ್ಯತೆ ಶೋಭಾ ಅವರೇ. ಶೋಭಾ ಮೂಲಕವೇ ಪಕ್ಷವನ್ನು ನೋಡುವ, ಪಕ್ಷವನ್ನು ಕಟ್ಟುವ ಯಡಿಯೂರಪ್ಪನವರ ಹಠವರ್ತನೆ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರಿಂದ ಅವರನ್ನು ವಿಮುಖರನ್ನಾಗಿಸಿದೆ. ಸಾಕಷ್ಟು ಒಳವೈರಿಗಳನ್ನೂ ಸೃಷ್ಟಿಸಿದೆ. ಆದರೆ ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುವ ‘ಮಿಷನ್ 150’ ಭ್ರಮೆಗೆ ಬಿದ್ದಿರುವ ಅವರು ಇದ್ಯಾವುದನ್ನೂ ಲೆಕ್ಕಕ್ಕಿಟ್ಟುಕೊಂಡಿಲ್ಲ. ತಮ್ಮ ವಿರುದ್ಧ ಎದ್ದಿರುವ ಧ್ವನಿಗೂ ಕಿವಿಗೊಡುತ್ತಿಲ್ಲ. ತಾವಿಟ್ಟಿರೋ ಹೆಜ್ಜೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಗುಡುಗುತ್ತಿರುವ ಯಡಿಯೂರಪ್ಪನವರ ಧಾಷ್ಟ್ಯದ ಹಿಂದೆ ಬಿಜೆಪಿ ಮುಖಂಡರು ಗುರುತಿಸಿರುವುದು ಮತ್ತದೇ ಶೋಭಾಯುಕ್ತ ಶಕ್ತಿಯೇ!

ಪ್ರತಿಪಕ್ಷ ಸ್ಥಾನದಲ್ಲಿರೋ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ತಾರಕ ಮುಟ್ಟಿರೋದು ಹಳೇ ವಿಚಾರ. ಆದರೆ ಇದರ ಕೇಂದ್ರಬಿಂದು ಶೋಭಾ ಕರಂದ್ಲಾಜೆ ಅವರೆಂಬುದು ಹೊಸ ವಿಚಾರ. ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿ ತಮ್ಮ ಕೈವಾಡ ಇಲ್ಲ, ಪಟ್ಟಿಯಲ್ಲಿ ಇರುವವರು ಯಾರೆಂಬುದೇ ತಮಗೆ ಗೊತ್ತಿಲ್ಲ ಎಂದು ಶೋಭಾ ಹೇಳುತ್ತಿರುವುದು, ಅದರ ಬೆನ್ನಲ್ಲೇ ಯಾವುದೇ ಕಾರಣಕ್ಕೂ ಪಟ್ಟಿ ಬದಲಾವಣೆ ಮಾಡುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಯಡಿಯೂರಪ್ಪ ಗುಡುತ್ತಿರುವುದು – ಈ ಎರಡರ ತಾಳಮೇಳವೇ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಬಂಡಾಯದ ಪ್ರತಿಬಿಂಬ.

ಹಾಗಾದರೆ ಯಡಿಯೂರಪ್ಪನವರು ಶೋಭಾ ಅವರಿಗೆ ಯಾಕಿಷ್ಟು ಮಹತ್ವ ಕೊಡುತ್ತಿದ್ದಾರೆ, ಪಕ್ಷದ ಇತರ ನಾಯಕರಿಗಿಂತ ಅವರೇ ಯಾಕೆ ಮುಖ್ಯರಾಗಿದ್ದಾರೆ ಎಂಬ ವಿಷಯದ ಅನ್ವೇಷಣೆ ಮಾಡುತ್ತಾ ಹೋದರೆ ಸ್ಟೋರಿ ಒಂದೂವರೇ ದಶಕದ ಹಿಂದಕ್ಕೆ ಓಡುತ್ತದೆ. ಮಣಿಪಾಲದ ಮೆಡಿಕಲ್ ಲ್ಯಾಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶೋಭಾ ಅವರು ಮಾಜಿ ಶಾಸಕ ಎ.ಜಿ. ಕೊಡಗಿ ಅವರ ಮೂಲಕ ಬಿಜೆಪಿ ಫುಲ್ ಟೈಂ ಕಾರ್ಯಕರ್ತರಾದರು. ಬಸವರಾಜ ಪಾಟೀಲ್ ಸೇಡಂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ತಮ್ಮ ಸಂಪರ್ಕಕ್ಕೆ ಬಂದ ಶೋಭಾ ಅವರ ಎಲ್ಐಸಿ ಏಜೆನ್ಸಿ ವ್ಯವಹಾರ ವಿಸ್ತರಣೆಗೆ ನೆರವಾದವರು ಯಡಿಯೂರಪ್ಪ. ಬಹಳಷ್ಟು ನಾಯಕರ ಮನೆಗೆ ಖುದ್ದು ಕರೆದೊಯ್ದು ಏಜೆನ್ಸಿ ಕೊಡಿಸಿದ್ದುಂಟು.

