ಕನ್ನಡ ಚಿತ್ರರಂಗದ ‘ವೇಗದ ಶತಕ’: ದಾಖಲೆ ಬರೆಯುತ್ತಿದೆ ಹೊಸತನದ ತವಕ

author-ssreedhra-murthyಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಜೂನ್‍ಗೆ ಕೊನೆಗೊಂಡ ವರ್ಷದ ಮೊದಲ ಆರು ತಿಂಗಳಲ್ಲೇ 106 ಚಿತ್ರಗಳು ತೆರೆ ಕಂಡಿವೆ. 82 ವರ್ಷದ ಚಿತ್ರರಂಗದ ಇತಿಹಾಸದಲ್ಲೆಂದೂ ಆರು ತಿಂಗಳಲ್ಲೇ ನೂರು ಚಿತ್ರಗಳು ತೆರೆ ಕಂಡಿರಲಿಲ್ಲ.

ಮೊದಲ ಕನ್ನಡ ಚಿತ್ರ ‘ಸತಿ ಸುಲೋಚನ’ 1934ರಲ್ಲಿ ತೆರೆ ಕಂಡರೆ ನೂರನೇ ಚಿತ್ರ ‘ರಣಧೀರ ಕಂಠೀರವ’ ತೆರೆ ಕಂಡಿದ್ದು 1960ರಲ್ಲಿ ಅಂದರೆ ಮೊದಲ ನೂರು ಚಿತ್ರಗಳಿಗೆ 26 ವರ್ಷಗಳೇ ಬೇಕಾದವು. ಆದರೆ ಇನ್ನೂರನೇ ಚಿತ್ರ ‘ಮಧು ಮಾಲತಿ’ ತೆರೆ ಕಂಡಿದ್ದು 1966ರಲ್ಲಿ.  ಅಂದರೆ ಆರೇ ವರ್ಷಗಳಲ್ಲಿ ಎರಡನೇ ನೂರರ ಗಡಿಯನ್ನು ಕನ್ನಡ ಚಿತ್ರರಂಗ ದಾಟಿತು. ಅಲ್ಲಿಂದ ಮುಂದೆ ವರ್ಷದಿಂದ ವರ್ಷಕ್ಕೆ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಲೇ ಬರುತ್ತಿದೆ. ಕಳೆದ ಐದು ವರ್ಷಗಳಲ್ಲಂತೂ ಗಣನೀಯ ಸಂಖ್ಯೆಯಲ್ಲಿ ಈ ವೇಗ ಹೆಚ್ಚಾಗಿದೆ. ಈ ವರ್ಷ ಇನ್ನೂರು ಚಿತ್ರಗಳು ಬಿಡುಗಡೆಯಾಗುವುದು ಬಹು ಮಟ್ಟಿಗೆ ಖಚಿತ ಎನ್ನಿಸಿರುವುದರಿಂದ ಇನ್ನೊಂದು ದಾಖಲೆಯ ನಿರ್ಮಾಣವೂ ಸಂಭವನೀಯ ಎನ್ನಿಸಿಕೊಂಡಿದೆ.

ವಾರಕ್ಕೆ 6-7 ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ ಚಿತ್ರಮಂದಿರಗಳ ಕೊರತೆ ಎದ್ದು ಕಾಣುತ್ತಿದೆ. ಒಳ್ಳೆಯ ಚಿತ್ರಗಳು ಎನ್ನಿಸಿಕೊಂಡವೂ ಕೂಡ  ಪೈಪೋಟಿಯಲ್ಲಿ ಸುಸ್ತಾಗುತ್ತಿವೆ. ಹೀಗಿದ್ದರೂ ಗಮನಿಸಲೇ ಬೇಕಾದ ಸಂಗತಿ ಎಂದರೆ ಈ ವರ್ಷ ಸ್ಟಾರ್‍ಗಳ ಭರಾಟೆಯಿಲ್ಲದೆ ಹೊಸತನವನ್ನು ತೋರಿದ ಚಿತ್ರಗಳು ಗೆದ್ದಿವೆ. ಎಷ್ಟರ ಮಟ್ಟಿಗೆ ಎಂದರೆ ‘ಕನ್ನಡ ಚಿತ್ರ’ಗಳ ಕುರಿತು ತಾತ್ಸಾರದ ಧೋರಣೆ ಇಟ್ಟುಕೊಂಡ ಮಲ್ಟಿಪ್ಲಕ್ಸ್‍ಗಳಲ್ಲೇ ಅವು ದಿಗ್ವಿಜಯ ಸಾಧಿಸಿವೆ.