1999 ರ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ಅವರ ಜತೆಗೆ ಸೋಲುಂಡಿದ್ದ ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಬಿ.ಬಿ. ಶಿವಪ್ಪ ಅವರನ್ನು ಸದೆಬಡಿದು ಶೆಟ್ಟರ್ ಅವರನ್ನು ಪ್ರತಿಷ್ಠಾಪಿಸಿಬಿಟ್ಟರು. ಶಿವಪ್ಪ ನಾಯಕರಾದರೆ ತಾವು ನೇಪಥ್ಯಕ್ಕೆ ಸರಿಯಬೇಕಾಗುತ್ತದೆ ಎಂಬ ಯಡಿಯೂರಪ್ಪ ದೂರದೃಷ್ಟಿಗೆ ಆಗ ಸಾಥ್ ಕೊಟ್ಟಿದ್ದವರು ಅನಂತಕುಮಾರ್. ನಾಯಕತ್ವ ಪೈಪೋಟಿ ಎಂಥ ಸಂಬಂಧಗಳನ್ನು ಕಡಿದು ಬಿಸಾಕುತ್ತದೆ ಎಂಬಂತೆ ಮುಂದೊಂದು ದಿನ ಅಂದರೆ 2004 ರ ವಿಧಾನಸಭೆ ಚುನಾವಣೆ ನಂತರ ಅನಂತಕುಮಾರ್ ಮತ್ತು ಯಡಿಯೂರಪ್ಪ ಸ್ನೇಹವೂ ಕಿತ್ತುಕೊಂಡು ಹೋಗಿತ್ತು. ಆಗ ತೀವ್ರ ಮಾನಸಿಕ ಕ್ಷೋಭೆಯಲ್ಲಿದ್ದ ಯಡಿಯೂರಪ್ಪನವರಿಗೆ ಸಾಂತ್ವನ ನೀಡಿದ್ದು ಇದೇ ಶೋಭಾ ಕರಂದ್ಲಾಜೆ ಅವರು.

ಆಗ ಬಿಜೆಪಿ ಆಂತರಿಕ ಕಚ್ಚಾಟ ಎಷ್ಟರ ಮಟ್ಟಿಗೆ ಇತ್ತೆಂದರೆ ತಮಗೆ ಮತ್ತು ಶೋಭಾ ಅವರಿಗೆ ಮಂತ್ರಿ ಪದವಿ ಕೊಡಿ ಸಾಕು, ಸರಕಾರ ಮಾಡೋಣ ಎಂದು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಪುತ್ರ ಕುಮಾರಸ್ವಾಮಿ ಮುಂದೆ ಪ್ರಸ್ತಾಪ ಇಡುವಷ್ಟರ ಮಟ್ಟಿಗೆ. ಆದರೆ ಆಗ ಅಸ್ತಿತ್ವಕ್ಕೆ ಬಂದದ್ದು ಕಾಂಗ್ರೆಸ್-ಜೆಡಿಎಸ್ ಸರಕಾರ. ರಾಜ್ಯಾಧ್ಯಕ್ಷರ ಆಯ್ಕೆ ಗಲಾಟೆ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಯಡಿಯೂರಪ್ಪ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ ಯಡಿಯೂರಪ್ಪ ಪಕ್ಷ ಬಿಡಲು ಮುಂದಾಗಿದ್ದರು. ಆಗೆಲ್ಲ ಅವರಿಗೆ ಸಾತ್ ಕೊಟ್ಟು ಪಕ್ಷ ಬಿಡದಂತೆ ನೋಡಿಕೊಂಡದ್ದು ಇದೇ ಶೋಭಾ ಅವರು. ಮುಂದೆ ಒಳಜಗಳ ತಣ್ಣಗಾಯ್ತು. 2005 ರಲ್ಲಿ ಶೋಭಾ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಿಸಿದ್ರು ಯಡಿಯೂರಪ್ಪ. ಮುಂದೆ ಕಾಂಗ್ರೆಸ್ ಜತೆ ಸಂಬಂಧ ಕಿತ್ತುಕೊಂಡ ಜೆಡಿಎಸ್ ಜತೆ ಬಿಜೆಪಿ ಕೈಜೋಡಿಸಿ ಸರಕಾರ ಮಾಡಿದಾಗ ಯಡಿಯೂರಪ್ಪ ಉಪಮುಖ್ಯಮಂತ್ರಿ. ಮುಂದೆ ಜೆಡಿಎಸ್ ಕೈಕೊಟ್ಟು 2008 ರ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಸರಕಾರ ಮಾಡಿದಾಗ ಯಡಿಯೂರಪ್ಪ ಸಿಎಂ, ಶೋಭಾ ಕರಂದ್ಲಾಜೆ ಪವರ್ ಮಿನಿಸ್ಟರ್!

ನಿಜ ಅರ್ಥದಲ್ಲಿ ಶೋಬಾ ಅವರು ಯಡಿಯೂರಪ್ಪ ಸರಕಾರದ ‘ಪವರ್ ಫುಲ್’ ಮಂತ್ರಿಯೇ ಆಗಿದ್ದರು. ಯಡಿಯೂರಪ್ಪ ಸರಕಾರದಲ್ಲಿ ಏನಾದರೂ ಕೆಲಸ ಆಗಬೇಕು ಎಂದಿದ್ದರೆ ಮೊದಲು ಶೋಭಾ ಅವರನ್ನು ಹಿಡಿಯಬೇಕು. ನಂತರ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗ ಸ್ವಾಮಿ, ತದನಂತರ ಪುತ್ರ ವಿಜಯೇಂದ್ರ ಎಂಬಷ್ಟರ ಮಟ್ಟಿಗೆ ಶೋಭಾ ಅವರಿಗೆ ಆದ್ಯತೆ ಕೊಟ್ಟಿದ್ದರು ಯಡಿಯೂರಪ್ಪ. ಪ್ರತಿಯೊಂದಕ್ಕೂ ಶೋಭಾ ಅವರೇ, ಸರಕಾರದ ಒಳಗೆ ಮತ್ತು ಹೊರಗೆ. ಆವರೆಗೂ ಯಡಿಯೂರಪ್ಪನವರ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಿದ್ದ ಕಾಪು ಸಿದ್ದಲಿಂಗಸ್ವಾಮಿಗೂ ಖೊಕ್ ಕೊಟ್ಟ ಶೋಭಾ ಯಡಿಯೂರಪ್ಪ ಅಧಿಕಾರ ಸಾಮ್ರಾಜ್ಯದ ಸರ್ವಾಂತರ್ಯಾಮಿ ನಾಯಕಿಯಾದರು. ಇಲ್ಲಿಂದಾಚೆಗೆ ಬಳ್ಳಾರಿ ರೆಡ್ಡಿ ಬಳಗ ಮತ್ತು ಯಡಿಯೂರಪ್ಪ ನಡುವೆ ಕಿತ್ತುಕೊಂಡು ಹೋದ ಸಂಬಂಧ ಶೋಭಾ ಮಂತ್ರಿ ಸ್ಥಾನಕ್ಕೆ ಕುತ್ತು ತಂದಿತ್ತು.