ಹಾಗೆ ನೋಡಿದರೆ ಹೊಸತನದ ಸುಳಿವು ಕಳೆದ ಕೆಲವು ವರ್ಷಗಳಿಂದಲೂ ಕಂಡು ಬರುತ್ತಿತ್ತು. 2000ನೇ ಇಸವಿಯ ಸುಮಾರಿಗೆ ಅದುವರೆಗೂ ಕನ್ನಡ ಚಿತ್ರರಂಗದ ಪ್ರಧಾನ ಪ್ರೇಕ್ಷಕರು ಎನ್ನಿಸಿಕೊಂಡಿದ್ದ ‘ಮಧ್ಯಮ ವರ್ಗ’ದವರು ದೂರ ಸರಿದರು ಎಂದು ಚಿತ್ರರಂಗದ ಮಂದಿ ತಮ್ಮಷ್ಟಕ್ಕೆ ತಾವೇ ನಿರ್ಧರಿಸಿ ಬಿಟ್ಟರು. ಪರ್ಯಾಯವನ್ನು ಹುಡುಕುವ ನಿಟ್ಟಿನಲ್ಲಿ  ಸ್ಟಾರ್‍ಗಳ ವಿಜೃಂಭಣೆ, ಭೂಗತ ಲೋಕದ ಭಯಾನಕ ಚಿತ್ರಣಗಳು, ಮಚ್ಚು ಲಾಂಗ್‍ಗಳ ಸರಿದಾಟ, ಲೈಂಗಿಕ ವಿಕೃತಿ ಇದೆಲ್ಲದರ ಜೊತೆಗೆ ರೀಮೇಕ್‍ಗಳ ಪ್ರವಾಹ ಎಲ್ಲವೂ ಕಾಣಿಸಿದವು. ಇದರ ಜೊತಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ಕ್ರಾಂತಿಯ ಪರಿಣಾಮ ಮಧ್ಯಮ ವರ್ಗವೇ ಮಾಯವಾಗಿದೆ ಎನ್ನುವ ಚಿಂತನೆಗಳು, ಅವರೆಲ್ಲರೂ ಕಿರುತೆರೆ ಧಾರಾವಾಹಿಗಳಿಗೆ ವರ್ಗಾವಣೆಗೊಂಡಿದ್ದಾರೆ ಎನ್ನುವ ವಿಶ್ಲೇಷಣೆಗಳು ಸೂಕ್ಷ್ಮತೆ ಕೈ ಬಿಟ್ಟು ಒರಟುತನಕ್ಕೆ ಮೊರೆ ಹೋಗಲು ಕಾರಣವಾದವು.

ಇಲ್ಲಿ ಹೆಚ್ಚಿನವರು ಗಮನಿಸದೇ ಹೋದ ಸಂಗತಿ ಎಂದರೆ ಮಧ್ಯಮ ವರ್ಗ ಎನ್ನುವುದು ಆರ್ಥಿಕ ಸ್ಥಿತಿಯಲ್ಲ ಬದಲಾಗಿ ಮನೋಸ್ಥಿತಿ ಅನ್ನೋದನ್ನ. ಆರ್ಥಿಕ ಸ್ಥಿತಿಗತಿಗಳಲ್ಲಿ ಬದಲಾವಣೆಯಾದರೂ ಅವರ ಯೋಚನಾ ಲಹರಿಗಳು ಹಾಗೇ ಇರುತ್ತವೆ ಎನ್ನುವುದನ್ನು ಸೋಷಿಯಲ್ ಮೀಡಿಯಾದ ಅಭಿವ್ಯಕ್ತಿಗಳು ತೋರಿಸಿಕೊಟ್ಟಿದ್ದವು. ಇದನ್ನು ನಿಖರವಾಗಿ ಗುರುತಿಸಿ ರೂಪುಗೊಂಡಂತಹ ಚಿತ್ರ ‘ಸಿಂಪಲ್‍ ಆಗಿ ಒಂದು ಲವ್ ‍ಸ್ಟೋರಿ’. ಇದರ ಗೆಲುವು ಹಿಂಬಾಲಸಿ ಬಂದ ‘ರಂಗಿತರಂಗ’ ಭಾವನಾತ್ಮಕ ತಲ್ಲಣಗಳ ಜೊತೆಗೆ ಜನಪದದ ಅಂಶಗಳನ್ನೂ ಬೆರೆಸಿತ್ತು. ಈ ಎರಡೂ ಚಿತ್ರಗಳ ಗೆಲುವು ಒಂದು ರೀತಿಯಲ್ಲಿ ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಾಯಿಸಿದವು, ಸ್ಟಾರ್‍ಗಳಿಲ್ಲದ ಹೊಸ ಪ್ರಯೋಗಗಳು ಗೆಲ್ಲುತ್ತವೆ ಎಂಬ ಭರವಸೆಯನ್ನು ಹುಟ್ಟಿಸಿದವು. ಜೊತೆಗೆ ಪರ್ಯಾಯ ಚಿತ್ರಗಳೆಂದರೆ ಲೋ ಬಜೆಟ್ ಸಿನಿಮಾಗಳು ಎನ್ನುವ ಕಲ್ಪನೆಯನ್ನು ಮುರಿಯುವಂತೆ ಮೂಡಿ ಬಂದವು.