ಆದರೆ ಈ ಪ್ರಹಸನ ಮತ್ತು ಸ್ವತಃ ಯಡಿಯೂರಪ್ಪನವರೇ ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಜೈಲಿಗೆ ಹೋಗಿ ಬಂದ ನಂತರ ಅವರ ಮತ್ತು ಶೋಭಾ ಅವರ ಬಾಂಧವ್ಯ ಹಿಂದಿಗಿಂದಲೂ ಗಟ್ಟಿಯಾಯಿತು.  ಯಡಿಯೂರಪ್ಪನವರ ಎಲ್ಲ ಜವಾಬ್ದಾರಿಗಳನ್ನು ಹೊತ್ತಿಕೊಂಡಿರುವ ಶೋಭಾ ಕರಂದ್ಲಾಜೆ ಬಗ್ಗೆ ಯಡಿಯೂರಪ್ಪನವರ ಕುಟುಂಬ ಸದಸ್ಯರಲ್ಲಿಯೇ ಋಣಭಾರದ ಭಾವವಿದೆ. ತಮ್ಮ ತಂದೆಯವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಮಾತನ್ನೂ ಯಡಿಯೂರಪ್ಪನವರ ಮಕ್ಕಳೇ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಯಡಿಯೂರಪ್ಪನವರು ತಮಗಿರುವ ಶೋಭಾ ಋಣಭಾರವನ್ನು ಬಿಜೆಪಿ ಅಂಗಳದೊಳಗೂ ಹೇರಲು ಹೊರಟಿರುವುದೇ ಇಂದಿನ ಭಿನ್ನಮತೀಯ ಚಟುವಟಿಕೆಗಳಿಗೆ ಕಾರಣವಾಗಿದೆ.

ನಿಜ, ಹಿಂದೆ ಮುಖ್ಯಮಂತ್ರಿ ಸ್ಥಾನ ತೊರೆದ ಸಂದರ್ಭ ಉತ್ತರಾಧಿಕಾರಿ ವಿಚಾರದಲ್ಲಿ ಯಡಿಯೂರಪ್ಪನವರ ಪ್ರಥಮಾದ್ಯತೆ ಶೋಭಾ ಕರಂದ್ಲಾಜೆ ಅವರೇ ಆಗಿತ್ತು. ಶೋಭಾ ಬಗ್ಗೆ ಯಡಿಯೂರಪ್ಪನವರ ಕಾಳಜಿ ಈ ಮಟ್ಟದ್ದು ಎಂಬ ಅರಿವಿರದಿದ್ದ ಮುಖಂಡರು ಆಗ ಕಣ್ಣು ಕೆಂಪಗೆ ಮಾಡಿಕೊಂಡರು. ಅವತ್ತಿಂದ ಇವತ್ತಿನವರೆಗೆ ಆ ಕಣ್ಣುಗಳು ಕೆಂಪು ಕಳೆದುಕೊಂಡಿಲ್ಲ. ಬದಲಿಗೆ ಮತ್ತಷ್ಟು ಕಡುಗಟ್ಟಿವೆ!

ಶೋಭಾ ಕರಂದ್ಲಾಜೆ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆಗಳಿವೆ. ಅವರಿಗೆ ಜಯಲಲಿತಾ, ಮಮತಾ ಬ್ಯಾನರ್ಜಿ, ಮಾಯಾವತಿ ಅವರಂತೆ ಮುಖ್ಯಮಂತ್ರಿ ಆಗಬೇಕೆಂಬ ಬಯಕೆ ಇದೆ. ಯಡಿಯೂರಪ್ಪನವರು ತಾವು, ತಮ್ಮನ್ನು ಬಿಟ್ಟರೆ ಶೋಭ ಕರಂದ್ಲಾಜೆ ಆ ಹುದ್ದೆಗೆ ಅರ್ಹರು ಎಂಬ ಲೆಕ್ಕಾಚಾರದಿಂದ ಪಕ್ಷದೊಳಗೆ ರಾಜಕೀಯ ತೀರ್ಮಾನ ಕೈಗೊಳ್ಳುತ್ತಿರುವುದು ಅನ್ಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಂತೆಯೇ ಈಗಿನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಏಕಪಕ್ಷೀಯ ನೇಮಕ ತೀರ್ಮಾನದ ಹಿಂದೆಯೂ ಇಂಥದೇ ದೂರಗಾಮಿ ಲೆಕ್ಕಾಚಾರಗಳನ್ನು ಈ ನಾಯಕರು ಅನ್ವೇಷಿಸಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜಿಪಿಗೇ ಅಧಿಕಾರ ಎಂಬ ಅತಿ ಅತ್ಮವಿಶ್ವಾಸದ ತೀರ್ಮಾನಕ್ಕೆ ಬಂದಿರುವ ಯಡಿಯೂರಪ್ಪನವರು ಸಿಎಂ ಹುದ್ದೆ ಅತ್ತಿತ್ತ ಅಲುಗಾಡಬಾರದೆಂದು ಈಗಿನಿಂದಲೇ ಎಚ್ಚರಿಕೆ ಹೆಜ್ಜೆಗಳನ್ನಿಡುತ್ತಿದ್ದಾರೆ. ಅದರ ಮೊದಲಂಶವೇ ಪದಾಧಿಕಾರಿಗಳ ನೇಮಕದಲ್ಲಿ ತಮ್ಮವರಿಗೆ ಹೆಚ್ಚಿನ ಆದ್ಯತೆ ನೀಡಿರುವುದು. ಟಿಕೆಟ್ ಹಂಚುವುದರಿಂದ ಹಿಡಿದು ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಗಳನ್ನು ಸದೆಬಡಿಯುವವರೆಗೂ ಇದು ನೆರವಿಗೆ ಬರುತ್ತದೆ ಎಂಬುದು ಇದರ ಹಿಂದಿರುವ ದೂರಾಲೋಚನೆ. ತಮ್ಮ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿರುವ ಕೇಸುಗಳು ನಾಳೆ ಏನೂ ಬೇಕಾದರೂ ಆಗಬಹುದು. ತಮ್ಮನ್ನು ಅಡಕತ್ತರಿಯಲ್ಲಿ ಸಿಕ್ಕಿಸಬಹುದು. ಒಂದೊಮ್ಮೆ ಅಂಥ ಪರಿಸ್ಥಿತಿ ಬಂದರೆ ಶೋಭಾ ತಮ್ಮ ಉತ್ತರಾಧಿಕಾರಿ ಆಗಬೇಕೆಂಬ ಇರಾದೆ ಯಡಿಯೂರಪ್ಪನವರದು. ಹೀಗಾಗಿ ತಮಗೆ ಬೇಕಾದವರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸುತ್ತಿದ್ದಾರೆ. ಪಕ್ಷ ಮತ್ತು ಅನ್ಯನಾಯಕ ನಿಷ್ಠರನ್ನು ಪಕ್ಕಕ್ಕಿಡುವ ಉದ್ದೇಶದಿಂದಲೇ ಕೋರಿ ಕಮಿಟಿಯಲ್ಲಿ ಚರ್ಚೆ ಸಹವಾಸಕ್ಕೇ ಅವರು ಹೋಗಿಲ್ಲ. ಚರ್ಚೆ, ಚಿಂತನೆ ಎಲ್ಲವೂ ಶೋಭಾ ಜತೆಗೆ ಸೀಮಿತ.

ನಿಜ, ಯಡಿಯೂರಪ್ಪ ನಾಲ್ಕು ಬಾರಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಹಿಂದೆ ಮೂರು ಬಾರಿ ಬಾರದ ಆಪಾದನೆ ಈ ಬಾರಿ ಅವರನ್ನು ಸುತ್ತಿಕೊಂಡಿದೆ. ಅಂದರೆ ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎಂದೇ ಅರ್ಥ. ಮೂವತ್ತು ಜಿಲ್ಲೆಗಳ ಸಂಘಟನೆ ಉಸ್ತುವಾರಿ ವಹಿಸಿರುವ ನಾಲ್ವರು ಪ್ರಧಾನ ಕಾರ್ಯದರ್ಶಿಗಳ ಪೈಕಿ ಶೋಭಾ, ಅರವಿಂದ ಲಿಂಬಾವಳಿ ಹಾಗೂ ರವಿಕುಮಾರ್ ಯಡಿಯೂರಪ್ಪ ನಿಷ್ಠರು. ಸಿ.ಟಿ. ರವಿ ಅವರಿಗೆ ಆರು ಜಿಲ್ಲೆ ವಹಿಸಿದ್ದರೆ ಉಳಿದ 24 ಜಿಲ್ಲೆಗಳು ಬೆಂಬಲಿಗರ ಕೈಯಲ್ಲೇ ಇವೆ. ಅದರಲ್ಲೂ ಶೋಭಾ ಅವರಿಗೆ ಹತ್ತು ಜಿಲ್ಲೆಗಳ ಸಿಂಹಪಾಲು. ಈಶ್ವರಪ್ಪ, ಅಶೋಕ್, ಸೋಮಣ್ಣ, ಬಚ್ಚೇಗೌಡ ಅವರಂಥ ಹಿರಿಯ ನಾಯಕರು ಲೆಕ್ಕಕ್ಕೇ ಇಲ್ಲ. ಇದೇ ಫಾರ್ಮುಲಾ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳ ನೇಮಕದಲ್ಲೂ ಅಳವಡಿಕೆ ಆಗಿದೆ. ಕೆಜೆಪಿ, ಬಿಎಸ್ಸಾರ್ ಪಾರ್ಟಿಯಿಂದ ವಾಪಸ್ಸು ಬಂದವರಿಗೆ ಆದ್ಯತೆ.