‘ಲಾಸ್ಟ್ ಬಸ್’ ಚಿತ್ರ ತಾಂತ್ರಿಕ ಗಟ್ಟಿತನದಿಂದಲೇ ಗಮನ ಸೆಳೆಯಿತು. ಭಯಾನುಕತೆಯನ್ನು ಮರು ರೂಪಿಸುವ ಚಿತ್ರದ ತಂತ್ರ ಕೂಡ ವಿನೂತನವಾಗಿತ್ತು. ತೇಜಸ್ವಿಯವರ ಕಾದಂಬರಿಯನ್ನು ಆಧರಿಸಿದ್ದ ‘ಕಿರುಗೂರಿನ ಗಯ್ಯಾಳಿಗಳು’ ಗ್ರಾಮೀಣ ಹಿನ್ನೆಲೆ ಮತ್ತು ಗಟ್ಟಿ ಸ್ತ್ರೀಪಾತ್ರಗಳಿಂದ ವಿಭಿನ್ನ ಎನ್ನಿಸಿಕೊಂಡಿತು. ‘ಯೂಟರ್ನ್’ ಒಂದು ರೀತಿಯಲ್ಲಿ ಮಹಾನಗರದ ಧಾವಂತಕ್ಕೆ ಜನಪದ ಜೋಡಿಸುವ ಕೆಲಸ ಮಾಡಿದರೆ, ‘ಕರ್ವ’ ಅಲ್ಲಿನ ಧಾವಂತಕ್ಕೆ ಕುತೂಹಲದ  ನೆಲೆ ನೀಡಿತು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಇದೇ ಸಾಲಿನಲ್ಲಿ ಬಂದರೂ ಕೊಂಚ ಭಿನ್ನತೆ ಇರುವ ಚಿತ್ರ. ಏಕೆಂದರೆ ಇದರಲ್ಲಿ ಸ್ಟಾರ್‍ಗಳಿದ್ದರು, ಭೂಗತ ಲೋಕವೂ ಇತ್ತು. ಆದರೆ ಮಾನವೀಯ ಎಳೆ ನೀಡಿದ ಕ್ರಮ ಭಿನ್ನ ಎನ್ನಿಸಿಕೊಂಡಿತು. ನಿಜಕ್ಕೂ ಅಚ್ಚರಿ ಹುಟ್ಟಿಸಿದ ಗೆಲುವು ಎಂದರೆ ‘ತಿಥಿ’ ಚಿತ್ರದ್ದು. ಈಗ ಕೆಲವು ವರ್ಷಗಳಿಂದ ಪ್ರಶಸ್ತಿ ವಿಜೇತ ಚಿತ್ರವೆಂದರೆ ಚಿತ್ರೋತ್ಸವಗಳಿಗೊ, ಖಾಸಗಿ ಪ್ರದರ್ಶನಕ್ಕೋ ಸೀಮಿತ ಎಂದಾಗಿತ್ತು. ಆದರೆ ಈ ಸಿನಿಮಾ ಸಾಕಷ್ಟು ದುಡ್ಡು ಮಾಡಿದೆ. ಜಾಗತಿಕ ನಿರೂಪಣಾ ಕ್ರಮಕ್ಕೆ ಮಂಡ್ಯದ ಸ್ಥಾನಿಕತೆಯನ್ನು ಸೇರಿಸಿದ್ದು,  ಚಿತ್ರರಂಗದ ಪರಿಚಯವೇ ಇಲ್ಲದವರಿಂದ ಅಭಿನಯವನ್ನು ಪಡೆದಿದ್ದು ಹೀಗೆ ಹಲವು ಹೊಸತನಗಳು ಚಿತ್ರದಲ್ಲಿವೆ. ಈ ಅರ್ಥದಲ್ಲಿ  ಜನ ಸಾಮಾನ್ಯರನ್ನು ಸೆಳೆಯುತ್ತಿರುವ ಚಿತ್ರಗಳ ಹಿನ್ನೆಲೆಯಿಂದ  ಈ ‘ವೇಗದ ನೂರಕ್ಕೆ’ ವಿಶೇಷ ಮಹತ್ವವಿದೆ.

ಆದರೆ ಇಷ್ಟೇ ಸಾಕಾಗುವುದಿಲ್ಲ ಎನ್ನುವುದೂ ಇಲ್ಲಿ ಸೇರಿಸಲೇ ಬೇಕಾದ ಸಂಗತಿ. ಈ ಚಿತ್ರಗಳು ನಗರ ಪ್ರದೇಶದ ಕೆಲವೇ ಚಿತ್ರಮಂದಿರಗಳಲ್ಲಿ ಯಶಸ್ಸು ಕಂಡಿವೆಯೇ ಹೊರತು ‘ಬಿ’ ಮತ್ತು ‘ಸಿ’ಕೇಂದ್ರವನ್ನು ತಲಪಲು ಆಗಿಲ್ಲ. ತಮಿಳಿನ ‘ಕಬಾಲಿ’ ನಾಲ್ಕನೂರಕ್ಕೂ ಹೆಚ್ಚು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಬಹುದಾದರೆ , ಕನ್ನಡ ಚಿತ್ರಗಳ ಯಶಸ್ಸು ಬೆರಳೆಣಿಕೆಯಷ್ಟು ಚಿತ್ರಮಂದಿರಗಳಿಗೆ ಏಕೆ ಸೀಮಿತವಾಗ ಬೇಕು ಎನ್ನುವುದು. ಇದನ್ನು ರಾಜ್ಯದ ಗಡಿ ದಾಟಿಸಿ ಯಶಸ್ಸು ಗಳಿಸುವುದು ಹೇಗೆ ಎನ್ನುವುದು ಒಂದು ಪ್ರಶ್ನೆಯಾದರೆ, ಅಂತರ್ಜಾಲ ಬಿಡುಗಡೆಗೆ ಕನ್ನಡ ಚಿತ್ರಗಳು ಏಕೆ ಮುಂದಾಗಿ ಜಾಗತಿಕ ಮಾರಕಟ್ಟೆಯನ್ನು ತಲುಪಬಾರದು  ಎನ್ನುವುದು ಇನ್ನೊಂದು ಪ್ರಶ್ನೆ.  ಹೊಸತನ ಕಂಡಿರುವುದು ನಿಜವಾದರೂ ಅದು ಕೇವಲ ಉತ್ಸಾಹಕ್ಕೆ ಸೀಮಿತವಾಗಬಾರದು. ಅದಕ್ಕೊಂದು ರೂಪ ನೀಡುವ ಪ್ರಕ್ರಿಯೆಗೆ ಕೂಡ ಚಾಲನೆ ದೊರಕಬೇಕಾಗಿದೆ. ಆಗ ಮಾತ್ರವೇ ನೂರು.. ಇನ್ನೂರು ಎಂದು ಸಂಭ್ರಮದಿಂದ ಗುರುತಿಸುವುದು ಸಾಧ್ಯ.

1 COMMENT

  1. ಸೊಗಸಾದ ಸಮತೂಕದ ವಿಶ್ಲೇಷಣೆ. ಧನ್ಯವಾದಗಳು

Leave a Reply