ಮುಂದಿನ ಚುನಾವಣೆಯಲ್ಲಿ 150 ಸೀಟುಗಳ ಭ್ರಮೆಗೆ ಬಿದ್ದಿರುವ ಯಡಿಯೂರಪ್ಪನವರಿಗೆ ಸಾಮೂಹಿಕ ನಾಯಕತ್ವದ ಮಹತ್ವ ಮರೆತು ಹೋಗಿದೆ. ಪಕ್ಷದ ನಾನಾ ನಾಯಕರ ಪ್ರಾದೇಶಿಕ ಹಿಡಿತ, ಅದು ತಂದುಕೊಡಬಹುದಾದ ಸಂಖ್ಯಾಬಲ ಅರಿವಿಗೆ ಬರುತ್ತಿಲ್ಲ. ಬೆಂಗಳೂರು ಉಸ್ತುವಾರಿಯನ್ನು ಶೋಭಾ ಅವರೊಬ್ಬರ ಬದಲು ಲಾಗಾಯ್ತಿನಿಂದ ಹಿಡಿತ ಸಾಧಿಸಿರುವ ಅನಂತುಕಮಾರ್, ಅಶೋಕ್, ಸೋಮಣ್ಣ ಅವರಂಥವರಿಗೆ ವಹಿಸುವುದು ಜಾಣ್ಮೆಯ ನಡೆ ಆಗುತ್ತಿತ್ತು. ತುಮಕೂರು ಎಲ್ಲಿ, ಮಳವಳ್ಳಿಯ ಬಿ. ಸೋಮಶೇಖರ್ ಎಲ್ಲಿ. ಇಲ್ಲಿ ವಿ. ಸೋಮಣ್ಣ ಉತ್ತಮ ಆಯ್ಕೆ ಅಂತೆನಿಸಿಲ್ಲ. ಇವು ಒಂದೆರಡು ಉದಾಹರಣೆ ಮಾತ್ರ. ಇಡೀ ರಾಜ್ಯದ ತುಂಬಾ ಇಂತಹುದೇ ಅವಾಂತರಗಳನ್ನು ಮಾಡಿಕೊಂಡಿರುವ ಯಡಿಯೂರಪ್ಪನವರು ಅದ್ಯಾವ ಮರದಿಂದ 150 ಸೀಟುಗಳನ್ನು ಕಿತ್ತುಕೊಂಡು ಬರುತ್ತಾರೋ ಗೊತ್ತಿಲ್ಲ. ಶೋಭಾ ಪ್ರಭಾವದಲ್ಲಿ ಹಿರಿಯ ನಾಯಕರ ಕಡೆಗಣಿಸಿ, ಕುದಿಯುತ್ತಿರುವ ಭಿನ್ನಮತದ ಮಧ್ಯೆಯೂ ಯಡಿಯೂರಪ್ಪನವರು ದೂರ್ವಾಸ ಮುನಿಯಂತೆ ವರ್ತಿಸುತ್ತಿರುವುದು ಖಂಡಿತವಾಗಿಯೂ ಬಿಜೆಪಿಗೆ ಏಳ್ಗೆ ಶಕುನವಲ್ಲ!

Leave a Reply